ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಸ್ಟ್ಯಾಗ್: ದುಪ್ಪಟ್ಟು ಶುಲ್ಕ–ವಾಗ್ವಾದ

Last Updated 16 ಫೆಬ್ರುವರಿ 2021, 21:20 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ಟೋಲ್ ಗೇಟ್‌ಗಳಲ್ಲಿ ಸೋಮವಾರ ಮಧ್ಯರಾತ್ರಿಯಿಂದಲೇ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಫಾಸ್ಟ್ಯಾಗ್ ಸ್ಟಿಕರ್ ಇಲ್ಲದ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡುವ ಕ್ರಮಕ್ಕೆ ವಾಹನಗಳ ಮಾಲೀಕರು ಹಾಗೂ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಡೆರಹಿತ ಸಂಚಾರಕ್ಕೆ ಅನುಕೂಲವಾಗಲೆಂದು ಕಳೆದ ವರ್ಷವೇ ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಶೇ 60ರಷ್ಟು ವಾಹನಗಳು ಮಾತ್ರ ಫಾಸ್ಟ್ಯಾಗ್ ಸ್ಟಿಕರ್‌ ಹೊಂದಿವೆ. ಉಳಿದ ವಾಹನಗಳು ಇದುವರೆಗೂ ಫಾಸ್ಟ್ಯಾಗ್ ವ್ಯವಸ್ಥೆಯೊಳಗೆ ಬಂದಿಲ್ಲ. ಜ. 1ರಿಂದ ಫಾಸ್ಟ್ಯಾಗ್ ಕಡ್ಡಾಯಗೊಳಿಸುವುದಾಗಿ ಹೇಳಿದ್ದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), ದಿನಾಂಕ ವಿಸ್ತರಣೆ ಮಾಡಿತ್ತು.

ಫಾಸ್ಟ್ಯಾಗ್‌ ಕಡ್ಡಾಯದ ಮಾಹಿತಿತಿಳಿಯದೇ ರಸ್ತೆಗಳಿಂದ ವಾಹನ ಚಾಲಕರು, ಮಾಲೀಕರು ಟೋಲ್‌ಗೇಟ್‌ಗಳಲ್ಲಿ ದುಪ್ಪಟ್ಟು ಶುಲ್ಕ ವಸೂಲಾತಿಯ ಕ್ರಮಕ್ಕೆ ಸಿಟ್ಟಿಗೆದ್ದರು. ರಾಜ್ಯದ ಎಲ್ಲ ಟೋಲ್‌ಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಸಿಬ್ಬಂದಿ ಮತ್ತು ವಾಹನ ಮಾಲೀಕರ ಮಧ್ಯೆ ಮಾತಿನ ಚಕಮಕಿ, ಫಾಸ್ಟ್ಯಾಗ್ ಪಡೆಯಲು ಸರದಿ ಸಾಲುಗಳು ಸಾಮಾನ್ಯವಾಗಿತ್ತು. ಇದರಿಂದಾಗಿ ಟೋಲ್‌ನಲ್ಲಿ ದಟ್ಟಣೆ ಉಂಟಾಗಿ, ವಾಹನಗಳು ಸಾಲುಗಟ್ಟಿ ನಿಮಿಷಗಟ್ಟಲೇ ನಿಂತಲೇ ನಿಲ್ಲುವಂತಾಯಿತು.

ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ ವಾಹನಗಳ ಸಂಚಾರಕ್ಕೆ ಬಹುತೇಕ ಗೇಟ್‌ಗಳಲ್ಲಿ ಅವಕಾಶ ನೀಡಲಾಗಿದೆ. ತಲಾ ಒಂದು ಗೇಟ್‌ನಲ್ಲಿ ಫಾಸ್ಟ್ಯಾಗ್‌ ಇಲ್ಲದ ವಾಹನಗಳ ಓಡಾಟಕ್ಕೆ ಮೀಸಲಿರಿಸಲಾಗಿದ್ದು, ಅವುಗಳಿಂದ ನಗದು ಸಂಗ್ರಹಿಸಲಾಗುತ್ತಿದೆ. ನಗದು ಕೌಂಟರ್‌ ಇರುವ ಗೇಟ್‌ನಲ್ಲೇ ಮಂಗಳವಾರ ಹೆಚ್ಚು ವಾಹನಗಳ ಸಂಚಾರವಿರುವುದು ಕಂಡುಬಂತು.

ದಟ್ಟಣೆಯಲ್ಲಿ ಸಿಲುಕಿ ಕಂಗೆಟ್ಟ ಪ್ರಯಾಣಿಕರೊಬ್ಬರು, ಟೋಲ್‌ಗೇಟ್‌ನ ಕಂಬವನ್ನು ತೆಗೆದು ವಾಹನಗಳು ಮುಂದಕ್ಕೆ ಕಳುಹಿಸಿದ್ದು ನೆಲಮಂಗಲ ಟೋಲ್‌ಗೇಟ್‌ ಬಳಿ ನಡೆಯಿತು.

‘ಫಾಸ್ಟ್ಯಾಗ್ ವ್ಯವಸ್ಥೆಯೇ ಸರಿ ಇಲ್ಲ. ಸಾಕಷ್ಟು ಸಮಸ್ಯೆಗಳು ಇವೆ. ಅದನ್ನು ಸರಿಪಡಿಸುವ ಬದಲು ಫಾಸ್ಟ್ಯಾಗ್ ಕಡ್ಡಾಯ ಮಾಡಿರುವುದು ಸರಿಯಲ್ಲ’ ಎಂದು ಚಾಲಕರು ವಾದಿಸಿದರು.

ಟೋಲ್ ಬಳಿಯೇ ಮಳಿಗೆ: ಫಾಸ್ಟ್ಯಾಗ್ ಅಳವಡಿಸಿಕೊಳ್ಳದ ಚಾಲಕರಿಗೆ, ಫಾಸ್ಟ್ಯಾಗ್ ಪಡೆದುಕೊಳ್ಳಲು ಅನುಕೂಲವಾಗುವಂತೆ ಟೋಲ್ ಬಳಿಯೇ‌ ಮಳಿಗೆ ತೆರೆಯಲಾಗಿದೆ. ಅಲ್ಲಿಯೂ ಸರದಿಯಲ್ಲಿ ‌ನಿಂತು ಚಾಲಕರು, ಫಾಸ್ಟ್ಯಾಗ್ ಸ್ಟಿಕರ್ ಪಡೆಯುತ್ತಿದ್ದ ದೃಶ್ಯಗಳು ಕಂಡುಬಂದವು.

ಸ್ಥಳೀಯರಿಗೂ ಇಲ್ಲ ರಿಯಾಯಿತಿ: ಬಹುತೇಕ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯರಿಗೂ ರಿಯಾಯಿತಿ ಇರಲಿಲ್ಲ. ‘ನಿತ್ಯವೂ ಇದೇ ರಸ್ತೆಯಲ್ಲಿ ಹೋಗುತ್ತೇವೆ. ಇಂದು ಏಕೆ ಅವಕಾಶ ನೀಡುತ್ತಿಲ್ಲ’ ಎಂದು ಸ್ಥಳೀಯ ಚಾಲಕರು ಪ್ರಶ್ನಿಸಿದರು.

‘ಸ್ಥಳೀಯರ ಓಡಾಟಕ್ಕೆ ಹೆದ್ದಾರಿ ಪಕ್ಕವೇ ಸರ್ವೀಸ್ ರಸ್ತೆ ಇದೆ. ಅಲ್ಲಿಯೇ ಸಂಚರಿಸಿ. ಹೆದ್ದಾರಿಗೆ ಬರಬೇಡಿ. ಬಂದರೆ, ಶುಲ್ಕ ಪಾವತಿ ಮಾಡಲೇಬೇಕು’ ಎಂದು ಸಿಬ್ಬಂದಿ ಹೇಳಿದರು. ಈ ವಿಷಯದಲ್ಲೂ ವಾಗ್ವಾದ ಸಾಮಾನ್ಯವಾಗಿತ್ತು.

‘ಫಾಸ್ಟ್ಯಾಗ್‌ ಸ್ಟಿಕರ್ ಅಳವಡಿಕೆ ಹೆಚ್ಚಳ:ಫಾಸ್ಟ್ಯಾಗ್ ಕಡ್ಡಾಯ ಆದೇಶ ಮಾಡಿದ್ದರಿಂದಾಗಿ ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಫಾಸ್ಟ್ಯಾಗ್ ಪಡೆದವರ ಸಂಖ್ಯೆ ಶೇ 70ರಷ್ಟು ಹೆಚ್ಚಿದೆ’ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಪ್ರಾದೇಶಿಕ ಅಧಿಕಾರಿ ಆರ್‌.ಕೆ. ಸೂರ್ಯವಂಶಿ ತಿಳಿಸಿದ್ದಾರೆ.

‘ರಾಜ್ಯದಲ್ಲಿ 45 ಟೋಲ್‌ಗೇಟ್‌ಗಳಿದ್ದು, 488 ಸಾಲುಗಳಿವೆ. ಪ್ರತಿಯೊಬ್ಬರೂ ಫಾಸ್ಟ್ಯಾಗ್ ಪಡೆದರೆ ತಡೆರಹಿತ ಪ್ರಯಾಣ ಮಾಡಬಹುದು’ ಎಂದೂ ತಿಳಿಸಿದ್ದಾರೆ.

‘ಎರಡು ಬಗೆಯ ಫಾಸ್ಟ್ಯಾಗ್ ನೀಡಲಾಗುತ್ತಿದೆ. ಒಂದೂ ಖಾತೆಯಲ್ಲಿ ಕನಿಷ್ಠ ₹ 250 ನಿರ್ವಹಣೆ ಮಾಡಿ ಸ್ಟಿಕರ್‌ ಪಡೆಯುವುದು. ಇನ್ನೊಂದು ಕೇವಲ ₹ 100 ಪಾವತಿಸಿ ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿಯಿಂದ (ಐಎಚ್‌ಎಂಸಿಎಲ್) ಸ್ಟಿಕರ್‌ ತೆಗೆದುಕೊಳ್ಳಬಹುದು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT