ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷದಲ್ಲಿ 50 ಸಾವಿರ ಉದ್ಯೋಗ ಸೃಷ್ಟಿಯ ಗುರಿ: ಅಶ್ವತ್ಥನಾರಾಯಣ

ಎಂಜಿನಿಯರಿಂಗ್‌ ಸಂಶೋಧನೆ,ಅಭಿವೃದ್ಧಿ ನೀತಿ ಬಿಡುಗಡೆ
Last Updated 2 ಮಾರ್ಚ್ 2021, 20:46 IST
ಅಕ್ಷರ ಗಾತ್ರ

ಬೆಂಗಳೂರು: ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸುವ, ಮುಂದಿನ ಐದು ವರ್ಷಗಳಲ್ಲಿ 50 ಸಾವಿರ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ರಾಜ್ಯಸರ್ಕಾರವು ಮಂಗಳವಾರ ‘ಕರ್ನಾಟಕ ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ–2021’ ಬಿಡುಗಡೆ ಮಾಡಿದೆ.

ಈ ನೀತಿಯನ್ನು ರೂಪಿಸಿ ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಕಂಪನಿಗಳಿಗೆ ವಿವಿಧ ವಿನಾಯಿತಿಗಳು ಹಾಗೂ ಅನುದಾನ ಒದಗಿಸಲು ರಾಜ್ಯ ಸರ್ಕಾರ ಆರಂಭಿಕವಾಗಿ ₹1,000 ಕೋಟಿ ಮೀಸಲಿಟ್ಟಿದೆ.

‘ದೇಶದಲ್ಲಿ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು 2018 ರಿಂದ ವಾರ್ಷಿಕವಾಗಿ ಸರಾಸರಿ ಶೇ 12.8 ಬೆಳವಣಿಗೆ ಸಾಧಿಸುತ್ತಿದೆ. ಇದೇ ವೇಳೆ ಈ ವಲಯದ ಮೇಲಿನ ಜಾಗತಿಕ ವೆಚ್ಚವು 2025ರ ಹೊತ್ತಿಗೆ ₹146 ಲಕ್ಷ ಕೋಟಿ ( 2 ಟ್ರಿಲಿಯನ್ ಡಾಲರ್‌) ಆಗುವ ಅಂದಾಜಿದ್ದು, ಇದಕ್ಕನುಗುಣವಾಗಿ ರಾಜ್ಯವನ್ನು ಸಜ್ಜುಗೊಳಿಸುವ ಉದ್ದೇಶವನ್ನು ಈ ನೀತಿಯು
ಹೊಂದಿದೆ’ ಎಂದು ವಿಜ್ಞಾನ, ತಂತ್ರಜ್ಞಾನ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ನೀತಿ ಬಿಡುಗಡೆಗೊಳಿಸಿ ತಿಳಿಸಿದರು.

‘ಐಟಿ–ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ತಂತ್ರಜ್ಞಾನ ಮತ್ತು ನಾವೀನ್ಯತಾ ಸಂಸ್ಥೆ (ಕಿಟ್ಸ್) ಹಾಗೂ ನ್ಯಾಸ್‌ಕಾಂ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಇದನ್ನು ರಚಿಸಲಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ 400 ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಹಾಗೂ ಜಿಸಿಸಿಗಳಿವೆ. ವೈಮಾಂತರಿಕ್ಷ ಮತ್ತು ರಕ್ಷಣೆ ಸೇರಿ 5 ಆದ್ಯತಾ ವಲಯಗಳಲ್ಲಿ ಕ್ರಾಂತಿಕಾರಕ ಮುನ್ನಡೆ ಸಾಧಿಸಲು ರಾಜ್ಯವು ಸಜ್ಜಾಗಿದೆ. ಈ ನೀತಿ ರಾಜ್ಯದ ಪ್ರಗತಿಗೆ ಹೊಸ ದಿಕ್ಕು ತೋರಲಿದೆ. ದೇಶದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಉದ್ಯಮಕ್ಕೆ ಅತಿ ಹೆಚ್ಚು ಕೊಡುಗೆ ನೀಡುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ನಾವು ಅಗ್ರಸ್ಥಾನದಲ್ಲಿದ್ದೇವೆ. ಈ ಸ್ಥಾನ ಕಾಯ್ದುಕೊಳ್ಳುವ ಗುರಿಯನ್ನೂ ಹೊಂದಿದ್ದೇವೆ. ಪ್ರಧಾನಮಂತ್ರಿಯವರ ‘ಆತ್ಮನಿರ್ಭರ ಭಾರತ’ ಕಲ್ಪನೆಯಂತೆ ಈ ನೀತಿ ರೂಪುಗೊಂಡಿದೆ’ ಎಂದು ನುಡಿದರು.

ಆದ್ಯತಾ ವಲಯಗಳು

*ವೈಮಾಂತರಿಕ್ಷ ಮತ್ತು ರಕ್ಷಣೆ

*ವಾಹನ-ವಾಹನ ಬಿಡಿಭಾಗಗಳು-ವಿದ್ಯುತ್ ಚಾಲಿತ ವಾಹನಗಳು

*ಜೈವಿಕ ತಂತ್ರಜ್ಞಾನ, ಔಷಧ ಮತ್ತು ವೈದ್ಯಕೀಯ ಉಪಕರಣಗಳು

*ಅರೆವಾಹಕಗಳು, ದೂರಸಂಪರ್ಕ, ಎಲೆಕ್ಟ್ರಾನಿಕ್‌ ವ್ಯವಸ್ಥೆ ಮತ್ತು ಅಭಿವೃದ್ಧಿ ನಿರ್ವಹಣೆ (ಇ.ಎಸ್.ಡಿ.ಎಂ.)

*ಸಾಫ್ಟ್‌ವೇರ್ ಉತ್ಪನಗಳು

ನೀತಿಯ ಉದ್ದೇಶ:

*ಉದ್ಯಮ ಹಾಗೂ ಶೈಕ್ಷಣಿಕ ವಲಯದ ನಡುವೆ ಸಂಪರ್ಕ ಸೇತುವೆ ನಿರ್ಮಿಸುವುದು.

*ಕೌಶಲಯುಕ್ತ ಎಂಜಿನಿಯರಿಂಗ್ ಮಾನವ ಸಂಪನ್ಮೂಲ ಸೃಷ್ಟಿ.

*ಪರೀಕ್ಷೆ, ಪ್ರಾಯೋಗಿಕ ಮಾದರಿ ಹಾಗೂ ಇತರ ಅತ್ಯಾಧುನಿಕ ಮೂಲಸೌಕರ್ಯ ನಿರ್ಮಾಣ.

*ಬೆಂಗಳೂರು ಬಿಟ್ಟು ಬೇರೆ ಪಟ್ಟಣ ಮತ್ತು ನಗರಗಳಲ್ಲಿ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಉದ್ಯಮ ಬೆಳೆಸುವುದು

* ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಾಚೆಗೆ ಉದ್ಯಮ ಸ್ಥಾಪನೆ/ವಿಸ್ತರಣೆ ಮಾಡಿದರೆ ಶೇ 50ರಷ್ಟು ಹಾಗೂ ಗರಿಷ್ಠ ₹2 ಕೋಟಿವರೆಗೆ ಬಾಡಿಗೆ ಮರುಪಾವತಿ.

*ಬಂಡವಾಳದ ಶೇ 20ರಷ್ಟು, ಗರಿಷ್ಠ ₹2 ಕೋಟಿವರೆಗೆ ಹೂಡಿಕೆ ಸಬ್ಸಿಡಿ.

*ನಾವೀನ್ಯತಾ ಪ್ರಯೋಗಾಲಯಗಳನ್ನು ಸ್ಥಾಪಿಸಿದರೆ ವೆಚ್ಚದ ಶೇ 33 (ಗರಿಷ್ಠ ₹8 ಕೋಟಿ) ನೆರವು.

*ಡಿಜಿಟಲ್ ನಾವೀನ್ಯತಾ ಕಾರ್ಯಯೋಜನೆಗಳಿಗೆ ಗರಿಷ್ಠ ₹3 ಕೋಟಿಯವರೆಗೆ ನೆರವು.

*ಶೈಕ್ಷಣಿಕ ವಲಯದ ಸಂಶೋಧನೆಗಳನ್ನು ಔದ್ಯಮಿಕ ಅನ್ವಯಿಕತೆಯಾಗಿ ಪರಿವರ್ತಿಸಲು ಪ್ರತಿ ಸಂಸ್ಥೆಗೆ ವರ್ಷಕ್ಕೆ ₹75 ಲಕ್ಷ ಅನುದಾನ.

*ಇಂಟರ್ನ್‌ಶಿಪ್‌ ಉತ್ತೇಜಿಸಲು ಪ್ರತಿ ಸಂಸ್ಥೆಗೆ ಶೇ 50 ರಷ್ಟು ಸ್ಟೈಪೆಂಡ್‌ ಮರುಪಾವತಿ. ಪ್ರತಿ ಅಭ್ಯರ್ಥಿಗೆ ಮೂರು ತಿಂಗಳವರೆಗೆ ಮಾಸಿಕ ಗರಿಷ್ಠ ₹10 ಸಾವಿರ ಭತ್ಯೆ. ಇದರಲ್ಲಿ ಶೇ 33ರಷ್ಟು ಮಹಿಳಾ ಅಭ್ಯರ್ಥಿಗಳಿರಬೇಕು. ಇಂಟರ್ನಿಗಳ ಪೈಕಿ ಶೇ 30 ಅಭ್ಯರ್ಥಿಗಳನ್ನು ಪೂರ್ಣಾವಧಿ ಉದ್ಯೋಗಕ್ಕೆ ಪರಿಗಣಿಸಬೇಕು.

ಇಂಟರ್ನ್‌ಶಿಪ್‌ ಅವಧಿ ಹೆಚ್ಚಳ

‘ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಇಂಟರ್ನ್‌ಶಿಪ್‌ ಅವಧಿಯನ್ನು ಈಗಿನ 9 ತಿಂಗಳಿನಿಂದ ಒಂದು ವರ್ಷಕ್ಕೆ ಹೆಚ್ಚಿಸಲಾಗಿದೆ. ಅದನ್ನು ಕೈಗಾರಿಕೆಗಳಲ್ಲಿಯೇ ಮುಗಿಸಬೇಕೆಂಬ ಯೋಜನೆ ರೂಪಿಸಲಾಗಿದೆ. ಇದು ಕಡ್ಡಾಯವೂ ಹೌದು. ಇದಕ್ಕೆ ಉದ್ಯಮಿಗಳು ಸಹಕರಿಸಬೇಕು’ ಎಂದು ಅಶ್ವತ್ಥನಾರಾಯಣ ಹೇಳಿದರು.

‘ಕೈಗಾರಿಕೆ ಹಾಗೂ ಪ್ರಗತಿಗೆ ಪೂರಕವಾಗಿ ಕೈಗಾರಿಕಾ ತರಬೇತಿ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಕೈಗಾರಿಕೆಗಳಿಗೆ ಕೌಶಲಯುಕ್ತ ಮಾನವ ಸಂಪನ್ಮೂಲವನ್ನು ಸ್ಥಳೀಯವಾಗಿಯೇ ಒದಗಿಸುವ ಗುರಿ ಹೊಂದಿದೆ. ಪೂರಕವಾಗಿ ರಾಜ್ಯದಲ್ಲಿನ 150 ಐಟಿಐ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ₹5,000 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT