ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗದ ಪ್ರವಾಹ ಪರಿಸ್ಥಿತಿ: ಹೆಚ್ಚಿದ ಸಂಕಷ್ಟ

ರಕ್ಷಣಾ ಕಾರ್ಯಾಚರಣೆಗಾಗಿ ಬೀದರ್‌ನ ವಾಯುನೆಲೆಯಲ್ಲಿ ಎರಡು ಹೆಲಿಕಾಪ್ಟರ್‌ ಸನ್ನದ್ಧ
Last Updated 16 ಅಕ್ಟೋಬರ್ 2020, 21:11 IST
ಅಕ್ಷರ ಗಾತ್ರ
ADVERTISEMENT
""

ಕಲಬುರ್ಗಿ: ರಾಜ್ಯದಲ್ಲಿ ಮಳೆ ಬಿಡುವು ಪಡೆದಿದ್ದರೂ, ಮಹಾರಾಷ್ಟ್ರದಲ್ಲಿ ಇನ್ನೂ ಸುರಿಯುತ್ತಿರುವುದರಿಂದ ಕೃಷ್ಣಾ ಮತ್ತು ಭೀಮಾ ನದಿಗಳ ಪಾತ್ರಗಳಲ್ಲಿಯ ಪ್ರವಾಹ ಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿದೆ.

ಅತಿವೃಷ್ಟಿ ಹಾಗೂ ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿದ್ದು, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಕಂದಾಯ ಸಚಿವ ಆರ್‌.ಅಶೋಕ ಈ ಮಾಹಿತಿ ನೀಡಿದರು.

ರಕ್ಷಣಾ ಕಾರ್ಯಾಚರಣೆಗಾಗಿ ಎರಡು ಹೆಲಿಕಾಪ್ಟರ್‌ಗಳನ್ನು ಬೀದರ್‌ನ ವಾಯುನೆಲೆಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಅವಶ್ಯಕತೆ ಬೀಳಲಿಲ್ಲ ಎಂದು ಅವುಗಳನ್ನು ಶುಕ್ರವಾರ ಬಳಸಿಕೊಳ್ಳಲಿಲ್ಲ.

ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಸಮೀಪ ಡೋಣಿ ನದಿ ಪ್ರವಾಹದಲ್ಲಿ ಸಿಲುಕಿದ್ದ ಮಹಾರಾಷ್ಟ್ರ ಮೂಲದ ಐವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಜನರನ್ನು ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯ ಮೀನುಗಾರರ ಸಹಾಯದಿಂದ ರಕ್ಷಿಸಿದರು. ಇಂಡಿ ತಾಲ್ಲೂಕಿನ ಹಳೇ ಹಿಂಗಣಿ ಗ್ರಾಮದ ಬಳಿ ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದ ತಾಯಿ ಹಾಗೂ ಮಗನನ್ನು ರಕ್ಷಿಸಲಾಗಿದೆ.

ವಿಜಯಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಮೇಲೆ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು, ಸಂಚಾರ ಸ್ಥಗಿತವಾಗಿದೆ. ಕಲಬುರ್ಗಿ–ವಿಜಯಪುರ ಮಾರ್ಗದ ಕಟ್ಟಿಸಂಗಾವಿ ಸೇತುವೆ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.

ಮಹಾರಾಷ್ಟ್ರದಿಂದ ಕೃಷ್ಣಾ ಮತ್ತು ಉಪ ನದಿಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ನಿರಂತರ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.04 ಲಕ್ಷ ಮತ್ತು ದೂಧ್‌ಗಂಗಾ ನದಿಯಿಂದ 15,616 ಕ್ಯುಸೆಕ್ ಸೇರಿ 1.19 ಲಕ್ಷ ಕ್ಯುಸೆಕ್ ನೀರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿ ಸೇರುತ್ತಿದೆ. ಈ ಪ್ರಮಾಣ ಹೆಚ್ಚುವ ಸಾಧ್ಯತೆ ಇರುವುದರಿಂದಾಗಿ, ನದಿ ತೀರದ ಗ್ರಾಮಗಳಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ನಿಪ್ಪಾಣಿ ತಾಲ್ಲೂಕಿನ ‌ಕಾರದಗಾ–ಭೋಜ ಗ್ರಾಮಗಳ ಮಧ್ಯೆ ದೂಧ್‌ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕಂ ಬ್ಯಾರೇಜ್ ಮುಳುಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ಹಾಗೂ ಕೃಷ್ಣಾ ನದಿಗಳು ಮೈದುಂಬಿ ಹರಿಯುತ್ತಿವೆ. ರಬಕವಿ– ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಜಲಾಶಯ ಭರ್ತಿಯಾಗಿದ್ದು, ಇದರಿಂದ 1.50 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಟ್ಟಿದ್ದರಿಂದ ಜಮಖಂಡಿ ತಾಲ್ಲೂಕಿನ ಮುತ್ತೂರು ಹಾಗೂ ತುಬಚಿ ನಡುಗಡ್ಡೆಗಳಂತಾಗಿದ್ದು, ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಘಟಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳಗೊಂಡು ಮುಧೋಳ ತಾಲ್ಲೂಕಿನ ಢವಳೇಶ್ವರ, ನಂದಗಾಂವ ಹಾಗೂ ಮಿರ್ಜಿ ಗ್ರಾಮದ ನೆಲಮಟ್ಟದ ಸೇತುವೆಗಳು ಮುಳುಗಡೆಯಾಗಿವೆ.

ಮಹಾರಾಷ್ಟ್ರದ ಎರಡು ಅಣೆಕಟ್ಟುಗಳಿಂದ ಭಾರಿ ಪ್ರಮಾಣದ ನೀರನ್ನು ಹರಿಸುತ್ತಿರುವುದರಿಂದಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜಿನಿಂದ 6.30 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು,ಅಫಜಲಪುರ, ಜೇವರ್ಗಿ, ಚಿತ್ತಾಪುರ, ಶಹಾಬಾದ್ ತಾಲ್ಲೂಕುಗಳ 148 ಗ್ರಾಮಗಳಲ್ಲಿ ಮುಳುಗಡೆ ಭೀತಿ ಎದುರಾಗಿದೆ. ಈ ಗ್ರಾಮಗಳ ಜನತೆಯನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.

ಭೀಮಾ ನದಿಯು ಯಾದಗಿರಿ–ರಾಯಚೂರು ಗಡಿಯಲ್ಲಿ ಕೃಷ್ಣಾ ನದಿಯೊಂದಿಗೆ ವಿಲೀನವಾಗುತ್ತಿದ್ದು,ರಾಯಚೂರು ಜಿಲ್ಲೆಯಲ್ಲಿಕೃಷ್ಣಾನದಿಯ ಪ್ರವಾಹ ಏರುಗತಿಯಲ್ಲಿದೆ. ಶುಕ್ರವಾರ ಸಂಜೆ ವೇಳೆಗೆ ನೀರಿನ ಹರಿವು 4.84 ಲಕ್ಷ ಕ್ಯುಸೆಕ್‌ಗೆ ತಲುಪಿತ್ತು. ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆ ಗ್ರಾಮಗಳಿಗೆ ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಮುಳುಗಡೆ ಆಗಿದೆ. ರಾಯಚೂರು ತಾಲ್ಲೂಕಿನ 20ಕ್ಕೂ ಹೆಚ್ಚು ನದಿತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಆವರಿಸಿದೆ. ಅಪಾಯದ ಅಂಚಿನಲ್ಲಿರುವ ಗುರ್ಜಾಪುರ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತವು ಹರಸಾಹಸ ಪಡುತ್ತಿದೆ.

ಯಾದಗಿರಿ ನಗರದ ವೀರಭದ್ರೇಶ್ವರ ಬಡಾವಣೆಗೆ ಪ್ರವಾಹದ ನೀರು ನುಗ್ಗಿದ್ದು, ಜನರು ಆತಂಕಗೊಂಡಿದ್ದಾರೆ. ಯಾದಗಿರಿ, ಶಾಹಪುರ ಮತ್ತು ವಡಗೇರಾ ತಾಲ್ಲೂಕಿನ 14 ಗ್ರಾಮಗಳಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 981 ಕುಟುಂಬಗಳಿಗೆ ಆಶ್ರಯ ನೀಡಲಾಗಿದೆ.

ಬೀದರ್‌ ಜಿಲ್ಲೆಯಲ್ಲಿ ಮಾಂಜ್ರಾ ನದಿ ತುಂಬಿ ಹರಿಯುತ್ತಿದ್ದು, ಕಲಬುರ್ಗಿ ಜಿಲ್ಲೆಯ ಕಾಗಿಣಾ ಅಬ್ಬರ ಕಡಿಮೆಯಾಗಿದೆ.

ಸುರಂಗ ಮಾರ್ಗದಲ್ಲಿ ನೀರು ಸೋರಿಕೆ:ಹೊಸಪೇಟೆಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರ ಸುರಂಗ ಮಾರ್ಗದಲ್ಲಿ ನೀರು ಸೋರಲಾರಂಭಿಸಿದೆ. ಸುರಂಗ ನಿರ್ಮಾಣಕ್ಕೆ ಬಳಸಿದ ಉಂಗುರ ಆಕಾರದ ಸಿಮೆಂಟ್‌ ರಚನೆಗಳಿಂದ ನೀರು ಸೋರುತ್ತಿದ್ದು, ಹೆದ್ದಾರಿ ಮೇಲೆ ನೀರು ಸಂಗ್ರಹವಾಗುತ್ತಿದೆ. ಸತತವಾಗಿ ನೀರು ಸೋರುತ್ತಿರುವುದರಿಂದ ಸಿಮೆಂಟ್‌ ರಚನೆ ಬೀಳುವ ಆತಂಕವೂ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT