ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ ಏರಿಕೆ: ಸೈಕಲ್ ಏರಿದ ಕಾಂಗ್ರೆಸಿಗರು

Last Updated 7 ಜುಲೈ 2021, 20:27 IST
ಅಕ್ಷರ ಗಾತ್ರ

ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ವತಿಯಿಂದ ಬುಧವಾರ ಏಕಕಾಲಕ್ಕೆ ಸೈಕಲ್ ಜಾಥಾ ನಡೆಯಿತು.

ಮೈಸೂರಿನಲ್ಲಿ ನಡೆದ ಜಾಥಾಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಾಲನೆ ನೀಡಿದರೆ, ಶಿರಸಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭಾಗವಹಿಸಿದ್ದರು. ಕೆಪಿಸಿಸಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮತ್ತು ಸಲೀಂ ಅಹ್ಮದ್‌ ವಹಿಸಿದ್ದರು.

ಕೋವಿಡ್‌ ನಿಯಮ ಪಾಲನೆ ಕಾರಣದಿಂದ ಸೈಕಲ್‌ ಜಾಥಾಕ್ಕೆ ಪೊಲೀಸರು ಪರವಾನಗಿ ನೀಡಿಲ್ಲ. ಆದರೂ ಕೆಲವೆಡೆ ಬಿಗಿಬಂದೋಬಸ್ತ್‌ನಲ್ಲಿ ಅರ್ಧ ಕಿ.ಮೀನಷ್ಟು ಮೆರವಣಿಗೆ ನಡೆಸಲು ಅವಕಾಶ ನೀಡಿದರು. ಕಾಂಗ್ರೆಸ್‌ನ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಾಥಾದುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲವು ಕಡೆ ಕಹಳೆ ಊದಿ ಆಕ್ರೋಶ ಹೊರಹಾಕಿದರು.

ಮೈಸೂರಿನಲ್ಲಿ ಕಾಂಗ್ರೆಸ್ ಭವನದಿಂದ ಆರಂಭವಾದ ಜಾಥಾ, ಬಾಬು ಜಗಜೀವನ್ ರಾಮ್ ಸರ್ಕಲ್ - ಇರ್ವಿನ್ ರಸ್ತೆ- ಅಶೋಕ ರಸ್ತೆ ಮೂಲಕ ಸಾಗಿ ಗಾಂಧಿವೃತ್ತದಲ್ಲಿ ಕೊನೆಗೊಂಡಿತು. ಸೈಕಲ್‌ ತುಳಿಯಲು ಮುಂದಾದ ಸಿದ್ದರಾಮಯ್ಯ ಅವರನ್ನು ಅಭಿಮಾನಿಗಳು ಮುತ್ತಿಕೊಂಡಿದ್ದರಿಂದ ನೂಕಾಟ ನಡೆಯಿತು. ನಂತರ ಅವರು ಸೈಕಲ್‌ನಿಂದ ಇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಒಳಗೊಂಡಂತೆ ಮುಖಂಡರು ಜಾಥಾದಲ್ಲಿ ಪಾಲ್ಗೊಂಡರು.

ಶಿರಸಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಈ ಜೇಬುಗಳ್ಳರ ಸರ್ಕಾರ ತೊಲಗಿಸಲು ಹೋರಾಟ ಆರಂಭಿಸಿದ್ದೇವೆ’ ಎಂದರು. ಶಾಸಕ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಜೊತೆಗಿದ್ದರು.

ಪ್ರಧಾನಿ ನರೇಂದ್ರ ಮೋದಿಯ ಮುಖವಾಡ ಧರಿಸಿ ಕೆಲವರು ಸೈಕಲ್ ತುಳಿದದ್ದು ಗಮನ ಸೆಳೆಯಿತು. ಬೆಂಗಳೂರಿನಲ್ಲಿ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT