ಸೋಮವಾರ, ಮಾರ್ಚ್ 27, 2023
30 °C

ಫೆ.5ರಿಂದ ಬೆಂಗಳೂರಿನಲ್ಲಿ ಜಿ–20 ಇಂಧನ ಪರಿವರ್ತನಾ ಗುಂಪಿನ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಿ–20 ರಾಷ್ಟ್ರಗಳ ಇಂಧನ ‍ಪರಿವರ್ತನಾ ಕಾರ್ಯಕಾರಿ ಗುಂಪಿನ ಸಭೆಯು ಫೆಬ್ರುವರಿ 5ರಿಂದ 7ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕೇಂದ್ರ ಇಂಧನ ಸಚಿವಾಲಯದ ಕಾರ್ಯದರ್ಶಿ ಅಲೋಕ್‌ ಕುಮಾರ್‌ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತಕ್ಕೆ ಜಿ–20 ಗುಂಪಿನ ಅಧ್ಯಕ್ಷತೆ ದೊರಕಿರುವುದರಿಂದ ದೇಶದಾದ್ಯಂತ ಹಲವು ಸಭೆಗಳನ್ನು ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿ ಇಂಧನ ಪರಿವರ್ತನೆಗೆ ಸಂಬಂಧಿಸಿದ ಸಭೆಯು ಬೆಂಗಳೂರಿನಲ್ಲಿ ನಿಗದಿಯಾಗಿದೆ. ಜಿ–20 ರಾಷ್ಟ್ರಗಳು ಹಾಗೂ ವಿಶ್ವ ಬ್ಯಾಂಕ್‌, ಏಷ್ಯಾ ಅಭಿವೃದ್ಧಿ ಬ್ಯಾಂಕ್‌, ವಿಶ್ವ ಸಂಸ್ಥೆಯ ಅಭಿವೃದ್ಧಿ ಯೋಜನೆ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಮುಂಚೂಣಿ ಸಂಸ್ಥೆಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಿವೆ’ ಎಂದರು.

ಇದು ಇಂಧನ ಪರಿವರ್ತನಾ ಕಾರ್ಯಕಾರಿ ಗುಂಪಿನ ಮೊದಲ ಸಭೆ. ತಾಂತ್ರಿಕ ಅಡತಡೆಗಳನ್ನು ನಿವಾರಿಸುವ ಮೂಲಕ ಇಂಧನ ಪರಿವರ್ತನೆ, ಇಂಧನ ಪರಿವರ್ತನೆಗೆ ಕಡಿಮೆ ಬಡ್ಡಿದರದ ಹಣಕಾಸು, ಇಂಧನ ಸುರಕ್ಷತೆ ಮತ್ತು ಬಹುವಿಧದ ಪೂರೈಕೆ ಜಾಲ, ಇಂಧನ ಸಾಮರ್ಥ್ಯ, ಕೈಗಾರಿಕೆಗಳಲ್ಲಿ ಕಡಿಮೆ ಇಂಗಾಲ ಹೊರಸೂಸುವಿಕೆಯ ಪರಿವರ್ತನೆ ಮತ್ತು ಜವಾಬ್ದಾರಿಯುತ ಬಳಕೆ, ಭವಿಷ್ಯದ ಇಂಧನಗಳು ಹಾಗೂ ಸಾರ್ವತ್ರಿಕವಾಗಿ ಸ್ವಚ್ಛ ಇಂಧನದ ಲಭ್ಯತೆ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ಇಂಧನ ಪರಿವರ್ತನೆಯ ಮಾರ್ಗ ಎಂಬ ವಿಚಾರಗಳನ್ನು ಕೇಂದ್ರೀಕರಿಸಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ವಿವರಿಸಿದರು.

ಭವಿಷ್ಯದ ಇಂಧನಗಳಾಗಿ ಜೈವಿಕ ಇಂಧನ ಮತ್ತು ಹಸಿರುವ ಜಲಜನಕದ ಬಳಕೆ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಯಲಿದೆ. ಇಂಧನ ಕ್ಷೇತ್ರದಲ್ಲಿನ ಮಾಲಿನ್ಯ ತಗ್ಗಿಸುವ ಸಾಧ್ಯತೆ, ಅವಕಾಶಗಳು ಮತ್ತು ಅನುಷ್ಠಾನದ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು. ಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳು ಫೆ. 7ರಂದು ಪಾವಗಡ ಸೋಲಾರ್‌ ಪಾರ್ಕ್‌ಗೆ ಭೇಟಿನೀಡಲಿದ್ದಾರೆ ಎಂದರು.

2030ರ ವೇಳೆಗೆ ದೇಶವು ಶೇಕಡ 40ರಷ್ಟು ಇಂಧನವನ್ನು ಪಳೆಯುಳಿಕೆಯೇತರ ಮೂಲಗಳಿಂದ ಪಡೆಯುವ ಗುರಿ ಹೊಂದಿತ್ತು. 2022ರಲ್ಲೇ ಅದನ್ನು ಸಾಧಿಸಲಾಗಿದೆ. ಇಂಧನ ಕ್ಷೇತ್ರದಲ್ಲಿನ ಮಾಲಿನ್ಯವನ್ನು 2030ರ ವೇಳೆಗೆ ಶೇ 4.5ಕ್ಕೆ ತಗ್ಗಿಸುವ ಗುರಿ ಇದೆ. ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಇಂಧನ ಕ್ಷೇತ್ರದಲ್ಲಿ ಅತಿಕಡಿಮೆ ಮಾಲಿನ್ಯ ಹೊಂದಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು