ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನ ನೆನಪುಗಳು ಮೊಬೈಲ್‌ನಲ್ಲಿವೆ, ಕೊಡಿ ಪ್ಲೀಸ್‌: ಜಿಲ್ಲಾಧಿಕಾರಿಗೆ ಬಾಲಕಿ ಮನವಿ

ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಮೊಬೈಲ್ ಕಳವು, ಬಾಲಕಿ ಪತ್ರಕ್ಕೆ ಕೊಡಗು ಜಿಲ್ಲಾಡಳಿತದ ಸ್ಪಂದನೆ
Last Updated 23 ಮೇ 2021, 19:03 IST
ಅಕ್ಷರ ಗಾತ್ರ

ಮಡಿಕೇರಿ / ಕುಶಾಲನಗರ: ‘ತಾಯಿಯೊಂದಿಗೆ ನನ್ನ ಒಡನಾಟದ ಚಿತ್ರಗಳು, ಆಕೆಯೊಂದಿಗೆ ಆಟವಾಡಿದ್ದ ದೃಶ್ಯಗಳು, ಆಕೆಯ ಸವಿ ನೆನಪುಗಳು ಮೊಬೈಲ್‌ನಲ್ಲಿವೆ. ತಾಯಿಯ ನೆನಪಿಗಾಗಿ ಉಳಿದಿರುವುದು ಅದೊಂದೆ. ದಯವಿಟ್ಟು ಮೊಬೈಲ್ ಹುಡುಕಿಕೊಡಿ...’

ಹೀಗೆಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ಗೆ ಕೋವಿಡ್‌ನಿಂದ ತಾಯಿ ಕಳೆದುಕೊಂಡಿರುವ ಬಾಲಕಿಯೊಬ್ಬಳು ಪತ್ರ ಬರೆದು ಅಂಗಲಾಚಿದ್ದಾಳೆ. ಇದು ಎಲ್ಲರ ಮನ ಕಲಕುವಂತೆ ಮಾಡಿದೆ. ಬಾಲಕಿಯ ನೋವು ಕೇಳಿದವರು ಕಣ್ಣೀರು ಹಾಕುವಂತಾಗಿದೆ.

ಕುಶಾಲನಗರ ಬಳಿಯ ಗುಮ್ಮನಕೊಲ್ಲಿ ಗ್ರಾಮದ ಬಸಪ್ಪ ಬಡಾವಣೆಯ ಹೃತಿಕ್ಷಾ ಎಂಬ ಬಾಲಕಿ ಪತ್ರ ಬರೆದಿದ್ದು, ‘15 ದಿನಗಳ ಹಿಂದೆ ತಂದೆ, ತಾಯಿ ಹಾಗೂ ನನಗೆ ಕೊರೊನಾ ಪಾಸಿಟಿವ್‌ ಆಗಿತ್ತು. ತಾಯಿಗೆ ಕಾಯಿಲೆ ತೀವ್ರವಾದ್ದರಿಂದ ಮಡಿಕೇರಿಯಲ್ಲಿರುವ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಾಯಿಯನ್ನು ಕೊರೊನಾ ಬಲಿ ತೆಗೆದುಕೊಂಡಿತು. ಆದರೆ, ತಾಯಿಯ ಹತ್ತಿರವಿದ್ದ ಮೊಬೈಲ್ ಕಾಣೆಯಾಗಿದೆ. ಈ ಮೊಬೈಲ್‌ನಲ್ಲಿ ತಾಯಿಯೊಂದಿಗಿನ ಒಡನಾಟದ ಚಿತ್ರಗಳು ಹಾಗೂ ವಿಡಿಯೊಗಳಿವೆ. ತಾಯಿ ಮೃತಪಟ್ಟ ಮೇಲೆ ಆ ಮೊಬೈಲ್‌ ಸಿಕ್ಕಿಲ್ಲ. ಕಳೆದು ಹೋದ ಮೊಬೈಲ್ ಹುಡುಕಿಕೊಡಿ...’ ಎಂದು ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಬಾಲಕಿ ಮನವಿ ಮಾಡಿದ್ದಾಳೆ.

‘ನಾನು ಹಾಗೂ ಅಪ್ಪ ಹೋಂ ಕ್ವಾರಂಟೈನ್‌ನಲ್ಲಿ ಇದ್ದೇವೆ. ಹೊರಗೆ ಬರಲಾಗದ ಸ್ಥಿತಿಯಿದೆ. ತಂದೆ ದಿನಗೂಲಿ ನೌಕರರಾಗಿದ್ದು, ಅಕ್ಕಪಕ್ಕದವರ ಸಹಾಯದಿಂದ ಇಷ್ಟುದಿನ ಕಳೆದಿದ್ದೇವೆ. ನಮ್ಮ ತಾಯಿ ಮೃತಪಟ್ಟ ಬಳಿಕ ಅವರ ಬಳಿಯಿದ್ದ ಮೊಬೈಲ್ ಅನ್ನು ಯಾರೋ ತೆಗೆದುಕೊಂಡಿದ್ದಾರೆ. ನಾನು ತಾಯಿ ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ಆಕೆಯ ನೆನಪುಗಳು ಆ ಮೊಬೈಲ್‌ನಲ್ಲಿವೆ. ಯಾರಾದರೂ ಮೊಬೈಲ್ ತೆಗೆದುಕೊಂಡಿದ್ದರೆ ಅಥವಾ ಸಿಕ್ಕಿದ್ದರೆ ಮೊಬೈಲ್ ತಂದು ಕೊಡಿ ಪ್ಲೀಸ್’ ಎಂದು ಆಕೆ ಮನವಿ ಮಾಡಿದ್ದಾಳೆ. ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜಿಲ್ಲಾಡಳಿತದ ಸ್ಪಂದನೆ
ಆಕೆ, ಭಾವನಾತ್ಮವಾಗಿ ಬರೆದಿರುವ ಪತ್ರವು ಅಧಿಕಾರಿಗಳ ಕಣ್ಣಲ್ಲೂ ನೀರು ತರಿಸಿದೆ. ಬಾಲಕಿಯ ಮನವಿಗೆ ಕೊಡಗು ಜಿಲ್ಲಾಡಳಿತವು ಸ್ಪಂದಿಸಿದ್ದು, ಮೊಬೈಲ್‌ ಹುಡುಕಿಕೊಡುವಂತೆ ನಗರ ಠಾಣೆ ಪೊಲೀಸರಿಗೆ ಸೂಚನೆ ನೀಡಿದೆ. ಪೊಲೀಸರು ಮೊಬೈಲ್‌ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

***

ಆಸ್ಪತ್ರೆಯಲ್ಲಿ ಮೃತಪಟ್ಟವರಿಗೆ ಸಂಬಂಧಿಸಿದ ವಸ್ತುಗಳಿದ್ದರೆ ಪ್ಯಾಕ್‌ ಮಾಡಿ ಕೊಡುತ್ತೇವೆ. ಆದರೆ, ಕೆಲವರು ಇನ್ನೂ ವಸ್ತುಗಳನ್ನು ಪಡೆದುಕೊಂಡಿಲ್ಲ. ಸುಮಾರು 10 ಮೊಬೈಲ್‌ಗಳಿವೆ. ಅದರಲ್ಲಿ ಬಾಲಕಿಗೆ ಸಂಬಂಧಿಸಿದ ಮೊಬೈಲ್‌ ಇದ್ದರೆ ಪರಿಶೀಲಿಸಿ ನೀಡುತ್ತೇವೆ.
-ಡಾ.ಕುಶ್ವಂತ್‌ ಕೋಳಿಬೈಲ್‌, ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT