ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಬಂಡೀಪುರ ಹುಲಿ ಯೋಜನೆಗೆ ‘ಸುವರ್ಣ ಸಂಭ್ರಮ’

5 ದಶಕಗಳಲ್ಲಿ ವ್ಯಾಘ್ರ ಸಂರಕ್ಷಣೆಯ ಮಾದರಿ ಯೋಜನೆ; ಮಾನವ– ವನ್ಯಜೀವಿ ಸಂಘರ್ಷ ಸವಾಲು
Last Updated 17 ನವೆಂಬರ್ 2022, 13:24 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದ ಮೊದಲ ಹುಲಿ ಯೋಜನೆಗೆ (ಬಂಡೀಪುರ) ಈಗ ಸುವರ್ಣ ಮಹೋತ್ಸವದ ಸಂಭ್ರಮ.ಐದು ದಶಕಗಳಲ್ಲಿ ದೇಶದಲ್ಲೇ ಮಾದರಿ ಹುಲಿ ಯೋಜನೆಯಾಗಿ ಗುರುತಿಸಿಕೊಂಡಿದೆ.

ಅಳಿವಿನಂಚಿಗೆ ಸಾಗುತ್ತಿದ್ದ ಹುಲಿಗಳ ಸಂತತಿ ರಕ್ಷಣೆಗಾಗಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ 1972ರಲ್ಲಿ ಜಾರಿಗೊಳಿಸಿದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ದೇಶದಲ್ಲಿ 9 ಸಂರಕ್ಷಿತ ಪ್ರದೇಶಗಳನ್ನು ಹುಲಿ ಯೋಜನೆಗೆ ಸೇರ್ಪಡೆಗೊಳಿಸಲಾಗಿತ್ತು. ಅದರಲ್ಲಿ ಬಂಡೀಪುರವೂ ಒಂದು.1973ರ ನ.16ರಂದು ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಉದ್ಘಾಟಿಸಿದ್ದರು.

ಜೀವ ವೈವಿಧ್ಯ ತಾಣ: ‘ಹುಲಿ ಯೋಜನೆ ಘೋಷಣೆಯಾದಾಗ ಬಂಡೀಪುರ ಅರಣ್ಯದಲ್ಲಿ 12 ಹುಲಿಗಳಿದ್ದವು. 2020ರ ಮಾಹಿತಿ ಪ್ರಕಾರ 143 ಹುಲಿ ಗಳಿವೆ. ಇದಲ್ಲದೇ 200 ಚಿರತೆಗಳು, 3,046 ಆನೆಗಳಿವೆ. ಹುಲಿ ಹಾಗೂ ಚಿರತೆಗಳ ಲೆಕ್ಕಾಚಾರದಲ್ಲಿ 2ನೇ ಸ್ಥಾನ ದಲ್ಲಿದ್ದೇವೆ. ಆನೆಗಳ ಸಂಖ್ಯೆಯಲ್ಲಿ ನಾವೇ ಮೊದಲ ಸ್ಥಾನ’ ಎಂದು ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ ಕುಮಾರ್‌ ತಿಳಿಸಿದರು.

ಕಾಡೆಮ್ಮೆ, ಜಿಂಕೆಗಳು ಸೇರಿದಂತೆ ನೂರಾರು ಪ್ರಾಣಿ ಪ್ರಭೇದಗಳು, 260ಕ್ಕೂ ಹೆಚ್ಚು ಪಕ್ಷಿಗಳಿಗೆ ಬಂಡೀಪುರ ಅರಣ್ಯ ಆಶ್ರಯ ನೀಡಿದೆ.

ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು, ಮೈಸೂರು ಜಿಲ್ಲೆಯ ನಂಜನಗೂಡು, ಎಚ್‌.ಡಿ.ಕೋಟೆ ತಾಲ್ಲೂಕುಗಳಲ್ಲಿ ಹರಡಿಕೊಂಡಿರುವ ಸಂರಕ್ಷಿತ ಪ್ರದೇಶ 1,036 ಚದರ ಕಿ.ಮೀ ವಿಸ್ತೀರ್ಣವಿದೆ. ತಮಿಳುನಾಡಿನ ಮುದುಮಲೆ ಹುಲಿ ಸಂರಕ್ಷಿತ ಪ್ರದೇಶ, ಕೇರಳದ ವಯ ನಾಡು ಹುಲಿ ರಕ್ಷಿತಾರಣ್ಯ, ಮೈಸೂರು ಜಿಲ್ಲೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಹೊಂದಿಕೊಂಡಿದೆ.

ಆರಂಭದ ಹೆಜ್ಜೆ: ಜಿಲ್ಲೆಯ ಗುಂಡ್ಲುಪೇಟೆ ವ್ಯಾಪ್ತಿಯವೇಣುಗೋಪಾಲ ವನ್ಯಜೀವಿ ಉದ್ಯಾನ ಹಾಗೂ ಸುತ್ತಮುತ್ತಲಿನ ಅರಣ್ಯವನ್ನು ಸೇರಿಸಿ 19‌41ರ ಫೆ.19ರಂದು ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಗಿತ್ತು. 1973ರಲ್ಲಿ ಹುಲಿ ಯೋಜನೆಯಾದ ಬಳಿಕ 1985ರಲ್ಲಿ ಇನ್ನಷ್ಟು ಮೀಸಲು ಅರಣ್ಯವನ್ನು ಸೇರಿಸಿ ಬಂಡೀಪುರ ರಾಷ್ಟ್ರೀಯ ಉದ್ಯಾನ ಎಂದು ಹೆಸರಿಸ ಲಾಗಿತ್ತು. ಆಗ ಉದ್ಯಾನದ ವಿಸ್ತೀರ್ಣ 874.20 ಚದರ ಕಿ.ಮೀ ಇತ್ತು.

ಪರಿಸರ ಪ್ರವಾಸೋದ್ಯಮಕ್ಕೆ ಹೆಸರಾದ ಬಂಡೀಪುರ, ಅರಣ್ಯ ಇಲಾಖೆಗೆ ಉತ್ತಮ ಆದಾಯವನ್ನೂ ತಂದುಕೊಡುತ್ತಿದೆ. ಸಫಾರಿ, ವಸತಿಗೃಹ ಗಳಿಂದ ಪ್ರತಿ ವರ್ಷ ₹10 ಕೋಟಿಯಿಂದ ₹12 ಕೋಟಿವರೆಗೆ ಆದಾಯ ಬರುತ್ತಿದೆ ಎನ್ನುತ್ತವೆ ಇಲಾಖೆ ಮೂಲಗಳು.

ಕಾಡುವ ಲಂಟಾನ: ಲಂಟಾನ ಸಮಸ್ಯೆ ಇಡೀ ಅರಣ್ಯವನ್ನು ಬಾಧಿಸುತ್ತಿದ್ದು, ವನ್ಯಪ್ರಾಣಿಗಳಿಗೆ ತೊಂದರೆ ನೀಡುತ್ತಿದೆ. ಕಾಡಿನ ಶೇ 60ರಷ್ಟು ಭಾಗದಲ್ಲಿ ಈ ಕಳೆ ಗಿಡ ಇದೆ. ಇತ್ತೀಚಿನ ವರ್ಷಗಳಲ್ಲಿ ನರೇಗಾ, ಸಿಎಸ್‌ಆರ್‌ ಅನುದಾನದಿಂದ ಲಂಟಾನ ತೆರವು ಮಾಡಲಾಗುತ್ತಿದೆ. ಈವರೆಗೆ 800 ಹೆಕ್ಟೇರ್‌ ಪ್ರದೇಶದಿಂದ ತೆರವುಗೊಳಿಸಲಾಗಿದೆ.

ಮಾನವ–ವನ್ಯಜೀವಿ ಸಂಘರ್ಷ: ಹುಲಿ ಯೋಜನೆ ಎದುರಿಸುತ್ತಿರುವ ಮತ್ತೊಂದು ಸವಾಲಿದು. ಅರಣ್ಯದ ಅಂಚಿನಲ್ಲಿ 156 ಹಳ್ಳಿಗಳಿದ್ದು, ಲಕ್ಷ ಕ್ಕೂ ಹೆಚ್ಚು ಜನ‌ಸಂಖ್ಯೆ ಇದೆ. ಕೃಷಿ ಜಮೀನು, ಜಾನುವಾರು, ಮನುಷ್ಯರ ಮೇಲೆ ವನ್ಯಪ್ರಾಣಿಗಳ ದಾಳಿಯ ಕಾರಣ ದಿಂದ ಸಂಘರ್ಷ ಹೆಚ್ಚಾಗುತ್ತಿದೆ. ಇದರಿಂದ ಕಾಳ್ಗಿಚ್ಚು, ಪ್ರಾಣಿಗಳ ಹತ್ಯೆ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿರುತ್ತವೆ.

ಬೇಟೆ ಕಲಿತ ಮೂರು ಹುಲಿ ಮರಿಗಳು
ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯ ಕಾಡಂಚಿನಲ್ಲಿ ಉರುಳಿಗೆ ಸಿಲುಕಿ ಹತ್ಯೆಯಾದ ಹೆಣ್ಣು ಹುಲಿಯ ಮೂರು ಮರಿಗಳು ಬೇಟೆಯಾಡಿ ಒಟ್ಟಿಗೆ ತಿನ್ನುತ್ತಿರುವ ದೃಶ್ಯ ಟ್ರ್ಯಾಪಿಂಗ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

‘ಜಿಂಕೆಯನ್ನು ಯಾವುದೋ ಮಾಂಸಹಾರಿ ಪ್ರಾಣಿ ದಾಳಿ ಮಾಡಿ ಕೊಂದು ಸ್ವಲ್ಪ ಮಾಂಸ ತಿಂದಿರುವುದು ಮಂಗಳವಾರ ಕಂಡು ಬಂದಿ‌ತ್ತು. ಹೀಗಾಗಿ, ಆ ಕಳೇಬರದ ಸುತ್ತ ಟ್ರ್ಯಾಪಿಂಗ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು’.

ಕಾಳ್ಗಿಚ್ಚಿಗೆ ತತ್ತರಿಸಿದ್ದ ವನ್ಯ ಸಂಪತ್ತು
ಪ್ರತಿ ಬೇಸಿಗೆಯಲ್ಲಿ ಅರಣ್ಯದ ಒಂದಿಲ್ಲೊಂದು ಪ್ರದೇಶದಲ್ಲಿ ಕಾಳ್ಗಿಚ್ಚು ಸಂಭವಿಸುತ್ತಿರುತ್ತದೆ. 2017 ಹಾಗೂ 2019ರ ಬೇಸಿಗೆಯಲ್ಲಿ ಅರಣ್ಯ ಹೊತ್ತಿ ಉರಿದು ಸಾವಿರಾರು ಎಕರೆ ಕಾಡು ಭಸ್ಮವಾಗಿತ್ತು.

2017ರಲ್ಲಿ ಸಂಭವಿಸಿದ್ದ ಕಾಳ್ಗಿಚ್ಚಿಗೆ ಸಿಲುಕಿ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದರು. 10 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಬೂದಿಯಾಗಿತ್ತು. 2019ರಲ್ಲಿ 15 ಸಾವಿರ ಎಕರೆಗೂ ಹೆಚ್ಚು ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಸೇನಾ ಹೆಲಿಕಾಪ್ಟರ್‌ ಮೂಲಕ ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಿಸಲಾಗಿತ್ತು.
ಆ ಬಳಿಕ ಕಾಳ್ಗಿಚ್ಚು ಉಂಟಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT