ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಡೋಸ್‌ಗಳ ನಡುವಣ ಅಂತರ 12ರಿಂದ 16 ವಾರವೇ ಉತ್ತಮ: ವೈದ್ಯಕೀಯ ತಜ್ಞರ ಅಭಿಮತ

l
Last Updated 13 ಮೇ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಶೀಲ್ಡ್’ ಲಸಿಕೆಯ ಎರಡು ಡೋಸ್‌ಗಳ ಅಂತರವನ್ನು 12ರಿಂದ 16 ವಾರಗಳಿಗೆ ಹೆಚ್ಚಿಸಬೇಕು ಎಂಬ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್‌ಟಿಎಜಿಐ) ಶಿಫಾರಸಿಗೆ ರಾಜ್ಯದ ತಜ್ಞರು ಕೂಡ ಧ್ವನಿಗೂಡಿಸಿದ್ದಾರೆ.

ಆದರೆ, ಇದೇ ವೇಳೆ ಲಸಿಕೆಯ ಕೊರತೆ ಕೂಡ ಈ ಶಿಫಾರಸಿಗೆ ಕಾರಣ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ಸದ್ಯ 6ರಿಂದ 8 ವಾರ ಅಂತರದಲ್ಲಿ ‘ಕೋವಿಶೀಲ್ಡ್‌’ ಲಸಿಕೆಯ ಎರಡನೇ ಡೋಸ್ ನೀಡಲಾಗುತ್ತಿದೆ. ‘ಕೋವ್ಯಾಕ್ಸಿನ್‘ ಲಸಿಕೆಯನ್ನು 4ರಿಂದ 6 ವಾರಗಳ ಅಂತರದಲ್ಲಿ ಒದಗಿಸಲಾಗುತ್ತಿದೆ.

ಈ ಲಸಿಕೆಯ ಅವಧಿ ವಿಸ್ತರಣೆಗೆ ಎನ್‌ಟಿಎಜಿಐ ಶಿಫಾರಸು ಮಾಡಿಲ್ಲ. ಹಾಗಾಗಿ, ಹಾಲಿ ಇರುವ ಅಂತರದಲ್ಲಿಯೇ ‘ಕೋವ್ಯಾಕ್ಸಿನ್’ ಲಸಿಕೆಯ ಎರಡನೇ ಡೋಸ್ ವಿತರಣೆ ಮುಂದುವರಿಯಲಿದೆ.

*

‘ವೈಜ್ಞಾನಿಕ ಪುರಾವೆಗಳು ಲಭ್ಯ’
‘ಕೋವಿಶೀಲ್ಡ್‌’ ಲಸಿಕೆಯನ್ನು 12ರಿಂದ 16 ವಾರಗಳ ಅಂತರದಲ್ಲಿ ಎರಡನೇ ಡೋಸ್ ನೀಡಬೇಕು ಎಂದು ಈ ಹಿಂದೆ ಕೂಡ ಹೇಳಲಾಗಿತ್ತು. ವಿದೇಶಗಳಲ್ಲಿ ಇದೇ ಅಂತರದಲ್ಲಿ ನೀಡಲಾಗುತ್ತಿದ್ದು, ಲಸಿಕೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಆದರೆ, ಪ್ರಾರಂಭಿಕ ದಿನಗಳಲ್ಲಿ 28 ದಿನಗಳ ಅಂತರವನ್ನು ನಿಗದಿ ಮಾಡಲಾಗಿತ್ತು. ಬಳಿಕ 6ರಿಂದ 8 ವಾರ ಇರಬೇಕು ಎಂದು ಸೂಚಿಸಲಾಯಿತು. ಈಗ ಅವಧಿಯನ್ನು ಇನ್ನಷ್ಟು ವಿಸ್ತರಿಸಲಾಗಿದೆ. ಇದರಿಂದ ಯಾವುದೇ ಸಮಸ್ಯೆಯಿಲ್ಲ. 8 ವಾರಗಳಿಗೆ ಹೋಲಿಸಿದಲ್ಲಿ 12 ವಾರದ ನಂತವೇ ಉತ್ತಮ ಫಲಿತಾಂಶ ದೊರೆಯಲಿದೆ. ಈ ಬಗ್ಗೆ ವೈಜ್ಞಾನಿಕ ಪುರಾವೆಗಳಿವೆ.
-ಡಾ. ಗಿರಿಧರ್ ಬಾಬು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ

*

‘ಸಿದ್ಧತೆ ಮಾಡಿಕೊಳ್ಳದೆ ಲಸಿಕೆ ವಿತರಣೆ’
ಸೋಂಕಿತರಾದವರು ಆರು ತಿಂಗಳು ಲಸಿಕೆ ಪಡೆದುಕೊಳ್ಳಬೇಡಿ ಎಂದು ತಾಂತ್ರಿಕ ಸಮಿತಿಯೊಂದು ಹೇಳಿತ್ತು. ಸೂಕ್ತ ಸಿದ್ಧತೆ ಮಾಡಿಕೊಳ್ಳದೆಯೇ, ಅಧ್ಯಯನಗಳನ್ನು ಪರಿಗಣಿಸದೆಯೇ ಹಬ್ಬದ ಸಮಯದಲ್ಲಿ ಗದ್ದಲ ಎಬ್ಬಿಸುವ ರೀತಿಯಲ್ಲಿ ಸರ್ಕಾರವು ಲಸಿಕೆ ವಿತರಣೆಗೆ ಮುಂದಾಯಿತು. ವಿಶ್ವ ಆರೋಗ್ಯ ಸಂಸ್ಥೆಯು 8ರಿಂದ 12 ವಾರಗಳ ಅಂತರದಲ್ಲಿ ಎರಡನೇ ಡೋಸ್ ನೀಡಿ ಎಂದು ಸೂಚಿಸಿತ್ತು. ಆದರೆ, ಕಂಪನಿಯ ಶಿಫಾರಸಿನ ಅನುಸಾರ 4 ವಾರಗಳ ಅಂತರದಲ್ಲಿ ನೀಡಬೇಕು ಎಂದು 2ನೇ ಡೋಸ್ ವಿತರಿಸಿದರು. ಸೋಂಕಿತರಾಗಿ ಚೇತರಿಸಿಕೊಂಡವರಿಗೆ ಲಸಿಕೆ ಅಗತ್ಯವಿಲ್ಲ. ಅವರಲ್ಲಿ ಪ್ರತಿಕಾಯವು ವೃದ್ಧಿಯಾಗಿರುತ್ತದೆ. ಈಗಾಗಲೇ ಶೇ 50ರಿಂದ ಶೇ 60ರಷ್ಟು ಮಂದಿಗೆ ಸೋಂಕು ತಗುಲಿದೆ. 18 ವರ್ಷದೊಳಗಿನವರಿಗೆ ಲಸಿಕೆ ವಿತರಣೆ ನಡೆಯುತ್ತಿಲ್ಲ. ಹೀಗಾಗಿ, ಲಸಿಕೆ ಯಾರಿಗೆ ಅಗತ್ಯವಿದೆ ಅವರಿಗೆ ಮಾತ್ರ ವಿತರಿಸಿದಲ್ಲಿ ಬೇಡಿಕೆ ಕಡಿಮೆಯಾಗಲಿದೆ. ಲಸಿಕೆಗೆ ಸ್ಪಷ್ಟವಾದ ನೀತಿ ರಚಿಸಿಕೊಂಡು, ವಿತರಣೆಗೆ ಮುಂದಾಗಬೇಕಿತ್ತು.
-ಡಾ. ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯರು, ಮಂಗಳೂರು

*

‘12 ವಾರಗಳ ಅಂತರ ಉತ್ತಮ’
ವೈಜ್ಞಾನಿಕ ಪುರಾವೆಗಳಿಲ್ಲದೆಯೇ ಅಂತರ ಹೆಚ್ಚಿಸಲು ಶಿಫಾರಸು ಮಾಡುವುದಿಲ್ಲ. ಬ್ರಿಟನ್‌ನಲ್ಲಿ ಲಸಿಕೆಯ ಪ್ರಯೋಗಕ್ಕೆ ಒಳಗಾದ 2 ಸಾವಿರ ಮಂದಿಗೆ ಮೊದಲ ಡೋಸ್ ಪಡೆದ ಬಳಿಕ ಎರಡನೇ ಡೋಸ್ ನೀಡುವುದು ವಿಳಂಬವಾಯಿತು. ನಾಲ್ಕು ವಾರಕ್ಕೆ ನೀಡಬೇಕಾದ ಎರಡನೇ ಡೋಸ್ ಅನ್ನು 20 ವಾರಗಳವರೆಗೂ ಒದಗಿಸಲಾಯಿತು. 12 ವಾರ ಹಾಗೂ ಅದಕ್ಕಿಂತ ಹೆಚ್ಚಿನ ಅಂತರದಲ್ಲಿ ಎರಡನೇ ಡೋಸ್ ಪಡೆದವರಲ್ಲಿ ಉತ್ತಮವಾದ ಫಲಿತಾಂಶ ಕಾಣಿಸಿಕೊಂಡಿತು. ಈಗ ಬ್ರಿಟನ್‌ನಲ್ಲಿ 12 ವಾರಗಳ ಅಂತರದಲ್ಲಿಯೇ ಎರಡನೇ ಡೋಸ್ ಒದಗಿಸಲಾಗುತ್ತಿದೆ. ಇದರಿಂದ ಮೊದಲ ಡೋಸ್‌ ಅನ್ನು ಹೆಚ್ಚಿನ ಮಂದಿಗೆ ಒದಗಿಸಲು ಸಾಧ್ಯ. ಮೊದಲ ಡೋಸ್‌ನಿಂದ ಅಭಿವೃದ್ಧಿಯಾಗುವ ಪ್ರತಿಕಾಯಗಳು ಕನಿಷ್ಠ ಮೂರು ತಿಂಗಳು ರಕ್ಷಣೆ ನೀಡಲಿವೆ ಎಂಬುದು ದೃಢಪಟ್ಟಿದೆ. ಲಸಿಕೆಯ ಕೊರತೆ ಕೂಡ ಈ ಶಿಫಾರಸಿಗೆ ಕಾರಣವಾಗಿರಬಹುದು.
-ಡಾ. ಶ್ರೀಕಾಂತ್ ಹೆಗಡೆ, ವೈದ್ಯರು, ಶಿವಮೊಗ್ಗ

*

‘28 ದಿನಗಳಿಗೆ ನೀಡಿದ್ದು ತಪ್ಪು’
ಯಾವುದೇ ಲಸಿಕೆಯ ಎರಡನೇ ಡೋಸ್ ವಿಳಂಬವಾದಲ್ಲಿ ಸಮಸ್ಯೆಯಾಗುವುದಿಲ್ಲ. ಅದೇ ರೀತಿ, ‘ಕೋವಿಶೀಲ್ಡ್’ ಲಸಿಕೆಯ ಎರಡನೇ ಡೋಸ್‌ ಅವಧಿಯನ್ನು 12ರಿಂದ 16 ವಾರಗಳಿಗೆ ವಿಸ್ತರಿಸಿದಲ್ಲಿ ಉತ್ತಮ ಫಲಿತಾಂಶವನ್ನೇ ಪಡೆಯಬಹುದಾಗಿದೆ. ಕೋವಿಡ್‌ ಲಸಿಕೆಯ ಕೊರತೆಯಿಂದ ಈ ರೀತಿ ಶಿಫಾರಸು ಮಾಡಲಾಗಿದೆ ಎಂಬ ಸಂದೇಹಗಳು ಜನಸಾಮಾನ್ಯರಲ್ಲಿ ಮೂಡಲಿದೆ. ವಾಸ್ತವದಲ್ಲಿ 12 ವಾರದ ಬಳಿಕ ಎರಡನೇ ಡೋಸ್ ನೀಡಿದಲ್ಲಿ ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಈ ಮೊದಲು ಹುಮ್ಮಸ್ಸಿನಿಂದ 28 ದಿನಗಳ ಅಂತರದಲ್ಲಿ ಎರಡನೇ ಡೋಸ್ ಲಸಿಕೆ ನೀಡಲಾಯಿತು. ಇದು ತಪ್ಪಾದ ತೀರ್ಮಾನ. ಮೊದಲ ಡೋಸ್‌ನಿಂದ ಒಂದಷ್ಟು ಪ್ರತಿಕಾಯಗಳು ವೃದ್ಧಿಯಾಗುತ್ತದೆ. ಎರಡನೇ ಡೋಸ್ ಪಡೆದ ಬಳಿಕ ಅದು ಹೆಚ್ಚಲಿದೆ. ಲಸಿಕೆ ಕೊರತೆ ಕೂಡ ಅವಧಿ ವಿಸ್ತರಣೆಗೆ ಕಾರಣ.
-ಡಾ.ವೈ.ಸಿ. ಯೋಗಾನಂದ ರೆಡ್ಡಿ, ವೈದ್ಯರು, ಬಳ್ಳಾರಿ

ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಡಾ. ಯೋಗಾನಂದ ರೆಡ್ಡಿ, ಡಾ. ಶ್ರೀಕಾಂತ್ ಹೆಗಡೆ, ಡಾ. ಗಿರಿಧರ್ ಬಾಬು
ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಡಾ. ಯೋಗಾನಂದ ರೆಡ್ಡಿ, ಡಾ. ಶ್ರೀಕಾಂತ್ ಹೆಗಡೆ, ಡಾ. ಗಿರಿಧರ್ ಬಾಬು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT