ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: 1945ರಲ್ಲಿ ಶುರುವಾದ ಚಿಕ್ಕಪೇಟೆ ಸರ್ಕಾರಿ ಶಾಲೆ ಮಾರಾಟಕ್ಕಿದೆ!

ಶಿಕ್ಷಣ ಇಲಾಖೆ ಆಕ್ಷೇಪದ ಮಧ್ಯೆಯೂ ಡಿ.ಸಿ ಪ್ರಸ್ತಾವನೆ
Last Updated 17 ಆಗಸ್ಟ್ 2022, 20:19 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯಪೂರ್ವದಲ್ಲಿ ಆರಂಭವಾಗಿದ್ದ ಚಿಕ್ಕಪೇಟೆಯ ಸರ್ಕಾರಿ ಪ್ರೌಢಶಾಲೆಯ ಕಟ್ಟಡವನ್ನು ಜಾಗದ ಸಮೇತ ಮಾರಾಟ ಮಾಡಲು ಕಂದಾಯ ಇಲಾಖೆ ಮುಂದಾಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಶಿಕ್ಷಣ ಇಲಾಖೆಯ ತಕರಾರನ್ನೂ ಲೆಕ್ಕಿಸದೇ ಬಹುಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಅಥವಾ ಹರಾಜು ಹಾಕಲು ನಿರ್ದೇಶನ ನೀಡುವಂತೆ ಕೋರಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ. ನಗರದ ಬಹುಕೋಟಿ ಬೆಲೆ ಬಾಳುವ ಪ್ರದೇಶದಲ್ಲಿರುವ ಈ ಆಸ್ತಿಯು, ಶಾಲೆಗಾಗಿಯೇ ದಾನಿಗಳು ನೀಡಿದ ಜಾಗವಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಪ್ರತ್ಯೇಕವಾಗಿ ಶಾಲೆ ಇರುವ ಜಾಗ ಮತ್ತು ಕಟ್ಟಡದ ಮಾರುಕಟ್ಟೆ ಮೌಲ್ಯವನ್ನು ನಿಗದಿ ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಕಂದಾಯ ಇಲಾಖೆ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸರ್ಕಾರಿ ಶಾಲೆಯ ಭವಿಷ್ಯವೂ ನಿಂತಿದೆ.

ಬೆಂಗಳೂರು ಉತ್ತರ ತಾಲ್ಲೂಕು ಚಿಕ್ಕಪೇಟೆ ಒಟಿಸಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ 77 ವರ್ಷಗಳಷ್ಟು ಹಳೆಯದು. 13,735 ಚದರಡಿ ವಿಸ್ತೀರ್ಣದ ಮೈದಾನದಲ್ಲಿ 1945ರಲ್ಲೇ ಪ್ರಾಥಮಿಕ, ಮಾಧ್ಯಮಿಕ ಶಾಲೆ ಆರಂಭವಾಗಿದ್ದವು. ಸ್ವಾತಂತ್ರ್ಯಾ ನಂತರ ಅದೇ ಜಾಗದಲ್ಲಿ ಪ್ರೌಢಶಾಲೆಯನ್ನೂ ತೆರೆಯಲಾಗಿತ್ತು. ಸದ್ಯ ಇಲ್ಲಿನ ಪ್ರತಿ ಚದರಡಿಗೆ ₹40 ಸಾವಿರದಷ್ಟು ಮಾರುಕಟ್ಟೆ ಮೌಲ್ಯ ಇದೆ.

ಸೇವೆಯ ನೆಪದಲ್ಲಿ ಆಸ್ತಿ ವಶಕ್ಕೆ:ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕೊಠಡಿಗಳನ್ನು ಕೆಡವಿ, ಹೊಸ ಕೊಠಡಿ ನಿರ್ಮಿಸಿಕೊಡಲು ಅವಕಾಶ ಕೋರಿ 1979ರಲ್ಲಿ ರಜತಾ ಎಂಟರ್‌ ಪ್ರೈಸಸ್‌ ಎಂಬ ಖಾಸಗಿ ಸಂಸ್ಥೆಯೊಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸಂಸ್ಥೆಯ ಮನವಿ ಪುರಸ್ಕರಿಸಿದ ಸರ್ಕಾರ ನೆಲ ಹಾಗೂ ಮೊದಲ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ಕಟ್ಟಲು, ಎರಡನೇ ಮಹಡಿಯಲ್ಲಿ ಶಾಲೆಗಳಿಗೆ ಕೊಠಡಿ ನಿರ್ಮಿಸಿಕೊಡಲು ಒಪ್ಪಂದ ಮಾಡಿಕೊಂಡು ತಿಂಗಳಿಗೆ ₹ 16,350 ರಂತೆ 26 ವರ್ಷಗಳಿಗೆ ಶಾಲಾ ಜಾಗವನ್ನು ಗುತ್ತಿಗೆ ನೀಡಿತ್ತು.

ಗುತ್ತಿಗೆ ಅವಧಿ 2005ಕ್ಕೆ ಮುಕ್ತಾಯ ವಾದ ನಂತರ ಕೋರ್ಟ್‌ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಂಡು, ನಂತರ ರಜತಾ ಕಾಂಪ್ಲೆಕ್ಸ್‌ ಬಾಡಿಗೆದಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ 2011ರಲ್ಲಿ ತಿಂಗಳು ₹ 6.41 ಲಕ್ಷಕ್ಕೆ 10 ವರ್ಷಗಳಿಗೆ ಗುತ್ತಿಗೆ ನೀಡಿತ್ತು. ಈ ಅವಧಿಯೂ2021 ಜೂನ್‌ಗೆ ಮುಕ್ತಾಯವಾಗಿದೆ. ಶಾಲೆಯ ಜಾಗದಲ್ಲಿ ಪ್ರಸ್ತುತ ನಾಲ್ಕು ಮಹಡಿಗಳ ಕಟ್ಟಡವಿದೆ. ನೆಲ ಮಹಡಿಯಲ್ಲಿ 141 ಮಳಿಗೆಗಳಿವೆ. ಎರಡನೇ ಮಹಡಿಯಲ್ಲಿ ಶಾಲೆ ಇದ್ದರೆ, ಉಳಿದೆಡೆ ಬ್ಯಾಂಕ್‌, ವಸತಿ ಗೃಹಗಳಿವೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಸಕ್ತ ವರ್ಷದಲ್ಲಿ ಸರ್ಕಾರಿ ಶಾಲೆ ಮತ್ತು ಕಾಲೇಜು ಆಸ್ತಿ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಕಟ್ಟಡವನ್ನು ಶಾಲೆಯ ಹೆಸರಿಗೆ ಖಾತೆ ಮಾಡಿಕೊಡುವಂತೆ ಶಾಲೆಯ ಮುಖ್ಯ ಶಿಕ್ಷಕರು ಸಲ್ಲಿಸಿದ ಮನವಿಯನ್ನೂ ಕಂದಾಯ ಇಲಾಖೆ ಪುರಸ್ಕರಿಸಿಲ್ಲ.

ಮೌಲ್ಯ ನಿಗದಿಯಲ್ಲೂ ಭಾರಿ ವ್ಯತ್ಯಾಸ
ಸ್ವತ್ತಿನ ಮಾರುಕಟ್ಟೆ ಮೌಲ್ಯ ಕುರಿತುತಹಶೀಲ್ದಾರ್ ಹಾಗೂ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ನೀಡಿದ ವರದಿಯಲ್ಲಿ ಭಾರಿ ವ್ಯತ್ಯಾಸ ಇದೆ. ತಹಶೀಲ್ದಾರ್ ₹ 27 ಕೋಟಿ ನಮೂದಿಸಿದರೆ,ಲೋಕೋಪಯೋಗಿ ಇಲಾಖೆ ₹ 50.45 ಕೋಟಿ ನಿಗದಿ ಮಾಡಿದೆ.

₹ 13.49 ಕೋಟಿ ತೆರಿಗೆ ಬಾಕಿ!
ಸರ್ಕಾರ ಚಿಕ್ಕಪೇಟೆ ಸರ್ಕಾರಿ ಶಾಲೆ ಜಾಗವನ್ನು ತಿಂಗಳಿಗೆ ₹ 16,350ರಂತೆ 26 ವರ್ಷಗಳು, ತಿಂಗಳಿಗೆ ₹ 6.41 ಲಕ್ಷದಂತೆ 10 ವರ್ಷಗಳಿಗೆ ಗುತ್ತಿಗೆ ನೀಡಿದೆ. ಆದರೆ, ಈ ಗುತ್ತಿಗೆದಾರರು ಬಿಬಿಎಂಪಿಗೆ 2008–09ನೇ ಸಾಲಿನಿಂದ ಬಾಕಿ ಉಳಿಸಿಕೊಂಡಿರುವ ವಾರ್ಷಿಕ ತೆರಿಗೆ ಮೊತ್ತವೇ ₹ 13.49 ಕೋಟಿ ಇದೆ.

**

ಶಾಲೆಗೆ ಸೇರಿದ ಜಾಗ ಎಂದು ದೃಢೀಕರಿಸುವ ದಾಖಲೆಗಳ ಕೊರತೆ ಇದೆ. ಗುತ್ತಿಗೆ ಪಡೆದವರು ಕ್ರಯಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ.ಡಿ.ಸಿ ಪತ್ರ ತಲುಪಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
–ಎಸ್‌.ಆರ್‌.ಉಮಾಶಂಕರ್, ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ

**

ದಾನಿಗಳು ನೀಡಿದ ಜಾಗ. ಆಗ ದಾಖಲೆಗಳನ್ನು ನಿರ್ವಹಣೆ ಮಾಡಿಲ್ಲ. 1979ರಲ್ಲಿ ಸರ್ಕಾರ ಖಾಸಗಿಗೆ ನೀಡಿತ್ತು. ಈಗ ಸರ್ಕಾರದ ವಶದಲ್ಲಿದೆ. ತಕ್ಷಣ ಶಾಲೆಯ ಹೆಸರಿಗೆ ಖಾತೆ ಮಾಡಿಕೊಡಲು ಸೂಚಿಸಲಾಗಿದೆ.
–ಬಿ.ಸಿ.ನಾಗೇಶ್‌, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT