ಶುಕ್ರವಾರ, ಅಕ್ಟೋಬರ್ 22, 2021
28 °C
ಆರನೇ ವೇತನ ಆಯೋಗದ ಶಿಫಾರಸಿನಂತೆ ಪರಿಷ್ಕರಣೆ

ಮುಜರಾಯಿ ದೇವಸ್ಥಾನಗಳ ಸಿಬ್ಬಂದಿ ವೇತನ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮುಜರಾಯಿ ಅಧೀನದಲ್ಲಿರುವ ‘ಎ’ ಮತ್ತು ‘ಬಿ’ ದರ್ಜೆಯ ದೇವಸ್ಥಾನಗಳ ಅರ್ಚಕರು ಹಾಗೂ ನೌಕರರಿಗೆ ಅಕ್ಟೋಬರ್‌ 1ರಿಂದ ಅನ್ವಯವಾಗುವಂತೆ ಆರನೇ ವೇತನ ಆಯೋಗದ ಶಿಫಾರಸಿನ ಅನುಸಾರ ವೇತನ ಹೆಚ್ಚಳ ಮಾಡಲಾಗಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐದನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪಡೆಯುತ್ತಿರುವ ದೇವಾಲಯಗಳ ನೌಕರರಿಗೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಹಲವು ದಿನಗಳಿಂದ ಇತ್ತು. ಆಯಾ ದೇವಾಲಯದ ಒಟ್ಟು ಆದಾಯದಲ್ಲಿ ನೌಕರರ ವೇತನದ ಪಾಲು ಶೇಕಡ 35 ರಷ್ಟನ್ನು ಮೀರದಂತೆ ಈ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆಗೆ ಆದೇಶ ಹೊರಡಿಸಲಾಗಿದೆ’ ಎಂದರು.

ಆಯಾ ದೇವಾಲಯಗಳ ಆದಾಯದಿಂದಲೇ ನೌಕರರ ವೇತನ ಪರಿಷ್ಕರಣೆಯ ವೆಚ್ಚವನ್ನೂ ಭರಿಸಲಾಗುವುದು. 1,034 ನೌಕರರಿಗೆ ವೇತನ ಹಚ್ಚಳವಾಗಲಿದ್ದು, ಇದಕ್ಕಾಗಿ ₹ 20 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಿದರು.

‘ಸಿ’ ದರ್ಜೆಯ ದೇವಾಲಯದ ಅರ್ಚಕರು ಮತ್ತು ನೌಕರರಿಗೂ ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡಬೇಕೆಂಬ ಬೇಡಿಕೆ ಇದೆ. ಆದರೆ, ‘ಸಿ’ ದರ್ಜೆಯ ಎಲ್ಲ ದೇವಾಲಯಗಳಲ್ಲೂ ಕಾಯಂ ಅರ್ಚಕರು ಇಲ್ಲ. ಅಲ್ಲದೇ, ಈ ದೇವಾಲಯಗಳಲ್ಲಿ ಆದಾಯ ಕಡಿಮೆ ಇದೆ. ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ‍ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

37,000 ಸಿಬ್ಬಂದಿಗೆ ವಿಮೆ: ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲ ದೇವಾಲಯಗಳ ಅರ್ಚಕರು ಮತ್ತು ಸಿಬ್ಬಂದಿಗೆ ವಿಮಾ ಸೌಲಭ್ಯ ಒದಗಿಸಲಾಗುತ್ತಿದೆ. ಎಲ್ಲ ನೌಕರರನ್ನೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯ ವ್ಯಾಪ್ತಿಗೆ ತರಲಾಗುವುದು. ಇದಕ್ಕಾಗಿ ಇಲಾಖೆ ವಾರ್ಷಿಕ ₹ 1.22 ಕೋಟಿ ವೆಚ್ಚ ಮಾಡಲಿದೆ ಎಂದರು.

ದೇವಸ್ಥಾನಗಳಿಗೆ ನೀಡುವ ತಸ್ತೀಕ್‌ ಮೊತ್ತದ ಬಾಬ್ತು ₹ 19 ಕೋಟಿ ಬಾಕಿ ಇದೆ. ಅದನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಎಲ್ಲ ದೇವಸ್ಥಾನಗಳ ವಿವರ, ಸ್ಥಳ ಮಾಹಿತಿ, ಆಸ್ತಿ ವಿವರ, ಆನ್‌ಲೈನ್‌ ಮತ್ತು ಇ–ಸೇವೆಗಳ ವಿವರಗಳನ್ನು ಸಮಗ್ರ ದೇವಾಲಯ ನಿರ್ವಹಣಾ ವ್ಯವಸ್ಥೆ (ಐಟಿಎಂಎಸ್‌) ಅಡಿ ದಾಖಲಿಸುವ ಕೆಲಸ ನಡೆಯುತ್ತಿದೆ. ಈವರೆಗೆ ‘ಎ’ ದರ್ಜೆಯ 205 ಮತ್ತು ‘ಬಿ’ ದರ್ಜೆಯ 139 ದೇವಸ್ಥಾನಗಳ ಮಾಹಿತಿ ದಾಖಲಿಸಲಾಗಿದೆ ಎಂದರು.

ವಿಶೇಷ ಪೂಜೆ: ವಿಜಯದಶಮಿಯ ದಿನ (ಅ.15) ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿ ಜನರ ಒಳಿತಿಗಾಗಿ ವಿಶೇಷ ಪೂಜೆ ನೆರವೇರಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

‘ವಸ್ತ್ರಸಂಹಿತೆ ಪ್ರಸ್ತಾವವಿಲ್ಲ’

‘ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಪ್ರವೇಶಕ್ಕೆ ವಸ್ತ್ರಸಂಹಿತೆ ಜಾರಿಗೊಳಿಸುವ ಪ್ರಸ್ತಾವ ಇಲ್ಲ. ಧಾರ್ಮಿಕ ಪರಿಷತ್‌ನಲ್ಲಿ ಚರ್ಚೆಯಾಗಿದೆಯೇ ಎಂಬುದೂ ತಿಳಿದಿಲ್ಲ. ಈ ಕುರಿತು ಮಾಹಿತಿ ಪಡೆದು ಪರಿಶೀಲಿಸಲಾಗುವುದು’ ಎಂದು ಸಚಿವ ಶಶಿಕಲಾ ಜೊಲ್ಲೆ ತಿಳಿಸಿದರು.

ಚಿಕ್ಕಮಗಳೂರಿನ ಬಾಬಾ ಬುಡನ್‌ ಗಿರಿ ದತ್ತ ಪೀಠದಲ್ಲಿ ಮುಜಾವರ್‌ ನೇಮಕ ರದ್ದು ಮಾಡಿರುವ ಹೈಕೋರ್ಟ್‌ ಆದೇಶದ ಕುರಿತು ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು