ಗುರುವಾರ , ಜನವರಿ 20, 2022
15 °C

ಮರಳು ಗಣಿಗಾರಿಕೆಗೆ ಗ್ರಾಮ ಪಂಚಾಯಿತಿ ಅನುಮತಿ: ಹಾಲಪ್ಪ ಆಚಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹಳ್ಳ, ತೊರೆಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಗ್ರಾಮ ಪಂಚಾಯಿತಿ ಅನುಮತಿ ನೀಡಲು ಅನುಕೂಲವಾಗುವಂತೆ ಮರಳು ನೀತಿ ಸರಳೀಕರಿಸುವ ಕುರಿತಂತೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಭೂ ವಿಜ್ಞಾನ ಮತ್ತು ಗಣಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಎಸ್‌.ಎಲ್‌. ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದರಿಂದ ಗ್ರಾಮೀಣ ಭಾಗದಲ್ಲಿ ಮರಳು ಸಮಸ್ಯೆ ನಿವಾರಣೆಯ ಜೊತೆಗೆ, ಹಲವು ಗೊಂದಲಗಳಿಗೆ ಪರಿಹಾರ ಸಿಗಲಿದೆ’ ಎಂದರು.

‘ರಾಜ್ಯದಲ್ಲಿ 4.50 ಕೋಟಿ ಟನ್ ಮರಳಿನ ಬೇಡಿಕೆ ಇದೆ. 3.50 ಕೋಟಿ ಟನ್ ಮಾತ್ರ ಉತ್ಪಾದನೆಯಾಗುತ್ತಿದೆ. ಕೊರತೆ ಇರುವ 1 ಕೋಟಿ ಟನ್ ಮರಳು ಉತ್ಪಾದನೆಗೆ ಕಲ್ಲು ಪುಡಿ ಗಣಿಗಾರಿಕೆ ಮತ್ತು ಹಳ್ಳ ತೊರೆಗಳಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಲಾಗಿದೆ. ಕಲ್ಲು ಗಣಿಕಾರಿಕೆಗೆ ಅನುಮತಿ ನೀಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ’ ಎಂದರು.

‘ಕಟ್ಟಡ ಕಲ್ಲು ಗಣಿಗಾರಿಕೆಗೆ 4,500, ಅಲಂಕಾರಿಕ ಶಿಲೆಗಣಿ ಗುತ್ತಿಗೆಗೆ 1,714 ಅರ್ಜಿಗಳು ಬಂದಿದ್ದವು. ಅರಣ್ಯ ಹಾಗೂ ಕಂದಾಯ ಇಲಾಖೆಯ ಅನುಮತಿ ಪಡೆಯದ ಕಾರಣಕ್ಕೆ ಅವುಗಳನ್ನು ರದ್ದುಗೊಳಿಸಲಾಗಿತ್ತು. ಹೈಕೋರ್ಟ್ ಆದೇಶದ ಪ್ರಕಾರ 800 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ’ ಎಂದು ವಿವರಿಸಿದರು.

ಕೊಡಗಿನಲ್ಲಿ ಮರಳು ಕೊರತೆ: ಕಾಂಗ್ರೆಸ್ಸಿನ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕೊಡಗು ಜಿಲ್ಲೆಯಲ್ಲಿ ನಾಲ್ಕು ಕ್ರಷರ್ ಮಾತ್ರ ಇವೆ. ಅವುಗಳಲ್ಲಿ ಎರಡು ಸಕ್ರಿಯವಾಗಿವೆ. ಮೂರು ಹೊಸ ಕ್ರಷರ್‌ಗೆ ಅವಕಾಶ ನೀಡುವಂತೆ ಮನವಿ ಬಂದಿದೆ. ಮರಳು ತೆಗೆಯಲು 17 ನದಿಗಳ ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಅಲ್ಲಿ 68 ಸಾವಿರ ಟನ್ ಮರಳು ತೆಗೆಯಲು ಅನುಮತಿ ನೀಡಲಾಗಿದೆ. ಕೊಡಗಿಗೆ ಬೇರೆ ಬೇರೆ ಜಿಲ್ಲೆಗಳಿಂದ ಎಂ– ಸ್ಯಾಂಡ್ ರವಾನಿಸಲಾಗುತ್ತಿದೆ’ ಎಂದು ಸಚಿವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು