ಶನಿವಾರ, ಜನವರಿ 16, 2021
27 °C
ಡಿ.22 ಮತ್ತು 27ರಂದು ಮತದಾನ; 30ರಂದು ಮತ ಎಣಿಕೆ

ಚುನಾವಣಾ ‘ಪಂಚಾಯ್ತಿ’ಗೆ ರಂಗ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಭರಾಟೆ ಮುಗಿದ ಬೆನ್ನಲ್ಲೇ, ಗ್ರಾಮೀಣ ಪ್ರದೇಶದಲ್ಲಿ ರಾಜಕೀಯದ ರಂಗೇರಿಸುವ ಗ್ರಾಮ ಪಂಚಾಯತಿ ಚುನಾವಣೆಯ ಅಬ್ಬರಕ್ಕೆ ವೇದಿಕೆ ಸಜ್ಜಾಗಿದೆ.

ಅವಧಿ ಮುಗಿದಿರುವ 5,762 ಗ್ರಾಮ ಪಂಚಾಯಿತಿಗಳಿಗೆ ಚುನಾವಣಾ ನಡೆಸಲು ರಾಜ್ಯ ಚುನಾವಣಾ ಆಯೋಗ ಸೋಮವಾರ ಅಧಿಸೂಚನೆ ಪ್ರಕಟಿಸಿದೆ.

‘ಪ್ರತಿ ಹಂತದಲ್ಲಿ ತಲಾ 113 ತಾಲ್ಲೂಕುಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ಡಿ.22 ಮತ್ತು ಎರಡನೇ ಹಂತದ ಮತದಾನ ಡಿ.27ರಂದು ನಡೆಯಲಿದೆ’ ಎಂದು ರಾಜ್ಯ ಚುನಾವಣಾ ಆಯುಕ್ತ ಬಿ.ಬಸವರಾಜು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪ್ರತಿ ಜಿಲ್ಲೆಯ ಶೇ 50ರಷ್ಟು ತಾಲ್ಲೂಕುಗಳಲ್ಲಿ ಮೊದಲ ಹಂತ ಮತದಾನ ಮತ್ತು ಉಳಿದ ತಾಲ್ಲೂಕುಗಳಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದೆ. ಉದಾಹರಣೆಗೆ ಒಂದು ಜಿಲ್ಲೆಯಲ್ಲಿ 6 ತಾಲ್ಲೂಕುಗಳಿದ್ದರೆ ಮೊದಲ ಹಂತದಲ್ಲಿ ಮೂರು ಮತ್ತು ಎರಡನೇ ಹಂತದಲ್ಲಿ ಮೂರು ತಾಲ್ಲೂಕುಗಳಲ್ಲಿ ಚುನಾವಣೆ ನಡೆಯಲಿದೆ’ ಎಂದು ವಿವರಿಸಿದರು.

‘ಎರಡೂ ಹಂತಗಳ ಮತ ಎಣಿಕೆ ಒಂದೇ ದಿನ ಡಿ.30ರಂದು ನಡೆಯಲಿದೆ. ಸೋಮವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಡಿ.31ರ ಸಂಜೆ 5 ಗಂಟೆ ತನಕ ಚಾಲ್ತಿಯಲ್ಲಿ ಇರಲಿದೆ. ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆ ಪ್ರದೇಶಗಳಲ್ಲಿ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಬೀದರ್‌ ಜಿಲ್ಲೆಯಲ್ಲಿ ಮಾತ್ರ ಮತಯಂತ್ರ (ಇವಿಎಂ) ಬಳಕೆ ಮಾಡಲಾಗುತ್ತಿದ್ದು, ಉಳಿದೆಡೆ ಮತಪತ್ರಗಳ ಮೂಲಕವೇ ಚುನಾವಣೆ ನಡೆಯಲಿವೆ’ ಎಂದು ಅವರು ಸ್ಪಷ್ಟಪಡಿಸಿದರು.

ಪಕ್ಷದ ಚಿಹ್ನೆ ಇಲ್ಲ: ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಆಧರಿಸಿ ಸ್ಪರ್ಧೆಗೆ ಅವಕಾಶ ಇಲ್ಲದೇ ಇರುವುದರಿಂದ ನೇರಾನೇರ ರಾಜಕೀಯ ಪೈಪೋಟಿಗೆ ಅವಕಾಶ ಇಲ್ಲ. ಆದರೆ, ರಾಜಕೀಯ ಪಕ್ಷಗಳು ಬೆಂಬಲಕ್ಕೆ ನಿಲ್ಲುವುದು ಹಾಗೂ ಅಭ್ಯರ್ಥಿಗಳು ರಾಜಕೀಯ ಪಕ್ಷಗಳಲ್ಲಿ ಸಹಜವಾಗಿ ಗುರುತಿಸಿಕೊಂಡಿರುವುದರಿಂದಾಗಿ ಪರೋಕ್ಷವಾಗಿ ರಾಜಕೀಯ ಜಿದ್ದಾಜಿದ್ದಿಗೆ ಈ ಚುನಾವಣೆ ಕಾರಣವಾಗಲಿದೆ.

ಕೊನೆಯ ಒಂದು ಗಂಟೆ ಸೋಂಕಿತರಿಗೆ

‘ಕೋವಿಡ್ ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮತದಾನದ ಅವಧಿಯ ಕೊನೆಯ ಒಂದು ಗಂಟೆ ಅವಧಿಯಲ್ಲಿ ಸೋಂಕಿತರಿಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಬಸವರಾಜು ತಿಳಿಸಿದರು.

ಬೆಳಿಗ್ಗೆ 7ರಿಂದ ಸಂಜೆ 5ರ ತನಕ ಮತದಾನಕ್ಕೆ ಅವಕಾಶ ಇದೆ. ಎಲ್ಲ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಮತಗಟ್ಟೆ ಪ್ರವೇಶಿಸುವ ಮುನ್ನ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು ಎಂಬ ನಿಯಮಗಳನ್ನು ಒಳಗೊಂಡ ಮಾರ್ಗದರ್ಶಿ ಸೂತ್ರ (ಎಸ್‌ಒಪಿ) ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

‘ಪ್ರತಿ ಮತಗಟ್ಟೆಯ ಮತದಾರರ ಗರಿಷ್ಠ ಮಿತಿ 1,500 ಇತ್ತು. ಕೋವಿಡ್ ಕಾರಣದಿಂದ ಅದನ್ನು 1 ಸಾವಿರಕ್ಕೆ ಇಳಿಸಲಾಗಿದೆ. ಇದೇ ಮೊದಲ ಬಾರಿಗೆ ಚುನಾವಣಾ ಕರ್ತವ್ಯಕ್ಕೆ 45 ಸಾವಿರ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯ ಸೇವೆ ಪಡೆಯಲಾಗುತ್ತಿದೆ’ ಎಂದು ವಿವರಿಸಿದರು.

ಚುನಾವಣಾ ವೇಳಾ‍ಪಟ್ಟಿ

ವಿವರ; ಮೊದಲ ಹಂತ; ಎರಡನೇ ಹಂತ

ಅಧಿಸೂಚನೆ (ನಾಮಪತ್ರ ಸಲ್ಲಿಕೆ ಆರಂಭ); ಡಿ.7; ಡಿ.11

ನಾಮಪತ್ರ ಸಲ್ಲಿಕೆಗೆ ಕೊನೆ ದಿನ; ಡಿ.11; ಡಿ.16

ನಾಮಪತ್ರ ಪರಿಶೀಲನೆ; ಡಿ.12; ಡಿ.17

ನಾಮಪತ್ರ ವಾಪಸ್‌ಗೆ ಕೊನೆ ದಿನಾಂಕ; ಡಿ.14; ಡಿ.19

ಮತದಾನ; ಡಿ.22; ಡಿ,27

ಮರುಮತದಾನ; ಡಿ. 24; ಡಿ.29

ಮತ ಎಣಿಕೆ; ಡಿ.30

–––––

ಒಟ್ಟು ಗ್ರಾಮ ಪಂಚಾಯಿತಿಗಳು; 6,004

ಚುನಾವಣೆ ನಡೆಯಲಿರುವ ಪಂಚಾಯಿತಿಗಳು; 5,762

ಮತದಾರರ ಸಂಖ್ಯೆ; 2,97,15,048

ಮತಗಟ್ಟೆಗಳ ಸಂಖ್ಯೆ; 45,128

ಚುನಾವಣಾಧಿಕಾರಿಗಳ ಸಂಖ್ಯೆ; 5,847

ಸಹಾಯಕ ಚುನಾವಣಾಧಿಕಾರಿಗಳು; 6,085

***

ಬೀದರ್‌ನಲ್ಲಿ ಮಾತ್ರ ಮತಯಂತ್ರ: ಗ್ರಾಮ ಪಂಚಾಯಿತಿ ಚುನಾವಣೆಗೆ ಬೀದರ್‌ನಲ್ಲಿ ಮಾತ್ರ ಮತಯಂತ್ರ ಬಳಕೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಮತಪತ್ರದ ಮುಖಾಂತರ ಮತದಾನ ನಡೆಯಲಿದೆ. ಸೋಮವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.

ಕೋವಿಡ್ ಮಾರ್ಗಸೂಚಿ ಬಿಡುಗಡೆ: ಪಂಚಾಯಿತಿ ಚುನಾವಣೆ ವೇಳೆ ಕೊರೊನಾ ಸೋಂಕು ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.

ಕೊರೊನಾ ಸೋಂಕಿತರು, ಸೋಂಕಿನ ಲಕ್ಷಣ ಹೊಂದಿರುವವರು ಹಾಗೂ ಅವರ ಸಂಪರ್ಕಿತರು ಮತಗಟ್ಟೆಗೆ ತೆರಳಿ ಖುದ್ದು ಮತದಾನ ಮಾಡಲು ಇಚ್ಛಿಸಿದರೆ, ಚುನಾವಣಾ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಬೇಕು.

ಸಂಬಂಧಪಟ್ಟ ಕೋವಿಡ್‌ ಆರೈಕೆ ಕೇಂದ್ರದ ಆರೋಗ್ಯಾಧಿಕಾರಿಯು ಸೋಂಕಿತರು, ಸೋಂಕಿನ ಲಕ್ಷಣ ಹೊಂದಿದವರು ಮತ್ತು ಅವರ ಸಂಪರ್ಕಿತರಿಗೆ ಮತದಾನ ಮಾಡಲು ಸಮ್ಮತಿ ನೀಡಿದರೆ, ಆರೋಗ್ಯ ಇಲಾಖೆಯ ಸಿಬ್ಬಂದಿಯು ಇವರನ್ನು ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತಗಟ್ಟೆಗೆ ಕರೆತರಬೇಕು. ಮತದಾನದ ನಂತರ ಅವರನ್ನು ಸ್ವಸ್ಥಾನಕ್ಕೆ ಕರೆದುಕೊಂಡು ಹೋಗಬೇಕು ಎಂದು ಮಾರ್ಗಸೂಚಿ ಹೇಳಿದೆ.

***

ರಾಜ್ಯ ಸರ್ಕಾರದ ತಪ್ಪುಗಳ ಬಗ್ಗೆ ಪಂಚಾಯಿತಿ ಚುನಾವಣೆ ವೇಳೆ ಜನರಿಗೆ ಮನದಟ್ಟು ಮಾಡಿಸಿ, ಜನರ ಕೈಗೇ ಅಧಿಕಾರ ನೀಡಲು ನಮ್ಮದೇ ಆದ ಪ್ರಯತ್ನ ಮಾಡುತ್ತೇವೆ.

-ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು