ಬುಧವಾರ, ಮೇ 18, 2022
23 °C

ಜೆಡಿಎಸ್‌ನಲ್ಲಿ ನಿತ್ಯವೂ ಕಿರುಕುಳ, ಹಿಂಸೆ: ಮರಿತಿಬ್ಬೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರ ಧೋರಣೆಯಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ನಿತ್ಯವೂ ಕಿರುಕುಳ, ಹಿಂಸೆ ಅನುಭವಿಸುತ್ತಿದ್ದೇನೆ’ ಎಂದು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಭಾನುವಾರ ರಾತ್ರಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸದನದ ಮುಂದೆ ರೈತರ ಮಸೂದೆ, ಎಪಿಎಂಸಿ ಮಸೂದೆ ಬಂದಾಗ ಸಭಾನಾಯಕನಾಗಿ ನಾನು ಅವುಗಳ ವಿರುದ್ಧ ಮಾತನಾಡಿದ್ದೆ. ಆದರೆ ಮತಕ್ಕೆ ಹಾಕುವ ವೇಳೆ ನಮ್ಮ ಪಕ್ಷದ ಶಾಸಕರೆಲ್ಲರೂ ಹೊರಗೆ ಎದ್ದು ಹೋದರು. ಮಸೂದೆ ಅನುಮೋದನೆಗೊಳ್ಳುವಾಗ ಅವುಗಳ ಪರವಾಗಿ ತೀರ್ಮಾನ ಕೈಗೊಂಡಿದ್ದು ಏಕೆ? ಇಂತಹ ಸಂದರ್ಭದಲ್ಲಿ ಹಿಂಸೆ, ಕಿರುಕುಳ ಅನುಭವಿಸಿದ್ದೇನೆ’ ಎನ್ನುತ್ತಾ ಭಾವುಕರಾದರು.

‘ನಾನು ಹೇಳುವ ಮಾತುಗಳಿಗೆ, ಸಲಹೆಗಳಿಗೆ ಕಿಂಚಿತ್ತೂ ಬೆಲೆ ಇಲ್ಲ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ವರ್ತನೆಯಿಂದ ಬೇಸರವಾಗಿದೆ. ನನ್ನ ಅವಧಿ ಮುಗಿಯುವವರೆಗೆ ಜೆಡಿಎಸ್‌ನಲ್ಲಿ ಇರುತ್ತೇನೆ. ನನ್ನ ಹಿತೈಷಿಗಳು, ಸ್ನೇಹಿತರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ’ ಎಂದರು.

‘ಜಯರಾಮು ಅವರ ಬಳಿ ಹಣವಿಲ್ಲ ಎಂಬ ಕಾರಣಕ್ಕೆ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಟಿಕೆಟ್‌ ನಿರಾಕರಿಸಿದರು. ಜೆಡಿಎಸ್‌ ಸದಸ್ಯರೇ ಅಲ್ಲದ ಎಚ್‌.ಕೆ.ರಾಮು ಅವರಿಗೆ ಟಿಕೆಟ್‌ ಕೊಟ್ಟಿದ್ದಾರೆ. ಹಾಗಿದ್ದರೆ ರಾಮು ಅವರ ಬಳಿ ಎಷ್ಟು ಸಾವಿರ ಕೋಟಿ ಇದೆ? ಈ ಚುನಾವಣೆಯಲ್ಲಿ ನಾನು ಜೆಡಿಎಸ್‌ ಪರ ವೋಟು ಕೇಳುವುದಿಲ್ಲ. ಯಾರಿಗೆ ಬೆಂಬಲ ನೀಡಬೇಕು ಎಂಬ ಕುರಿತು ಶೀಘ್ರ ತೀರ್ಮಾನಿಸಲಾಗುವುದು’ ಎಂದರು.

‘ತುಮಕೂರಿನಲ್ಲಿ ದೇವೇಗೌಡರು, ಮಂಡ್ಯದಲ್ಲಿ ನಿಖಿಲ್‌ ಸೋಲಿಗೆ ಜೆಡಿಎಸ್‌ ಕಾರ್ಯಕರ್ತರು, ಶಾಸಕರು ಕಾರಣಕರ್ತರಲ್ಲ. ದೇವೇಗೌಡರ ಮನೆಯ ಬೆಳವಣಿಗೆಗಳೇ ಕಾರಣ. ದೇವೇಗೌಡರು ಮೊಮ್ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟ ನಂತರ ಸುಮ್ಮನಿರಬೇಕಾಗಿತ್ತು. ಮಂಡ್ಯದಲ್ಲಿ ನಿಖಿಲ್‌ ನಿಲ್ಲಿಸುವುದು ಬೇಡ ಎಂದು ನಾನು ಹೇಳಿದ್ದೆ. ಅವರ ಕುಟುಂಬ ಮಾತಿಗೆ ಕಟ್ಟುಬಿದ್ದು ನಾವು ಮೌನವಾಗಿ ಪ್ರಚಾರ ಮಾಡಬೇಕಾಯಿತು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು