ಮಂಗಳವಾರ, ಜನವರಿ 25, 2022
28 °C

ಜ.26ರಿಂದ ಜನತಾ ಜಲಧಾರೆ ಆಂದೋಲನ: ಎಚ್‌.ಡಿ. ಕುಮಾರಸ್ವಾಮಿ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಡಿಎಸ್‌ಗೆ ಸಂಪೂರ್ಣ ಬಹುಮತದೊಂದಿಗೆ ಐದು ವರ್ಷಗಳ ಪೂರ್ಣಾವಧಿ ಅಧಿಕಾರ ನೀಡಿದರೆ ರಾಜ್ಯದ ಎಲ್ಲ ನದಿಗಳ ನೀರಿನ ಸಮರ್ಪಕ ಬಳಕೆಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಬರುವ ಭರವಸೆಯೊಂದಿಗೆ ಜನವರಿ 26ರಿಂದ ಜನತಾ ಜಲಧಾರೆ ಆಂದೋಲನ ಆರಂಭಿಸಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪ್ರಕಟಿಸಿದರು.

ಪಕ್ಷದ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.26ರಿಂದ ಆರಂಭವಾಗುವ ಆಂದೋಲನ 2023ರ ಚುನಾವಣೆಯರೆಗೂ ಮುಂದುವರಿಯಲಿದೆ. ನದಿಮೂಲಗಳಿರುವ 51 ಸ್ಥಳಗಳಿಗೆ ಯಾತ್ರೆಯ ಮೂಲಕ ಭೇಟಿನೀಡಲಾಗುವುದು ಎಂದರು.

ರಾಜ್ಯದ ಎಲ್ಲ ನದಿಗಳಲ್ಲಿ ಲಭ್ಯವಿರುವ ನೀರನ್ನು ಬಳಸಿಕೊಳ್ಳಲು ಸಮಗ್ರ ಯೋಜನೆ ರೂಪಿಸಲಾಗಿದೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಮತ್ತು ರಾಜ್ಯದ ಉದ್ದಗಲಕ್ಕೆ ಕೃಷಿ ಚಟುವಟಿಕೆಗೆ ನೀರಾವರಿ ಕಲ್ಪಿಸುವ ಯೋಜನೆಗಳನ್ನು ಜೆಡಿಎಸ್‌ ಸಿದ್ಧಪಡಿಸಿದೆ. ಅವುಗಳೊಂದಿಗೆ ಜನರ ಎದುರು ಹೋಗಿ ಬೆಂಬಲ ಕೋರಲಾಗುವುದು ಎಂದರು.

ಪಕ್ಷದ ಶಾಸಕರು, ಮಾಜಿ ಸಚಿವರು, ಹಿರಿಯ ಮುಖಂಡರ ನೇತೃತ್ವದಲ್ಲಿ 15 ತಂಡಗಳನ್ನು ರಚಿಸಲಾಗುವುದು. ಈ ತಂಡಗಳು ನದಿ ಮೂಲಗಳಿಗೆ ಭೇಟನೀಡಿ ಪೂಜೆ ಸಲ್ಲಿಸಿ, ಜಲ ಸಂಗ್ರಹಿಸಲಿವೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಜಾಸ್ತಿ ಆಗದಿದ್ದರೆ ಜ.26ಕ್ಕೆ ಆಂದೋಲನ ಆರಂಭಿಸುವುದು ಖಚಿತ. ಕೋವಿಡ್‌ ಹೆಚ್ಚಾದರೆ ಕೆಲವು ದಿನಗಳ ಕಾಲ ಮುಂದೂಡಲಾಗುವುದು ಎಂದು ವಿವರಿಸಿದರು.

ರಾಜ್ಯದ ಎಲ್ಲ ನದಿಗಳಲಿ ಲಭ್ಯವಿರುವ ನೀರಿನ ಪ್ರಮಾಣ ಮತ್ತು ಅದನ್ನು ಬಳಸಿಕೊಳ್ಳಲು ಇರುವ ಮಾರ್ಗೋಪಾಯದ ಕುರಿತು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರಿಗೆ ಮಾತ್ರ ಮಾಹಿತಿ ಇದೆ. ಅವರು ಬದುಕಿರುವಾಗಲೇ ಅದನ್ನು ಸಾಕಾರಗೊಳಿಸಬೇಕಿದೆ. ಆ ದಿಸೆಯಲ್ಲಿ ಜೆಡಿಎಸ್‌ ಕೆಲಸ ಮಾಡಲಿದೆ ಎಂದರು.

ಜೆಡಿಎಸ್‌ಗೆ ಸೋಲು ಮತ್ತು ಗೆಲುವು ಹೊಸದಲ್ಲ. ಅನೇಕ ಚುನಾವಣೆಗಳಲ್ಲಿ ಸೋಲು, ಗೆಲುವು ನೋಡಿದ್ದೇವೆ. ಈಗ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ನೀಡಿದರೆ ಜನರ ಕೆಲಸ ಮಾಡುತ್ತೇವೆ ಎಂಬ ಭರವಸೆಯೊಂದಿಗೆ ಹೋರಾಟ ಮಾಡುತ್ತೇವೆ. ಯಾವ ರೀತಿಯಲ್ಲೂ ಮುಚ್ಚುಮರೆ ಮಾಡುವುದಿಲ್ಲ. ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಜನರಲ್ಲಿ ಕೇಳುವುದಕ್ಕಾಗಿಯೇ ಈ ಯಾತ್ರೆ ಮಾಡುತ್ತೀದ್ದೇವೆ ಎಂದು ಹೇಳಿದರು.

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಪಾದಯಾತ್ರೆಗೆ ವಿರುದ್ಧವಾಗಿ ಈ ಕಾರ್ಯಕ್ರಮ ರೂಪಿಸಿಲ್ಲ. ಮೇಕದಾಟು ಜತೆಯಲ್ಲೇ ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಎಲ್ಲ ಯೋಜನೆಗಳೂ ಆಗಬೇಕು. ಅದಕ್ಕೆ ಪೂರಕವಾಗಿ ನಮ್ಮ ಹೋರಾಟ ಎಂದರು.

ಇದನ್ನೂ ಓದಿ... ಮೇಕೆದಾಟು ಯೋಜನೆ ಚರ್ಚೆಯ ಫಲ ತಿಳಿಸಿ: ಸಿದ್ದರಾಮಯ್ಯಗೆ ಎಚ್‌ಡಿಕೆ ಸವಾಲು

ಪಾದಯಾತ್ರೆಯಿಂದ ನೀರು ಸಿಗುವುದಿಲ್ಲ: ಕಾಂಗ್ರೆಸ್‌ನ ಪಾದಯಾತ್ರೆಯಿಂದ ಮೇಕೆದಾಟು ಯೋಜನೆಗೆ ಅನುಮತಿ ಸಿಗುವುದಿಲ್ಲ. ಬೆಂಗಳೂರಿಗೆ ನೀರೂ ಸಿಗುವುದಿಲ್ಲ. ಇವರ ಪಾದಯಾತ್ರೆಯಿಂದ ಆ ಭಾಗದ ಜನರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಪಾದಯಾತ್ರೆಯಿಂದ ನೀರು ಸಿಗುತ್ತದೆ ಎಂದು ಸಾಬೀತುಪಡಿಸುವ ಸಾಕ್ಷ್ಯ ನೀಡಲಿ. ನಾನು ಖುದ್ದಾಗಿ ಪಾದಯಾತ್ರೆಯನ್ನು ಬೆಂಬಲಿಸುವೆ. ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ನಮ್ಮ ಪಕ್ಷದ ಕಾರ್ಯಕರ್ತರಿಗೂ ಕರೆ ನೀಡುತ್ತೇನೆ ಎಂದು ಸವಾಲು ಹಾಕಿದರು.

ಇದನ್ನೂ ಓದಿ... ವಿಡಿಯೊ | ‘ಹೂ ಅಂತಿಯಾ ಮಾವ..’ ಡ್ಯಾನ್ಸ್‌​ ಹಿಂದಿನ ಕಷ್ಟವನ್ನು ವಿವರಿಸಿದ ಸಮಂತಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು