ಮಂಗಳವಾರ, ಮೇ 24, 2022
30 °C
ಮಹದೇಶ್ವರ ಬೆಟ್ಟದಲ್ಲಿ ರಸ್ತೆಗೆ ಉರುಳಿದ ಬಂಡೆ l ಪಾಂಡವಪುರ ತಾಲ್ಲೂಕಿನಲ್ಲಿ 78 ಮನೆಗಳು ಭಾಗಶಃ ಕುಸಿತ

ಧಾರಾಕಾರ ಮಳೆ: ಮನೆಯ ಗೋಡೆ ಕುಸಿದು ನಾಲ್ವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ವಿವಿಧೆಡೆ ಭಾನುವಾರ ಮಳೆ ಸಂಬಂಧಿತ ಅವಘಡಗಳಲ್ಲಿ ಬಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಮನೆಯ ಗೋಡೆ ಕುಸಿದು ಚಿತ್ರದುರ್ಗ ಜಿಲ್ಲೆಯಲ್ಲಿ ಗರ್ಭಿಣಿ ಸೇರಿದಂತೆ ಒಂದೇ ಕುಟುಂಬದ ಮೂವರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದಾರೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿ 78 ಮನೆಗಳು ಭಾಗಶಃ ಕುಸಿದಿವೆ. ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ರಸ್ತೆಯೊಂದು 30 ಅಡಿಯಷ್ಟು ಉದ್ದಕ್ಕೆ ಕುಸಿದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆ, ಕಾಫಿ ಬೆಳೆ, ದಾವಣಗೆರೆ ಜಿಲ್ಲೆಯಲ್ಲಿ ರಾಗಿ, ಮೆಕ್ಕೆಜೋಳ ಬೆಳೆಗೆ ಹಾನಿಯಾಗಿದೆ 

ಮೈಸೂರು ವರದಿ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು ಕೆನ್ನಾಳು ‌ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಭಾನುವಾರ ಮನೆಯ ಗೋಡೆ ಕುಸಿದು, 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. 1 ಹಸು, 1 ಕರು, 2 ಮೇಕೆಯೂ ಮೃತಪಟ್ಟಿವೆ.

ಗ್ರಾಮದ ಜಯಮ್ಮ ಅವರ ಮನೆಯ ಒಂದು ಭಾಗ ಕುಸಿದಿದ್ದು, ಅಲ್ಲೇ ಕಟ್ಟಿಹಾಕಿದ್ದ ಜಾನುವಾರುಗಳ ಮೇಲೆ ಬಿದ್ದಿದೆ. ಗೋಡೆ ಕುಸಿದ ವೇಳೆ ಪಕ್ಕದ ಮನೆಯ ಬಳಿ ಕುಳಿತಿದ್ದ ಮಂಜುನಾಥ್ ಅವರ ಪುತ್ರ ಗಗನ್ (11) ಗಾಯಗೊಂಡಿದ್ದು, ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟನು.

ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಶನಿವಾರ ಭಾರಿ ಮಳೆಯಾಗಿದೆ. ಹುಣಸನಹಳ್ಳಿ ಗ್ರಾಮದಿಂದ ಬಳ್ಳೇಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ನೆಲಮನೆ ಗ್ರಾಮದಿಂದ ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಮತ್ತು ಪಟ್ಟಸೋಮನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ 30 ಅಡಿಯಷ್ಟು ಕುಸಿದಿದೆ. ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಸೆಂದಿಲ್‌ ಕೋಟೆಯ ಪ್ರವೇಶ ದ್ವಾರದ ಎಡ ಭಾಗ ಮತ್ತು ಬಲ ಭಾಗದಲ್ಲಿ 10 ಮೀಟರ್‌ಗೂ ಹೆಚ್ಚು ಕುಸಿದಿದೆ.

ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯೂ ಶನಿವಾರ ರಾತ್ರಿ ಭಾರಿ ಮಳೆಯಾಗಿದೆ. ಬೋಗಾದಿ ಕೆರೆ ಸುತ್ತಮುತ್ತಲ ಪ್ರದೇಶಗಳು ಜಲಾವೃತಗೊಂಡಿವೆ. ತಾಲ್ಲೂಕಿನಲ್ಲಿ 20 ಮನೆಗಳು ಭಾಗಶಃ ಕುಸಿದಿವೆ. ನಂಜನಗೂಡು ತಾಲ್ಲೂಕಿನಲ್ಲಿ ಎರಡು ಮನೆಗಳು ಕುಸಿದಿವೆ.

ದಿವಾನ್ಸ್ ರಸ್ತೆ ಹಾಗೂ ಗೋಕುಲಂನಲ್ಲಿ ಮರಗಳು ಉರುಳಿವೆ. ಮೈಸೂರು ನಗರದಲ್ಲಿ 6 ಸೆಂ.ಮೀ., ಕೆ.ಆರ್.ನಗರ ತಾಲ್ಲೂಕು ಹಳಿಯೂರಿನಲ್ಲಿ 8 ಸೆಂ.ಮೀ.ನಷ್ಟು ಮಳೆ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ಚಾಮರಾಜನಗರ ತಾಲ್ಲೂಕಿನ ಸುವರ್ಣಾವತಿ ಜಲಾಶಯ ಭರ್ತಿಯಾಗಿದ್ದು, ನದಿಗೆ ನೀರು ಹರಿಸಲಾಗಿದೆ. ಯಳಂದೂರು ತಾಲ್ಲೂಕು ಕೆಸ್ತೂರಿನಲ್ಲಿ ಮೂರು, ಬಿಳಿಗಿರಿರಂಗನಬೆಟ್ಟದಲ್ಲಿ ಒಂದು ಮನೆ ಕುಸಿದಿದೆ. ಮಹದೇಶ್ವರ ಬೆಟ್ಟದ ರಸ್ತೆಗೆ ಬೃಹತ್‌ ಬಂಡೆ ಉರುಳಿದೆ. 

ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿದಿತ್ತು. ಜಿಲ್ಲೆಯ ವಿವಿಧೆಡೆ  ಕಾಫಿ ಒಣಗಿಸಲು ಬೆಳೆಗಾರರು ಪರದಾಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ತುಂತುರು ಮಳೆಯಾಗಿದೆ.

ಗರ್ಭಿಣಿ ಸೇರಿ ಒಂದೇ ಕುಟುಂಬದ ಮೂವರ ಸಾವು

ಹಿರಿಯೂರು (ಚಿತ್ರದುರ್ಗ): ತಾಲ್ಲೂಕಿನ ಕಾರೋಬಯ್ಯನಹಟ್ಟಿಯಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ
ಜಿಟಿಜಿಟಿ ಮಳೆಗೆ ಮನೆಯೊಂದರ ಶಿಥಿಲಗೊಂಡಿದ್ದ ಗೋಡೆ ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

ಚನ್ನಕೇಶವ (26) ಹಾಗೂ ಅವರ ಪತ್ನಿ ಸೌಮ್ಯ (20) ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮನೆಯ ಯಜಮಾನ ಕ್ಯಾಸಣ್ಣ (55) ಚಿಕಿತ್ಸೆಗೆ ಸ್ಪಂದಿಸದೇ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಭಾನುವಾರ ಬೆಳಗಿನ ಜಾವ ಮನೆಯ ಗೋಡೆ ಕುಸಿದುಬಿದ್ದಿದೆ. ಗೋಡೆ ಬಿದ್ದ ಶಬ್ದ ಕೇಳಿದ ಅಕ್ಕಪಕ್ಕದ ಮನೆಯವರು ರಕ್ಷಣೆಗೆ ಧಾವಿಸುವ ವೇಳೆಗೆ ದಂಪತಿ ಮೃತಪಟ್ಟಿದ್ದರು. ಮತ್ತೊಂದು ಬದಿಯಲ್ಲಿ ಮಲಗಿದ್ದ ಕ್ಯಾಸಪ್ಪನ ಪತ್ನಿ ಪಾರಾಗಿದ್ದಾರೆ.

ಸೌಮ್ಯ ಹಾಗೂ ಚನ್ನಕೇಶವ ಒಂಬತ್ತು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಸೌಮ್ಯ ಮೂರು ತಿಂಗಳ ಗರ್ಭಿಣಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು