ಶನಿವಾರ, ಸೆಪ್ಟೆಂಬರ್ 26, 2020
22 °C
ಐವರು ಮಣ್ಣಿನಡಿ ಸಿಲುಕಿರುವ ಶಂಕೆ l ಮಳೆ ಸಂಬಂಧಿ ಅವಘಡದಿಂದ 5 ಸಾವು

ತಲಕಾವೇರಿಯಲ್ಲಿ ಕುಸಿದ ಬೆಟ್ಟ: ಮಳೆಗೆ ನಲುಗಿದ ಕರುನಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡಗು ಜಿಲ್ಲೆಯ ತಲಕಾವೇರಿ ಕ್ಷೇತ್ರದ ಬ್ರಹ್ಮಗಿರಿ ಬುಧವಾರ ತಡರಾತ್ರಿ ಭಾರಿ ಮಳೆಗೆ ಕುಸಿದಿದೆ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳು ಸೇರಿ ಹಲವು ಭಾಗಗಳಲ್ಲಿ ಮುಂಗಾರು ಮಳೆಯ ಅಬ್ಬರ ಬುಧವಾರ ರಾತ್ರಿಯಿಂದ ತೀವ್ರಗೊಂಡಿದೆ. ಭಾರಿ ಮಳೆಯಿಂದಾಗಿ ತಲಕಾವೇರಿ ಮತ್ತು ಚಾರ್ಮಾಡಿ ಘಾಟಿಯ ಕೆಲವೆಡೆ ಭೂಕುಸಿತ ಸಂಭವಿಸಿದೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹದ ಸ್ಥಿತಿ ತಲೆದೋರಿದೆ.

ತಲಕಾವೇರಿ ಸಮೀಪದ ಬ್ರಹ್ಮಗಿರಿ ಬೆಟ್ಟ ಕುಸಿದಿದ್ದು, ತಲಕಾವೇರಿಯ ಅರ್ಚಕರ ಕುಟುಂಬದ ಐದು ಮಂದಿ ನಾಪತ್ತೆಯಾಗಿದ್ದಾರೆ. ಮಳೆ ಸಂಬಂಧಿ ಅವಘಡಗಳಿಂದ ಒಟ್ಟು ಐವರು ಮೃತಪಟ್ಟಿದ್ದಾರೆ. 

ಬಾಳೆಹೊನ್ನೂರು ಬಳಿಯ ಅಂಡವಾನೆ ಗ್ರಾಮದ ಶಂಕರ (26) ಗುರುವಾರ ಬೆಳಿಗ್ಗೆ ಗದ್ದೆ ಬಳಿ ಸಾಗುವಾಗ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಕಡೂರು ತಾಲ್ಲೂಕಿನ ಯಗಟಿ ಹೋಬಳಿಯ ಜಕ್ಕನಹಳ್ಳಿಯ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತಗುಲಿ ಪರಮೇಶ್ವರಪ್ಪ (38) ಬುಧವಾರ ಮೃತಪಟ್ಟಿದ್ದಾರೆ.

ಕಲಘಟಗಿ ತಾಲ್ಲೂಕಿನ ಹಿರೇಕೇರಿಯಲ್ಲಿ ನೆಲಮಟ್ಟದ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಶ್ರೀದೇವಿ ಹನುಮಂತಪ್ಪ ಗಾಣಿಗೇರ (8) ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.

ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕ್ಲಾಪುರ ಮಠ ಗ್ರಾಮದಲ್ಲಿ ದನಗಳನ್ನು ಮೇಯಿಸಲು ಹೋಗಿದ್ದ ಸಿದ್ದಯ್ಯ (60) ಎತ್ತಿನಹೊಳೆ ದಾಟುವಾಗ ಬುಧವಾರ ಸಂಜೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಗುರುವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.


ಶೃಂಗೇರಿಯಲ್ಲಿ ತುಂಗಾ ನದಿ ತುಂಬಿ ಹರಿಯುತ್ತಿರುವುದು

ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಸಮೀಪದ ಮಾದಾಪುರ ಗ್ರಾಮದಲ್ಲಿ ಬುಧವಾರ ರಾತ್ರಿ ಮನೆಯ ಗೋಡೆ ಕುಸಿದು, ಶಿವನಂಜಯ್ಯ (70) ಎಂಬುವರು ಮೃತಪಟ್ಟಿದ್ದಾರೆ.

ಮತ್ತೆ ಕುಸಿದ ಭೂಮಿ: ಕೊಡಗು ಜಿಲ್ಲೆಯಲ್ಲಿ ಸತತ ಮೂರನೇ ವರ್ಷವೂ ಭೂಕುಸಿತ ಸಂಭವಿಸಿದೆ. ಬ್ರಹ್ಮಗಿರಿಯಲ್ಲಿ ಬುಧವಾರ ತಡರಾತ್ರಿ ಭೂಕುಸಿತವಾಗಿದ್ದು, ಗುಡ್ಡದ ಮಣ್ಣು ಸುಮಾರು ಐದು ಕಿ.ಮೀ. ದೂರದವರೆಗೂ ಜಾರಿಕೊಂಡು ಹೋಗಿದೆ. ತಲ‌ಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್‌ (80), ಅವರ ಪತ್ನಿ ಶಾಂತಾ (70), ಆನಂದತೀರ್ಥ (86), ಸಹಾಯಕ ಅರ್ಚಕರಾದ ಕಿರಣ್‌ ಹಾಗೂ ಪವನ್‌ ಮಣ್ಣಿನ ಅಡಿಯಲ್ಲಿ ಸಿಲುಕಿರಬಹುದು ಎನ್ನಲಾಗಿದೆ.

ಮನೆಯಲ್ಲಿದ್ದ ಎರಡು ಕಾರು ಹಾಗೂ ಸಾಕಿದ್ದ ಹಸುಗಳು ಮಣ್ಣಿನಡಿ ಸೇರಿಕೊಂಡಿವೆ. ಮಂಜು, ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೂ ತೊಡಕಾಗಿದೆ.

2019ರಲ್ಲಿ ವಿರಾಜಪೇಟೆಯ ತೋರ ಎಂಬಲ್ಲಿ ಇದೇ ರೀತಿ ಭೂಕುಸಿತವಾಗಿ ಹಲವು ಮಂದಿ ಜೀವಂತ ಸಮಾಧಿಯಾಗಿದ್ದರು.

ದಕ್ಷಿಣ ಕನ್ನಡದ ಬಿ.ಸಿ.ರೋಡ್ -ಪುಂಜಾಲಕಟ್ಟೆ ನಡುವಿನ ಬಡಗುಂಡಿ ಬಳಿ ರಾಷ್ಟ್ರೀಯ ಹೆದ್ದಾರಿ  ಬದಿಯಲ್ಲಿ ಗುಡ್ಡ ಕುಸಿದಿದೆ. ಬಿಸಿಲೆ ಘಾಟಿಯಲ್ಲೂ ಗುಡ್ಡ ಕುಸಿದಿದ್ದು, ಬಿಸಿಲೆ- ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ.

ಪ್ರವಾಹದ ರಭಸ: ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕೃಷ್ಣಾ ನದಿ ನೀರಿನ ಹರಿವು ಹೆಚ್ಚಾಗಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಕೃಷ್ಣಾ ಹಾಗೂ ಉಪನದಿಗಳಾದ ವೇದಗಂಗಾ ಹಾಗೂ ದೂಧ್‌ಗಂಗಾ ನದಿಗಳ ಒಳಹರಿವು ಹೆಚ್ಚಳವಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕಿನ ಏಳು ಸೇತುವೆಗಳು ಜಲಾವೃತವಾಗಿವೆ. ನದಿ ದಂಡೆಯ ಪ್ರದೇಶಗಳಲ್ಲಿರುವ ಸಾವಿರಾರು ಎಕರೆ ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದೆ. ಬೆಳಗಾವಿಯಲ್ಲಿ ಮಾರ್ಕಂಡೇಯ ನದಿ ಹಾಗೂ ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಶಂಭೂರು ಎಎಂಆರ್‌ ಡ್ಯಾಂ, ತುಂಬೆ ಕಿಂಡಿ ಅಣೆಕಟ್ಟೆಯಿಂದ ಹೆಚ್ಚಿನ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ನೇತ್ರಾವತಿ ನದಿಯಲ್ಲಿ ನೀರು ಹೆಚ್ಚಾಗಿದ್ದು, ಧರ್ಮಸ್ಥಳ ಸ್ನಾನಘಟ್ಟ ಮುಳುಗಡೆಯಾಗುವ ಭೀತಿ ಎದುರಾಗಿದೆ. ಕುಮಾರಧಾರಾ ನದಿಯಲ್ಲೂ ನೀರಿನ ಮಟ್ಟ ಹೆಚ್ಚಿದ್ದು, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ವರದಾ ನದಿಗೆ ಗುರುವಾರ 12 ಅಡಿಗೂ ಹೆಚ್ಚಿನ ನೀರು ಹರಿದುಬಂದಿದ್ದು, ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹಲವು ಗ್ರಾಮಗಳ ಕೃಷಿ ಜಮೀನುಗಳಿಗೆ ಈಗಾಗಲೇ ಭಾರಿ ಪ್ರಮಾಣದ ನೀರು ನುಗ್ಗಿ ಅಪಾರ ಹಾನಿಯುಂಟಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಮುಧೋಳ ತಾಲ್ಲೂಕಿನ ಮಿರ್ಜಿ- ಮಹಾಲಿಂಗಪುರ ನಡುವೆ ಢವಳೇಶ್ವರ ಬಳಿಯ ಘಟಪ್ರಭಾ ನದಿಯ ಹಳೆ ರಸ್ತೆಯ ಸೇತುವೆ ಜಲಾವೃತವಾಗಿದೆ. ಸೇತುವೆ ಮೇಲೆ ಐದು ಅಡಿಯಷ್ಟು ನೀರು ಗುರುವಾರ ಹರಿಯುತ್ತಿತ್ತು. 

ಮೈಸೂರು ಜಿಲ್ಲೆಯಲ್ಲಿ ಗುರುವಾರ ಮಳೆಯ ಬಿರುಸು ತಗ್ಗಿದ್ದರೂ, ನದಿಗಳ ನೀರಿನ ಮಟ್ಟ ತಗ್ಗಿಲ್ಲ. ಕಬಿನಿ ಜಲಾಶಯದಿಂದ 50,600 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದ್ದು, ನಂಜನಗೂಡು ನಗರದ ಹದಿನಾರು ಕಾಲು ಮಂಟಪ, ಪರಶುರಾಮ ದೇವಸ್ಥಾನ ಭಾಗಶಃ ಮುಳುಗಿವೆ.


ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಸ್ನಾನಘಟ್ಟದ ಬಳಿಯಿರುವ ಹದಿನಾರು ಕಾಲಿನ ಮಂಟಪ ಕಪಿಲಾ ನದಿ ನೀರಿನಲ್ಲಿ ಮುಳುಗಿದೆ

ಕೆಆರ್‌ಎಸ್‌ಗೆ 4 ಅಡಿ ನೀರು: ಕಾವೇರಿ ಕಣಿವೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಂಡ್ಯ ಜಿಲ್ಲೆ ಕೆಆರ್‌ಎಸ್‌ ಜಲಾಶಯಕ್ಕೆ 24 ಗಂಟೆಗಳಲ್ಲಿ 4 ಅಡಿಗಳಷ್ಟು ನೀರು ಹರಿದು ಬಂದಿದೆ. ಗುರುವಾರ 43 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹರಿದು ಬಂದಿದ್ದು, ಜಲಾಶಯದ ಮಟ್ಟ 111.80 ಅಡಿಗೆ ತಲುಪಿದೆ.

ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ ಗುರುವಾರ ಸಂಜೆಯ ವೇಳೆಗೆ ನೀರಿನ ಹರಿವು ಒಂದು ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿದೆ. ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ನೀರು ಹೊರಬಿಡುವ ಸಾಧ್ಯತೆಯಿದ್ದು, ಜನ, ಜಾನುವಾರು, ಮೀನುಗಾರರು ನದಿಗೆ ಇಳಿಯದಂತೆ ಸೂಚಿಸಲಾಗಿದೆ ಎಂದು ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಆರ್.ಪಿ. ಕುಲಕರ್ಣಿ ತಿಳಿಸಿದ್ದಾರೆ. 

ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಜಲಾಶಯಕ್ಕೆ ಒಳಹರಿವು 87,500 ಕ್ಯುಸೆಕ್‌ಗೆ ಹೆಚ್ಚಳಗೊಂಡಿದೆ. ಹೇಮಾವತಿ ಜಲಾಶಯ ಒಳ ಹರಿವು ಏರಿಕೆಯಾಗಿದೆ. ಯಗಚಿ ಜಲಾಶಯ ಭರ್ತಿಯಾಗಿದ್ದು, ನಾಲ್ಕು ಕ್ರಸ್ಟ್‌ ಗೇಟ್‌ ತೆರೆಯಲಾಗಿದ್ದು, ನದಿಗೆ ನೀರಿನ ಹರಿವು 3,600 ಕ್ಯುಸೆಕ್‌ನಷ್ಟಿದೆ. 

ಸಂಚಾರ, ವಿದ್ಯುತ್‌ ಸ್ಥಗಿತ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಕೆಲವೆಡೆ ಸಂಚಾರಕ್ಕೆ ಅಡಚಣೆಯಾಗಿದೆ.

ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ ಸಹಿತ ವಿವಿಧೆಡೆಗಳಲ್ಲಿ ವಿದ್ಯುತ್‌ ಪೂರೈಕೆ ಕಡಿತವಾಗಿದೆ. ಮಳೆ– ಗಾಳಿಗೆ 200ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಮರಗಳು ಬಿದ್ದು 100ಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ. 

ಕಾವೇರಿ ನದಿ ಪಾತ್ರದ ನೀರು ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನ ಮುಳಸೋಗೆ–ದಿಂಡಗಾಲು ರಸ್ತೆಗೆ ಕೊಲ್ಲಿ ಮೂಲಕ ಹರಿದಿದ್ದು, ರಸ್ತೆ ಬಂದ್ ಆಗಿದೆ. ಮಾಗೇರಿ -ಸೋಮವಾರಪೇಟೆ ರಸ್ತೆಯಲ್ಲಿ ಮರ ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಬೇಲೂರು ತಾಲ್ಲೂಕಿನ ಅಗಸರಹಳ್ಳಿ ಗ್ರಾಮದ ಸಂಪರ್ಕ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಹತ್ತು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಅಗಸರಹಳ್ಳಿ ಕೊಡ್ಲೂರು ರಸ್ತೆ ಮಾರ್ಗ ಬಂದ್ ಆಗಿದೆ. 

ಭಾಗಮಂಡಲ– ತಲಕಾವೇರಿ ರಸ್ತೆಯ ಹಲವು ಕಡೆ ಗುಡ್ಡ ಕುಸಿದಿದ್ದರಿಂದ ವಾಹನದಲ್ಲಿ ಕಾರ್ಯಾಚರಣೆ ಸ್ಥಳಕ್ಕೆ ತೆರಳಲು ಎನ್‌ಡಿಆರ್‌ಎಫ್‌ ಹಾಗೂ ಪೊಲೀಸರಿಗೆ ಸಾಧ್ಯವಾಗಲಿಲ್ಲ. ಕೊನೆಗೂ ನಡೆದುಕೊಂಡೇ ಬೆಟ್ಟವನ್ನೇರಿ ಸಾಗಿದ ತಂಡಕ್ಕೆ ಪ್ರತಿಕೂಲ ಹವಾಮಾನ, ಭಾರಿ ಮಳೆ ಹಾಗೂ ಮತ್ತೆ ಮಣ್ಣು ಕುಸಿಯುತ್ತಿರುವುದು ಅಡ್ಡಿಯಾಗಿದೆ. ಕಾರ್ಯಾಚರಣೆ ತಂಡಕ್ಕೇ ಆಪತ್ತು ಎದುರಾಗುವ ಆತಂಕವಿದೆ.

ಕರಡಿಗೋಡು, ಗುಹ್ಯ, ನೆಲ್ಯಹುದಿಕೇರಿ, ಕುಶಾಲನಗರದಲ್ಲಿ ಕಾವೇರಿ ಪ್ರವಾಹ ಬಂದಿದ್ದು, ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಭೇತ್ರಿ ಬಳಿ ಕಾವೇರಿ ನದಿಯು ಉಕ್ಕೇರಿದ್ದು ಮಡಿಕೇರಿ– ವಿರಾಜಪೇಟೆ ರಸ್ತೆ ಸಂಪರ್ಕ ಕಡಿತವಾಗಿದೆ. ಹಲವು ಗ್ರಾಮೀಣ ರಸ್ತೆಗಳು ಕೊಚ್ಚಿ ಹೋಗಿವೆ. 

‘ಚಾರ್ಮಾಡಿ: ವಾಹನ ಸಂಚಾರಕ್ಕೆ ಅವಕಾಶ’

ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 7 ಗಂಟೆವರೆಗೆ ವಾಹನ ಸಂಚರಿಸಬಹುದು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದರು.

‘ಈ ಮಾರ್ಗದಲ್ಲಿ ನಾಲ್ಕೈದು ಕಡೆ ಗುಡ್ಡದ ಮಣ್ಣು ರಸ್ತೆಗೆ ಕುಸಿದಿತ್ತು. ಅದನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ’ ಎಂದರು.

ಜನರ ರಕ್ಷಣೆಗೆ ಧಾವಿಸಿ: ಸಿ.ಎಂ ಕಟ್ಟಪ್ಪಣೆ

ಮಳೆ ಮತ್ತು ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಜನರ ರಕ್ಷಣೆಗೆ ತಕ್ಷಣವೇ ಧಾವಿಸುವಂತೆ ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಕೋವಿಡ್‌ ಪೀಡಿತರಾಗಿರುವ ಯಡಿಯೂರಪ್ಪ ಅವರು ಆಸ್ಪತ್ರೆಯಿಂದಲೇ ಎಂಟು ಜಿಲ್ಲೆಗಳ ಉಸ್ತುವಾರಿ ಸಚಿವರ ಜತೆಗೆ ದೂರವಾಣಿ ಮೂಲಕ ಮಾತನಾಡಿದರು. ಮಳೆ, ಪ್ರವಾಹದಿಂದ ಹಾನಿಯಾದ ಪ್ರದೇಶಕ್ಕೆ ತಕ್ಷಣವೇ ಭೇಟಿ ನೀಡಿ ಕೂಡಲೇ ಪರಿಹಾರ ಕಾರ್ಯಗಳನ್ನು ಆರಂಭಿಸಬೇಕು ಎಂದೂ ಸೂಚಿಸಿದರು.

ಪ್ರವಾಹ ಬರುವುದಕ್ಕೂ ಮೊದಲೇ ಕ್ರಮ ತೆಗೆದುಕೊಳ್ಳಬೇಕು. ಪ್ರವಾಹ ಬಂದ ಮೇಲೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತದೆ. ಸ್ಥಳೀಯ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಮತ್ತು ಶಾಸಕರ ಜತೆ ಸೇರಿ ಪರಿಹಾರ ಕಾರ್ಯಗಳನ್ನು ಮಾಡಬೇಕು. ಅಲ್ಲಿನ ಪರಿಸ್ಥಿತಿ ಸುಧಾರಣೆ ಆಗುವವರೆಗೂ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲೇ ವಾಸ್ತವ್ಯ ಹೂಡಬೇಕು ಎಂದು ಯಡಿಯೂರಪ್ಪ ಅವರು ಕಟ್ಟುನಿಟ್ಟಾಗಿ ಹೇಳಿದ್ದಾರೆ.

ತಗ್ಗು ಪ್ರದೇಶಗಳಲ್ಲಿನ ಜನರು ಮತ್ತು ಜಾನುವಾರುಗಳನ್ನು ರಕ್ಷಿಸಬೇಕು. ಎಲ್ಲ ಕಡೆಗಳಲ್ಲಿ ನೆರವು ಕೇಂದ್ರಗಳನ್ನು ಆರಂಭಿಸಿ, ಅಲ್ಲಿ ಸಂತ್ರಸ್ತರನ್ನು ಇರಿಸಿ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು. ಇದಕ್ಕಾಗಿ ಖಾಲಿ ಇರುವ ಶಾಲಾ– ಕಾಲೇಜುಗಳು ಮತ್ತು ವಿದ್ಯಾರ್ಥಿ ನಿಲಯಗಳನ್ನು ಬಳಸಿಕೊಳ್ಳಬೇಕು ಎಂದೂ ಸಲಹೆ ನೀಡಿದರು.

ಮಳೆ ಪ್ರವಾಹ ಪೀಡಿತ ಜಿಲ್ಲೆಗಳು ಮತ್ತು ಉಸ್ತುವಾರಿ ಸಚಿವರು: ಚಿಕ್ಕಮಗಳೂರು–ಸಿ.ಟಿ.ರವಿ, ಶಿವಮೊಗ್ಗ–ಕೆ.ಎಸ್‌.ಈಶ್ವರಪ್ಪ, ಉಡುಪಿ–ಬಸವರಾಜ ಬೊಮ್ಮಾಯಿ, ದಕ್ಷಿಣಕನ್ನಡ– ಕೋಟ ಶ್ರೀನಿವಾಸಪೂಜಾರಿ, ಉತ್ತರಕನ್ನಡ– ಶಿವರಾಮ ಹೆಬ್ಬಾರ್, ಧಾರವಾಡ–ಜಗದೀಶ ಶೆಟ್ಟರ್, ಕೊಡಗು–ವಿ.ಸೋಮಣ್ಣ, ಗದಗ–ಸಿ.ಸಿ.ಪಾಟೀಲ.


ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

 

ಕುಟುಂಬಕ್ಕೆ ತಕ್ಷಣ ₹10 ಸಾವಿರ, ಮನೆ ಹಾನಿಗೆ ₹5 ಲಕ್ಷ

 

ರಾಜ್ಯದಲ್ಲಿ ಮಳೆ, ಪ್ರವಾಹ ಮತ್ತು ಭೂಕುಸಿತದ ಕಾರಣ ಕಳೆದ ವರ್ಷದ ರೀತಿಯಲ್ಲೇ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ತಕ್ಷಣವೇ ₹10 ಸಾವಿರ, ಮನೆ ಪೂರ್ಣ ಹಾನಿಯಾಗಿದ್ದರೆ ₹5 ಲಕ್ಷ, ಭಾಗಶಃ ಹಾನಿಯಾಗಿದ್ದರೆ, ಹಾನಿಗೆ ಅನುಗುಣವಾಗಿ ಪರಿಹಾರ ವಿತರಿಸಬೇಕು ಎಂದು ತಿಳಿಸಿದ್ದಾರೆ.

ಕೋವಿಡ್‌ಗಾಗಿ ಜಿಲ್ಲಾ ಕೇಂದ್ರಗಳಲ್ಲಿರುವ ಹಾಸ್ಟೆಲ್‌, ಶಾಲಾ–ಕಾಲೇಜುಗಳನ್ನು ಕೋವಿಡ್‌ ಕೇಂದ್ರವಾಗಿ ಮಾರ್ಪಾಡು ಮಾಡಿರುವುದರಿಂದ ಹಳ್ಳಿಗಳಲ್ಲಿರುವ ಶಾಲಾ–ಕಾಲೇಜು ಕಟ್ಟಡಗಳನ್ನು ನಿರಾಶ್ರಿತರ ಕೇಂದ್ರವಾಗಿ ಮಾಡಿ, ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕು ಎಂದೂ ಅವರು ಸೂಚನೆ ನೀಡಿದ್ದಾರೆ.

ಬೆಳೆ ಹಾನಿ ಬಗ್ಗೆ ಅಧಿಕಾರಿಗಳು ಸಮೀಕ್ಷೆ ಮಾಡಿ ವರದಿ ಕೊಡಬೇಕು. ಪ್ರತಿದಿನವೂ ಒಟ್ಟು ಹಾನಿಯ ಬಗ್ಗೆ ವರದಿ ಕೊಡಬೇಕು ಎಂದೂ ಹೇಳಿದ್ದಾರೆ.

ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದ್ದು, ಏಳು ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.

ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಆ.7ರಂದು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಭಾಗದಲ್ಲಿ ಗಂಟೆಗೆ60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗರಿಷ್ಠ 5.7 ಮೀಟರ್ ನಷ್ಟು ಎತ್ತರದ ಅಲೆಗಳೂ ಏಳುವ ಸಾಧ್ಯತೆ ಇರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಆ.11ರವರೆಗೆ ವ್ಯಾಪಕ ಮಳೆಯಾಗಲಿದೆ. ಬೆಳಗಾವಿ, ಬೀದರ್,ಧಾರವಾಡ, ಹಾವೇರಿ, ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.

ಅತಿ ಹೆಚ್ಚು ಮಳೆ ಬಿದ್ದ ಪ್ರದೇಶ: ಎಲ್ಲೆಲ್ಲಿ ಎಷ್ಟು ಮಳೆ

ಊರು; ಮಳೆ (ಸೆಂ.ಮೀ ನಲ್ಲಿ)

ಭಾಗಮಂಡಲ(ಕೊಡಗು);49

ಕೊಟ್ಟಿಗೆಹಾರ(ಚಿಕ್ಕಮಗಳೂರು);39

ಮಾರನಹಳ್ಳಿ(ಹಾಸನ); 29

ಹೆತ್ತೂರು(ಹಾಸನ); 21

ಸಿದ್ದಾಪುರ(ಉತ್ತರಕನ್ನಡ); 20

ಹೊಸನಗರ (ಶಿವಮೊಗ್ಗ); 19

ಹಾನುಬಾಳು(ಹಾಸನ); 16

ಶೃಂಗೇರಿ (ಚಿಕ್ಕಮಗಳೂರು);15

ನಿಪ್ಪಾಣಿ(ಬೆಳಗಾವಿ); 10

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು