ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ, ಕರ್ನಾಟಕಕ್ಕೆ ಅಪಚಾರದ ಹಿಂದೆ ಪಟ್ಟಭದ್ರ ಹಿತಾಸಕ್ತಿಯ ಕೆಲಸ:ಎಚ್‌ಡಿಕೆ ಶಂಕೆ

ಕನ್ನಡಿಗರ ಕೋಪ ತಾಳುವ ಶಕ್ತಿ ಈ ಸಂಸ್ಥೆಗಳಿಗಿಲ್ಲ: ಕುಮಾರಸ್ವಾಮಿ
Last Updated 6 ಜೂನ್ 2021, 4:18 IST
ಅಕ್ಷರ ಗಾತ್ರ

ಬೆಂಗಳೂರು: 'ಕನ್ನಡ ಕೆಟ್ಟ ಭಾಷೆ' ಎಂಬ ವಿಚಾರ ಗೂಗಲ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಅಮೆಜಾನ್‌ನಲ್ಲಿ ಕನ್ನಡ ಧ್ವಜವನ್ನು ಅವಮಾನಿಸಿದ ಘಟನೆ ಬಯಲಾಗಿರುವುದನ್ನು ಗಮನಿಸುತ್ತಿದ್ದರೆ, ಕನ್ನಡ, ಕರ್ನಾಟಕಕ್ಕೆ ಅಪಚಾರ ಮಾಡಲು ಪಟ್ಟಭದ್ರ ಹಿತಾಸಕ್ತಿ ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕನ್ನಡದ ಧ್ವಜವನ್ನು ಅಪಮಾನಿಸಿದ ಕೆನಡಾದ ಅಮೆಜಾನ್‌ಗೆ ಕನ್ನಡಿಗರು ಬಿಸಿಮುಟ್ಟಿಸಿದ್ದಾರೆ. ಅಮೆಜಾನ್‌ ತನ್ನ ತಪ್ಪು ಸರಿಪಡಿಸಿಕೊಂಡಿದೆ. ಕನ್ನಡವನ್ನು ಅವಮಾನಿಸಿದ ಗೂಗಲ್‌ಗೆ ಪಾಠ ಕಲಿಸಿದ್ದು, ಈಗ ಅಮೆಜಾನ್‌ಗೆ ಬುದ್ಧಿ ಕಲಿಸಿದ್ದರಲ್ಲಿ ಎದ್ದು ಕಾಣುವಂಥದ್ದು ಕನ್ನಡಿಗರ ‘ಅಭಿಮಾನ’. ಅದಕ್ಕಾಗಿ ಕನ್ನಡದ ಮನಸ್ಸುಗಳನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಕನ್ನಡ, ಕರ್ನಾಟಕದ ವಿಚಾರದಲ್ಲಿ ಇತ್ತೀಚೆಗೆ ಬಹುರಾಷ್ಟ್ರೀಯ ಕಂಪನಿಗಳು ಅತ್ಯಂತ ಅಜಾಗರೂಕವಾಗಿ, ಅಸೂಕ್ಷ್ಮವಾಗಿ ವರ್ತಿಸುತ್ತಿವೆ. ಗೂಗಲ್ ನಂತರ ಈಗ ಅಮೆಜಾನ್‌ನ ಕೆನಡಾ ವಿಭಾಗ ನಿರ್ಲಕ್ಷ್ಯ ಮೆರೆದಿದೆ. ಈ ಸಂಸ್ಥೆಗಳು ಭಾಷೆ ಮತ್ತು ಭಾವನೆಗಳ ವಿಚಾರದಲ್ಲಿ ಯಾಕಿಂಥ ನಿರ್ಲಕ್ಷ್ಯವಹಿಸುತ್ತಿವೆ? ಈ ಬಗ್ಗೆ ಅಮೆಜಾನ್ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬಾವುಟದ ಜೊತೆಗೇ, ಕರ್ನಾಟಕದ ರಾಜ್ಯ ಲಾಂಛನವನ್ನೂ ಅಮೆಜಾನ್‌ ಅವಮಾನಿಸಿದೆ. ಇದು ಸರ್ಕಾರಕ್ಕೆ ಮಾಡಲಾದ ಅಪಮಾನ. ಸರ್ಕಾರ ಸಂವಿಧಾನದ ಅಂಗ. ಹೀಗಾಗಿ ಅಮೆಜಾನ್‌ನಿಂದ ಬಹುದೊಡ್ಡ ಅಪಚಾರವಾಗಿದೆ. ಅಮೆಜಾನ್‌ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬುದರತ್ತ ರಾಜ್ಯ ಸರ್ಕಾರ ಗಮನ ಹರಿಸಬೇಕು. ಮುಂದೆ ಇಂಥ ಮುಜುಗರ ತಪ್ಪಿಸಲು ಇದು ಅಗತ್ಯ ಎಂದಿದ್ದಾರೆ.

'ಕನ್ನಡ ಕೆಟ್ಟ ಭಾಷೆ' ಎಂಬ ವಿಚಾರ ಗೂಗಲ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಈ ಘಟನೆಯೂ ಬಯಲಾಗಿರುವುದನ್ನು ಗಮನಿಸುತ್ತಿದ್ದರೆ, ಕನ್ನಡ, ಕರ್ನಾಟಕಕ್ಕೆ ಅಪಚಾರ ಮಾಡಲು ಪಟ್ಟಭದ್ರ ಹಿತಾಸಕ್ತಿ ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ. ಜನಸಮುದಾಯವೊಂದರ ಭಾವನೆಗಳ ಜೊತೆಗೆ ಆಟವಾಡುತ್ತಿರುವವರನ್ನು ಪತ್ತೆ ಹಚ್ಚುವ ಸಂದರ್ಭ ಈಗ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಇಂಥ ಅಪಮಾನಗಳ ಮೂಲಕ ಕನ್ನಡಿಗರ ಸಹನೆ ಕೆಣಕುವ ಕೆಲಸ ಇಂಥ ಸಂಸ್ಥೆಗಳಿಂದ ಆಗುತ್ತಲೇ ಇವೆ. ಕನ್ನಡಿಗರ ಕೋಪದಿಂದ ಸಿಡಿಯುವ ಕಿಡಿಯಿಂದ ಅನಾಹುತಗಳು ಸಂಭವಿಸಿದರೆ, ಅದನ್ನು ತಾಳಿಕೊಳ್ಳುವ ಶಕ್ತಿ ಈ ಸಂಸ್ಥೆಗಳಿಗೆ ಉಳಿಯಲಾರದು. ಪರಿಸ್ಥಿತಿ ಅಲ್ಲಿಗೆ ಹೋಗುವ ಮೊದಲು ಅಮೆಜಾನ್ ಜಾಗತಿಕವಾಗಿ ಕ್ಷಮೆ ಕೋರಬೇಕು. ತಪ್ಪಿತಸ್ಥರನ್ನು ಹಿಡಿದುಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT