ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದನ್ನು ಶಾಲಾ ಹಂತದಿಂದಲೇ ತಿಳಿಸಬೇಕಿದೆ: ನಿಖಿಲ್

Last Updated 23 ಜನವರಿ 2021, 15:23 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದನ್ನು ಶಾಲಾ ಹಂತದಿಂದಲೇ ತಿಳಿಸಬೇಕಿದೆ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ‌ನಿಯೋಜಿತ ಅಧ್ಯಕ್ಷರಾದ ಸಾಹಿತಿ ದೊಡ್ಡರಂಗೇಗೌಡರು 'ಹಿಂದಿ ರಾಷ್ಟ್ರ ಭಾಷೆ' ಎಂದು ಶುಕ್ರವಾರ ಹೇಳಿಕೆ ನೀಡಿದ್ದರು. ಆ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ನಿಖಿಲ್‌ ಕುಮಾರಸ್ವಾಮಿ ಶನಿವಾರ ಟ್ವೀಟ್‌ ಮಾಡಿದ್ದಾರೆ.

'ಹಿಂದಿ ನಮ್ಮ ರಾಷ್ಟ್ರ ಭಾಷೆ ಕನ್ನಡಿಗರಾದ ನಾವು ಅದನ್ನು ಒಪ್ಪಿಕೊಳ್ಳಬೇಕು ಎಂದಿರುವ 86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ‌ನಿಯೋಜಿತ ಅಧ್ಯಕ್ಷರಾದ ದೊಡ್ಡ ರಂಗೇಗೌಡರ ಮಾತು ಕೇಳಿ ಅಚ್ಚರಿಯಾಯಿತು. ಬಹುಶಃ ಇದು ಅವರ ಅರಿವಿನ ಕೊರತೆಯಾಗಿರಬಹುದು' ಎಂದು ಅವರು ಟ್ವೀಟಿಸಿದ್ದಾರೆ.

'ನಮ್ಮ ರಾಜ್ಯದ ಪ್ರತಿಯೊಂದು ‌ಶಾಲೆಯಲ್ಲೂ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂಬ ವಿಚಾರವನ್ನು ಕಲಿಸುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಮುಂದಿನ ಪೀಳಿಗೆಯೂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ರೀತಿ ಹಿಂದಿ ರಾಷ್ಟ್ರೀಯ ಭಾಷೆ ಎಂದು ತಪ್ಪಾಗಿ ಭಾವಿಸಿಕೊಳ್ಳುವ ಸಾಧ್ಯತೆ ಇದೆ' ಎಂದು ನಿಖಿಲ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

86ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ ಅವರು ‘ಪ್ರಜಾವಾಣಿ’ ಸಂದರ್ಶನದಲ್ಲಿ, ‘ಇಂಗ್ಲಿಷಿಗೆ ನಾವು ಮಣೆ ಹಾಕುತ್ತೇವೆ. ಹಿಂದಿಯನ್ನು ಏಕೆ ತಿರಸ್ಕಾರ ಮಾಡಬೇಕು. ಹಿಂದಿ ನಮ್ಮ ರಾಷ್ಟ್ರ ಭಾಷೆ. ಇಲ್ಲಿ ಕನ್ನಡ ಹೇಗೋ ಅದೇ ರೀತಿ ಉತ್ತರ ಭಾರತದಲ್ಲಿ ಹಿಂದಿಗೆ ಸ್ಥಾನಮಾನವಿದೆ. ಇಂಗ್ಲಿಷ್ ಒಪ್ಪುವ ನಾವು ಹಿಂದಿ ಭಾಷೆಯನ್ನು ಏಕೆ ಒಪ್ಪಿಕೊಳ್ಳಬಾರದು’ ಎಂದು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT