ಭಾನುವಾರ, ಜುಲೈ 3, 2022
27 °C
ಜಾತ್ರೆಗಾಗಿ ಜೀವ ಪಣಕ್ಕಿಟ್ಟವರು

ಕರಾವಳಿಯ ‘ಗರ್ನಲ್ ಸಾಹೇಬ್ರು’ ಎಂದೇ ಜನಜನಿತವಾಗಿರುವ ಮನೆತನಗಳು

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕರಾವಳಿಯಲ್ಲಿ ಹೆಚ್ಚಿನ ಜಾತ್ರೆಯ ರಥೋತ್ಸವ, ದೈವಕೋಲಗಳಲ್ಲಿ ದೇವ–ದೈವದ ನಡೆ ಆರಂಭಗೊಳ್ಳುವುದೇ ಬೆಡಿಯ(ಸಿಡಿಮದ್ದು) ಮೂಲಕ. ಜಾತ್ರೆಯ ದೇವರು ಅಥವಾ ದೈವದ ಚಾಕ್ರಿ (ಸೇವೆ)ಯನ್ನು ಒಂದೊಂದು ಜಾತಿ, ಧರ್ಮದವರು ನಡೆಸಿಕೊಂಡು ಬಂದಿರುವುದು ಸಂಪ್ರದಾಯ. ಈ ಪೈಕಿ ‘ಬೆಡಿ’ (ಸಿಡಿಮದ್ದು) ಚಾಕ್ರಿಯನ್ನು ಶತಮಾನಗಳಿಂದ ನಿರ್ವಹಿಸುತ್ತಾ ಬಂದಿರುವುದು ಮುಸ್ಲಿಂ ಕುಟುಂಬಗಳು. ಜಾತ್ರೆಗಾಗಿ ಜೀವ ಪಣಕ್ಕಿಟ್ಟು ಚಾಕ್ರಿ ಮಾಡುವ ಈ ಮನೆತನವೆಲ್ಲ ‘ಗರ್ನಲ್ ಸಾಹೇಬ್ರು’ ಎಂದೇ ಜನಜನಿತ.

ಇಂತಹ ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಸುಮಾರು ಐದಾರು ತಲೆಮಾರುಗಳಿಂದಲೂ ಜಾತ್ರೆಯಲ್ಲಿ ಸಿಡಿಮದ್ದು ಸಿಡಿಸುತ್ತಾ ಬಂದಿದ್ದಾರೆ. ಇದರ ತಯಾರಿಯೇ ಅತ್ಯಂತ ಅಪಾಯಕಾರಿ. ಸಿಡಿಮದ್ದು ತಯಾರಿಸುವಾಗ ಅಣ್ಣ, ತಮ್ಮ, ಸಂಬಂಧಿ ಸೇರಿದಂತೆ ಕನಿಷ್ಠ ಕುಟುಂಬದ ಒಬ್ಬ ಸದಸ್ಯನ್ನಾದರೂ ಕಳೆದುಕೊಂಡಿದ್ದಾರೆ. ಇಲ್ಲವೇ, ಕೈ, ಕಾಲು... ಇಂತಹ ನೋವುಗಳು ಪ್ರತಿ ಕುಟುಂಬದಲ್ಲಿವೆ.

‘ಜಾತ್ರೆಗೆ ಸಿಡಿಮದ್ದು ಸಿದ್ಧಪಡಿಸುವ ವೇಳೆ ನಾಲ್ಕೈದು ಜನ ಮನೆಯಲ್ಲಿರುತ್ತಾರೆ. ನಮಗೆ ನಿತ್ಯವೂ ಆತಂಕವೇ. ಒಂದು ರೀತಿಯಲ್ಲಿ ಯುದ್ಧಭೂಮಿಯ ಸ್ಥಿತಿ. ಆದರೆ, ಹಿರಿಯರು ನಡೆಸಿಕೊಂಡು ಬಂದ ದೇವರ ಸೇವೆ ನಿಲ್ಲಿಸುವುದು ಬೇಡ ಎಂದು ಮನೆಯವರು ಹೇಳುತ್ತಾರೆ’ ಎಂದು ಈ ಕುಟುಂಬವೊಂದರ ತಾಯಿ ತಿಳಿಸಿದರು. ಕೆಲ ವರ್ಷಗಳ ಹಿಂದೆ ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡ ನೋವು ಅವರಲ್ಲಿ ಮಡುಗಟ್ಟಿತ್ತು.

‘ನನ್ನ ಮುತ್ತಜ್ಜನ ಅಜ್ಜನ ಕಾಲದಿಂದಲೂ ‘ಬೆಡಿ ಚಾಕ್ರಿ’ ನಡೆದುಕೊಂಡು ಬಂದಿದೆ. ಅಪಾಯದ ಅರಿವಿದೆ. ಆದರೆ, ಯಾರೋ ಹೇಳಿದರು ಎಂದು ದೇವರ ಸೇವೆ ಬಿಡಲು ಸಾಧ್ಯವೇ?’ ಎಂದು ಬಂಟ್ವಾಳ ಸಮೀಪದ ಗರ್ನಲ್ ಸಾಹೇಬ್ರು (ಹೆಸರು ಬಹಿರಂಗ ಪಡಿಸಲು ಇಚ್ಛಿಸದ) ಪ್ರಶ್ನಿಸಿದರು.

‘ಈ ಸೇವೆಗೆ ನಮಗೆ ಎರಡು ಸೇರು (ಅಂದಾಜು 2 ಕೆ.ಜಿ.) ಭತ್ತ ನೀಡುತ್ತಿದ್ದರು. ಮದ್ರಾಸ್‌ ಸರ್ಕಾರ ಪರವಾನಗಿ ನೀಡಿತ್ತು. ಅದಕ್ಕೂ ಮೊದಲು ರಾಜರ ಹುಕುಂ ಇತ್ತು’ ಎಂದು ನನ್ನ ಅಜ್ಜ ಹೇಳುತ್ತಿದ್ದರು. ತಂದೆಯ ಕಾಲದಲ್ಲಿ ಹಣ ನೀಡಲು ಆರಂಭಿಸಿದರು. ಕೆಲ ವರ್ಷಗಳ ಹಿಂದೆ ಬೆಡಿ ತಯಾರಿ ವೇಳೆ ನನ್ನ ಬಾವನನ್ನು ಕಳೆದುಕೊಂಡೆವು. ಆದರೆ, ಸೇವೆ ನಿಲ್ಲಿಸಿಲ್ಲ’ ಎಂದರು.

‘ಚಾಕ್ರಿ ಇದ್ದಾಗ ನಾವು ಮಾಂಸಾಹಾರ ಮಾಡುವುದಿಲ್ಲ. ಮಹಿಳೆಯರ ತಿಂಗಳ ದಿನ ಅಪ್ಪ ಪ್ರತ್ಯೇಕವಾಗಿ ಇರುತ್ತಿದ್ದರು. ‘ಮಡಿ’ ಕಾಯ್ದುಕೊಳ್ಳುತ್ತಿದ್ದರು. ಅದನ್ನೇ ನಾವೂ ಪಾಲಿಸುತ್ತೇವೆ’ ಎಂದರು.

‘ಜಾತ್ರೆಯ ದೇವರನ್ನು ಪ್ರಾರ್ಥಿಸಿದ ಬಳಿಕ ಬೆಡಿ ಇಡಲಾಗುತ್ತದೆ. ತಂತ್ರಿ ಹಾಗೂ ಅರ್ಚಕರು ನಂದಾದೀಪದಿಂದ ಕೊಟ್ಟ ದೀಪವನ್ನು ತಂದು ಬೆಡಿ ಸಿಡಿಸಲಾಗುತ್ತದೆ. ಆ ಬಳಿಕವೇ ದೇವರು ರಥೋತ್ಸವ, ನಗರ ಪ್ರದಕ್ಷಿಣೆ, ಕಟ್ಟೆ ಪೂಜೆ ಇತ್ಯಾದಿಗಳಿಗೆ ಹೊರಡುವುದು. ದೈವ ಸ್ಥಾನಗಳಲ್ಲೂ ಹಾಗೆಯೇ’ ಎಂದು ಸಹೋದರನನ್ನು ಕಳೆದುಕೊಂಡ ಪುತ್ತೂರಿನ ಗರ್ನಲ್ ಸಾಹೇಬ್ರು ತಿಳಿಸಿದರು.

ಅದು ದೇವರ–ದೈವದ ಜಾತ್ರೆ, ರಥೋತ್ಸವ, ಕೋಲಗಳು ಮಾತ್ರವಲ್ಲ, ಕಂಬಳ, ಉತ್ಸವಗಳಲ್ಲೂ ‘ಗರ್ನಲ್‌ ಸಾಹೇಬ್ರ’ ಸದ್ದು ಮತ್ತು ಬೆಳಕು ಇದ್ದರೆಯೇ ಗಮ್ಮತ್ತು.  ‘ಇಲ್ಲಿ ತನಕ ನಮ್ಮ ಮನೆತನದ ಶ್ರದ್ಧೆ–ಭಕ್ತಿ ನೋಡಿ ಚಾಕ್ರಿ ನೀಡುತ್ತಿದ್ದರು. ಈಗ ಭಕ್ತಿ–ಶ್ರದ್ಧೆ ಬದಲಾಗಿ ‘ಹುಟ್ಟು’ ನೋಡಬೇಕು ಎಂದು ಕೆಲವರು ಒತ್ತಡ ಹಾಕುತ್ತಿದ್ದಾರಂತೆ. ‘ಬೆಡಿ ಚಾಕ್ರಿ’ಗೆ ಎಂದಿಗೂ ಅಲ್ಲಾಹನು ಬೇಡ (ಮನಸ್ಸಲ್ಲಿ ಬಂದು) ಎನ್ನಲಿಲ್ಲ. ಎಲ್ಲವನ್ನೂ ಊರ ದೈವ ಹಾಗೂ ಮಹಾಲೀಂಗೇಶ್ವರ ನೋಡಿಕೊಳ್ಳುತ್ತಾರೆ’ ಎಂದು ಮಾತು ನಿಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು