ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೀಗ ಪಕ್ಷದಿಂದ ಸಂಪೂರ್ಣ ದೂರ ಉಳಿದಿದ್ದೇನೆ: ಜೆಡಿಎಸ್‌ ಶಾಸಕ ಜಿಟಿಡಿ

Last Updated 14 ನವೆಂಬರ್ 2021, 8:41 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನೀಗ ಪಕ್ಷದಿಂದ (ಜೆಡಿಎಸ್‌) ಸಂಪೂರ್ಣವಾಗಿ ದೂರ ಉಳಿದಿದ್ದೇನೆ. ದೇವೇಗೌಡರು ಪಕ್ಷದಲ್ಲೇ ಉಳಿಯುವಂತೆ ಹೇಳಿದ್ದಾರೆ. ಅವರಿಗೂ ನನ್ನ ನೋವು ಹೇಳಿದ್ದೇನೆ’ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಆ ಮೂಲಕ, ಜೆಡಿಎಸ್‌ ತ್ಯಜಿಸುವ ಬಗ್ಗೆ ಮತ್ತೊಮ್ಮೆ ಅವರು ಸುಳಿವು ನೀಡಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ವಿಧಾನ ಪರಿಷತ್ ಚುನಾವಣೆಗೆ ನಮ್ಮ ಕುಟುಂಬದಿಂದ ಯಾರೊಬ್ಬರೂ ಸ್ಪರ್ಧಿಸುವುದಿಲ್ಲ. ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ’ ಎಂದರು.

‘ಮುಂಬರುವ ವಿಧಾನ ಪರಿಷತ್ ಚುನಾವಣೆಯನ್ನು ಮೈಸೂರಿನಲ್ಲಿ ಜಿ.ಟಿ. ದೇವೇಗೌಡ ನೇತೃತ್ವದಲ್ಲೇ ಎದುರಿಸುತ್ತೇವೆ. ಅವರ ಕುಟುಂಬದ ಸದಸ್ಯೊಬ್ಬರು ಅಭ್ಯರ್ಥಿ ಆಗಲೂ ಬಹುದು’ ಎಂದು ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್ ಅವರು ಶನಿವಾರ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಚಾರಕ್ಕಾಗಿ ನಮ್ಮ ಕುಟುಂಬದ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ನಾನು ಈಗಾಗಲೇ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದೇನೆ. ಅವರೂ ನಮ್ಮನ್ನು ಯಾವುದೇ ಕಾರ್ಯಕ್ರಮಕ್ಕೂ ಕರೆದಿಲ್ಲ. ನಿಖಿಲ್ ಕುಮಾರಸ್ವಾಮಿ ಪಕ್ಷ ಬಿಡಬೇಡಿ ಎಂದಿದ್ದರು. ನಮ್ಮ ಮನೆಗೆ ಬಂದು ಇಲ್ಲೇ ಇರಬೇಕೆಂದು ಹೇಳಿದರು. ಅವರಿಗೂ ಪಕ್ಷದಲ್ಲಿ ಆಗಿರುವ ಅಪಮಾನ, ನೋವು ಹೇಳಿದ್ದೇನೆ. ಎಲ್ಲಾ ಸಂದರ್ಭಗಳಲ್ಲೂ ನನ್ನನ್ನು ದೂರವಿಟ್ಟು ನಿರ್ಧಾರ ಕೈಗೊಂಡಿದ್ದಾರೆ. ಹೀಗಿರುವಾಗ ಹೇಗೆ ಪಕ್ಷದಲ್ಲಿ ಇರಲು ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT