ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ನೀಡದಿದ್ದರೆ ತಕ್ಕ ಪಾಠ ಕಲಿಸುತ್ತೇವೆ: ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಕೆ

Last Updated 6 ಸೆಪ್ಟೆಂಬರ್ 2020, 19:14 IST
ಅಕ್ಷರ ಗಾತ್ರ

ಹರಿಹರ: ‘ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಶೇ 7.5 ಮೀಸಲಾತಿ ಪಡೆಯುವುದು ವಾಲ್ಮೀಕಿ ಸಮುದಾಯದ ಸಾಂವಿಧಾನಿಕ ಹಕ್ಕು. ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದರೆ ಅಭಿನಂದನೆ ಸಲ್ಲಿಸುತ್ತೇವೆ. ಇಲ್ಲವಾದಲ್ಲಿ ತಕ್ಕ ಪಾಠ ಕಲಿಸುತ್ತೇವೆ’ ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ನಡೆದ ಮೀಸಲಾತಿ ಹೆಚ್ಚಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದ ಶಾಸಕರು, ಸಂಸದರನ್ನು ಒಳಗೊಂಡ ನಿಯೋಗದೊಂದಿಗೆ ಸೆ. 21ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮೀಸಲಾತಿ ಬಗ್ಗೆ ಮನವಿ ಮಾಡಲಾಗುವುದು.
ಅಧಿವೇಶನದಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

‘ಸ್ವಾಮೀಜಿ ಸೂಚಿಸಿದರೆ ಎಸ್‌ಟಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ನಾವೆಲ್ಲಾ ರಾಜೀನಾಮೆ ನೀಡಲು ಸಿದ್ಧ’ ಎಂದು ಶಾಸಕರು ಒಕ್ಕೊರಲ ಅಭಿಪ್ರಾಯ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದಮಾಜಿ ಸಚಿವ ಸತೀಶ ಜಾರಕಿಹೊಳಿ, ‘ರಾಜೀನಾಮೆ ನೀಡುವುದು ಪರಿಹಾರವಲ್ಲ. ಅಧಿಕಾರದಲ್ಲಿದ್ದುಕೊಂಡೇ ಹೋರಾಟ ಮಾಡಬೇಕು’ ಎಂದರು.

ಸಚಿವ, ಶಾಸಕರ ಮಧ್ಯೆ ಗೊಂದಲ

‘ನ್ಯಾ.ನಾಗಮೋಹನದಾಸ್‌ ವರದಿಯಲ್ಲಿ ಸಮಾಜಕ್ಕೆ ಶೇ 5ರಷ್ಟು ಮೀಸಲಿಗೆ ಶಿಫಾರಸು ಮಾಡಿದ್ದಾರೆ. ಆದರೂ ಮುಖ್ಯಮಂತ್ರಿ ಸಮುದಾಯಕ್ಕೆ ಶೇ 7.5 ಮೀಸಲು ನೀಡುತ್ತಾರೆ ಎಂಬ ನಂಬಿಕೆ ಇದೆ’ ಎಂದು ಸಚಿವ ಶ್ರೀರಾಮುಲು ಹೇಳಿದರು.

ಆಗ ಮಧ್ಯೆ ಪ್ರವೇಶಿಸಿದ ಸುರಪುರದ ಶಾಸಕ ರಾಜೂಗೌಡ, ‘ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಶೇ 5 ರಷ್ಟು ಮೀಸಲಾತಿ ಶಿಫಾರಸು ಮಾಡಿದ್ದಾರೆ ಎಂಬ ತಪ್ಪು ಸಂದೇಶ ನೀಡಬೇಡಿ’ ಎಂದು ವಿರೋಧ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT