ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಣ ಹಂತದಲ್ಲೇ ಬೆಂಗಳೂರು–ಮೈಸೂರು ದಶಪಥ ಉದ್ಘಾಟನೆ?

ಅನುಮಾನಕ್ಕೆ ಕಾರಣವಾದ ನಡೆ; ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶ– ಆರೋಪ
Last Updated 27 ಫೆಬ್ರವರಿ 2023, 5:09 IST
ಅಕ್ಷರ ಗಾತ್ರ

ಮಂಡ್ಯ: ಬೆಂಗಳೂರು–ಮೈಸೂರು ದಶಪಥ ನಿರ್ಮಾಣ ಕಾರ್ಯವು ಮಂಡ್ಯ, ಮೈಸೂರು ವ್ಯಾಪ್ತಿಯ ವಿವಿಧೆಡೆ ಸಂಪೂರ್ಣ ಮುಗಿಯದಿದ್ದರೂ ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.

ಮೊದಲ ಹಂತದ ಕಾಮಗಾರಿ ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಿಂದ ಜಿಲ್ಲೆಯ ನಿಡಘಟ್ಟದವರೆಗೆ ಪೂರ್ಣಗೊಂಡಿದೆ. ಅಲ್ಲಿಂದ ಮೈಸೂರು ವ್ಯಾಪ್ತಿಯ ಮಣಿಪಾಲ್‌ ಆಸ್ಪತ್ರೆವರೆಗೆ 2ನೇ ಹಂತದ ನಿರ್ಮಾಣ ಕಾರ್ಯ ನಡೆಯುತ್ತಿದೆ. ತಾಲ್ಲೂಕಿನ ಹಳೇಬೂದನೂರು, ಹೊಸ ಬೂದನೂರು, ಇಂಡುವಾಳು ಹಾಗೂ ಮೈಸೂರು ಜಿಲ್ಲೆ, ಸಿದ್ದಲಿಂಗಪುರ ಗ್ರಾಮದ ಬಳಿ ಬೃಹತ್‌ ಸೇತುವೆ ನಿರ್ಮಾಣ ಕೆಲಸ ಇತ್ತೀಚಿಗಷ್ಟೇ ಆರಂಭವಾಗಿದೆ.

ಹಲವು ಪಾದಚಾರಿ ಮೇಲ್ಸೇತುವೆ, ಕೆಳಸೇತುವೆಗಳ ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ. ಬೃಹತ್‌ ಸೇತುವೆಗಳ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 2 ತಿಂಗಳಾದರೂ ಬೇಕು ಎಂದು ತಂತ್ರಜ್ಞರು ತಿಳಿಸಿದ್ದಾರೆ. ಆದರೂ ಮಾರ್ಚ್‌ 11ರಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ಪ್ರೆಸ್‌ ವೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ದಿನಾಂಕ ಪ್ರಕಟಿಸಿರುವುದು ಗುತ್ತಿಗೆದಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

‘ನೀತಿಸಂಹಿತೆ ಜಾರಿಗೊಳ್ಳುವ ಮೊದಲೇ ಉದ್ಘಾಟಿಸಿ, ವಿಧಾನಸಭಾ ಚುನಾವಣೆಯಲ್ಲಿ ಅದರ ಸಂಪೂರ್ಣ ಶ್ರೇಯ ಪಡೆಯುವುದು ಸರ್ಕಾರದ ಉದ್ದೇಶ’ ಎಂಬ ಆರೋಪ ಕೇಳಿ ಬಂದಿದೆ.

ಹಳೇಬೂದನೂರು ಹಾಗೂ ಹೊಸಬೂದನೂರು ವ್ಯಾಪ್ತಿಯ 2 ಕಿ.ಮೀ ವಿಸ್ತೀರ್ಣದಲ್ಲಿ ಮೇಲ್ಸೇತುವೆ ನಿರ್ಮಾಣ ಅರ್ಧದಷ್ಟು ಮುಗಿದಿದೆ. ಸೇತುವೆಯ ಗೋಡೆ (ಅರ್ಥ್‌ ವಾಲ್‌) ನಿರ್ಮಾಣ ಹಾಗೂ ಮಣ್ಣು ಭರ್ತಿ ಕೆಲಸ ನಡೆದಿದೆ. 1 ಕಿ.ಮೀ.ನಷ್ಟಿರುವ ಇಂಡುವಾಳು ಸೇತುವೆಯ ಒಂದು ಭಾಗದ ಗೋಡೆ ನಿರ್ಮಾಣವಾಗುತ್ತಿದ್ದು, ಇನ್ನೊಂದು ಭಾಗ ಖಾಲಿಯೇ ಉಳಿದಿದೆ.

ಮೈಸೂರು ಜಿಲ್ಲೆಯ ನಾಗನಹಳ್ಳಿಯಿಂದ ಸಿದ್ದಲಿಂಗಪುರದವರೆಗೆ 700 ಮೀಟರ್‌ ಉದ್ದದ ಸೇತುವೆ ನಿರ್ಮಾಣ ಕಾರ್ಯವೂ ಬಾಕಿಯಿದ್ದು, ಮಣ್ಣು ಭರ್ತಿ ಕಾರ್ಯ ನಡೆಯುತ್ತಿದೆ.

‘ಮಣ್ಣು ಭರ್ತಿಯಾದ ನಂತರ ಗಟ್ಟಿಯಾಗುವವರೆಗೆ ಕಾಯಬೇಕು. ಅವಸರ ಮಾಡಿದರೆ ಕುಸಿಯುವ ಅಪಾಯವಿದೆ. ಮೇ 2ನೇ ವಾರದ ವೇಳೆಗೆ ವಾಹನ ಓಡಾಡುವಷ್ಟು ಸೇತುವೆ ನಿರ್ಮಿಸಿಕೊಡುವಂತೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. 2 ವಾರದಲ್ಲಿ ಮುಗಿಯುವುದು ಕಷ್ಟ’ ಎಂದು ಇಂಡುವಾಳು ಬಳಿ ನಿರ್ಮಾಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಎಂಜಿನಿಯರ್‌ವೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

ಈಗಾಗಲೇ ನಿಗದಿಯಾಗಿರುವ ನಿರ್ಮಾಣ ಕೆಲಸದ ಜೊತೆಗೆ, ಜನ ಒತ್ತಾಯಪೂರ್ವಕವಾಗಿ ಮಂಜೂರು ಮಾಡಿಸಿಕೊಂಡಿರುವ ನಿರ್ಮಾಣ ಕೆಲಸಗಳೂ ಬಾಕಿ ಇವೆ. ಮದ್ದೂರು ಬಳಿ ಶಿಂಷಾ ಮೇಲ್ಸೇತುವೆಗೆ ಸಮಾನಾಂತರವಾಗಿ ಸರ್ವೀಸ್‌ ಸೇತುವೆ ನಿರ್ಮಿಸಿಕೊಡುವಂತೆ ಜನ ನಿರಂತರ ಧರಣಿ ನಡೆಸಿದ್ದರು, ಸಂಸದೆ ಸುಮಲತಾ ಕೂಡ ಬೆಂಬಲಿಸಿದ್ದರು.

ನಂತರ, ಸರ್ವೀಸ್‌ ಸೇತುವೆ ನಿರ್ಮಿಸಿಕೊಡಲು ಹೆದ್ದಾರಿ ಪ್ರಾಧಿಕಾರವು ಒಪ್ಪಿಕೊಂಡಿತ್ತು. ಆದರೆ ಈವರೆಗೂ ಶುರುವಾಗಿಲ್ಲ. ಫೆ.20ರಂದು ರೈತರು ನಡೆಸಿದ ‘ದಶಪಥ ಬಂದ್‌’ ಹೋರಾಟದ ಫಲವಾಗಿ ತಾಲ್ಲೂಕಿನ ಹನಕೆರೆ ಬಳಿ ಕೆಳಸೇತುವೆ ನಿರ್ಮಾಣಕ್ಕೆ ಪ್ರಾಧಿಕಾರ ಒಪ್ಪಿಕೊಂಡಿದೆ. ಅದೂ ಆರಂಭವಾಗಿಲ್ಲ.

ದಶಪಥಕ್ಕೆ ರಾಮನಗರ, ಚನ್ನಪಟ್ಟಣ, ಮಂಡ್ಯ ಹಾಗೂ ಶ್ರೀರಂಗಪಟ್ಟಣದ ಸಂಪರ್ಕವೇ ಇಲ್ಲ. ಪ್ರವೇಶ, ನಿರ್ಗಮನ ಪಥಕ್ಕೆ ಈವರೆಗೂ ಭೂಸ್ವಾಧೀನ ಆಗಿಲ್ಲ. ಸರ್ವೀಸ್‌ ರಸ್ತೆ ಅವ್ಯವಸ್ಥೆಯ ಆಗರವಾಗಿದ್ದು ಮಳೆ ಬಂದರೆ ಮುಳುಗುತ್ತದೆ.

ಈವರೆಗೂ ಹೆದ್ದಾರಿಯಲ್ಲಿ ಸೂಚನಾ ಫಲಕ ಅಳವಡಿಸದ ಕಾರಣ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿವೆ. ಅತೀ ವೇಗವಾಗಿ ಚಲಿಸುವ ವಾಹನಗಳಿಗೆ ಅಡೆತಡೆಯೇ ಇಲ್ಲವಾಗಿದೆ. ಇಷ್ಟೆಲ್ಲಾ ಗೊಂದಲಗಳಿದ್ದರೂ ಕಾಮಗಾರಿ ಉದ್ಘಾಟನೆಗೆ ಅವಸರ ಮಾಡುತ್ತಿರುವುದಕ್ಕೆ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಮಾಹಿತಿ ಪಡೆಯಲು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್‌ ಅವರನ್ನು ಸಂಪರ್ಕಿಸಿದಾಗ, ಅವರು ಕರೆ ಸ್ವೀಕರಿಸಲಿಲ್ಲ.

ಕೆರೆ, ಕಾಲುವೆ ಕಲುಷಿತ ಅಪಾಯ
ಸರ್ವೀಸ್‌ ರಸ್ತೆಯ ಚರಂಡಿಗಳು ಅವೈಜ್ಞಾನಿಕವಾಗಿದ್ದು ಕಾಲುವೆ, ನಾಲೆಗಳಿಗೆ ಸಂಪರ್ಕಿಸಲಾಗಿದೆ. ಇದರಿಂದ ಸ್ಥಳೀಯ ಕೆರೆ, ಕಟ್ಟೆಗಳು ಕಲುಷಿತವಾಗುವ ಅಪಾಯ ಎದುರಾಗಿದೆ.

‘ಹೆದ್ದಾರಿ ಮೂಲಕ ಹರಿದು ಬರುವ ಚರಂಡಿ ನೀರನ್ನು ಫಿಲ್ಟರ್‌ ಮಾಡಿ ಹರಿಸಬೇಕು, ಅದಕ್ಕಾಗಿ ಪ್ರಾಧಿಕಾರವೇ ಶುದ್ಧೀಕರಣ ಘಟಕ ಆರಂಭಿಸಬೇಕು’ ಎಂದು ಇಂಡುವಾಳು ಗ್ರಾಮದ ಜೋಗಿಗೌಡ ಒತ್ತಾಯಿಸಿದರು.

*

ಹಲವೆಡೆ 2ನೇ ಹಂತದ ಕಾಮಗಾರಿ ಬಾಕಿ ಇದೆ. ನಿಗದಿತ ದಿನಾಂಕದೊಳಗೆ ಕೆಲಸ ಪೂರ್ಣಗೊಳಿಸುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
–ಪ್ರತಾಪ್‌ ಸಿಂಹ, ಮೈಸೂರು ಸಂಸದ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT