ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಕಸಿದರೆ ವಿಧಾನಸೌಧಕ್ಕೇ ನುಗ್ಗುತ್ತೇವೆ: ಹೋರಾಟಗಾರರ ಎಚ್ಚರಿಕೆ

Last Updated 10 ಜನವರಿ 2023, 20:00 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ವಿರೋಧಿಸಿ, ನಗರದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿಗಳ ಸಂಕಲ್ಪ ಸಮಾವೇಶದಲ್ಲಿ ‘ಭೋವಿ, ಲಂಬಾಣಿ, ಕೊರಚ, ಕೊರಮ ಜನಾಂಗದ ಮೀಸಲಾತಿ ಕಸಿದುಕೊಂಡರೆ ವಿಧಾನಸೌಧಕ್ಕೇ ನುಗ್ಗುತ್ತೇವೆ’ ಎಂದು ಸಮುದಾಯದವರು ಎಚ್ಚರಿಸಿದರು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಆಯೋಜಿಸಿದ್ದ ಸಮಾವೇಶಕ್ಕೆ ರಾಜ್ಯದ ವಿವಿಧೆಡೆಯಿಂದ ಪ್ರತಿಭಟನನಿರತರು ಬಂದಿದ್ದರು. ಇದಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಪ್ರತಿಭಟನ ರ್‍ಯಾಲಿ ನಡೆಯಿತು.

ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ಘೋಷಣೆ ಕೂಗಿದರು.

‘ಭಿಕ್ಷೆ ಬೇಡಲು ರಾಜಧಾನಿಗೆ ಬಂದಿಲ್ಲ. ಜನ್ಮಸಿದ್ಧ ಹಕ್ಕು ಪಡೆಯಲು ಧಾವಿಸಿದ್ದೇವೆ. ಕಾಡಿನ ನಿವಾಸಿಗಳ ಹಕ್ಕು ಕಸಿಯುವ ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿವೆ. ಪ್ರತಿಭಟನೆ ಹತ್ತಿಕ್ಕುವ ಕೆಲಸಗಳೂ ನಡೆದವು. ಇದ್ಯಾವುದಕ್ಕೂ ಜಗ್ಗುವುದಿಲ್ಲ. ಆಯೋಗದ ವರದಿಯ ದೃಢೀಕೃತಿ ಪ್ರತಿಯನ್ನು ನೀಡಬೇಕು’ ಎಂದು ಆಗ್ರಹಿಸಿದರು.

‘ಈ ಪ್ರತಿಭಟನೆಯು ಆರಂಭಿಕ ಪ್ರತಿರೋಧವಷ್ಟೆ. ಸರ್ಕಾರಕ್ಕೆ ಕಾಲಾವಕಾಶ ನೀಡುತ್ತೇವೆ. ಅಷ್ಟರಲ್ಲಿ ಒಳ್ಳೆಯ ತೀರ್ಮಾನಕ್ಕೆ ಬರಬೇಕು. ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು’ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಎಚ್ಚರಿಸಿದರು.

‘ಭೋವಿ, ಲಂಬಾಣಿ, ಕೊರಚ, ಕೊರಮ ಜನಾಂಗವು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರಲು ಅರ್ಹವಾಗಿದೆ. ಕಳ್ಳಮಾರ್ಗದಿಂದ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಅಂಬೇಡ್ಕರ್‌ ನೀಡಿದ್ದ ಮೀಸಲಾತಿ ಸೌಲಭ್ಯದಂತೆ ರಾಜಮಾರ್ಗದಲ್ಲೇ ಮೀಸಲಾತಿ ಪಡೆದಿದ್ದೇವೆ. ಸಾಮಾಜಿಕ ನ್ಯಾಯದಂತೆ ಮೀಸಲಾತಿ ದೊರೆಯದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಸಮುದಾಯದ ಜನರೇ ಬುದ್ಧಿ ಕಲಿಸಲಿದ್ದಾರೆ’ ಎಂದು ಎಚ್ಚರಿಸಿದರು.

‘ನೆರಳು ನೀಡಬೇಕಾದ ಸರ್ಕಾರವೇ ಜನರನ್ನು ಬಿಸಿಲಿನಲ್ಲಿ ಕೂರಿಸುತ್ತಿದೆ. ಜೇನುಗೂಡಿಗೆ ಕೈಹಾಕಲು ಸರ್ಕಾರ ಮುಂದಾಗಿದೆ. ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಸಾಹಿತಿ ಬಿ.ಟಿ.ಲಲಿತಾನಾಯಕ್‌ ಹೇಳಿದರು.

ಅಖಿಲ ಕರ್ನಾಟಕ ಕುಳುವ ಮಹಾಸಂಘ ರಾಜ್ಯ ಅಧ್ಯಕ್ಷ ಶಿವಾನಂದ ಎಂ. ಭಜಂತ್ರಿ, ‘ಆಯೋಗದ ವರದಿಯಿಂದ ಶೋಷಿತ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಲಿವೆ. ಸರ್ಕಾರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬಲಾಢ್ಯರ ಓಲೈಸಲು ಮುಂದಾಗಿದೆ. ನಿಜವಾಗಿ ದೊರೆಯಬೇಕಾದ ಸಮುದಾಯಗಳಿಗೆ ಮೀಸಲಾತಿ ವಂಚಿಸುತ್ತಿದೆ’ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಶಾಸಕ ಭೀಮಾ ನಾಯಕ್‌, ಮುಖಂಡ ರೇವೂ ನಾಯಕ್‌ ಬೆಳಮಗಿ, ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್‌ ರಾಥೋಡ್‌, ನಾಗಭೂಷಣ್‌ ಸ್ವಾಮೀಜಿ ಇದ್ದರು.

‘ಯಾರ ಮೀಸಲಾತಿ ಕಸಿದುಕೊಳ್ಳುವುದಿಲ್ಲ’
‘ಯಾವುದೇ ಸಮುದಾಯದ ಮೀಸಲಾತಿಯನ್ನೂ ಕಸಿದುಕೊಳ್ಳುವುದಿಲ್ಲ. ಈ ವಿಚಾರದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಕೇಂದ್ರಕ್ಕೆ ಶಿಫಾರಸು ಮಾಡದಂತೆ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗೆ ಚರ್ಚಿಸಲಾಗುವುದು. ಆತುರದ ನಿರ್ಧಾರ ಕೈಗೊಳ್ಳಲ್ಲ’ ಎಂದು ಕಂದಾಯ ಸಚಿವ ಆರ್.ಅಶೋಕ ಭರವಸೆ ನೀಡಿದರು.

*
ಇದು ಪಕ್ಷಾತೀತ ಹೋರಾಟ. 12 ವರ್ಷಗಳಿಂದ ಈ ಸಮುದಾಯಗಳು ಅತಂತ್ರದಲ್ಲಿವೆ. ಮುಂದಿನ ದಿನಗಳಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ
-ಉಮೇಶ್‌ ಜಾಧವ್‌, ಬಿಜೆಪಿ ಸಂಸದ, ಕಲಬುರಗಿ

*
ಜನಸಂಖ್ಯೆ ಆಧರಿಸಿಯೇ ಒಳಮೀಸಲಾತಿ ಆಗಬೇಕೇ ಹೊರತು ಸದಾಶಿವ ಆಯೋಗದ ವರದಿ ಪ್ರಕಾರ ಅಲ್ಲ. ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿ. ನ್ಯಾಯಾಲಯದ ಆದೇಶ ಬಂದ ಮೇಲೆ ತೀರ್ಮಾನ ತೆಗೆದುಕೊಳ್ಳಲಿ
-ಅರವಿಂದ ಲಿಂಬಾವಳಿ, ಬಿಜೆಪಿ ಶಾಸಕ

**

ಹೋರಾಟಕ್ಕೆ ಬೆಂಬಲ ಇಲ್ಲ: ಹನುಮಂತಪ್ಪ
ಬೆಂಗಳೂರು:
‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ವಿರೋಧಿಸಿ ನಡೆಯುವ ಪ್ರತಿಭಟನೆಗಳಲ್ಲಿ ಅಲೆಮಾರಿಗಳು ಭಾಗವಹಿಸುತ್ತಾರೆಂದು ಅನಂತ ನಾಯಕ್‌ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಈ ಹೇಳಿಕೆಯನ್ನು ಖಂಡಿಸುತ್ತೇವೆ’ ಎಂದು ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಲ್‌. ಹನುಮಂತಪ್ಪ ತಿಳಿಸಿದ್ದಾರೆ.

‘ಆಯೋಗದ ಶಿಫಾರಸು ನಾವು ಒಪ್ಪಿದ್ದೇವೆ. ಶಿಫಾರಸು ಜಾರಿಗೊಳಿಸಲು ನಡೆಯುತ್ತಿರುವ ಹೋರಾಟದಲ್ಲೂ ನಾವು ಪಾಲ್ಗೊಂಡಿದ್ದೇವೆ. ಆಯೋಗದ ವರದಿಯಿಂದ ಏನಾದರೂ ಅನ್ಯಾಯ ಕಂಡುಬಂದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ವರದಿ ವಿರೋಧಿಸಿ ನಡೆಯುವ ಹೋರಾಟವನ್ನು ಮಹಾಸಭಾ ಬೆಂಬಲಿಸುವುದಿಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT