ಶುಕ್ರವಾರ, ಫೆಬ್ರವರಿ 3, 2023
16 °C

ಕನ್ನಡಿಗರು ಕಟ್ಟಿದ ಸಂಸ್ಥೆಗಳ ಮೇಲೆ ಅಸೂಯೆ ಯಾಕೆ? ನಂದಿನಿ ವಿಲೀನಕ್ಕೆ JDS ವಿರೋಧ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗುಜರಾತ್‌ನ ಹಾಲು ಉತ್ಪಾದಕ ಸಂಸ್ಥೆ ‘ಅಮುಲ್‌’ನೊಂದಿಗೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್–ನಂದಿನಿ)ಯನ್ನು ವಿಲೀನ ಮಾಡುವ ಅಮಿತ್‌ ಶಾ ಅವರ ಪ್ರಸ್ತಾವವನ್ನು ಜೆಡಿಎಸ್‌ ವಿರೋಧಿಸಿದೆ.

ಈ ಬಗ್ಗೆ ಶನಿವಾರ ಸರಣಿ ಟ್ವೀಟ್‌ ಮಾಡಿರುವ ಜೆಡಿಎಸ್‌, ಕನ್ನಡಿಗರು ಕಟ್ಟಿಬೆಳೆಸಿದ ಸಂಸ್ಥೆಗಳ ಮೇಲೆ ಯಾಕಿಷ್ಟು ಅಸೂಯೆ ಅಮಿತ್ ಶಾ ಅವರೇ? ಎಂದು ಪ್ರಶ್ನೆ ಮಾಡಿದೆ.

‘ಕೇಂದ್ರ ಸರ್ಕಾರ ರಾಜ್ಯಗಳ ವಿರೋಧದ ನಡುವೆಯೂ, ರಾಜ್ಯ ಪಟ್ಟಿಯಲ್ಲಿದ್ದ ಸಹಕಾರಿ ವಿಷಯದ ಮೇಲೆ ತರಾತುರಿಯಲ್ಲಿ ಸಚಿವಾಲಯವನ್ನು ಸ್ಥಾಪಿಸಿದ್ದರ ಹಿಂದಿರುವ ಮರ್ಮ ಈಗ ತಿಳಿಯುತ್ತಿದೆ. ಅಮಿತ್ ಶಾ ಅವರೇ ನೀವು ಕರ್ನಾಟಕಕ್ಕೆ ಬರುವುದರ ಉದ್ದೇಶವಾದರೂ ಏನು? ವಿಲೀನದ ಹೆಸರಲ್ಲಿ ಕರ್ನಾಟಕದ ಬ್ಯಾಂಕುಗಳನ್ನು ನುಂಗಿ ಹಾಕಿದಿರಿ, ವಿಮಾನ ನಿಲ್ದಾಣಗಳನ್ನು ಬಂಡವಾಳಶಾಹಿಗಳ ವಶ ಮಾಡಿದಿರಿ, ಈಗ ನಿಮ್ಮ ವಕ್ರದೃಷ್ಟಿ ನಮ್ಮ ಕೆಎಂಎಫ್ ಮೇಲೆ ಬಿದ್ದಂತಿದೆ’ ಎಂದು ಟೀಕಿಸಿದೆ.

‘ಕೆಎಂಎಫ್‌ಗೆ ನಿಮ್ಮ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೊಡುಗೆಯಾದರೂ ಏನು? ಕರ್ನಾಟಕದ ಲಕ್ಷಾಂತರ ರೈತರು ಕಟ್ಟಿಬೆಳೆಸಿದ ಸಂಸ್ಥೆ ಇದು. ಇಂದು ರಾಜ್ಯದ ರೈತ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬುತ್ತಿರುವ ಸಂಸ್ಥೆಯನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹಗಲುಗನಸನ್ನು ಮೊದಲು ಬಿಟ್ಟುಬಿಡಿ’ ಎಂದು ಜೆಡಿಎಸ್‌ ಸಲಹೆ ನೀಡಿದೆ.

‘ಕನ್ನಡಿಗರು ಕಟ್ಟಿಬೆಳೆಸಿದ ಸಂಸ್ಥೆಗಳ ಮೇಲೆ ಯಾಕಿಷ್ಟು ಅಸೂಯೆ ಅಮಿತ್ ಶಾ ಅವರೇ? ರಾಜ್ಯದಲ್ಲಿರುವ ನಿಮ್ಮದೇ ಸರ್ಕಾರ ಕಮಿಷನ್ ದಂದೆ, ಹಗರಣಗಳು ಹಾಗೂ ಭ್ರಷ್ಟಾಚಾರದ ಮೂಲಕ ರಾಜ್ಯವನ್ನು ದೋಚುತ್ತಿದ್ದರೆ, ನೀವು ವಿಲೀನದ ಹೆಸರಲ್ಲಿ ಕನ್ನಡಿಗರು ಕಟ್ಟಿಬೆಳೆಸಿದ ಲಾಭದಾಯಕ ಸಂಸ್ಥೆಗಳನ್ನೇ ದೋಚಲು ಮುಂದಾಗಿದ್ದಿರಾ? ನಿಮ್ಮದು ಡಬಲ್ ಇಂಜಿನ್ ಸರ್ಕಾರವಲ್ಲ ಕನ್ನಡಿಗರ ಪಾಲಿಗೆ ದೋಚುವ ಸರ್ಕಾರ. ನಿಮ್ಮ ದೋಚುವ ಆಡಳಿತದ ಅವನತಿ 2023ಕ್ಕೆ ಕರ್ನಾಟಕದಿಂದಲೇ ಶುರುವಾಗಲಿದೆ’ ಎಂದು ಜೆಡಿಎಸ್‌ ಭವಿಷ್ಯ ನುಡಿದಿದೆ.

ಏನು ಹೇಳಿದ್ದರು ಅಮಿತ್‌ ಶಾ

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (ಮನ್ ಮುಲ್) ಆವರಣದಲ್ಲಿ ನಿರ್ಮಿಸಿರುವ ಮೆಗಾ ಡೇರಿಗೆ ಶುಕ್ರವಾರ ಚಾಲನೆ ನೀಡಿದ್ದ ಅಮಿತ್‌ ಶಾ ಅವರು, ಗುಜರಾತ್‌ ಮತ್ತು ಕರ್ನಾಟಕದ ಹಾಲು ಒಕ್ಕೂಟಗಳನ್ನು ವಿಲೀನಗೊಳಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು.

‘ಗುಜರಾತ್‌ನಲ್ಲಿ ಸಹಕಾರ ಒಕ್ಕೂಟವು ಪ್ರಗತಿಯ ಹಾದಿಯಲ್ಲಿದೆ. ಹಾಗೆಯೇ 1975ರಿಂದಲೂ ಕೆಎಂಎಫ್‌ ಕೂಡ ಅಭಿವೃದ್ಧಿ ಹೊಂದುತ್ತಿದೆ. ಅಮುಲ್ ಹಾಗೂ ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ’ ಎಂದಿದ್ದರು.

ವೇದಿಕೆಯಲ್ಲೇ ಇದ್ದ ದೇವೇಗೌಡ, ಜೆಡಿಎಸ್‌ ಶಾಸಕರು

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಅವರು ಗುಜರಾತ್‌ನ ಅಮುಲ್‌ನೊಂದಿಗೆ ಕರ್ನಾಟಕದ ಕೆಎಂಫ್‌/ನಂದಿನಿಯನ್ನು ವಿಲೀನಗೊಳಿಸುವ ಪ್ರಸ್ತಾವವನ್ನು ಮುಂದಿಟ್ಟ ವೇದಿಕೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರೂ ಇದ್ದರು. ಈ ಸಮಾರಂಭದಲ್ಲಿ ಮಾತನಾಡಿದ್ದ ಅವರು, ‘ನಾನು ಪ್ರಧಾನಿಯಾಗಿದ್ದಾಗ ಸಹಕಾರ ಕ್ಷೇತ್ರದ ಉನ್ನತಿಗೆ ದುಡಿದಿದ್ದೆ. ದೇಶದ ಹಲವಾರು ಹಾಲಿನ ಸೊಸೈಟಿಗಳನ್ನು ಒಟ್ಟುಗೂಡಿಸಿ ಹಾಲು ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಲು ಶ್ರಮಿಸಿದ್ದೆ’ ಎಂದಿದ್ದರು.

ಜೆಡಿಎಸ್‌ ಶಾಸಕರಾದ ಡಿ.ಸಿ.ತಮ್ಮಣ್ಣ, ಪುಟ್ಟರಾಜು, ಸುರೇಶ್ ಗೌಡ, ಅನ್ನದಾನಿ ಅವರೂ ಇದೇ ವೇದಿಕೆಯಲ್ಲಿದ್ದರು.

ಇದನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು