ಗುರುವಾರ , ಮೇ 6, 2021
25 °C
ರಾಜಧಾನಿ ಬಿಟ್ಟರೆ ಮಂಡ್ಯ ತಾಲ್ಲೂಕಿನಲ್ಲಿಯೇ ಹೆಚ್ಚು ಮತದಾರರು

ಕಸಾಪ: ಮಂಡ್ಯದತ್ತ ಅಭ್ಯರ್ಥಿಗಳ ಚಿತ್ತ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ಕೇಂದ್ರ ಸ್ಥಾನಕ್ಕೆ ಸ್ಪರ್ಧಿಸಿರುವ ಸಕಲ ಅಭ್ಯರ್ಥಿಗಳು ಸಕ್ಕರೆ ಜಿಲ್ಲೆಯತ್ತ ಚಿತ್ತ ಹರಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆ ನಂತರ ಮಂಡ್ಯ ಜಿಲ್ಲೆ ಅತಿ ಹೆಚ್ಚು ಮತದಾರರನ್ನು ಹೊಂದಿದ್ದು, ಅಭ್ಯರ್ಥಿಗಳು ಈ ಕಡೆ ಪ್ರಯಾಣ ಬೆಳೆಸುತ್ತಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯು 27 ವಿಧಾನಸಭಾ ಕ್ಷೇತ್ರ ಹಾಗೂ ಆನೇಕಲ್‌ ತಾಲ್ಲೂಕು ಸೇರಿ ಒಟ್ಟು 36,389 ಮತದಾರರನ್ನು ಹೊಂದಿದೆ. ಇದು ರಾಜ್ಯದಲ್ಲಿ ಅಧಿಕ. ನಂತರದ ಸ್ಥಾನದಲ್ಲಿರುವ ಮಂಡ್ಯ ಜಿಲ್ಲೆಯಲ್ಲಿ 24,207 ಮತದಾರರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅತಿ ಕಡಿಮೆ 1,984 ಮತದಾರರು ಇದ್ದಾರೆ.

ಮಂಡ್ಯ ತಾಲ್ಲೂಕಿನಲ್ಲೇ 11,623 ಮತದಾರರಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿದ ತಾಲ್ಲೂಕು ಎನಿಸಿದೆ. ಹೀಗಾಗಿ, ಕಸಾಪ ಕೇಂದ್ರ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಮಂಡ್ಯಕ್ಕೆ ಹೆಚ್ಚು ಗಮನ ಕೊಡುತ್ತಿದ್ದಾರೆ.

ಕಸಾಪ ಚುನಾವಣೆಗೆ ಸಂಬಂಧಿಸಿದಂತೆ ಸಭೆ, ಸಮಾರಂಭ ಸಾಮಾನ್ಯವಾಗಿವೆ. ಬಹುತೇಕ ಮಂದಿ ಅಭ್ಯರ್ಥಿಗಳು ಈಗಾಗಲೇ ಮಂಡ್ಯಕ್ಕೆ ಬಂದು ಮತಯಾಚನೆ ಮಾಡಿದ್ದಾರೆ. ಸಾಹಿತಿಗಳು, ಹೋರಾಟಗಾರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಭೇಟಿ ನಿರಂತರವಾಗಿ ನಡೆಯುತ್ತಿವೆ. ಜೊತೆಗೆ ಹೋಟೆಲ್‌, ಢಾಬಾಗಳಲ್ಲಿ ಪಾರ್ಟಿಗಳು ಕೂಡ ಭರ್ಜರಿಯಾಗಿ ನಡೆಯುತ್ತಿವೆ.

‘ಇಷ್ಟೊಂದು ಅಬ್ಬರದಿಂದ ಯಾವ ವರ್ಷವೂ ಕಸಾಪ ಚುನಾವಣೆ ನಡೆದಿರಲಿಲ್ಲ. ಪದಾಧಿಕಾರಿಗಳ ಅವಧಿಯನ್ನು 3 ವರ್ಷದಿಂದ 5 ವರ್ಷಕ್ಕೆ ಹೆಚ್ಚಳ ಮಾಡಿದ್ದೇ ಇದಕ್ಕೆ ಕಾರಣ. ಎಂಎಲ್‌ಎ ಚುನಾವಣೆಗೆ ನಿಂತವರಂತೆ ಪ್ರಚಾರ ಮಾಡುತ್ತಿದ್ದಾರೆ, ಹಣ ಚೆಲ್ಲುತ್ತಿದ್ದಾರೆ. ಅವರಲ್ಲಿ ಎಷ್ಟು ಜನ ನಿಜವಾದ ಸಾಹಿತಿಗಳು ಎಂಬುದೇ ಅನುಮಾನ’ ಎಂದು ಸಾಹಿತಿ ಜಿ.ಟಿ.ವೀರಪ್ಪ ಹೇಳಿದರು.

ಸಂಖ್ಯೆ ಬಗ್ಗೆ ಅನುಮಾನ: ಮಂಡ್ಯ ತಾಲ್ಲೂಕಿನಲ್ಲಿ ಹೆಚ್ಚು ಮತದಾರರು ಇರುವುದಕ್ಕೂ ಅನುಮಾನ ವ್ಯಕ್ತವಾಗಿದೆ. ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿಗಳು ಸ್ವಂತ ಹಣ ಪಾವತಿಸಿ ಸಿಕ್ಕಸಿಕ್ಕವರಿಗೆ ಸದಸ್ಯತ್ವ ಕೊಡಿಸಿದ್ದಾರೆ. ಈ ಕಾರಣದಿಂದ  ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂಬ ಆರೋಪವಿದೆ.

‘ಕಬ್ಬು ಕಡಿಯುವವರು, ಕೂಲಿ ಕೆಲಸ ಮಾಡುವವರು, ಅನಕ್ಷರಸ್ಥರಿಗೂ ಸದಸ್ಯತ್ವ ಕೊಡಿಸಲಾಗಿದೆ. ಆ ಮೂಲಕ ಕಸಾಪ ಬೈಲಾ ಉಲ್ಲಂಘನೆ ಮಾಡಲಾಗಿದೆ. ಈ ಕುರಿತು ತನಿಖೆ ನಡೆಸಬೇಕು’ ಎಂದು ಯುವ ಸಾಹಿತಿಯೊಬ್ಬರು ಒತ್ತಾಯಿಸಿದರು.

‘ಕನ್ನಡ ಓದಲು, ಬರೆಯಲು ಗೊತ್ತಿರುವ ಎಲ್ಲರೂ ಕಸಾಪ ಸದಸ್ಯತ್ವ ಪಡೆಯಬಹುದು. ರೈತರು, ಕೂಲಿ ಕಾರ್ಮಿಕರು ಸದಸ್ಯತ್ವ ಪಡೆಯಬಾರದು ಎಂಬ ವಾದದಲ್ಲಿ ಅರ್ಥವಿಲ್ಲ’ ಎಂದು ಜಿಲ್ಲಾ ಘಟಕಕ್ಕೆ 2ನೇ ಬಾರಿ ಸ್ಪರ್ಧಿಸಿರುವ ಹಾಲಿ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು