ಮಂಗಳವಾರ, ಮಾರ್ಚ್ 2, 2021
21 °C

ಕಪ್ಪತಗುಡ್ಡಕ್ಕೆ ಧಕ್ಕೆ ಆಗಲು ಬಿಡುವುದಿಲ್ಲ: ಸಚಿವ ಸಿ.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಶಿವಮೊಗ್ಗದ ಹುಣಸೋಡುನಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ. ಅಂತಹ ಯಾವುದೇ ಘಟನೆ ಗದಗ ಜಿಲ್ಲೆಯಲ್ಲಿ ನಡೆಯಲು ಅವಕಾಶ ನೀಡುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಭಾನುವಾರ ಗದುಗಿನಲ್ಲಿ ನಡೆದ ‘ಕಪ್ಪತ ಉತ್ಸವ’ದಲ್ಲಿ ಅವರು ಮಾತನಾಡಿದರು.

‘ನಾನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವನಾಗಿದ್ದಾಗ ಅಕ್ರಮ ಗಣಿಗಾರಿಕೆಗಳನ್ನು ಅಧಿಕಾರಿಗಳ ಸಹಯೋಗದೊಂದಿಗೆ ಬಂದ್ ಮಾಡಿಸಿದ್ದೆ.  ಕಪ್ಪತಗುಡ್ಡದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿವೆ. ಈ ಬಗ್ಗೆ ಇನ್ನೊಂದು ಬಾರಿ ಅಧಿಕಾರಿಗಳೊಂದಿಗೆ ಚರ್ಚಿಸುವೆ. ಅಕ್ರಮ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುವೆ’ ಎಂದರು.

‘ಗದಗ ಜಿಲ್ಲಾ ಉಸ್ತುವಾರಿ ಸಚಿವನಾಗಿ ಇರುವವರೆಗೆ ಕಪ್ಪತಗುಡ್ಡಕ್ಕೆ ಧಕ್ಕೆ ಆಗಲು ಬಿಡುವುದಿಲ್ಲ. ಅಕ್ರಮ ಗಣಿಗಾರಿಕೆಗೆ, ಕ್ರಷರ್ ಘಟಕ, ಕಲ್ಲು ಗಣಿಗಾರಿಕೆ ಹಾಗೂ ಜಿಲೆಟಿನ್ ಸ್ಫೋಟಕ್ಕೆ ಅವಕಾಶ ನೀಡುವುದಿಲ್ಲ. ಸಸ್ಯ ಕಾಶಿಯ ಸಂರಕ್ಷಣೆಗೆ ಸದಾ ಬದ್ಧನಾಗಿರುವೆ’ ಎಂದರು.

‘ಬಿಂಕದಕಟ್ಟಿ ಮೃಗಾಲಯದ ಅಭಿವೃದ್ಧಿಗೆ ಮುಂದಾಗಿದ್ದು ಒಂದು ಹುಲಿಯನ್ನು ದತ್ತು ಪಡೆದಿರುವೆ. ಅದರ ಪಾಲನೆ ಪೋಷಣೆಗೆ ವರ್ಷಕ್ಕೆ ₹1 ಲಕ್ಷ ನೀಡುವೆ’ ಎಂದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನನ್ನ ಖಾತೆ ಬದಲಾವಣೆ ಮಾಡಿದ್ದಕ್ಕೆ ನನಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ. ಪಕ್ಷದ ಶಿಸ್ತಿನ ಸಿಪಾಯಿ ನಾನು. ಯಾವುದೇ ಖಾತೆ ನೀಡಿದರೂ ಅದಕ್ಕೆ ಚೈತನ್ಯ ತುಂಬುವ ಹಾಗೆ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.