ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ವಿಕೋಪ: ಪರಿಹಾರ ಮೊತ್ತ ಹೆಚ್ಚಿಸಲು ಕರ್ನಾಟಕ ಕೃಷಿ ಬೆಲೆ ಆಯೋಗ ಶಿಫಾರಸು

ಸಾಮಾನ್ಯ ಬೆಳೆಗಳಿಗೆ ₹50 ಸಾವಿರ, ತೋಟಗಾರಿಕೆ ಬೆಳೆಗಳಿಗೆ ₹1 ಲಕ್ಷ
Last Updated 13 ನವೆಂಬರ್ 2020, 21:52 IST
ಅಕ್ಷರ ಗಾತ್ರ

ಬೆಂಗಳೂರು: ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅಡಿ ನೀಡುವ ಬೆಳೆ ಪರಿಹಾರ ಅತ್ಯಲ್ಪವಾಗಿದ್ದು, ಕೃಷಿ ಮತ್ತು ವಾಣಿಜ್ಯ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ₹ 50 ಸಾವಿರ ಮತ್ತು ಬಹು ವಾರ್ಷಿಕ ತೋಟಗಾರಿಕಾ ಬೆಳೆಗಳು ಹಾಗೂ ಹೆಚ್ಚಿನ ಮೌಲ್ಯದ ಬೆಳೆಗಳಿಗೆ ₹1 ಲಕ್ಷ ಪರಿಹಾರ ನೀಡಬೇಕು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗ ಶಿಫಾರಸು ಮಾಡಿದೆ.

ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ಅವರು ಆಯೋಗದ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶುಕ್ರವಾರ ಸಲ್ಲಿಸಿದರು.

ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಡಿ ಪ್ರತಿ ಹೆಕ್ಟೇರ್‌ಗೆ ₹6,800 ರಿಂದ ₹18,000 ರವರೆಗೆ ನೀಡಲಾಗುತ್ತಿದೆ. ಈ ಮೊತ್ತವು ಕೃಷಿ ಪರಿಕರ ಖರೀದಿಗೂ ಸಾಕಾಗುವುದಿಲ್ಲ ಎಂದು ಆಯೋಗ ವರದಿಯಲ್ಲಿ ಹೇಳಿದೆ.

ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತಂದು ಮಾರುಕಟ್ಟೆ ಸಮಿತಿ ಹೊರಗೆ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ರೈತನ ಹಿತ ಕಾಪಾಡಲು ಕೇಂದ್ರ ಸರ್ಕಾರದ ಘೋಷಿತ ಬೆಂಬಲ ಬೆಲೆಯನ್ನೇ ಉಲ್ಲೇಖ ಬೆಲೆಗಳಾಗಿ (ರೆಫರೆನ್ಸ್‌ ಪ್ರೈಸ್‌) ಪರಿಗಣಿಸಬೇಕು ಎಂದೂ ಆಯೋಗ ತಿಳಿಸಿದೆ.

ಹೊಸ ಕಾಯ್ದೆ ಬಂದಿರುವುದರಿಂದ ಕೃಷಿಕರಿಗೆ ಮುಕ್ತವಾಗಿ ವ್ಯಾಪಾರ ವಹಿವಾಟು ಮಾಡಲು ನಿಖರ ಮಾಹಿತಿ ಮತ್ತು ದತ್ತಾಂಶಗಳ ಕೊರತೆ ಆಗುವ ಸಾಧ್ಯತೆ ಇದೆ. ಇದರಿಂದಾಗಿ ಉಲ್ಲೇಖ ಬೆಲೆಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಗೊಂದಲವೂ ಆಗಬಹುದು. ಆದ್ದರಿಂದ ಕೇಂದ್ರ ಸರ್ಕಾರದ ಘೋಷಿತ ಬೆಂಬಲ ಬೆಲೆಯನ್ನೇ ಉಲ್ಲೇಖ ಬೆಲೆಯಾಗಿ ಪರಿಗಣಿಸುವುದು ಸೂಕ್ತ. ಈ ಅಂಶವನ್ನು ಕಾಯ್ದೆಯಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡಬೇಕು ಎಂದು ಆಯೋಗ ಮನವಿ ಮಾಡಿದೆ.

ಕೇಂದ್ರ ಸರ್ಕಾರ ಸಾಮಾನ್ಯ ಗುಣಮಟ್ಟದ ಉತ್ಪನ್ನಕ್ಕೆ ಮಾತ್ರ ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತಿದೆ. ವಾಸ್ತವಿಕವಾಗಿ ರೈತರ ಉತ್ಪನ್ನಗಳನ್ನು ವರ್ಗೀಕರಿಸಿ ಎಫ್‌ಎಕ್ಯೂ ಗುಣಮಟ್ಟಕ್ಕಿಂತ ಕಡಿಮೆ ಗುಣಮಟ್ಟದ ಉತ್ಪನ್ನಗಳಿಗೂ ಎಂಎಸ್‌ಪಿ ಘೋಷಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಸಲಹೆ ನೀಡಿದೆ.

ಪ್ರಮುಖ ಶಿಫಾರಸುಗಳು:

* ನೀರಿನ ನಿರ್ವಹಣೆಗಾಗಿ ‘ಹೊಲಕ್ಕೊಂದು ಕೆರೆ’ ಯೋಜನೆ ಜಾರಿಗೊಳಿಸಬೇಕು

* ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆ ಅಡಿ ಖರೀದಿಸಲು ಸಂಚಾರಿ ಖರೀದಿ ವ್ಯವಸ್ಥೆಗೊಳಿಸಿದಲ್ಲಿ ರೈತರು ಮತ್ತು ಸರ್ಕಾರಕ್ಕೂ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲು ಆವರ್ತನಿಧಿಗೆ ಕನಿಷ್ಠ ₹5,000 ಕೋಟಿ ಒದಗಿಸಬೇಕು

* ಎನ್‌ಡಿಡಿಬಿ, ಕೆಎಂಎಫ್‌ ಮಾದರಿಯಲ್ಲಿ ತರಕಾರಿ ಮತ್ತು ಹಣ್ಣುಗಳ ಸದೃಢ ಮಾರುಕಟ್ಟೆಗಾಗಿ ಕರ್ನಾಟಕ ತೋಟಗಾರಿಕಾ ಮಾರಾಟ ಮಹಾ ಮಂಡಳ ಸ್ಥಾಪಿಸಬೇಕು.

‘ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ’ಗೆ ಶಿಫಾರಸು

ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯಿಂದ ವಂಚಿತರಾಗುವುದನ್ನು ತಪ್ಪಿಸಲು ಮತ್ತು ಪಡಿತರ ವ್ಯವಸ್ಥೆ ಸದೃಢಗೊಳಿಸಲು ‘ಮುಖ್ಯಮಂತ್ರಿ ಅನ್ನಪೂರ್ಣ’ ಯೋಜನೆಯನ್ನು ಜಾರಿ ಮಾಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಇದನ್ನು ಕಾರ್ಯಗತಗೊಳಿಸುವುದರಿಂದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಗೆ ಸುಮಾರು ₹12,000 ಕೋಟಿ ದೊರಕಿದಂತಾಗುತ್ತದೆ. ರಾಜ್ಯದಲ್ಲಿ ಪಡಿತರ ವ್ಯವಸ್ಥೆಯೂ ಸ್ವಾವಲಂಬನೆ ಹೊಂದುತ್ತದೆ ಎಂದು ಆಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT