ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು ಕಾಂಗ್ರೆಸ್ ಗುರಿ: ಸಿದ್ದರಾಮಯ್ಯ

Last Updated 30 ಜೂನ್ 2022, 11:16 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್ ಪಕ್ಷದ ಗುರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, '130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ನಮ್ಮ ಸಮೀಕ್ಷೆಯೂ ನಿರೀಕ್ಷೆಯಂತೆಯೇ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಏನೇ ಹೇಳಲಿ, ಸ್ಪಷ್ಟ ಬಹುಮತದ ಮೂಲಕ ನಾವು ಗೆಲ್ಲುವುದು ಖಚಿತ' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕನ್ಹಯ್ಯ ಲಾಲ್ ಕೊಲೆ ಖಂಡಿಸಿದ ಸಿದ್ದರಾಮಯ್ಯ...
ರಾಜಸ್ಥಾನದಲ್ಲಿ ಉದಯಪುರದಲ್ಲಿ ಕನ್ಹಯ್ಯಲಾಲ್ ಕೊಲೆ ಪ್ರಕರಣವನ್ನು ಸಿದ್ದರಾಮಯ್ಯ ಖಂಡಿಸಿದ್ದಾರೆ.

'ಉದಯಪುರದಲ್ಲಿ ಕನ್ಹಯ್ಯ ಲಾಲ್ ಕೊಲೆ ಅತ್ಯಂತ ಖಂಡನೀಯ ಕೃತ್ಯ. ಕೊಲೆಯಾದ ದಿನವೇ ಇದನ್ನು ಹೇಳಿದ್ದೇನೆ. ಈ ರೀತಿ ತಲೆ ಕತ್ತರಿಸುವ ದುಷ್ಕರ್ಮಿಗಳಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆ. ರಾಜಸ್ಥಾನ ಸರ್ಕಾರ ಖಂಡಿತ ಆರೋಪಿಗಳಿಗೆ ತಕ್ಷ ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳುವ ಭರವಸೆ ಇದೆ' ಎಂದು ಹೇಳಿದರು.

ಹುಟ್ಟುಹಬ್ಬಕ್ಕೆ ರಾಹುಲ್ ಗಾಂಧಿ ಆಗಮನ...
'ನಾನೆಂದೂ ಹುಟ್ಟುಹಬ್ಬವನ್ನು ಬಹಿರಂಗವಾಗಿ ಆಚರಿಸಿದವನಲ್ಲ, ಈ ಬಾರಿ 75 ವರ್ಷ ಪೂರ್ಣಗೊಳಿಸಲಿರುವ ಕಾರಣ ಸ್ನೇಹಿತರು ಮತ್ತು ಅಭಿಮಾನಿಗಳು ಆಚರಣೆ ಮಾಡುತ್ತಿದ್ದಾರೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರೇ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಕಾರಣ ವಿಶೇಷ ಸಂದರ್ಭವಾಗಿದ್ದು ನಾನೂ ಭಾಗವಹಿಸುತ್ತಿದ್ದೇನೆ' ಎಂದು ಟ್ವೀಟಿಸಿದರು.

ಬಡವರ ಪರ ಹೋರಾಟ: ಸಿದ್ದರಾಮಯ್ಯ
'ನಾನು ಸಾಮಾಜಿಕ ನ್ಯಾಯ, ಅಹಿಂದ ವರ್ಗ ಮತ್ತು ಬಡವರ ಪರವಾಗಿ ಇರುವವನು. ಸರ್ವರು ಸಮಾನ ಮತ್ತು ನ್ಯಾಯಬದ್ಧ ಅವಕಾಶ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಆಶಯದೊಂದಿಗೆ ನಾನು ಹೋರಾಟ ಮಾಡುತ್ತಾ ಬಂದವನು. ಯಾರು ಏನೇ ಹೇಳಿದರೂ ಈ ವಿಷಯದಲ್ಲಿ ರಾಜಿ ಇಲ್ಲ' ಎಂದು ನುಡಿದರು.

ಬಿಜೆಪಿಯಿಂದ ಆಪರೇಷನ್ ಕಮಲ...
'ರಾಜ್ಯದ ಒಂದೊಂದು ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ 10-12 ಗೆಲ್ಲುವ ಅಭ್ಯರ್ಥಿಗಳಿದ್ದಾರೆ. ಇದೇ ಸಮಸ್ಯೆಯಾಗಿದೆ. ಈ ಸಮಸ್ಯೆ ಬಿಜೆಪಿಗೆ ಇಲ್ಲ. ಅದು ನಮ್ಮಂತೆ ಇಡೀ ರಾಜ್ಯದಲ್ಲಿ ನೆಲೆ ಇರುವ ಪಕ್ಷ ಅಲ್ಲ. ಇದಕ್ಕಾಗಿ ನಮ್ಮಲ್ಲಿ ಗೆದ್ದವರನ್ನು ಆಪರೇಷನ್ ಕಮಲ ಮಾಡಿ ಬಿಜೆಪಿಯವರು ಹೊತ್ತುಕೊಂಡು ಹೋಗುತ್ತಾರೆ' ಎಂದು ಆರೋಪಿಸಿದರು.

'ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಖಂಡಿತಾ ಇದೆ. ಉದಾಹರಣೆಗೆ ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ವಿಶ್ವನಾಥ್ ಈಗ ಪರಿಷತ್ ಸದಸ್ಯರಾಗಿದ್ದಾರೆ. ಕೆ.ಆರ್ ನಗರದಲ್ಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿ ಯಾರಿದ್ದಾರೆ? ಇಡೀ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲ' ಎಂದು ತಿರುಗೇಟು ನೀಡಿದರು.

ಪಕ್ಷದ ನಿಷ್ಠಾವಂತರಿಗೆ ಟಿಕೆಟ್...
'ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಹಲವು ನಾಯಕರು ನನ್ನ ಸಂಪರ್ಕದಲ್ಲಿರುವುದು ನಿಜ. ಚುನಾವಣೆಗೆ 9 ತಿಂಗಳು ಇದೆ, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತದಲ್ಲಿ ನಂಬಿಕೆ ಇಟ್ಟು, ಪಕ್ಷದ ನಾಯಕತ್ವ ಒಪ್ಪಿಕೊಂಡು, ಪಕ್ಷಕ್ಕೆ ನಿಷ್ಠಾವಂತರಾಗಿ ಇರುವವರಿಗೆ ಟಿಕೇಟ್' ಎಂದು ತಿಳಿಸಿದರು.

'ಬಿಜೆಪಿಯಲ್ಲಿರುವವರೆಲ್ಲರೂ ಆರ್‌ಎಸ್‌ಎಸ್ ಮೂಲದವರಲ್ಲ, ಉದಾಹರಣೆಗೆ ಸಚಿವ ಎಸ್.ಟಿ.ಸೋಮಶೇಖರ್ ಆರ್‌ಎಸ್‌ಎಸ್‌ನವರಲ್ಲ. ಹೀಗೆ ಬಹಳ ಮಂದಿ ಇದ್ದಾರೆ. ಇದರ ಅರ್ಥ ಸೋಮಶೇಖರ್ ಮರಳಿ ಬರುತ್ತಾರೆ ಎಂದಲ್ಲ. ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಸ್ವಾಗತ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT