ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಸಂಪುಟ: ವಿಶಿಷ್ಟ ‘ಸೂತ್ರ’ಕ್ಕೆ ಬಿಜೆಪಿ ವರಿಷ್ಠರ ಒತ್ತು

Last Updated 3 ಆಗಸ್ಟ್ 2021, 1:39 IST
ಅಕ್ಷರ ಗಾತ್ರ

ನವದೆಹಲಿ: ಸಚಿವ ಸಂಪುಟ ವಿಸ್ತರಣೆಗಾಗಿ ಕಳೆದ ಶುಕ್ರವಾರದಿಂದ ಆರಂಭವಾಗಿರುವ ‘ಕಸರತ್ತು’ ಸೋಮವಾರ ಅಂತಿಮ ಘಟ್ಟ ತಲುಪಿದ್ದು, ಪಕ್ಷದ ವರಿಷ್ಠರು ಈ ಸಂಬಂಧ ವಿಶಿಷ್ಟ ‘ಸೂತ್ರ’ಕ್ಕೆ ಒತ್ತು ನೀಡಿದ್ದಾರೆ.

ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ಭಾನುವಾರ ರಾತ್ರಿ ದಿಢೀರ್‌ ಇಲ್ಲಿಗೆ ಧಾವಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ತಡರಾತ್ರಿವರೆಗೂ ಚರ್ಚೆಯಲ್ಲಿ ತೊಡಗಿದ್ದರು.

ಸೋಮವಾರ ಬೆಳಿಗ್ಗೆಯಿಂದ ಕೆಲವು ಮುಖಂಡರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದ ಬಳಿಕ ರಾತ್ರಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಮಂಗಳವಾರ ಸಂಜೆಯೊಳಗೆ ವರಿಷ್ಠರಿಂದ ಹಸಿರು ನಿಶಾನೆ ದೊರೆಯುವ ಸಾಧ್ಯತೆ ಇದ್ದು, ಬುಧವಾರ ಪ್ರಮಾಣ ವಚನ ಸಮಾರಂಭ ನಡೆಯಲಿದೆ.

ಏನದು ಸೂತ್ರ?: ಬಿ.ಎಸ್‌. ಯಡಿಯೂರಪ್ಪ ಅವರ ಸಂಪುಟದಲ್ಲಿದ್ದ ಕೆಲವು ಹಿರಿಯರನ್ನು ಕೈಬಿಟ್ಟು ಯುವಕರಿಗೆ ಅವಕಾಶ ನೀಡುವುದು ವರಿಷ್ಠರು ಸಿದ್ಧಪಡಿಸಿರುವ ಸೂತ್ರದ ಪ್ರಮುಖ ಅಂಶವಾಗಿರಲಿದೆ.

ಸಂಪುಟದಿಂದ ಹೊರಗುಳಿಯಲಿರುವ ಹಿರಿಯರು ಹಾಗೂ ಅವಕಾಶ ದೊರೆಯದ ಕೆಲವು ಆಕಾಂಕ್ಷಿಗಳಲ್ಲಿ ಉಂಟಾಗಬಹುದಾದ ‘ಸಂಭವನೀಯ’ ಅಸಮಾಧಾನ ತಣಿಸುವುದಕ್ಕೆಂದೇ 8ರಿಂದ 10 ಸ್ಥಾನಗಳನ್ನು ಖಾಲಿ ಇರಿಸಿ, ಮೊದಲ ಹಂತದ ವಿಸ್ತರಣೆಯಲ್ಲಿ 21ರಿಂದ 24 ಸ್ಥಾನಗಳನ್ನು ಭರ್ತಿ ಮಾಡುವುದೂ ಈ ಸೂತ್ರದ ಮತ್ತೊಂದು ಅಂಶ.

ಯಡಿಯೂರಪ್ಪ ಸಂಪುಟದಲ್ಲಿದ್ದ ಕೆಲವು ಪ್ರಮುಖರನ್ನು ಬೊಮ್ಮಾಯಿ ಅವರ ಸಂಪುಟದಲ್ಲಿ ಮುಂದುವರಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿಯೂ ಚರ್ಚೆ ನಡೆಸಲಾಗಿದೆ.

ಇದರೊಂದಿಗೆ ಪ್ರಾದೇಶಿಕತೆ, ಜಾತಿ, ಮತ್ತು ಪಕ್ಷ ನಿಷ್ಠೆಯನ್ನು ಹೊಂದಿರುವ ಯುವ ಪಡೆಗೆ ಒತ್ತು ನೀಡುವುದೂ ವರಿಷ್ಠರು ಸಿದ್ಧಪಡಿಸಿರುವ ‘ಸೂತ್ರ’ದ ಮತ್ತೊಂದು ಪ್ರಮುಖವಾದ ಅಂಶವಾಗಿದೆ ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ವಲಸಿಗರಿಗೆ ಅವಕಾಶ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೊರೆದು ಬಂದು ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿ, ಯಡಿಯೂರಪ್ಪ ಸಂಪುಟ ಸೇರಿದ್ದ ಎಲ್ಲ ವಲಸಿಗರಿಗೂ ಹೊಸ ಸಂಪುಟದಲ್ಲಿ ಅವಕಾಶ ನೀಡಲು ವರಿಷ್ಠರು ಸಮ್ಮತಿ ಸೂಚಿಸಿದ್ದಾರೆ.

ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಹಾಗೂ ಸಿ.ಡಿ. ಪ್ರಕರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ ಜಾರಕಿಹೊಳಿ ಅವರ ಬದಲಿಗೆ, ಅವರ ಸೋದರ ಬಾಲಚಂದ್ರ ಅವರಿಗೆ ಅವಕಾಶ ನೀಡುವ ಕುರಿತೂ ಚರ್ಚೆ ನಡೆಸಲಾಗಿದೆ.

ಮಹೇಶ ಕುಮಠಳ್ಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಜಾರಕಿಹೊಳಿ ಸೋದದರಿಂದ ತೀವ್ರ ಒತ್ತಡ ಬಂದಿದೆ ಎನ್ನಲಾಗಿದ್ದು, ವರಿಷ್ಠರ ತೀರ್ಮಾನ ಅಂತಿಮ ಎನ್ನಲಾಗಿದೆ.

ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿ, ಅವರ ಸ್ಥಾನಕ್ಕ ಸುರೇಶಕುಮಾರ್‌ ಅವರ ಹೆಸರನ್ನೂ ಪ್ರಸ್ತಾಪಿಸಲಾಗಿದೆ.

ಸುದೀರ್ಘ ಸಮಾಲೋಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಕೇಂದ್ರ ಸಚಿವರಾದ ಅಮಿತ್‌ ಶಾ, ಪ್ರಲ್ಹಾದ ಜೋಶಿ, ಧರ್ಮೇಂದ್ರ ಪ್ರಧಾನ್, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರೊಂದಿಗೆ ಮಾತುಕತೆ ನಡೆಸಿದರು.

ಸಂಭವನೀಯ ಪಟ್ಟಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ವರಿಷ್ಠರ ಸೂಚನೆಯ ಮೇರೆಗೆ ಪ್ರಲ್ಹಾದ ಜೋಶಿ ಅವರೊಂದಿಗೆ ಸೋಮವಾರವೂ ಮೂರು ಗಂಟೆ ಕಾಲ ಚರ್ಚಿಸಿದ ಬೊಮ್ಮಾಯಿ, ರಾತ್ರಿ 8.30ರ ನಂತರ ನಡ್ಡಾ ಪಟ್ಟಿಯೊಂದಿಗೆ ಅವರ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದರು.

ವಿಜಯೇಂದ್ರ ಪರ ಬಿಎಸ್‌ವೈ ಒತ್ತಡ

ನವದೆಹಲಿ: ಕಿರಿಯ ಪುತ್ರ ಬಿ.ವೈ. ವಿಜಯೇಂದ್ರಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಬಿ.ಎಸ್‌.ಯಡಿಯೂರಪ್ಪ ಒತ್ತಡ ಹೇರಿದ್ದಾರೆ.

ಉಪ ಮುಖ್ಯಮಂತ್ರಿ ಸ್ಥಾನ ಕೊಡದೇ ಇದ್ದರೆ, ಸಚಿವ ಸ್ಥಾನ ನೀಡಿ ಬೃಹತ್ ಕೈಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಗಳನ್ನು ಕೊಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ಗೊತ್ತಾಗಿದೆ. ಮಧು ಬಂಗಾರಪ್ಪ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿರುವುದರಿಂದ ಸೊರಬದ ಶಾಸಕ ಕುಮಾರ್‌ ಬಂಗಾರಪ್ಪಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬುದೂ ಯಡಿಯೂರಪ್ಪ ಒತ್ತಾಸೆ. ಈ ಬೇಡಿಕೆಗೆ ಸಮ್ಮತಿ ನೀಡುವುದು ಅಥವಾ ನೀಡದೇ ಇರುವುದು ವರಿಷ್ಠರಿಗೆ ಬಿಟ್ಟ ವಿಚಾರ. ನಾಯಕರ ಜತೆಗಿನ ಚರ್ಚೆಯ ವೇಳೆ ಬೊಮ್ಮಾಯಿ, ಈ ವಿಷಯ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಮುಂದುವರಿಯುವ ಸಂಭವನೀಯರು

ಗೋವಿಂದ ಕಾರಜೋಳ,
ಬಿ. ಶ್ರೀರಾಮುಲು, ಸಿ.ಎನ್‌. ಅಶ್ವತ್ಥ
ನಾರಾಯಣ, ಆರ್‌.ಅಶೋಕ,
ಜೆ.ಸಿ.ಮಾಧುಸ್ವಾಮಿ, ಉಮೇಶ ಕತ್ತಿ

ಸೇರ್ಪಡೆಗೊಳ್ಳಲಿರುವ ಸಂಭವನೀಯರು

ಎಸ್‌.ಎ. ರಾಮದಾಸ್‌, ಅಭಯ ಪಾಟೀಲ್‌, ಸುನಿಲ್‌ಕುಮಾರ್,
ಪೂರ್ಣಿಮಾ ಶ್ರೀನಿವಾಸ್‌,
ದತ್ತಾತ್ರೇಯ ಪಾಟೀಲ ರೇವೂರ,
ರಾಜುಗೌಡ/ಹಾಲಪ್ಪ ಆಚಾರ್‌,
ನೆಹರೂ ಓಲೇಕಾರ್‌/ ಬಿ.ಹರ್ಷವರ್ಧನ್‌, ಮುನಿರತ್ನ/ಮಹೇಶ ಕುಮಠಳ್ಳಿ, ಅರವಿಂದ ಬೆಲ್ಲದ/ಬಸನಗೌಡ ಪಾಟೀಲ ಯತ್ನಾಳ, ಶಂಕರ ಪಾಟೀಲ ಮುನೇನಕೊಪ್ಪ/ಕಳಕಪ್ಪ ಬಂಡಿ, ಸತೀಶ್‌ ರೆಡ್ಡಿ,
ಎನ್‌.ರವಿಕುಮಾರ್‌/ ಎಸ್‌.ರುದ್ರೇಗೌಡ (ವಿಧಾನ ಪರಿಷತ್‌)

ಹೊರಬೀಳುವ ಸಂಭವನೀಯರು

ಜಗದೀಶ ಶೆಟ್ಟರ್, ವಿ.ಸೋಮಣ್ಣ
ಸಿ.ಸಿ. ಪಾಟೀಲ, ಶಶಿಕಲಾ ಜೊಲ್ಲೆ,
ಕೋಟ ಶ್ರೀನಿವಾಸ ಪೂಜಾರಿ,
ಪ್ರಭು ಚೌಹಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT