ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ, ಶಾಂತಿ ಕಾಪಾಡುವಂತೆ ಮನವಿ

Last Updated 29 ಅಕ್ಟೋಬರ್ 2021, 15:04 IST
ಅಕ್ಷರ ಗಾತ್ರ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದ ಜನರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನ ಅಂತಿಮ ದರ್ಶನಕ್ಕಾಗಿ ಸರ್ಕಾರ ಎಲ್ಲ ರೀತಿಯ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ' ಎಂದು ಹೇಳಿದ್ದಾರೆ.

'ಕರ್ನಾಟಕದ ಜನತೆಯಲ್ಲಿ ನನ್ನ ಮನವಿ ಏನೆಂದರೆ, ಇಂತಹ ಮಹಾನ್ ನಟನನ್ನು ಕಳೆದುಕೊಂಡಾಗ ನೋವಾಗುವುದು ಸಹಜ, ಆದರೆ ಭಾವೋದ್ವೇಗಕ್ಕೆ ಒಳಗಾಗಬಾರದು ಮತ್ತು ತಾಳ್ಮೆ ಕಳೆದುಕೊಳ್ಳಬಾರದು. ಶಾಂತಿ ಕಾಪಾಡಬೇಕು. ಅವರನ್ನು (ಪುನೀತ್) ಶಾಂತಿಯುತವಾಗಿ ಕಳುಹಿಸಬೇಕು. ನಾವು ಅವರಿಗೆ ಸರಿಯಾದ ಗೌರವವನ್ನು ನೀಡಬೇಕು' ಎಂದು ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. 'ನಾಳೆ ಇಡೀ ದಿನ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಿದ್ದೇವೆ. ಆದ್ದರಿಂದ ಜನರು ಶಾಂತಿಯುತವಾಗಿ ಅಂತಿಮ ನಮನ ಸಲ್ಲಿಸಬೇಕು. ಅಭಿಮಾನಿಗಳು ಶಾಂತಿ ಕಾಪಾಡುವಂತೆ ಕೈ ಜೋಡಿಸಿ ವಿನಂತಿಸುತ್ತೇನೆ ಎಂದ ಅವರು, ಪುನೀತ್ ರಾಜ್‌ಕುಮಾರ್ ಅವರಿಗೆ ಸಕಲ ಸರ್ಕಾರಿ ಗೌರವ ನೀಡಲಾಗುವುದು ಮತ್ತು ಅಂತ್ಯ ಸಂಸ್ಕಾರ ಮತ್ತು ಸ್ಥಳದ ಬಗ್ಗೆ ಕುಟುಂಬ ನಿರ್ಧರಿಸಲಿದೆ' ಎಂದು ಹೇಳಿದರು.

ಇಂದು ಮುಂಜಾನೆ ಹೃದಯಾಘಾತದಿಂದ ನಟ ಪುನೀತ್ ರಾಜ್‌ಕುಮಾರ್ ವಿಧಿವಶರಾಗಿದ್ದರು. 46 ವರ್ಷದ ಅವರಿಗೆ ಪತ್ನಿ ಅಶ್ವಿನಿ ರೇವಂತ್ ಮತ್ತು ಪುತ್ರಿಯರಾದ ದೃತಿ ಮತ್ತು ವಂದಿತಾ ಇದ್ದಾರೆ.

'ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಶ್ರೇಷ್ಠ ಸಾಧನೆ ಮಾಡಿದ ಮಹಾನ್ ನಟನನ್ನು ಕರ್ನಾಟಕ ಕಳೆದುಕೊಂಡಿದೆ. ಅವರ ಇಡೀ ಕುಟುಂಬವು ತೀವ್ರ ದುಃಖದಲ್ಲಿದೆ, ಇಡೀ ಕರ್ನಾಟಕದ ಜನರು ದುಃಖಿತರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರನ್ನು 'ಯೂತ್ ಐಕಾನ್' ಎಂದು ಕರೆದ ಮುಖ್ಯಮಂತ್ರಿ, 'ನವೆಂಬರ್ 1 ರಂದು ವೆಬ್‌ಸೈಟ್ ಉದ್ಘಾಟನೆಗೆ ಸಂಬಂಧಿಸಿದಂತೆ ಅವರು ತನ್ನೊಂದಿಗೆ ಗುರುವಾರ ದೂರವಾಣಿಯಲ್ಲಿ ಮಾತನಾಡಿದ್ದು, ಇಂದು ಸಭೆಯನ್ನು ಕೂಡ ನಿಗದಿಪಡಿಸಲಾಗಿತ್ತು' ಎಂದು ಹೇಳಿದ್ದಾರೆ.

ಇಂದು (ಸಭೆಗೆ) ಬರುವಂತೆ ಕೇಳಿದ್ದೆ.. ಆದರೆ ವಿಧಿ ಅವರನ್ನು ಬೇರೆಡೆ ಕರೆದೊಯ್ದಿದೆ. ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದು ನಿಜಕ್ಕೂ ಆಘಾತಕಾರಿ. ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ನಷ್ಟ. ಸಿನಿಮಾ ಜಗತ್ತು ಒಬ್ಬ ನಾಯಕ ನಟನನ್ನು ಮಾತ್ರ ಕಳೆದುಕೊಂಡಿಲ್ಲ. ನಾಯಕತ್ವದ ಗುಣಗಳನ್ನು ಹೊಂದಿರುವ ವ್ಯಕ್ತಿಯನ್ನು ಕಳೆದುಕೊಂಡಿದೆ. ಅವರ ವ್ಯಕ್ತಿತ್ವ ಮತ್ತು ನಡತೆ ಅವರ ತಂದೆ ಡಾ. ರಾಜ್‌ಕುಮಾರ್ ಅವರಂತೆಯೇ ವಿನಮ್ರವಾಗಿತ್ತು, ಅದು ಇತರರಿಗೆ ಮಾದರಿಯಾಗಿತ್ತು' ಎಂದು ರಾಜ್‌ಕುಮಾರ್ ಕುಟುಂಬದೊಂದಿಗಿನ ತಮ್ಮ ಸುದೀರ್ಘ ಒಡನಾಟವನ್ನು ಸ್ಮರಿಸಿದರು.

ಪುನೀತ್ ರಾಜ್‌ಕುಮಾರ್ ಮತ್ತು ಅವರ ಕುಟುಂಬದೊಂದಿಗೆ ಕಳೆದ ಸಮಯವನ್ನು ನೆನಪಿಸಿಕೊಳ್ಳುತ್ತಾ, 'ಅಪ್ಪು' ಅವರನ್ನು ಪುಟ್ಟ ಹುಡುಗನಿದ್ದಾಗಿನಿಂದಲೂ ನೋಡಿದ್ದೆ. ಅವರಿಗೆ ಉತ್ತಮ ಭವಿಷ್ಯವಿತ್ತು, ಆದರೆ ವಿಧಿ ತನ್ನ ಆಟವನ್ನು ಆಡಿದ್ದು, ಕ್ರೂರವಾಗಿದೆ. ಅವರ ಸಾವು ತುಂಬಲಾರದ ನಷ್ಟ ಮತ್ತು ನೋವನ್ನುಂಟು ಮಾಡಿದೆ. ಕುಟುಂಬವು ಸಂಪೂರ್ಣವಾಗಿ ಛಿದ್ರವಾಗಿದೆ' ಎಂದರು.

ಇವುಗಳನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT