ಶನಿವಾರ, ಮೇ 28, 2022
21 °C

ಜಿಲ್ಲಾ ಉಸ್ತುವಾರಿ ಬದಲು: ಸಚಿವರ ಬೇಸರ,ಮೌನಕ್ಕೆ ಶರಣಾದ ಸಚಿವ ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಿಲ್ಲಾ ಉಸ್ತುವಾರಿ ಹಂಚಿಕೆಯ ಬೆನ್ನಲ್ಲೇ ಕೆಲವು ಸಚಿವರು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರೆ, ಇನ್ನು ಕೆಲವು ಸಚಿವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುವ ಮೂಲಕ ನೋವು ತೋಡಿಕೊಂಡಿದ್ದಾರೆ.

ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಯಾವುದೇ ಅಸಮಾಧಾನ ಉಂಟಾಗಿಲ್ಲ ಎಂದು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಿಗದೇ ಇರುವ ಕಂದಾಯ ಸಚಿವ ಆರ್‌.ಅಶೋಕ ಅವರು ಮೌನಕ್ಕೆ ಶರಣಾಗಿದ್ದಾರೆ.

ಈ ಹಿಂದೆ ತುಮಕೂರು ಜಿಲ್ಲೆ ಉಸ್ತುವಾರಿ ಹೊತ್ತಿದ್ದ ಕಾನೂನು ಸಚಿವ ಜೆ.ಸಿ.ಮಧುಸ್ವಾಮಿ, ‘ನನಗೆ ಜಿಲ್ಲಾ ಉಸ್ತುವಾರಿ ತಪ್ಪಿದ ಬಗ್ಗೆ ಅಸಮಾಧಾನವಿದೆ. ಯಾವ ಕಾರಣಕ್ಕೆ ಬದಲಾವಣೆ ಮಾಡಿದ್ದಾರೊ ಗೊತ್ತಿಲ್ಲ. ಹಾಗೆಂದು ಇದನ್ನು ದೊಡ್ಡ ವಿಷಯ ಮಾಡಲು ಹೋಗಲ್ಲ. ಮುಖ್ಯಮಂತ್ರಿಯವರ ತೀರ್ಮಾನ. ಇದರಲ್ಲಿ ಯಾರದ್ದೋ ಪಿತೂರಿ ಇದೆ ಎಂದು ಭಾವಿಸುವುದಿಲ್ಲ’ ಎಂದು ಹೇಳಿದ್ದಾರೆ.

‘ಬೇರೆ ಜಿಲ್ಲೆ ಉಸ್ತುವಾರಿ ನೀಡುವುದಾಗಿ ಮುಖ್ಯಮಂತ್ರಿಯವರು ಹೇಳಿದ್ದರು. ಬೇರೆ ಜಿಲ್ಲೆಗೆ ಹೋಗಿ ಸಂಘಟನೆ ಮಾಡುವಷ್ಟು ಸಾಮರ್ಥ್ಯ ಇಲ್ಲ ಎಂಬುದನ್ನು ಹೇಳಿದ್ದೆ. ಹಾಗಾಗಿ ನೀಡದೇ ಇರಬಹುದು. ತೀರ್ಮಾನ ಅಚ್ಚರಿ ಉಂಟು ಮಾಡಿಲ್ಲ’ ಎಂದು ಅವರು ತಿಳಿಸಿದರು.

ವಿಜಯನಗರ ಜಿಲ್ಲೆ ಉಸ್ತುವಾರಿ ಕೈತಪ್ಪಿರುವುದರಿಂದ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಬೇಸರಿಸಿಕೊಂಡಿದ್ದಾರೆ. ‘ವಿಜಯನಗರ ಜಿಲ್ಲೆ ಮಾಡಲೆಂದೇ ಹೋರಾಟ ಮಾಡಿದ್ದೆ. ಈಗ ಜಿಲ್ಲೆಯ ಉಸ್ತುವಾರಿ ನೀಡದೇ ಇರುವುದು ನೋವಿನ ಸಂಗತಿ’ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಇದೇ ವೇಳೇ ವಿಜಯನಗರ ಉಸ್ತುವಾರಿ ಹೊತ್ತಿರುವ ಆಹಾರ ಸಚಿವ ಉಮೇಶ ಕತ್ತಿ, ‘ವಿಜಯನಗರ ಜಿಲ್ಲೆ ಉಸ್ತುವಾರಿ ನೀಡಿರುವ ಬಗ್ಗೆ ಬೇಸರವಿಲ್ಲ. ಅದೇನೂ ಪಾಕಿಸ್ತಾನದಲ್ಲಿ ಇಲ್ಲವಲ್ಲ. ಎಲ್ಲಿದ್ರೂ ಕೆಲಸ ಮಾಡ್ತೇವೆ ಬಿಡ್ರಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ಗ್ರಾಮಾಂತರವೇ ಇರಬೇಕಿತ್ತು: ‘ಬೆಂಗಳೂರು ಗ್ರಾಮಾಂತರ ಜಿಲ್ಲೆಉಸ್ತುವಾರಿ ಕೊಟ್ಟಿದ್ದರೆ ಒಳ್ಳೆಯದಿತ್ತು. ಮುಂದಿನ ಚುನಾವಣೆಗೆ ಹೊಸಕೋಟೆಯಿಂದಲೇ ಸ್ಪರ್ಧಿಸುತ್ತೇನೆ. ಹೀಗಾಗಿ ಗ್ರಾಮಾಂತರ ಉಸ್ತುವಾರಿ ಕೇಳಿದ್ದೆ. ಪಕ್ಷದ ಹಿತ ದೃಷ್ಟಿಯಿಂದ ಬದಲಾವಣೆ ಮಾಡಿದ್ದಾರೆ. ಒಪ್ಪಿಕೊಂಡಿದ್ದೇನೆ’ ಎಂದು ಸಚಿವ ಎಂ.ಟಿ.ಬಿ.ನಾಗರಾಜು ನೋವು ತೋಡಿಕೊಂಡಿದ್ದಾರೆ.

‘ಚಿಕ್ಕಬಳ್ಳಾಪುರ ಉಸ್ತುವಾರಿ ಕೊಟ್ಟಿದ್ದಾರೆ. ಒಪ್ಪಿಕೊಂಡಿದ್ದೇನೆ. ಬದಲಾವಣೆ ಮಾಡುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ’ ಎಂದೂ ಹೇಳಿದ್ದಾರೆ.

ನನ್ನ ಮೇಲೆ ಪಕ್ಷಕ್ಕೆ ವಿಶ್ವಾಸ: ‘ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಹಾಸನದ ಜತೆಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ. ಕಳೆದ ಒಂದೂ ಮುಕ್ಕಾಲು ವರ್ಷ ಹಾಸನ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಕೆಲಸವನ್ನು ಪಕ್ಷ ಗಮನಿಸಿದೆ. ಮಂಡ್ಯದಲ್ಲೂ ಉಸ್ತುವಾರಿಯನ್ನು ಚೆನ್ನಾಗಿ ನಿಭಾಯಿಸುತ್ತೇನೆ’ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಪ್ರತಿಕ್ರಿಯಿಸಿದ್ದಾರೆ.

ಯಾರಿಗೂ ಅಸಮಾಧಾನ ಇಲ್ಲ: ಸಿ.ಎಂ

ಬೆಂಗಳೂರು: ‘ಉಸ್ತುವಾರಿ ಹಂಚಿಕೆಗೂ ಮೊದಲು ನಾನು ಎಲ್ಲ ಸಚಿವರ ಜೊತೆ ಮಾತನಾಡಿದ್ದೇನೆ. ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಯಾರೊಬ್ಬರಿಗೂ ಅಸಮಾಧಾನ ಮೂಡಿದೆ ಎಂಬ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು ‘ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ ನೀಡುವ ಮೊದಲು ಮತ್ತು ನಂತರ ಎಲ್ಲರ ಜೊತೆಗೂ ಮಾತನಾಡಿದ್ದೇನೆ. ಸ್ವಂತ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗೆ ಉಸ್ತುವಾರಿ ನೀಡಬೇಕು ಎನ್ನುವುದು ನಮ್ಮ ಪಕ್ಷದ ರಾಷ್ಟ್ರೀಯ ನೀತಿ. ಇದರ ಬಗ್ಗೆ ಸುದೀರ್ಘವಾಗಿ ಸಚಿವರ ಜತೆ ಚರ್ಚೆ ಮಾಡಿದ್ದೇನೆ’ ಎಂದರು.

‘ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಒಂದಾಗಿದ್ದೇವೆ. ಸರ್ಕಾರವನ್ನು ಅತ್ಯಂತ ಸೂಕ್ತವಾಗಿ ಜನರ ಪರವಾಗಿ ಕೆಲಸ ಮಾಡಲು ಬದ್ಧರಾಗಿದ್ದೇನೆ. ಅಸಮಾಧಾನ ಇದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು’ ಎಂದರು.

ಪಲ್ಲಕ್ಕಿ ಹೊರುವುದಷ್ಟೇ ಕೆಲಸ: ಈಶ್ವರಪ್ಪ

ಜಿಲ್ಲಾ ಉಸ್ತುವಾರಿ ಬದಲಾವಣೆ ಬಗ್ಗೆ ಅನಗತ್ಯ ಚರ್ಚೆಗಳು ನಡೆಯುತ್ತಿವೆ. ದೇವರ ಪಲ್ಲಕ್ಕಿ ಹೊರುವವನಿಗೆ ಎಡಗಡೆ ಆದರೆ ಏನು, ಬಲಗಡೆ ಆದರೇನು. ದೇವರ ಕೆಲಸ ಅಂದರೆ ರಾಜ್ಯದ ಆಡಳಿತ ಅಷ್ಟೇ. ಜನರಿಗಾಗಿ ಸೇವೆ ಮಾಡುವವರಿಗೆ ಈ ಜಿಲ್ಲೆ ಆ ಜಿಲ್ಲೆ ಎಂಬ ಪ್ರಶ್ನೆ ಬರುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

ಮೂಟೆ ಹೊರುವವರಿಗೆ ಎಲ್ಲಾದರೂ ಒಂದೇ: ಸಚಿವ ಸೋಮಣ್ಣ

‘ವರಿಷ್ಠರು ಏನೋ ಚಿಂತನೆ ಮಾಡಿ ಉಸ್ತುವಾರಿ ಜವಾಬ್ದಾರಿ ನೀಡಿದ್ದಾರೆ. ಮೂಟೆ ಹೊರುವವರಿಗೆ ಎಲ್ಲಾದರೂ ಒಂದೇ. ನಾವೆಲ್ಲ ಹಿರಿಯ ಸಚಿವರಿದ್ದರೂ ಮುಖ್ಯಮಂತ್ರಿ ಬೊಮ್ಮಾಯಿ ನಮ್ಮಷ್ಟೇ ಹಿರಿಯರಿದ್ದಾರೆ, ಬುದ್ದಿವಂತರಿದ್ದಾರೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

‘ನಾನು ಬೆಂಗಳೂರು ಉಸ್ತುವಾರಿ ಕೇಳಿದ್ದೆ. ಅದನ್ನು ಮುಖ್ಯಮಂತ್ರಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಅದು ಅವರ ಬಳಿಯೇ ಇರುವುದು ಸೂಕ್ತ. ಉಸ್ತುವಾರಿ ಹಂಚಿಕೆ ಬಗ್ಗೆ ಯಾವ ಅಸಮಾಧಾನವೂ ಇಲ್ಲ. ರಾಷ್ಟ್ರೀಯ ನಾಯಕರು ಹೇಳಿದಂತೆ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು