ಸೋಮವಾರ, ಡಿಸೆಂಬರ್ 5, 2022
19 °C

ಬಿ. ಎಲ್‌ ಸಂತೋಷ್ ಎಂಬ ವ್ಯಕ್ತಿಯ ಐನಾತಿ ಕೆಲಸ ಈಗ ಹೊರಬರುತ್ತಿದೆ: ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ’ತೆಲಂಗಾಣದಲ್ಲಿ ₹150 ಕೋಟಿಯ ಆಪರೇಷನ್ ಕಮಲದ ಡೀಲ್‌ನಲ್ಲಿ ಸಿಕ್ಕಿಬಿದ್ದವರು ಕರ್ನಾಟಕದ ಕುದುರೆ ವ್ಯಾಪಾರದಲ್ಲೂ ಪಾತ್ರ ವಹಿಸಿದ್ದರು ಎಂಬುದು ಬಯಲಾಗಿದೆ. ಬಿ.ಎಲ್ ಸಂತೋಷ್ ಎಂಬ ವ್ಯಕ್ತಿಯ ಐನಾತಿ ಕೆಲಸ ಈಗ ಹೊರಬರುತ್ತಿದೆ’ ಎಂದು ರಾಜ್ಯ ಕಾಂಗ್ರೆಸ್‌ ಹೇಳಿದೆ.

ತೆಲಂಗಾಣದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಶಾಸಕರನ್ನು ಖರೀದಿಸಿ, ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌, ಇದಕ್ಕೆ ಸಂಬಂಧಿಸಿದಂತೆ ವಿಡಿಯೊ ಸಾಕ್ಷ್ಯ ಬಿಡುಗಡೆ ಮಾಡಿದ್ದಾರೆ. ಶಾಸಕರಿಗೆ ಆಮಿಷವೊಡ್ಡುವ ಮಧ್ಯವರ್ತಿಗಳು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಅವರ ಹೆಸರುಗಳನ್ನು ಹೇಳಿರುವುದು ವಿಡಿಯೊದಲ್ಲಿದೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಪ್ರಕಟಿಸಿರುವ ಕಾಂಗ್ರೆಸ್‌, ‘ತೆಲಂಗಾಣದಲ್ಲಿ ₹150 ಕೋಟಿಯ ಆಪರೇಷನ್ ಕಮಲದ ಡೀಲ್‌ನಲ್ಲಿ ಸಿಕ್ಕಿಬಿದ್ದವರು ಕರ್ನಾಟಕದ ಕುದುರೆ ವ್ಯಾಪಾರದಲ್ಲೂ ಪಾತ್ರ ವಹಿಸಿದ್ದರು ಎಂಬುದನ್ನು ಬಾಯ್ಬಿಟ್ಟಿದ್ದಾರೆ. ಬಿ ಎಲ್ ಸಂತೋಷ್ ಎಂಬ ವ್ಯಕ್ತಿಯ ಐನಾತಿ ಕೆಲಸ ಈಗ ಹೊರಬರುತ್ತಿದೆ. ಕುದುರೆ ವ್ಯಾಪಾರದಲ್ಲಿ ಸಂತೋಷ ಕೂಟದ ನೇತೃತ್ವ ಇದ್ದಿದ್ದಕ್ಕೆ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಿದ್ದೇ? ಎಂದು ಪ್ರಶ್ನೆ ಕೇಳಲಾಗಿದೆ.

‘ಅಮಿತ್ ಶಾ ಗೃಹ ಸಚಿವರೋ ಅಥವಾ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಕುದುರೆ ವ್ಯಾಪಾರದ ದಲ್ಲಾಳಿಯೋ? ಆಪರೇಷನ್ ಕಮಲ ಎಂಬ ದಗಾಕೊರ ಕೆಲಸದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್‌ ಶಾ, ಬಿ.ಎಲ್‌ ಸಂತೋಷ್‌ ಹೆಸರುಗಳು ಬಹಿರಂಗವಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು’ ಎಂದು ಒತ್ತಾಯಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು