ಉಚಿತ ವಿದ್ಯುತ್ ಕಾಂಗ್ರೆಸ್‌ನ ಸುಳ್ಳು ಡಂಗುರ: ಸುನಿಲ್ ಕುಮಾರ್

ಬೆಂಗಳೂರು: ‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೋಡಿ ಎಸ್ಕಾಂಗಳನ್ನು ನಷ್ಟಕ್ಕೆ ತಳ್ಳಿದ್ದೂ ಅಲ್ಲದೇ ಕರ್ನಾಟಕವನ್ನು ಕತ್ತಲೆಗೆ ದೂಡಿದರು. ಇವರು ಮಾಡಿದ ನಷ್ಟವನ್ನು ನಮ್ಮ ಸರ್ಕಾರ ಬಂದ ಮೇಲೆ ತುಂಬಿದೆವು’ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
‘ಈಗ ಮಹಾನ್ ಆರ್ಥಿಕ ತಜ್ಞರೊಬ್ಬರು ಈಗ 200 ಯುನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ಕೊಟ್ಟಿದ್ದಾರೆ. ಇದು ಜನಹಿತದ ಹೇಳಿಕೆಯಲ್ಲ’ ಎಂದು ಅವರು ತಿಳಿಸಿದ್ದಾರೆ.
‘ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ನೀಡದೇ ಸತಾಯಿಸಿದವರು; ಈಗ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಡಂಗುರ ಸಾರುತ್ತಿರುವುದು ಈ ಶತಮಾನದ ಅತಿ ದೊಡ್ಡ ಸುಳ್ಳಾಗಬಹುದು’ ಎಂದು ಅವರು ವ್ಯಂಗ್ಯವಾಡಿದ್ದಾರೆ.
‘ಉಚಿತ ವಿದ್ಯುತ್‌ನಿಂದ ಎಸ್ಕಾಂಗಳ ಮೇಲೆ ಇನ್ನಷ್ಟು ಹೊರೆಯಾಗುತ್ತದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹೊರಿಸಿದ್ದ ನಷ್ಟದ ಬಾಬ್ತು ₹9,000 ಕೋಟಿಯನ್ನು ನಮ್ಮ ಸರ್ಕಾರ ಬಂದ ಮೇಲೆ ಎಸ್ಕಾಂಗಳಿಗೆ ಕೊಟ್ಟೆವು. ಹೀಗೆ ಮಾಡಿ, ಕಾಂಗ್ರೆಸ್ ಆಡಳಿತ ವೈಫಲ್ಯವನ್ನು ಸರಿಪಡಿಸಿದ್ದೆವು. ಮತಕ್ಕಾಗಿ ಇಂಧನ ಇಲಾಖೆ ಮಾರಾಟ ಮಾಡಬೇಡಿ’ ಎಂದಿದ್ದಾರೆ.
‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೃಷಿ ಪಂಪ್‌ಸೆಟ್‌ಗಳಿಗೆ ಹೊಸ ಸಂಪರ್ಕ ನೀಡಿರಲಿಲ್ಲ. ಇದರಿಂದ ರೈತರು ಮತ್ತು ಕೃಷಿ ವಿಸ್ತರಣೆ ಚಟುವಟಿಕೆಗೆ ತೀವ್ರ ಸಮಸ್ಯೆ ಆಗಿತ್ತು. 2016–17 ರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ ಹಣವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡದೇ ಸತಾಯಿಸಿದರು. ಇದರಿಂದ ರೈತರು ಮಾತ್ರವಲ್ಲ ಉದ್ಯಮಗಳಿಗೂ ತೊಂದರೆ ಆಗಿತ್ತು. ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2016 ರಿಂದ ಇಲ್ಲಿಯವರೆಗಿನ ಹಿಂಬಾಕಿಯೂ ಸೇರಿ ₹18,000 ಕೋಟಿ ಸಬ್ಸಿಡಿ
ಹಣವನ್ನು ಎಸ್ಕಾಂಗಳಿಗೆ ನೀಡಿದ್ದೇವೆ’ ಎಂದು ಸುನಿಲ್ ಹೇಳಿದ್ದಾರೆ.
ಸುನಿಲ್ ಅಸಾಮರ್ಥ್ಯಕ್ಕೆ ತಕ್ಕಂತೆ ಇಂಧನ ಇಲಾಖೆ : ಸಿದ್ದರಾಮಯ್ಯ
‘ಸಚಿವ ಸುನಿಲ್‌ಕುಮಾರ್ ಅಸಾಮರ್ಥ್ಯಕ್ಕೆ ತಕ್ಕಂತೆ ಇಂಧನ ಇಲಾಖೆಯೂ ಕೆಲಸ ಮಾಡುತ್ತಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಇಲಾಖೆಯನ್ನು ಲಾಭದ ಹಳಿಗೆ ತಂದು ಜನರಿಗೆ 200 ಯುನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಪೂರೈಸಲಾಗುವುದು. ಉದ್ಘಾಟನಾ ಸಮಾರಂಭಕ್ಕೆ ಸುನಿಲ್ ಅವರನ್ನೂ ಆಹ್ವಾನಿಸುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಚಿವರ ಆರೋಪಕ್ಕೆ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂ) ನೀಡಿದ ಅನುದಾನ ₹ 6,000 ಕೋಟಿಯೋ? ಅಥವಾ ₹ 9,000 ಕೋಟಿಯೋ? ಯಾವುದು ನಿಜ ಲೆಕ್ಕ? ಯಾವುದು ಸುಳ್ಳು ಲೆಕ್ಕ? ಎಂಬುದನ್ನು ಸುನಿಲ್ ಕುಮಾರ್ ಹೇಳಬೇಕು’ ಎಂದು ಆಗ್ರಹಿಸಿದ್ದಾರೆ.
‘2013ರಲ್ಲಿ ನಮ್ಮ ಸರ್ಕಾರ ಅಧಿಕಾರ ಬರುವಾಗ ಹಿಂದಿನ ಸರ್ಕಾರ ಇಂಧನ ಇಲಾಖೆಯ ಮೇಲೆ ದೊಡ್ಡ ಮೊತ್ತದ ಸಾಲದ ಗಂಟನ್ನು ಹೊರಿಸಿ ಹೋಗಿತ್ತು. ಕುತ್ತಿಗೆವರೆಗೂ ಸಾಲದಲ್ಲಿ ಮುಳುಗಿದ್ದ ಎಸ್ಕಾಂಗಳನ್ನು ಸಾಲ ಮಾಡಿ ಬಾಕಿ ತೀರಿಸಿ ಮೇಲೆತ್ತಿದವರು ನಾವು’ ಎಂದಿದ್ದಾರೆ.
ರಾಜ್ಯದಲ್ಲಿ ಸೌರಶಕ್ತಿ, ಪವನ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ತಮ್ಮ ಸರ್ಕಾರ ಮಾಡಿದ ಕೆಲಸ ಕಾರಣ. ಈಗ ಬಿಜೆಪಿ ಸರ್ಕಾರ ವಿದ್ಯುತ್ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರೆ ಅದು ತಮ್ಮ ಸರ್ಕಾರದ ಶ್ರಮದ ಫಲದಿಂದ. ದಿನದ ಎರಡು– ಮೂರು ಗಂಟೆ ವಿದ್ಯುತ್ ಪೂರೈಸುವುದು ಕಷ್ಟವಾದ ಪರಿಸ್ಥಿತಿ ಇತ್ತು. ಐದು ವರ್ಷಗಳ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ 13,175 ಮೆಗಾ ವಾಟ್‌ನಷ್ಟು ಹೆಚ್ಚಳ ಸಾಧಿಸಿದ್ದು ತಮ್ಮ ಸರ್ಕಾರದ ಯೋಜನೆಗಳಿಂದ ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.