ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 50ರ ಮಿತಿ ಹೆಚ್ಚಾಗಲಿ: ಮೀಸಲಾತಿ ಮರುಪರಿಶೀಲನೆಗೆ ‘ಸುಪ್ರೀಂ’ಗೆ ಅರ್ಜಿ

Last Updated 22 ಮಾರ್ಚ್ 2021, 19:57 IST
ಅಕ್ಷರ ಗಾತ್ರ

ನವದೆಹಲಿ: ‘ಮೀಸಲಾತಿ ಪ್ರಮಾಣವು ಶೇ 50 ಮೀರಬಾರದು ಎಂದು ಒಂಬತ್ತು ಸದಸ್ಯರ ಪೀಠ 1992ರಲ್ಲಿ ನೀಡಿದ್ದ ತೀರ್ಪಿನ ಮರುಪರಿಶೀಲನೆ ಅಗತ್ಯವಿದೆ’ ಎಂದು ಕರ್ನಾಟಕ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಪೀಠ ಈ ತೀರ್ಪು ನೀಡಿತ್ತು.

ಸೋಮವಾರ ಬೆಂಗಳೂರಿನಲ್ಲಿ ನಡೆದ ರಾಜ್ಯ (ಕರ್ನಾಟಕ) ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಸಾಮಾಜಿಕ ಸ್ತರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ಮಿತಿಯಲ್ಲಿ, ವಸ್ತುಸ್ಥಿತಿಯನ್ನು ಪರಿಗಣಿಸಿ, ನ್ಯಾಯ ಒದಗಿಸುವ ಗುರಿ ಸಾಧಿಸಲಾಗದು ಎಂದು ಕರ್ನಾಟಕ ಸರ್ಕಾರ ಈ ಸಂಬಂಧಸಲ್ಲಿಸಿದ ಅರ್ಜಿಯಲ್ಲಿ ಪ್ರತಿಪಾದಿಸಿದೆ.

ಹಿಂದುಳಿದ ವರ್ಗಗಳ ಜನರಿಗೆ ಮೀಸಲಾತಿ ಕಲ್ಪಿಸುವಲ್ಲಿ ರಾಜ್ಯ ಸರ್ಕಾರದ ಅನುಭವದ ಪ್ರಕಾರ, ಮೀಸಲಾತಿ ಮಿತಿ ಶೇ 50ರಷ್ಟು ಮೀರುವುದು ಅಗತ್ಯ ಎಂದೂ ಪ್ರತಿಪಾದಿಸಿದೆ. ಈ ಸಂಬಂಧ ಲಿಖಿತ ಹೇಳಿಕೆಯನ್ನು ಸರ್ಕಾರದ ಪರವಾಗಿ ವಕೀಲ ಶುಭ್ರಾಂಶು ಪಧಿ ಅವರು ಕೋರ್ಟ್‌ಗೆ ಸಲ್ಲಿಸಿದರು.

ಮರಾಠಾ ಸಮುದಾಯಕ್ಕೆ ಮೀಸಲಾತಿ ಒದಗಿಸಲು ಮಹಾರಾಷ್ಟ್ರ ಸರ್ಕಾರ ರಚಿಸಿರುವ ಕಾಯ್ದೆಯ ಪರಿಶೀಲನೆ ವೇಳೆ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪಂಚಸದಸ್ಯರ ಪೀಠವು ರೂಪಿಸಿದ ಪ್ರಶ್ನಾವಳಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಈ ಪ್ರತಿಕ್ರಿಯೆಯನ್ನು ದಾಖಲಿಸಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯೂಎಸ್‌) ಶೇ 10ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನದ 103ನೇ ತಿದ್ದುಪಡಿಯನ್ನು ರಾಜ್ಯ ಸರ್ಕಾರ ಉಲ್ಲೇಖಿಸಿದ್ದು, ಸಂವಿಧಾನದಲ್ಲಿಯೇ ಮೀಸಲಾತಿ ಮಿತಿಯು ಶೇ 50ರಷ್ಟು ಮೀರಲು ಅವಕಾಶ ಕಲ್ಪಿಸಲಾಗಿದೆ ಎಂದಿದೆ. ಮಿತಿ ಶೇ 50 ಮೀರಬಹುದು ಎಂದು ಸುಪ್ರೀಂ ಕೋರ್ಟ್‌ ಕೂಡಾ ಸ್ಪಷ್ಟಪಡಿಸಿದೆ ಎಂದಿರುವ ಸರ್ಕಾರ, ಸಮರ್ಥನೆಯಾಗಿ ಎಸ್‌.ವಿ.ಜೋಷಿ ಪ್ರಕರಣವನ್ನು (2012) ಉಲ್ಲೇಖಿಸಿತು.

ಕಳೆದ ಹಲವು ದಶಕಗಳಲ್ಲಿ ಸಾಮಾಜಿಕ ಸ್ತರ, ವಸ್ತು ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಅಂಶದ ಆಧಾರದಲ್ಲಿಯೇ ಇಂದಿರಾ ಸಹಾನಿ ಪ್ರಕರಣದ ತೀರ್ಪನ್ನು ಮರುಪರಿಶೀಲಿಸಬೇಕು. ಹಿಂದುಳಿದ ವರ್ಗಗಳಿಗೆ ಶೇ 52ರವರೆಗೆ ಮೀಸಲಾತಿಗೆ ಅವಕಾಶ ಕಲ್ಪಿಸಿದ ಮಂಡಲ ಆಯೋಗವು, ಇದಕ್ಕೆ1931ರಲ್ಲಿ ಇದ್ದ ಜಾತಿವಾರು ಜನಸಂಖ್ಯೆಯನ್ನು ಆಧರಿಸಿತ್ತು. ಕಳೆದ 40 ವರ್ಷಗಳಲ್ಲಿ ಈ ವರ್ಗಗಳ ಜನಸಂಖ್ಯೆಯಲ್ಲಿಯೂ ಸಾಕಷ್ಟು ಬದಲಾಗಿದೆ ಎಂದಿದೆ.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಾಸನಬದ್ಧ ಅಧಿಕಾರವನ್ನು ನೀಡುವ ಸಂವಿಧಾನದ 102ನೇ ತಿದ್ದುಪಡಿಯು, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಳಿಗೆ ಮೀಸಲಾತಿ ಒದಗಿಸುವ ಉದ್ದೇಶದಿಂದ ಕಾಯ್ದೆ ರೂಪಿಸುವ ರಾಜ್ಯಗಳ ಅಧಿಕಾರಕ್ಕೆ ಧಕ್ಕೆ ಉಂಟುಮಾಡುವುದಿಲ್ಲ ಎಂದೂ ಸರ್ಕಾರ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT