ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕಾರ್ಮಿಕರ ಸೌಲಭ್ಯಕ್ಕೂ ಕಮಿಷನ್‌?

ಕಲ್ಯಾಣ ಮಂಡಳಿಯಲ್ಲಿ ಮಧ್ಯವರ್ತಿಗಳಿಗೆ ಮಣೆ, ಭ್ರಷ್ಟಾಚಾರದ ಆರೋಪ
Last Updated 24 ಸೆಪ್ಟೆಂಬರ್ 2022, 19:48 IST
ಅಕ್ಷರ ಗಾತ್ರ

ದಾವಣಗೆರೆ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಕಾರ್ಮಿಕರಿಗೆ ಹತ್ತುಹಲವು ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಇಂಥ ಯಾವುದೇ ಸೌಲಭ್ಯ ಪಡೆಯಲು ಲಂಚ ನೀಡದೇ ಫಲಾನುಭವಿಗಳಿಗೆ ವಿಧಿಯಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ.

ನೆರವು ಕೋರಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆಯ ಆಯಾ ಜಿಲ್ಲಾ ಕಚೇರಿಗಳು ಹಾಗೂ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಂಡ ಳಿಯ ಮೂಲಕ ಸೌಲಭ್ಯಗಳ ಹಂಚಿಕೆಯಾಗುತ್ತಿದೆ. ಕಾರ್ಮಿಕರ ನೋಂದಣಿ ಪ್ರಕ್ರಿಯೆಯಿಂದ ಹಿಡಿದು ಸೌಲಭ್ಯ ದೊರ ಕಿಸಿಕೊಡುವ ಹಂತದವರೆಗೂ ಮಧ್ಯವರ್ತಿಗಳ ಅಟಾಟೋಪ ಮಿತಿಮೀರಿದೆ. ಒಂದರ್ಥದಲ್ಲಿ ಕಾರ್ಮಿಕರ ಸುಲಿಗೆಯೇ ನಡೆಯುತ್ತಿದೆ. ಇಲಾಖೆಯ ಅಧಿಕಾರಿಗಳುಈ ಬಗ್ಗೆ ಗಮನ ಹರಿಸದೇ ಇರುವುದು ಮಧ್ಯವರ್ತಿಗಳಿಗೆ ‘ಕುಮ್ಮಕ್ಕು’ ನೀಡುತ್ತಿದೆ ಎನ್ನುವ ದೂರುಗಳಿವೆ.

ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯಿಂದ ವಾಹನ ಚಾಲನಾ ಪರವಾನಗಿ ಸೇರಿದಂತೆ ಅನೇಕ ಸೌಲಭ್ಯ ದೊರಕಿಸಿಕೊಡಲು ಮಧ್ಯವರ್ತಿಗಳು ಇರುವಂತೆಯೇ, ಕಾರ್ಮಿಕರಿಗೆ ಮಂಡಳಿಯ ಸೌಲಭ್ಯ ಕೊಡಿಸುವುದಕ್ಕೂ ಏಜೆಂಟರು (ದಲ್ಲಾಳಿಗಳು) ಹುಟ್ಟಿಕೊಂಡಿ ದ್ದಾರೆ. ಸೌಲಭ್ಯದ ಮಂಜೂರಾತಿ ಕೋರಿ ಏಜೆಂಟರ ಮೂಲಕ ಅರ್ಜಿ ಸಲ್ಲಿಸಿ, ಲಂಚದ ಬೇಡಿಕೆಯ ಹಣ ನೀಡಿದಲ್ಲಿ ಫಲಾನುಭವಿಯ ಖಾತೆಗೆ ಸೌಲಭ್ಯದ ಹಣ ನೇರವಾಗಿ ಸೇರುತ್ತದೆ. ಇಲ್ಲದಿದ್ದರೆ ಅರ್ಜಿಯನ್ನು ಯಾವುದಾದರೂ ಕಾರಣ ನೀಡಿ ತಿರಸ್ಕರಿಸಲಾಗುತ್ತದೆ ಎಂಬುದು ಕಾರ್ಮಿಕರ ಅಳಲು.

ಮಂಡಳಿಯಿಂದ ಯಾವುದೇ ಸೌಲಭ್ಯ ಪಡೆಯಲು ಸದಸ್ಯ ಕಾರ್ಮಿಕರು ಮಧ್ಯವರ್ತಿಗಳಿಗೆ ಶೇ 25ರಿಂದ 30ರಷ್ಟು ಕಮಿಷನ್‌ ನೀಡಬೇಕು. ಇಲ್ಲದಿದ್ದರೆ ಕೆಲಸ ಆಗುವುದಿಲ್ಲ ಎಂದು ಕಾರ್ಮಿಕರು, ಕಾರ್ಮಿಕ ಸಂಘಟನೆಗಳ ಮುಖ್ಯಸ್ಥರು ಹೇಳುತ್ತಾರೆ. ‘ಸೌಲಭ್ಯ ನೀಡುವ ನಿಟ್ಟಿನಲ್ಲಿ ಪಾರದರ್ಶಕತೆ ಇರಲಿ’ ಎಂಬ ಉದ್ದೇಶದಿಂದಲೇ ಮಂಡಳಿಯು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸುವ ಪದ್ಧತಿ ಜಾರಿಗೊಳಿಸಿದೆ. ಆದರೂ ಮಂಜೂ ರಾತಿಗಾಗಿ ಲಂಚವನ್ನು ನೀಡುವುದು ಕಡ್ಡಾಯ ಎಂಬ ದೂರುಗಳಿವೆ.

ರಾಜ್ಯದಲ್ಲಿ ಮಂಡಳಿಯೊಂದಿಗೆ ಸೌಲಭ್ಯಕ್ಕಾಗಿ ನೋಂದಣಿ ಮಾಡಿಸಿದ ಕಾರ್ಮಿಕರ ಸಂಖ್ಯೆಯೇ 37 ಲಕ್ಷದಷ್ಟಿದೆ. ಆದರೆ, ಕಟ್ಟಡ ಮತ್ತು ಇತರೆ ನಿರ್ಮಾಣ ವಲಯದ ಕಾರ್ಮಿಕಲ್ಲದವರೂ ನೋಂದಣಿ ಮಾಡಿಸಿದ್ದು, ಅಂಥವರ ಸಂಖ್ಯೆಯೇ 8 ಲಕ್ಷದಿಂದ 10 ಲಕ್ಷದಷ್ಟಿದೆ ಎಂಬ ಅಂದಾಜು ಇದೆ.

ನೋಂದಣಿಗೂ ಹಣ: ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತದೆ’ ಎಂಬ ಆಮಿಷ ಒಡ್ಡುವ ಏಜೆಂಟರು, ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳು ಹಾಗೂ ನಗರ ಪ್ರದೇಶಗಳ ಇತರೆ ವಲಯದ ಕಾರ್ಮಿಕರಿಂದ ₹ 2 ಸಾವಿರದಿಂದ ₹ 3 ಸಾವಿರ ಪಡೆದು ಕಲ್ಯಾಣ ಮಂಡಳಿಯ ನೋಂದಣಿ ಮಾಡಿಸಿ, ‘ಕಾರ್ಮಿಕ ಕಾರ್ಡ್‌’ ಮಾಡಿಸಿಕೊಡುತ್ತಾರೆ. ಈ ವಲಯದ ನಿಜವಾದ ಕಾರ್ಮಿಕರೂ ಇಷ್ಟೇ ಪ್ರಮಾಣದ ಹಣವನ್ನು ನೀಡಿಯೇ ನೋಂದಣಿ ಮಾಡಿಸಿ ಕಾರ್ಡ್‌ ಪಡೆದು ಕೊಳ್ಳುವುದು ಅನಿವಾರ್ಯವಾಗಿದೆ ಎನ್ನುವ ದೂರುಗಳಿವೆ.

ರಾಜ್ಯದಾದ್ಯಂತ ಏಜೆಂಟರ ದೊಡ್ಡಜಾಲವೇ ಕ್ರಿಯಾಶೀಲವಾಗಿದೆ. ಕಾರ್ಮಿಕರ, ಕಾರ್ಮಿಕರಲ್ಲದವರ ನೋಂದಣಿ ಕಾರ್ಯದಲ್ಲಿ ತೊಡಗಿರುವ ಅನೇಕ ಏಜೆಂಟರು, ಮಂಡಳಿ ನೀಡುವ ಮೂಲ (ಓರಿಜಿನಲ್‌) ‘ಕಾರ್ಮಿಕ ಕಾರ್ಡ್‌’ ಅನ್ನು ತಾವೇ ಇಟ್ಟುಕೊಂಡು, ಅದರ ಪ್ರತಿಯನ್ನು ಫಲಾನುಭವಿಗಳಿಗೆ ನೀಡುತ್ತಾರೆ.

ಸೌಲಭ್ಯ ಕೋರಿ ಅರ್ಜಿ ಹಾಕುವಾಗ ಮೂಲ ಕಾರ್ಡ್‌ನ ಫೋಟೊ ಪ್ರತಿಯನ್ನೇ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂಬ ನಿಯಮ ಇದ್ದು, ಕಾರ್ಮಿಕರು ತಮ್ಮ ಬಳಿಯೇ ಬರಲಿ ಎಂಬ ಹುನ್ನಾರ ಏಜೆಂಟರದ್ದು.

ಕಾರ್ಮಿಕರು ನಿಗದಿತ ಶುಲ್ಕ ಪಾವತಿಸಿ, ಅಗತ್ಯ ದಾಖಲೆಗಳೊಂದಿಗೆ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಈ ಸಂಬಂಧ ಯಾರಿಗೂ ಹೆಚ್ಚುವರಿ ಹಣ ನೀಡಬೇಕಿಲ್ಲ ಎಂಬ ಅರಿವು ಮೂಡಿಸುವ ಗೋಜಿಗೂ ಮಂಡಳಿ ಹೋಗಿಲ್ಲ. ಹಾಗಾಗಿಯೇ ಅನಕ್ಷರಸ್ಥ, ಗ್ರಾಮೀಣ ಹಿನ್ನೆಲೆಯ ಕಾರ್ಮಿಕರು ತಮ್ಮನ್ನು ಸಂಪರ್ಕಿಸುವ ಏಜೆಂಟರು ಕೇಳಿದಷ್ಟು ಹಣ ನೀಡಿ, ಸುಲಿಗೆಗೆ ಒಳಗಾಗುತ್ತಿದ್ದಾರೆ ಎಂಬ ದೂರುಗಳಿವೆ.

ಸೌಲಭ್ಯಗಳ ಬಗ್ಗೆ ಕಾರ್ಮಿಕರಿಗೆ ತಿಳಿವಳಿಕೆ ನೀಡಿ, ನೋಂದಣಿ ಮಾಡಿಸಿ‘ಕಾರ್ಮಿಕ ಸ್ನೇಹಿ’ ಎಂಬ ಹೆಸರು ಪಡೆಯುವ ಏಜೆಂಟರು, ನಂತರ ಕಾರ್ಮಿಕರಿಗೆ ದೊರೆಯುವ ಪ್ರತಿಯೊಂದೂ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವ ಹೊಣೆಯನ್ನೂ ತಾವೇ ವಹಿಸಿಕೊಳ್ಳುತ್ತಾರೆ. ‘ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ, ಮಂಡಳಿಯವರಿಗೆ ಹಣ ಕೊಡದಿದ್ದರೆ ಕೆಲಸ ಆಗುವುದಿಲ್ಲ. ಹಣ ಕೊಟ್ಟು ಕೆಲಸ ಮಾಡಿಸುತ್ತೇವೆ’ ಎಂದೆಲ್ಲ ಹೇಳಿ, ಕಮಿಷನ್‌ ಎಂಬಂತೆ ಶೇ 25ರಿಂದ 30ರಷ್ಟು ಹಣವನ್ನು ಲಂಚವಾಗಿ ಪಡೆಯುವ ದಂಧೆ ಅವ್ಯಾಹತ ವಾಗಿ ನಡೆದಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳೂ ಇದರಲ್ಲಿ ಶಾಮೀಲಾ ಗಿದ್ದು, ಕೈ ಬೆಚ್ಚಗಾಗಿಸಿದರೆ ಮಾತ್ರ ಮಂಜೂರಾತಿ ದೊರೆಯುತ್ತದೆ ಎನ್ನುವ ಆರೋಪಗಳಿವೆ.

‘ರಾಜ್ಯ ಸರ್ಕಾರದಲ್ಲಿ ಯಾವುದೇ ಕೆಲಸ ಆಗಬೇಕಿದ್ದರೂ ಶೇ 40ರಷ್ಟು ಕಮಿಷನ್‌ ನೀಡಬೇಕು. ಅಂಥದ್ದರಲ್ಲಿ ನಿಮ್ಮಿಂದ ಕೇವಲ ಶೇ 25ರಿಂದ 30ರಷ್ಟು ಕಮಿಷನ್‌ ಪಡೆಯಲಾಗಿದೆ. ಹಣ ನೀಡುವುದು ಅನಿವಾರ್ಯ’ ಎಂದು ಫಲಾನುಭವಿಗಳನ್ನು ನಂಬಿಸಲಾಗುತ್ತಿದೆ. ‘ಹೇಗಿದ್ದರೂ ನೆರವು ದೊರೆಯುತ್ತದೆ. ಸುಮ್ಮನೆ ಬಿಟ್ಟರೆ ಅದೂ ಸಿಗುವುದಿಲ್ಲ’ ಎಂದು ಯೋಚಿಸುವ ಫಲಾನುಭವಿಗಳು ವಿಧಿಯಿಲ್ಲದೇ ಮುಂಗಡವಾಗಿ ಹಣ ನೀಡುತ್ತಿದ್ದಾರೆ ಎನ್ನುವ ಮಾತುಗಳಿವೆ.

ಹುಬ್ಬಳ್ಳಿ, ಮಂಡ್ಯ, ಕೋಲಾರ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಕೆಲವು ಕಡೆ ಬಲಾಢ್ಯರಾಗಿ ಬೆಳೆದಿರುವ ಇಂಥ ಏಜೆಂಟರು, ಕಾರ್ಮಿಕರನ್ನೇ ಬೆದರಿಸುತ್ತ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ಸಂಪಾದಿಸಿದ್ದಾರೆ. ಕೆಲವರು ಹಿಂಬಾಲಕರನ್ನೂ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿಯುತ್ತಾರೆ ಎಂಬ ದೂರುಗಳಿವೆ.

ಕಾರ್ಮಿಕರು ಮಕ್ಕಳ ಮದುವೆಗೆ ನೀಡುವ ₹ 50,000 ನೆರವು ಪಡೆಯಬೇಕಿದ್ದರೆ ₹ 15,000 ಕೊಡಲೇಬೇಕು. ಅರ್ಜಿ ಹಾಕಿದ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ನೇರವಾಗಿ ವರ್ಗಾವಣೆ ಆಗುವುದರಿಂದ ಲಂಚದ ಹಣವನ್ನು ಮೊದಲೇ ಒಪ್ಪಿಸಬೇಕು. ಇಲ್ಲದಿದ್ದರೆ ಅವರ ಅರ್ಜಿ ಶೀಘ್ರ ಮಂಜೂರಾಗುವುದಿಲ್ಲ ಅಥವಾ ಮಂಜೂರಾತಿ ದೊರೆಯದೇ ತಿರಸ್ಕೃತವಾಗುತ್ತದೆ ಎಂಬ ಆರೋಪಗಳಿವೆ.

ಕಾರ್ಮಿಕರೇ ಅಲ್ಲದವರ ನೋಂದಣಿ ಮಾಡಿಸುವ ಏಜೆಂಟರು, ಸೌಲಭ್ಯ ಕೋರಿ ಅವರ ಹೆಸರಲ್ಲಿ ತಾವೇ ಅರ್ಜಿ ಹಾಕಿ, ‘₹50,000 ಜಮಾಮಾಡಿಸಿ ₹45,000 ತಾವೇ ಪಡೆದು, ಕೇವಲ ₹5,000 ವನ್ನಷ್ಟೇ ನೀಡಿರುವ ಪ್ರಕರಣ ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಎಂಜಿನಿಯರಿಂಗ್‌ ಕಾಲೇ ಜೊಂದರ 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪಾಲಕರ ಹೆಸರಲ್ಲಿ ಅರ್ಜಿ ಸಲ್ಲಿಸಿ ಹಣ ಗುಳುಂ ಮಾಡಲಾಗಿದೆ. ಈ ಸಂಬಂಧ ತನಿಖೆಗೆ ಆಗ್ರಹಿಸಿದರೂ ಪ್ರಯೋಜನವಾಗಿಲ್ಲ ಎಂದು ಕಾರ್ಮಿಕ ಸಂಘಟನೆಗಳು ದೂರಿವೆ.

‘ಸಾವಿನ ಪರಿಹಾರಕ್ಕೂ ಲಂಚ ನೀಡಬೇಕು’

‘ಕಾರ್ಮಿಕರಿಗೆ ಒಟ್ಟು 19 ಬಗೆಯ ಸೌಲಭ್ಯಗಳಿವೆ. ಪಿಂಚಣಿ, ಕುಟುಂಬ ಪಿಂಚಣಿ, ವೈದ್ಯಕೀಯ ಸಹಾಯ ಧನ, ಅಪಘಾತ ಪರಿಹಾರ, ಬಸ್‌ ಪಾಸ್‌, ಹೆರಿಗೆ ಸೌಲಭ್ಯ ನೀಡಲಾಗು ತ್ತದೆ. ಇಬ್ಬರು ಮಕ್ಕಳಿಗೆ ಕೆ.ಜಿ.ಯಿಂದ ಪಿ.ಜಿ ಮತ್ತು ಪಿಎಚ್‌.ಡಿ ವರೆಗಿನ ವಿದ್ಯಾಭ್ಯಾಸಕ್ಕೆ ವಾರ್ಷಿಕ ₹5,000ದಿಂದ ₹ 75,000 ವಿದ್ಯಾರ್ಥಿವೇತನ ನೀಡಲಾಗುತ್ತದೆ. ಕಾರ್ಮಿಕರು ಸಹಜ ಸಾವಿಗೆ ಈಡಾದರೂ ಅಂತ್ಯಕ್ರಿಯೆಗೆ ₹ 4,000 ಸೇರಿ ಅವಲಂಬಿತರಿಗೆ ₹ 75,000 ಪರಿಹಾರ ನೀಡಲಾಗುತ್ತದೆ. ಈ ಸೌಲಭ್ಯ ಕೊಡಿಸಲೂ ಲಂಚ ಪಡೆಯುವ ಏಜೆಂಟರು ಇದ್ದಾರೆ. ಇಂಥವರಿಗೆ ‘ಪಾಲು’ ಪಡೆಯುವ ಇಲಾಖೆಯ ಅಧಿಕಾರಿಗಳು ಬೆಂಬಲವಾಗಿ ನಿಂತಿದ್ದಾರೆ ಎಂದು ಕಾರ್ಮಿಕ ಮುಖಂಡ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ದೂರುತ್ತಾರೆ.

ಉಚಿತ ಕಿಟ್‌ ಅವ್ಯವಹಾರ

ಕೋವಿಡ್‌ ಸಂದರ್ಭ ನೋಂದಾಯಿತ ಕಾರ್ಮಿಕರಿಗೆ ಧಾನ್ಯ, ಸ್ಯಾನಿಟೈಸೇಷನ್‌, ಇಮ್ಯೂನಿಟಿ ಮತ್ತು ಆಯುರ್ವೇದದ ಬೂಸ್ಟರ್‌ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಆದರೆ, ಕಳಪೆ, ಕಡಿಮೆ ದರದ ಈ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪವಿದೆ.

ಕಾರ್ಮಿಕರಿಗೆ ನೆರವಾಗಲು ಮಂಡಳಿಯೇ ಕಿಟ್‌ ವಿತರಿಸಿದ್ದರೂ ಆಡಳಿತಾರೂಢ ಶಾಸಕರು, ಸಂಸದರು ತಾವೇ ನೀಡಿದ್ದಾಗಿ ಘೋಷಿಸಿಕೊಂಡು ಹೆಸರು ಪಡೆದ ನಿದರ್ಶನಗಳೂ ಇವೆ. ‘ಮಧ್ಯವರ್ತಿ’ಯಾಗಿ ಕೆಲಸ ಮಾಡುವಕೆಲವು ಸಂಘಗಳ ಮುಖಂಡರು ತಾವೇ ಹಂಚಿದ್ದಾಗಿ ಹೇಳಿಕೊಂಡಿದ್ದಾರೆ.

ಆದರೆ, ಧಾನ್ಯ ಒಳಗೊಂಡ ಕಿಟ್‌ ವಿತರಣೆಯಲ್ಲಿ ವಿಳಂಬವಾಗಿದ್ದರಿಂದ ಫಲಾನುಭವಿಗಳಿಗೆ ಪ್ರಯೋಜನ ಆಗಲಿಲ್ಲ. ಕಿಟ್‌ ಸಿದ್ಧಪಡಿಸಿ ಮೂರು ತಿಂಗಳ ನಂತರ ಕಾರ್ಮಿಕರ ಮನೆ ಬಾಗಿಲು ತಲುಪಿದ್ದರಿಂದ ಅಕ್ಕಿ, ಬೇಳೆಯನ್ನೆಲ್ಲ ಹುಳುಗಳು ತಿಂದಿದ್ದು, ಉಪಯೋಗಕ್ಕೆ ಬರಲಿಲ್ಲ. ಈಗಲೂ ಇಂಥ ಕಿಟ್‌ ವಿತರಿಸುವ ಕಾರ್ಯ ಮುಂದುವರಿದಿದ್ದು, ಕೂಡಲೇ ಅದನ್ನು ಸ್ಥಗಿತಗೊಳಿಸುವ ಅಗತ್ಯವಿದೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ದಾವಣಗೆರೆ ಜಿಲ್ಲಾ ಸಂಚಾಲಕ ಕೆ.ಎಚ್‌.ಆನಂದರಾಜು ಅಭಿಪ್ರಾಯಪಡುತ್ತಾರೆ.

ಇದೀಗ ಕೌಶಲಾಧಾರಿತ ನಿರ್ಮಾಣ ಕಾರ್ಮಿಕರಿಗೆ (ಬಾರ್‌ ಬೆಂಡರ್‌, ಎಲೆಕ್ಟ್ರೀಷಿಯನ್‌, ಕಾರ್ಪೆಂಟರ್‌ ಮತ್ತಿತರರು) ಉಚಿತ ಟೂಲ್‌ ಕಿಟ್‌ ನೀಡಲಾಗುತ್ತಿದೆ. ಪ್ರತಿ ಟೂಲ್‌ ಕಿಟ್‌ ₹ 20,000 ಲೆಕ್ಕ ನೀಡುತ್ತಿದೆ. ಮಂಡಳಿಯು ಚೀನಾ ಸಾಮಗ್ರಿ ಖರೀದಿಸುತ್ತಿದ್ದು, ಭಾರಿ ಅಕ್ರಮ ನಡೆದಿದೆ. ಕಾರ್ಮಿಕರಿಗೆ ಇಮ್ಯೂನಿಟಿ, ಬೂಸ್ಟರ್‌ ಕಿಟ್, ಬಾಣಂತಿಯರಿಗೆ ಆಯುರ್ವೇದ ಔಷಧ ಕಿಟ್‌ ಹಂಚಲಾಗುತ್ತಿದೆ. ಇದರ ಖರೀದಿಯಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಕಿಟ್‌ ನೀಡುವ ಬದಲಿಗೆ ಫಲಾನುಭವಿಯ ಖಾತೆಗೆ ನೇರವಾಗಿ ನೆರವಿನ ಹಣ ವರ್ಗಾಯಿಸಿದರೆ ಅನುಕೂಲವಾಗಲಿದೆ ಎಂಬುದು ಅವರ ಆಶಯ.

ಆಯಾ ಸ್ಥಳೀಯ ಸಂಸ್ಥೆಗಳು ಕಟ್ಟಡ ನಿರ್ಮಾಣ ಪರವಾನಗಿ ನೀಡುವ ಸಂದರ್ಭ ನೋಂದಾಯಿತ ಕಾರ್ಮಿಕರ ಕಲ್ಯಾಣಕ್ಕಾಗಿ ತೆರಿಗೆ ವಸೂಲಿ ಮಾಡಿ ಮಂಡಳಿಗೆ ನೀಡುತ್ತವೆ. ಈ ಮೊತ್ತವೇ ಅಂದಾಜು ₹ 3,700 ಕೋಟಿಯಷ್ಟು ಸಂಗ್ರಹವಾಗಿತ್ತು. 2007ರಲ್ಲಿ ಕಾರ್ಮಿಕರ ನೆರವಿಗಾಗಿಯೇ ವಿವಿಧ ಸೌಲಭ್ಯ ನೀಡುವ ಯೋಜನೆಗಳು ಆರಂಭವಾಗಿದ್ದು, ಈ ಹಣವನ್ನೇ ಬಳಸಿಕೊಳ್ಳಲಾಗುತ್ತಿದೆ. ಮಂಡಳಿಯಲ್ಲಿ ನೋಂದಣಿ ಮಾಡಿಸಿ 3 ವರ್ಷ ಪೂರ್ಣಗೊಳಿಸಿರುವ, 60 ವರ್ಷ ಮೀರಿದ ಕಾರ್ಮಿಕರಿಗೆ ಮಾಸಿಕ ₹ 2,000 ಪಿಂಚಣಿ ಯೋಜನೆಯೂ ಜಾರಿಯಲ್ಲಿದೆ. ಕಾರ್ಮಿಕ ಮೃತಪಟ್ಟರೆ ಪತ್ನಿಗೆ ಮಾಸಿಕ ₹ 1,000 ಪಿಂಚಣಿ ದೊರೆಯಲಿದೆ.

ಇದರ ಜೊತೆಗೆ 5 ವರ್ಷ ಪೂರೈಸಿರುವ ಕಾರ್ಮಿಕರಿಗೆ ವಸತಿ ಸೌಲಭ್ಯಕ್ಕಾಗಿ ಬಡ್ಡಿರಹಿತ ₹ 2 ಲಕ್ಷ ಸಾಲ ನೀಡುವ ಸೌಲಭ್ಯವೂ ಇದೆ. ಆದರೆ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಆಡಳಿತಾರೂಢ ಪಕ್ಷದ ಶಾಸಕರು ಮತ್ತು ಸಚಿವರ ಕಣ್ಣು ಮಂಡಳಿ ಹಣದ ಮೇಲೆ ಬಿದ್ದಿದ್ದು, ಕೊಳಚೆ ನಿರ್ಮೂಲನಾ ಮಂಡಳಿಯ ವಸತಿ ಯೋಜನೆ ಹಾಗೂ ರಾಜೀವ್‌ ಗಾಂಧಿ ವಸತಿ ಯೋಜನೆಯ ಫಲಾನುಭವಿಗಳಿಗೆ ಮಂಡಳಿಯಿಂದ ಹಣಕಾಸಿನ ನೆರವು ದೊರಕಿಸಿಕೊಡುವ ಹುನ್ನಾರ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಮಂಡಳಿಯ ಸದಸ್ಯತ್ವ ಪಡೆದುಕೊಳ್ಳುವಂತೆ ಆ ಯೋಜನೆಗಳ ಫಲಾನುಭವಿಗಳ ಮನವೊಲಿಸಲಾಗುತ್ತಿದ್ದು, ಅರ್ಹ ಫಲಾನುಭವಿ ಕಾರ್ಮಿಕರಿಗೆ ಅನ್ಯಾಯ ಎಸಗಲಾಗುತ್ತಿದೆ ಎಂದು ದೂರಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈಗಾಗಲೇ ₹ 76 ಕೋಟಿ ಅನುದಾನವನ್ನು ಮಂಡಳಿಯ ಖಾತೆಯಿಂದ ಈ ವಸತಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಕಾರ್ಮಿಕರಿಗೆ ದೊರೆಯಬೇಕಿರುವ ಈ ಸೌಲಭ್ಯವನ್ನು ಬೇರೆಯವರ ಕಲ್ಯಾಣಕ್ಕೆ ಬಳಸಲಾಗುತ್ತಿದೆ ಎಂಬುದು ಕಾರ್ಮಿಕ ಸಂಘಟನೆಗಳ ಆರೋಪ.

ಆರೋಗ್ಯ ತಪಾಸಣೆಯಲ್ಲೂ ಅಕ್ರಮ

ಗ್ರಾಮೀಣ ಮತ್ತು ನಗರ ಪ್ರದೇಶಗಳ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲೂ ಅಕ್ರಮ ನಡೆದಿರುವ ಆರೋಪಗಳಿವೆ.

ಉಚಿತ ಶಿಬಿರ ಹಮ್ಮಿಕೊಳ್ಳಲು ರಾಜ್ಯದಾದ್ಯಂತ ಕೆಲವು ಜನಪ್ರತಿನಿಧಿಗಳ ಒಡೆತನದ ಆಸ್ಪತ್ರೆಗಳಿಗೂ ಮಂಡಳಿ ಮೂಲಕ ಅನುಮತಿ ನೀಡಲಾಗಿದೆ. ಪ್ರತಿ ಕಾರ್ಮಿಕನ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗಳಿಗೆ ₹ 2,400 ಪಾವತಿಸಲಾಗುತ್ತದೆ. ಒಂದು ಶಿಬಿರದಲ್ಲಿ ಕನಿಷ್ಠ 30 ಕಾರ್ಮಿಕರನ್ನು ತಪಾಸಣೆಗೆ ಒಳಪಡಿಸಬೇಕೆಂಬ ನಿಯಮ ರೂಪಿಸಲಾಗಿದೆ. ಶಿಬಿರದಲ್ಲಿ ತಜ್ಞ ವೈದ್ಯರ ಬದಲಿಗೆ, ಶುಶ್ರೂಷಕಿಯರು, ಅನನುಭವಿ ವೈದ್ಯರು ಇರುತ್ತಾರೆ. ರಕ್ತದೊತ್ತಡ, ಮಧುಮೇಹ, ನಾಡಿಮಿಡಿತ, ಹೃದಯ ಬಡಿತದ ಸರಳ ತಪಾಸಣೆ ನಡೆಸಲಾಗುತ್ತದೆ.

ಶಿಬಿರದಲ್ಲಿ ಕಾರ್ಮಿಕರು ಭಾಗವಹಿಸಲಿ ಎಂಬ ಕಾರಣಕ್ಕೆ ಕೆಲವು ಆಸ್ಪತ್ರೆಗಳ ಸಿಬ್ಬಂದಿ ಉಚಿತ ಆಹಾರ ಕಿಟ್‌ ನೀಡುವ ಆಮಿಷವನ್ನೂ ಒಡ್ಡಿರುವ ಉದಾಹರಣೆಗಳಿವೆ. ಬೆಳಗಾವಿ ಜಿಲ್ಲೆಯ ವಿವಿಧೆಡೆ ₹ 300 ಮೊತ್ತದ ಆಹಾರ ಕಿಟ್ ನೀಡಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ತಲಾ ₹ 2,400 ಪಡೆಯಲು ₹ 300 ಕಳೆದುಕೊಳ್ಳುವ ‘ಔದಾರ್ಯ’ವನ್ನೂ ಆಸ್ಪತ್ರೆಯವರು ತೋರಿದ್ದಾರೆ ಎಂಬ ಆರೋಪ ಕಾರ್ಮಿಕ ಸಂಘಟನೆಗಳದ್ದಾಗಿದೆ.

‘ಬೋಗಸ್ ಗುರುತಿನ ಚೀಟಿ ಹೊರಹಾಕಲು ಕ್ರಮ’

ಬೆಂಗಳೂರು: ಕಟ್ಟಡ ಕಾರ್ಮಿಕರಲ್ಲದವರೂ ಬೋಗಸ್ ಗುರುತಿನ ಚೀಟಿ ಹೊಂದಿರುವುದನ್ನು ಪತ್ತೆ ಮಾಡಿ ಅಂತಹವರನ್ನು ಪಟ್ಟಿಯಿಂದ ಕೈಬಿಡಲು ಕಾರ್ಮಿಕ ಕಲ್ಯಾಣ ಮಂಡಳಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಗುರುಪ್ರಸಾದ್ ತಿಳಿಸಿದರು.

‘ಈ ಹಿಂದಿನ ಕಾಯ್ದೆ ಪ್ರಕಾರ ಒಮ್ಮೆ ಗುರುತಿನ ಚೀಟಿ ಪಡೆದರೆ ಅವರನ್ನು ಪಟ್ಟಿಯಿಂದ ಹೊರ ಹಾಕಲು ಅವಕಾಶ ಇರಲಿಲ್ಲ. ಆದ್ದರಿಂದ ಬೋಗಸ್ ಗುರುತಿನ ಚೀಟಿ ಹೊಂದಿದವರನ್ನು ಹೊರಹಾಕುವುದು ಕಷ್ಟವಾಗಿತ್ತು. 2022ರ ಆಗಸ್ಟ್‌ನಲ್ಲಿ ಕಾಯ್ದೆಗೆ ತಿದ್ದುಪಡಿಯಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಪರಿಹಾರವಾಗಲಿದೆ’ ಎಂದರು.

ಮಂಡಳಿಯ ಸೌಲಭ್ಯ ಪಡೆಯಲು ಇದ್ದ ಮಧ್ಯವರ್ತಿಗಳ ಹಾವಳಿ ತಡೆಗೂ ಕ್ರಮ ಕೈಗೊಳ್ಳಲಾಗಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ(ಡಿಬಿಟಿ) ಮಾಡಲಾಗುತ್ತಿದೆ. ವೈದ್ಯಕೀಯ ವೆಚ್ಚ ಮರುಪಾವತಿ ಕೋರಿ ಬರುವ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಬೇಕಾಗುತ್ತದೆ. ಆದರೆ, ಅಲ್ಲಿಯೂ ಮಧ್ಯವರ್ತಿಗಳು ಸುಳಿಯದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಮಿಕರಿಗೆ ನೀಡಿರುವ ಟೂಲ್ ಕಿಟ್ ಕಳಪೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ‘ಹಣ ನೀಡಿದರೆ ಕಾರ್ಮಿಕರು ಟೂಲ್ ಕಿಟ್ ಖರೀದಿ ಮಾಡಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಕಾರ್ಮಿಕ ಸಂಘಟನೆಗಳ ಅಭಿಪ್ರಾಯದಂತೆ ಟೂಲ್ ಕಿಟ್ ನೀಡಲಾಗಿದೆ. ಸರ್ಕಾರದ ಏಜೆನ್ಸಿಗಳ ಮೂಲಕವೇ ಗುಣಮಟ್ಟದ ಕಿಟ್ ವಿತರಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT