ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಧಾರಣೆಗೆ ನಿಷೇಧ: ಹೈಕೋರ್ಟ್ ಮಧ್ಯಂತರ ಆದೇಶ

ಶಾಲೆ ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತದ ವಸ್ತ್ರ ಧಾರಣೆಗೆ ನಿಷೇಧ
Last Updated 11 ಫೆಬ್ರುವರಿ 2022, 8:18 IST
ಅಕ್ಷರ ಗಾತ್ರ

ಬೆಂಗಳೂರು: "ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ದಾಖಲಾಗಿರುವ ರಿಟ್ ಅರ್ಜಿಗಳ ವಿಚಾರಣೆ ಇತ್ಯರ್ಥ ಆಗುವತನಕ ವಿದ್ಯಾರ್ಥಿಗಳು ತರಗತಿಗಳಿಗೆ ಕೇಸರಿ ಶಾಲು, ಹಿಜಾಬ್ ಧರಿಸಿ ಪ್ರವೇಶಿಸುವಂತಿಲ್ಲ ಹಾಗೂ ಧಾರ್ಮಿಕ ಸಂಕೇತದ ಬಾವುಟಗಳನ್ನು ಪ್ರದರ್ಶನ ಮಾಡುವಂತಿಲ್ಲ" ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕೆಲ ಶಾಲೆ-ಕಾಲೇಜುಗಳ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ದಾಖಲಿಸಲಾಗಿರುವ ಎಲ್ಲ ರಿಟ್ ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಋತರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ಮಹಿಳಾ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಮೂವರು ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ಶುಕ್ರವಾರ ಈ ಮಧ್ಯಂತರ ಆದೇಶ ಬಿಡುಗಡೆ ಮಾಡಿದೆ.

"ಭಾರತ ಬಹುತ್ವದ ಜಾತ್ಯತೀತ ದೇಶ. ಕೇವಲ ಒಂದು ಧರ್ಮಕ್ಕೆ ಮಾತ್ರವೇ ಸೀಮಿತವಾದ ಧರ್ಮದ ಆಧಾರದಲ್ಲಿ ಗುರುತಿಸುವಂತಹ ದೇಶ ಇದಲ್ಲ. ಬಹುಭಾಷೆ, ಬಹು ಸಂಸೃತಿ, ಬಹು ಧರ್ಮಗಳಿಂದ ಕೂಡಿರುವ ದೇಶವಿದು. ಇಲ್ಲಿ ಪ್ರತಿಯೊಬ್ಬ ನಾಗರಿಕನೂ ತನ್ನಿಚ್ಛೆ ಮತ್ತು ವೈಯಕ್ತಿಕ ನಂಬಿಕೆಗಳಿಗೆ ಅನುಗುಣವಾಗಿ ತನ್ನ ಧಾರ್ಮಿಕ ಆಚರಣೆಯ ಹಕ್ಕು ಮತ್ತು ಸ್ವಾತಂತ್ರ್ಯ ಹೊಂದಿರುತ್ತಾನೆ. ಆದಾಗ್ಯೂ, ಇವೆಲ್ಲವೂ ಸಂವಿಧಾನದ ಚೌಕಟ್ಟಿನಲ್ಲಿರುವ ನಿರ್ಬಂಧಗಳಿಗೆ ಒಳಪಟ್ಟಿರಬೇಕಾಗುತ್ತದೆ ಎಂಬುದನ್ನು ಮರೆಯಬಾರದು" ಎಂದು ನ್ಯಾಯಪೀಠ ಎಚ್ಚರಿಸಿದೆ.

"ಶಾಲಾ-ಕಾಲೇಜುಗಳ ತರಗತಿಯೊಳಗೂ ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಆಚರಣೆಯ ಭಾಗ ಎಂಬ ಪ್ರತಿಪಾದನೆಯು, ಸಂವಿಧಾನದ ಆಶಯಕ್ಕೆ ಒಳಪಡುತ್ತದೆಯೇ ಇಲ್ಲವೇ ಎಂಬುದನ್ನು ಆಳವಾಗಿ ಪರೀಕ್ಷಿಸಬೇಕಿದೆ. ಆದ್ದರಿಂದ, ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು, ಧರ್ಮ, ಸಂಸ್ಕ್ರತಿ ಹೆಸರಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಗೆ ಹದೆಗೆಡುವಂತಹ ಕಾರ್ಯಕ್ಕೆ ಯಾರೊಬ್ಬರೂ ಮುಂದಾಗಬಾರದು" ಎಂದು ನ್ಯಾಯಪೀಠ ತಾಕೀತು ಮಾಡಿದೆ.

"ಈ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಿ ತೀರ್ಪು ನೀಡಲಾಗುವುದು. ನ್ಯಾಯಪೀಠವು ರಾಜ್ಯದಲ್ಲಿ ಶಾಂತಿ ಸಹಬಾಳ್ವೆಯನ್ನು ಅಪೇಕ್ಷಿಸುತ್ತದೆ. ಹಾಗಾಗಿ, ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಪಾಠ ಪ್ರವಚನ ಆರಂಭವಾಗಲಿ. ಮುಚ್ಚಿರುವ ಶಾಲಾ ಕಾಲೇಜುಗಳು ಪುನರಾರಂಭವಾಗಲಿ. ವಿದ್ಯಾರ್ಥಿಗಳು ಶಾಂತಿಯಿಂದ ತರಗತಿಗಳಿಗೆ ಹಿಂದಿರುಗಬೇಕು" ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

"ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಪ್ರಕರಣ ಹೈಕೋರ್ಟ್ ಮೆಟ್ಟಲೇರಿರುವ ಈ ಸಂದರ್ಭದಲ್ಲಿ ಶಾಲೆ ಕಾಲೇಜುಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದು ನಮಗೆ ಬಹಳ ನೋವುಂಟು ಮಾಡಿದೆ" ಎಂದೂ ನ್ಯಾಯಪೀಠ ಅಸಮಾಧಾನ ಹೊರಹಾಕಿದೆ‌.

"ಯಾವ ಕಾಲೇಜು ಅಭಿವೃದ್ಧಿ ಸಮಿತಿಗಳು (ಸಿಡಿಸಿ) ವಸ್ರ್ತಸಂಹಿತೆ ನಿಗದಿಪಡಿಸಿವೆಯೋ ಮತ್ತು ಯಾವ ಶೈಕ್ಷಣಿಕ ಸಂಸ್ಥೆಗಳು ಸಮವಸ್ತ್ರ ನೀತಿಯನ್ನು ಜಾರಿ ಮಾಡಿವೆಯೊ ಅವುಗಳಿಗೆ ಮಾತ್ರವೇ ಈ ಆದೇಶ ಸೀಮಿತವಾಗಿದೆ" ಎಂದೂ ನ್ಯಾಯಪೀಠ ತನ್ನ ಏಳು ಪುಟಗಳ ಕ್ಲುಪ್ತ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಮುಂದಿನ ವಿಚಾರಣೆಯನ್ನು ಇದೇ 14ಕ್ಕೆ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT