ಗುರುವಾರ , ಆಗಸ್ಟ್ 11, 2022
27 °C
ಸಭಾಪತಿ ಸಂಘರ್ಷ ತಾರಕ * ಸಭಾಪತಿಗೆ ಬಿಜೆಪಿ ದಿಗ್ಬಂಧನ

ಮೇಲ್ಪಂಕ್ತಿ ಮುರಿದ ಮೇಲ್ಮನೆ: ಉಪಸಭಾಪತಿ ಎಳೆದೊಯ್ದ ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಡೆ–ನುಡಿಯಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟ ಹೆಗ್ಗಳಿಕೆ ಹೊಂದಿದ್ದ ಕರ್ನಾಟಕದ ‘ಹಿರಿಯರ ಮನೆ’ ವಿಧಾನಪರಿಷತ್ತಿನಲ್ಲಿ ಮಂಗಳವಾರ ನಡೆದ ಎಳೆದಾಟ, ದಿಗ್ಬಂಧನ, ಬೈಗುಳದ ವಾಕ್ಸಮರ ನಾಡಿನ ವಿಧಾನಮಂಡಲದ ಭವ್ಯ ಇತಿಹಾಸಕ್ಕೆ ಕಪ್ಪು ಚುಕ್ಕೆ ಇಟ್ಟಿದೆ. ಇಲ್ಲಿಯವರೆಗೆ ಕಾಪಾಡಿಕೊಂಡು ಬಂದಿದ್ದ ಮೇಲ್ಮನೆಯ ಮೇಲ್ಪಂಕ್ತಿ ಮುರಿದುಬಿದ್ದಿದೆ.

ಕರ್ನಾಟಕದ ಸಭ್ಯತೆಯ ಮತ್ತು ಸುಸಂಸ್ಕೃತ ರಾಜಕೀಯ ನಡವಳಿಕೆಗಳ ಪರಂಪರೆಯನ್ನು ಕಾಂಗ್ರೆಸ್‌, ಬಿಜೆಪಿ ಸದಸ್ಯರು ತಮ್ಮ ವರ್ತನೆಯ ಮೂಲಕ ಬೀದಿಪಾಲು ಮಾಡಿದ್ದಕ್ಕೆ ಸದನದ ನಡಾವಳಿ ಸಾಕ್ಷಿಯಾಯಿತು.

ಪಾಂಡಿತ್ಯ, ವಿದ್ವತ್ತು, ವಿಚಾರವಂತಿಕೆಯಿಂದ ವಿಜೃಂಭಿಸಬೇಕಿದ್ದ ಹಿರಿಯರ ಮನೆ ಬೆಳಿಗ್ಗೆ ಅಕ್ಷರಶಃ ಕುಸ್ತಿಯ ಅಖಾಡವಾಯಿತು. ಸಭಾಪತಿ ಒಳಗೆ ಬರದಂತೆ ಬಿಜೆಪಿ ಸದಸ್ಯರು ತಡೆದರು. ಅದಕ್ಕೆ ತಿರುಗೇಟು ಎಂಬಂತೆ, ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಎಸ್‌. ಎಲ್‌. ಧರ್ಮೇಗೌಡ ಅವರನ್ನು ಬಲವಂತವಾಗಿ ಎಬ್ಬಿಸಿದ ಕಾಂಗ್ರೆಸ್‌ ಸದಸ್ಯರು ಕೆಳಗೆ ದೂಡಿದರು. ಆರೋಪ–ಪ್ರತ್ಯಾರೋಪಗಳು, ಕೈ–ಕೈ ಮಿಲಾಯಿಸುವಿಕೆಗಳೂ ನಡೆದುಹೋದವು.

ಪ್ರಜಾತಂತ್ರದಲ್ಲಿ ಪವಿತ್ರ ಎಂದು ಭಾವಿಸುವ ಸಭಾಪತಿ ಪೀಠಕ್ಕೆ ಕನಿಷ್ಠ ಗೌರವವನ್ನೂ ತೋರದ ಕಾಂಗ್ರೆಸ್‌, ಬಿಜೆಪಿ ಸದಸ್ಯರು ಪೀಠವನ್ನು ಸುತ್ತುವರೆದು ಬಾಯಿಗೆ ಬಂದಂತೆ ಕಿರುಚಾಡುತ್ತಾ ಮನಬಂದಂತೆ ವರ್ತಿಸಿದರು. ಪೀಠದ ಮುಂದಿದ್ದ ಫೈಬರ್‌ ಗಾಜಿನ ಪರದೆಯನ್ನು ಕಿತ್ತೆಸೆದರೆ, ಪೀಠದ ಮೆತ್ತೆಯನ್ನು ಎತ್ತಿ ಕುಕ್ಕಿ ಕೇಕೆ ಹಾಕಿದರು. ಎರಡೂ ಕಡೆಯ ಸದಸ್ಯರು ಪೀಠವನ್ನು ಹಿಡಿದು ಅಲುಗಾಡಿಸಿದರು. ಇನ್ನು ಕೆಲವರು ‘ಗುಪ್ತನಿಧಿ’ ಕಾಯುವವರಂತೆ ಸುತ್ತುವರಿದು ಗಟ್ಟಿಯಾಗಿ ಹಿಡಿದು ನಿಂತುಕೊಂಡೇ ಇದ್ದರು.

ತಲ್ಲಣ ಸೃಷ್ಟಿಸಿದ ಆ 20 ನಿಮಿಷಗಳು ಮೇಲ್ಮನೆಯ ಘನತೆ ಮತ್ತು ಪ್ರತಿಷ್ಠೆಯನ್ನು ನುಚ್ಚುನೂರು ಮಾಡಿತು.

ಆಗಿದ್ದೇನು?: ಒಂದು ದಿನದ ವಿಶೇಷ ಅಧಿವೇಶನವನ್ನು ಮಂಗಳವಾರ ಕರೆಯಲಾಗಿತ್ತು. ಕಲಾಪದ ಕಾರ್ಯಸೂಚಿಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಸೇರಿದಂತೆ ಹಲವು ವಿಷಯಗಳು ಇದ್ದವು. ಆದರೆ, ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ನಿರ್ಣಯದ ವಿಷಯ ಇರಲಿಲ್ಲ.

ಕಳೆದ ವಾರದ ಅಧಿವೇಶನಕ್ಕೂ 14 ದಿನಗಳಿಗೂ ಮುಂಚೆ ಬಿಜೆಪಿ ನೋಟಿಸ್‌ ನೀಡಿತ್ತು. ಹೀಗಾಗಿ ಅವರನ್ನು ಸಭಾಪತಿ ಸ್ಥಾನದ ಮೇಲೆ ಕೂರಲು ಬಿಡದೇ, ಉಪಸಭಾಪತಿಯವರ ಮೂಲಕವೇ ಸದನ ನಡೆಸಬೇಕು ಎಂದು ಬಿಜೆಪಿಯ ‘ರಹಸ್ಯ’ ಕಾರ್ಯತಂತ್ರ ಹೆಣೆದಿತ್ತು.

ಬೆಳಿಗ್ಗೆ ಸುಮಾರು 11.10 ರ ವೇಳೆಗೆ ಕಲಾಪ ಆರಂಭಿಸಲು ಗಂಟೆ ಮೊಳಗಿಸಲಾಯಿತು. ಈ ವೇಳೆಗಾಗಲೇ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಉಪಸಭಾಪತಿ ಮೂಲಕವೇ ಕಲಾಪ ನಡೆಸುವ ತೀರ್ಮಾನಕ್ಕೆ ಬಂದಿದ್ದರು. ಗಂಟೆ ಮೊಳಗುತ್ತಿದ್ದಾಗಲೇ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಧರ್ಮೇಗೌಡ ಅವರನ್ನು ಸಭಾಪತಿ ಪೀಠದ ಮೇಲೆ ಕೂರಿಸಿದರು. ಇನ್ನೊಂದು ಕಡೆ, ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಬಂದು ಕೂರುವುದನ್ನು ತಡೆಯಲು ಬಿಜೆಪಿಯ ಎಂ.ಕೆ. ಪ್ರಾಣೇಶ್‌, ವೈ.ಎ.ನಾರಾಯಣಸ್ವಾಮಿ ಮತ್ತು ಇತರರು ಬಾಗಿಲು ಹಾಕಿದರು.

ಸಭಾಪತಿ ಪೀಠಕ್ಕೆ ಮುತ್ತಿಗೆ: ಸಭಾಪತಿಗೆ ನಿರ್ಬಂಧ ಹಾಕಿದ್ದನ್ನು ಆಕ್ಷೇಪಿಸಿದ ಕಾಂಗ್ರೆಸ್‌ ಸದಸ್ಯರು ಸಭಾಪತಿ ಪೀಠಕ್ಕೆ ಮುತ್ತಿಗೆ ಹಾಕಿದರು. ಇನ್ನೊಂದು ಕಡೆಯಿಂದ ಬಿಜೆಪಿ ಸದಸ್ಯರೂ ಪೀಠದತ್ತ ಧಾವಿಸಿದರು. ಇಬ್ಬರ ಮುತ್ತಿಗೆಯಿಂದ ಉಪಸಭಾಪತಿ ಕಂಗಾಲಾದರು.

ವಿರೋಧಪಕ್ಷದ ಸಚೇತಕ ಹಾಗೂ ಕಾಂಗ್ರೆಸ್‌ನ ನಾರಾಯಣಸ್ವಾಮಿ, ನಜೀರ್‌ ಅಹಮದ್‌ ಮತ್ತು ಶ್ರೀನಿವಾಸಮಾನೆ ಅವರು ಧರ್ಮೇಗೌಡ ಅವರ ಕೈ ಹಿಡಿದು ಬಲವಂತವಾಗಿ ಎಬ್ಬಿಸಿದರು. ಇನ್ನೊಂದು ಕಡೆಯಿಂದ ಬಿಜೆಪಿಯ ಪುಟ್ಟಣ್ಣ, ವೈ.ಎ.ನಾರಾಯಣಸ್ವಾಮಿ ತಡೆಯಲು ಮುಂದಾದರು. ಈ ಜಗ್ಗಾಟದಲ್ಲಿ ಕಾಂಗ್ರೆಸ್‌ನ ನಾರಾಯಣಸ್ವಾಮಿ ಮತ್ತು ನಜೀರ್‌ ಅಹಮದ್‌ ಅವರ ಬಲವೇ ಹೆಚ್ಚಾಯಿತು. ಉಪಸಭಾಪತಿಯವರ ಕತ್ತು, ಬೆನ್ನು ಮತ್ತು ತೋಳುಗಳನ್ನು ಹಿಡಿದು ಅನಾಮತ್ತಾಗಿ ಕೆಳಗೆ ದೂಡಲಾಯಿತು.

ಆಗ ಧರ್ಮೇಗೌಡ ಕೆಳಗಿದ್ದ ಸದಸ್ಯರ ಮೇಲೆ ಬಿದ್ದರು. ಈ ಹಂತದಲ್ಲಿ ಸದಸ್ಯರೊಬ್ಬರು ನೆಲಕ್ಕುರುಳಿದರು.

ತಕ್ಷಣವೇ ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ ಅವರನ್ನು ಸಭಾಪತಿ ಪೀಠದಲ್ಲಿ ಕೂರಿಸಲಾಯಿತು. ಅಲ್ಲದೆ, ಬಿಜೆಪಿ ಸದಸ್ಯರನ್ನು ಹಿಮ್ಮೆಟ್ಟಿಸಿದ ನಾರಾಯಣಸ್ವಾಮಿ ಮತ್ತು ನಜೀರ್‌ ಅಹಮದ್‌ ಪೀಠದ ಎಡ ಮತ್ತು ಬಲ ಭಾಗದಲ್ಲಿ ನಿಂತು  ಬೇರೆ ಯಾರೂ ಪೀಠದ ಮೇಲೆ ಕೂರದಂತೆ ತಡೆಗೋಡೆಯಾದರು. ಅವರ ಸುತ್ತಲೂ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ತಳ್ಳಾಟ ನೂಕಾಟ ನಡೆಸಿದರು.

ಇನ್ನೊಂದೆಡೆ ಸಭಾಪತಿ ಒಳಗೆ ಬಾರದಂತೆ ಬಾಗಿಲು ಹಾಕಿದ್ದನ್ನು ಕಾಂಗ್ರೆಸ್‌ ಸದಸ್ಯರು ಕಾಲಿನಿಂದ ಒದ್ದು ದೂಡಿದರು. ಮಾರ್ಷಲ್‌ಗಳು ಕೂಡ ಬಾಗಿಲು ತೆಗೆಯುವಲ್ಲಿ ಯಶಸ್ವಿಯಾದರು. ಈ ಹಂತದಲ್ಲಿ ಬಿಜೆಪಿ ಎನ್‌.ರವಿಕುಮಾರ್‌ ಮತ್ತು ಕಾಂಗ್ರೆಸ್‌ನ ಹರೀಶ್‌ ಕುಮಾರ್‌ ಪರಸ್ಪರ ಕೈ–ಕೈ ಮಿಲಾಯಿಸಿದರು.

‘ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯದ ನೋಟಿಸ್‌ ಇರುವುದರಿಂದ ಅವರು ಬಂದು ಕೂರುವಂತಿಲ್ಲ’ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಕಾಂಗ್ರೆಸ್‌ ಸದಸ್ಯರು ‘ಡೌನ್‌ ಡೌನ್‌ ಬಿಜೆಪಿ’ ಎಂಬ ಘೋಷಣೆಗಳನ್ನು ಕೂಗಿದರು. ಬಿಜೆಪಿ ಸದಸ್ಯರೂ ಇದಕ್ಕೆ ಪ್ರತಿಯಾಗಿ ‘ಧಿಕ್ಕಾರ’ ಮೊಳಗಿಸಿದರು.

ಸಭಾಪತಿ ಪೀಠದಲ್ಲಿ ಕುಳಿತ್ತಿದ್ದ ಚಂದ್ರಶೇಖರ ಪಾಟೀಲ ಅವರನ್ನು ತೆರವುಗೊಳಿಸುವ ಪ್ರಯತ್ನ ಮಾರ್ಷಲ್‌ಗಳಿಂದಲೂ ಆಗಲಿಲ್ಲ. ಆಗ ಸಭಾಪತಿ ಪೀಠದ ಮುಂದಿನ ಗಾಜಿನ ತಡೆಯನ್ನು ಸದಸ್ಯರೊಬ್ಬರು ಕಿತ್ತರು. ಈ ಮಧ್ಯೆ ಮತ್ತೊಬ್ಬ ಸದಸ್ಯರು ಸಭಾಪತಿ ಆಸನದ ಮೈಕ್‌ ಕಿತ್ತರು. ಪೀಠದ ಮೆತ್ತೆಯನ್ನು ಎಳೆದರು. ಕಾಗದ ಪತ್ರಗಳನ್ನು ಹರಿದು ಮೇಲಕ್ಕೆ ತೂರಿದರು.

ಇದಾದ ಕೆಲವೇ ಕ್ಷಣದಲ್ಲಿ ಸದನಕ್ಕೆ ಬಂದ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಆಸನದಲ್ಲಿ ಕೂರದೇ ನಿಂತುಕೊಂಡೇ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಹೇಳಿ ನಿರ್ಗಮಿಸಿದರು. ‘ಅವಿಶ್ವಾಸ ಎದುರಿಸುತ್ತಿರುವ ನೀವು ಇಲ್ಲಿಗೆ ಬರುವ ಹಾಗಿಲ್ಲ’ ಎಂದು ಬಿಜೆಪಿ ಸದಸ್ಯರು ಏರಿದ ಧ್ವನಿಯಲ್ಲಿ ಹೇಳಿದರು.

ಸಭಾಪತಿ ಅಲ್ಲಿಂದ ತೆರಳುತ್ತಿದ್ದಂತೆ ವಿರೋಧ ಪಕ್ಷದ ಸಚೇತಕ ನಾರಾಯಣಸ್ವಾಮಿ ಪೀಠದ ಮೇಲೆ ಕುಳಿತರು. ಮಾರ್ಷಲ್‌ಗಳು ತಕ್ಷಣವೇ ಅವರನ್ನು ಎಬ್ಬಿಸಿದರು. ಅದಾದ ಬಹಳ ಹೊತ್ತಿನವರೆಗೆ ಬಿಜೆಪಿ ಸದಸ್ಯರು ಪೀಠದ ಬಳಿಯೇ ನಿಂತಿದ್ದರು. ಪರಿಷತ್ತಿನ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ ಅವರು ಈ ಘಟನೆಗಳಿಂದ ಭಾವೋದ್ವೇಗಕ್ಕೆ ಒಳಗಾಗಿದ್ದು ಕಂಡು ಬಂದಿತು.

ಒಂದಾದ ಬಿಜೆಪಿ–ಜೆಡಿಎಸ್‌: ಸಭಾಪತಿಗೆ ‘ಸಮನ್ಸ್‌’?

ವಿಧಾನಪರಿಷತ್ತಿನಲ್ಲಿ ಭೂಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದ ಜೆಡಿಎಸ್‌, ಈಗ ಬಿಜೆಪಿಗೆ ಅಧಿಕೃತವಾಗಿ ಬೆಂಬಲ ಘೋಷಿಸಿದೆ.

ಪರಿಷತ್ತಿನಲ್ಲಿ ನಡೆದ ಅಹಿತಕರ ಘಟನೆಗಳ ಬಳಿಕ ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರಿದ್ದ ನಿಯೋಗ, ವಿಶ್ವಾಸ ಕಳೆದುಕೊಂಡಿರುವ ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರನ್ನು ಪದಚ್ಯುತಿಗೊಳಿಸುವಂತೆ ರಾಜ್ಯಪಾಲರಿಗೆ ಜಂಟಿ ಮನವಿ ಸಲ್ಲಿಸಿದೆ.

ವಿಧಾನಪರಿಷತ್ತಿನಲ್ಲಿ ನಡೆದ ಘಟನೆಗಳ ಕುರಿತು ರಾಜ್ಯಪಾಲ ವಜುಭಾಯಿ ವಾಲಾ ಅವರು ಸಭಾಪತಿ ಪ್ರತಾಪಚಂದ್ರಶೆಟ್ಟಿ ಅವರನ್ನು ಕರೆಸಿ ವಿವರಣೆ ಕೇಳಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ವಿಧಾನಪರಿಷತ್‌ ಕಲಾಪ ಆರಂಭವಾಗುವುದಕ್ಕೂ ಮೊದಲೇ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಅವಿಶ್ವಾಸ ನಿರ್ಣಯದ ಕುರಿತು ಯಾವ ಹೆಜ್ಜೆ ಇಡಬೇಕು ಎಂಬ ಬಗ್ಗೆ ಪರಸ್ಪರ ಮಾತುಕತೆ ನಡೆಸಿದ್ದರು. ಉಪಸಭಾಪತಿ ಧರ್ಮೇಗೌಡ ಅವರನ್ನು ಪೀಠದಿಂದ ಬಲವಂತವಾಗಿ ಎಬ್ಬಿಸಿ ದೂಡಿದ್ದು ಜೆಡಿಎಸ್‌ ಅನ್ನು ಕೆರಳಿಸಿದೆ ಎಂದೂ ಮೂಲಗಳು ತಿಳಿಸಿವೆ.

ರಾಜ್ಯಪಾಲರನ್ನು ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ, ‘ಸಭಾಪತಿಯವರ ಮೇಲೆ ವಿಶ್ವಾಸವಿಲ್ಲ. ಸಭಾಪತಿಗೆ ಬಹುಮತವೂ ಇಲ್ಲ. ಆದ್ದರಿಂದ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಕಾನೂನು ಸಲಹೆಗಾರರ ಸಲಹೆ ಕೇಳಿ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ’ ಎಂದರು.

‘ಇವತ್ತಿನ ಅಧಿವೇಶನದಲ್ಲಿ ಸರ್ಕಾರದ ಸೂಚನೆಯಂತೆ ಉಪಸಭಾಪತಿ ಧರ್ಮೇಗೌಡ ಪೀಠದಲ್ಲಿ ಕುಳಿತಿದ್ದರು. ಹಿಂದಿನಿಂದಲೂ ಬಿಜೆಪಿ ‘ಬಿ’ ಟೀಮ್‌ ಎಂದು ಕಾಂಗ್ರೆಸ್‌ ಗೇಲಿ ಮಾಡುತ್ತಲೇ ಬಂದಿದೆ. ನಮ್ಮನ್ನು ‘ಬಿ’ ಟೀಮ್ ಎಂದಾದರೂ ಹೇಳಲಿ, ‘ಸಿ’ ಟೀಮ್‌ ಎಂದಾದರೂ ಹೇಳಲಿ. ನಾವು ಬೆಂಬಲ ಕೊಟ್ಟಿದ್ದೇವೆ. ಸಭಾಪತಿ ರಾಜೀನಾಮೆ ಕೊಟ್ಟು ಹೋಗಬೇಕು’ ಎಂದು ಹೊರಟ್ಟಿ ಹೇಳಿದರು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ‘ಅವಿಶ್ವಾಸ ಮಂಡನೆಗೆ ಅವಕಾಶ ಸಿಗುತ್ತದೆ ಎಂದು ಭಾವಿಸಿದ್ದೆವು. ಆದರೆ, ಅದಕ್ಕೆ ಅವಕಾಶ ನೀಡಲಿಲ್ಲ. ಸದನದಲ್ಲಿ ಕಾಂಗ್ರೆಸ್‌ ಸದಸ್ಯರು ಅನಾಗರಿಕವಾಗಿ ವರ್ತಿಸಿದ್ದಾರೆ’ ಎಂದರು.

ಬಿಜೆಪಿ ಬೇಡಿಕೆ: ‘ತಕ್ಷಣವೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಮತ್ತೊಮ್ಮೆ ಅಧಿವೇಶನ ಕರೆದು ಅವಿಶ್ವಾಸ ನಿರ್ಣಯವನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಬೇಕು. ಸಂವಿಧಾನದ 182 ನೇ ವಿಧಿಯನ್ವಯವೇ ಸದನದ ಕಲಾಪಗಳನ್ನು ನಡೆಸಬೇಕು’ ಎಂದು ರಾಜ್ಯಪಾಲರಲ್ಲಿ ಬಿಜೆಪಿ ಮನವಿ ಮಾಡಿದೆ.

ಟೈಮ್‌ ಲೈನ್‌

* 11.10 ಕಲಾಪ ಆರಂಭದ ಗಂಟೆ

* 11.15 ಉಪಸಭಾಪತಿ ಧರ್ಮೇಗೌಡರನ್ನು ಸಭಾಪತಿ ಪೀಠದಲ್ಲಿ ಕೂರಿಸಿದ ಬಿಜೆಪಿ, ಜೆಡಿಎಸ್ ಸದಸ್ಯರು

* 11.16 ಸಭಾಪತಿ ಪ್ರವೇಶ ಬಾಗಿಲು ಬಂದ್‌ ಮಾಡಿ ದಿಗ್ಬಂಧನ ವಿಧಿಸಿದ ಬಿಜೆಪಿ ಸದಸ್ಯರು

*11.17 ಸಭಾಪತಿ ಪೀಠಕ್ಕೆ ಮುತ್ತಿಗೆ ಹಾಕಿದ ಕಾಂಗ್ರೆಸ್‌ ಸದಸ್ಯರು

* 11.20 ಧರ್ಮೇಗೌಡ ಅವರನ್ನು ಅನಾಮತ್ತಾಗಿ ಪೀಠದಿಂದ ಎಬ್ಬಿಸಿದ ಘಟನೆ

* 11.25  ಸದನಕ್ಕೆ ಬಂದ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಕಲಾಪ ಅನಿರ್ದಿಷ್ಟ ಅವಧಿಗೆ ಮುಂದೂಡಿಕೆ

*
ಉಪ ಸಭಾಪತಿ ಅವರ ಕತ್ತು ಹಿಡಿದು ಎಳೆದಾಡಿದ್ದು ದೇಶದಲ್ಲೇ ಮೊದಲು. ಇದು ಕಾಂಗ್ರೆಸ್‌ನವರ ಗೂಂಡಾ ಸಂಸ್ಕೃತಿಯನ್ನು ತೋರಿಸುತ್ತದೆ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

*
ಸಭಾಪತಿ ಇದ್ದಾಗ ಅವರನ್ನು ಬರಲು ಬಿಡದೇ, ಉಪ ಸಭಾಪತಿಯನ್ನು ಕೂರಿಸಿದ್ದು ಮಹಾಪರಾಧ. ಇದು ಬಿಜೆಪಿಯವರ ಗೂಂಡಾಗಿರಿ. -ಸಿದ್ದರಾಮಯ್ಯ ವಿರೋಧಪಕ್ಷದ ನಾಯಕ, ವಿಧಾನಸಭೆ

*
ಸಭಾಪತಿಯವರಿಗೆ ಬಹುಮತ ಇಲ್ಲ. ಅವರು ಹುದ್ದೆಯಿಂದ ಕೆಳಗಿಳಿಯಬೇಕು. ಈ ಸಂಬಂಧ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಪತ್ರ ನೀಡಿದ್ದೇವೆ.
-ಬಸವರಾಜ ಹೊರಟ್ಟಿ, ಜೆಡಿಎಸ್‌ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು