ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌

Last Updated 6 ಡಿಸೆಂಬರ್ 2022, 15:43 IST
ಅಕ್ಷರ ಗಾತ್ರ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಯಲ್ಲಿ ಸೋಮವಾರ ಭೇಟಿಯಾಗಿದ್ದ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಎಚ್‌. ವಿಶ್ವನಾಥ್, ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಬಿಜೆಪಿ ನಾಯಕರ ನಡೆಯಿಂದ ಬೇಸತ್ತಿರುವ ವಿಶ್ವನಾಥ್ ಅವರು ಕಾಂಗ್ರೆಸ್‌ಗೆ ಮರಳಲು ನಿರ್ಧರಿಸಿದ್ದು, ಮೈಸೂರಿನಿಂದಲೇ ತಮ್ಮ ರಾಜಕೀಯ ಚಟುವಟಿಕೆ ಮುಂದುವರಿಸಲು ಯೋಚಿಸಿದ್ದಾರೆ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಅವರನ್ನು ಶಿವಾನಂದ ವೃತ್ತದ ಬಳಿ ಇರುವ ಅವರ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾತನಾಡಿದ ವಿಶ್ವನಾಥ್‌, ‘ಅವರ ಜೊತೆ ನಾನು ಯಾವುದೇ ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ಮಾಡಿಲ್ಲ. ಆದರೆ, ರಾಜಕಾರಣ ನಿಂತ ನೀರಲ್ಲ, ಹರಿಯುವ ನೀರು ಇದ್ದಂತೆ. ಮುಂದೆ ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.

‘ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ ಅಷ್ಟೇ. ನಾವು ಕಾಂಗ್ರೆಸ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ಆರೋಗ್ಯ ಸರಿ ಇಲ್ಲದಿದ್ದಾಗ ಯಾರೇ ಆಗಲಿ ಭೇಟಿ ಮಾಡಿ ವಿಚಾರಿಸುವುದು ರಾಜಕೀಯ ಸಹಿಷ್ಣುತೆ’ ಎಂದರು.

‘ದೆಹಲಿಗೆ ಹೋಗಿದ್ದಾಗ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರ ಸ್ಥಾನಲ್ಲಿದ್ದಾರೆಂದು ಗೊತ್ತಾಯಿತು. ಹೀಗಾಗಿ, ಅವರನ್ನು ಅಭಿನಂದಿಸಲು ಭೇಟಿಯಾಗಿದ್ದೆ’ ಎಂದರು.

ಬಿಜೆಪಿಯಲ್ಲಿ ಅಸಮಾಧಾನ ಇದೆಯೇ ಎಂಬ ಪ್ರಶ್ನೆಗೆ, ‘ಯಾವ ಪಕ್ಷದ ಬಗ್ಗೆಯೂ ಅಸಮಾಧಾನ ಇಲ್ಲ. ಎಲ್ಲ ಪಕ್ಷಗಳ ರಾಜಕೀಯ ತತ್ವ, ಸಿದ್ಧಾಂತ, ಕಾರ್ಯಕ್ರಮಗಳು ಚೆನ್ನಾಗಿಯೇ ಇವೆ. ಆದರೆ, ಅವುಗಳನ್ನು ನಡೆಸುವ ನಾವಿಕನ ನಡವಳಿಕೆ ಸರಿ ಇಲ್ಲದಿದ್ದಾಗ ಬೇರೆ ಥರ’ ಎಂದರು‌.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ತೊರೆದು, ಬಿಜೆಪಿ ಸೇರಿದ್ದ ವಿಶ್ವನಾಥ್, 2019ರಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ನಂತರ ಹುಣಸೂರು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸೋತಿದ್ದರು. ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆ. ಬಿಜೆಪಿ ಮತ್ತು ರಾಜ್ಯ ಸರ್ಕಾರದ ನಿಲುವುಗಳನ್ನು ಆಗಿದ್ದಾಗ್ಗೆ ಟೀಕಿಸುವ ಮೂಲಕ ಭಿನ್ನ ಧೋರಣೆಯನ್ನು ಅವರು ತಳೆದಿದ್ದಾರೆ.

ವಿಶ್ವನಾಥ್ ಮಗ ಪೂರ್ವಜ್‌ ವಿಶ್ವನಾಥ್ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

ಸಿದ್ದರಾಮಯ್ಯಗೆ ಲಘು ಶಸ್ತ್ರಚಿಕಿತ್ಸೆ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇತ್ತೀಚಿಗೆಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

‘ಕೆಲವು ವರ್ಷಗಳ ಹಿಂದೆ ಮೂಲವ್ಯಾಧಿ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಅದೇ ಜಾಗದಲ್ಲಿ ಪುನಃ ಸಣ್ಣ ಗುಳ್ಳೆಯೊಂದು ಉಂಟಾಗಿತ್ತು. ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ತೆಗೆದುಹಾಕಲಾಗಿದೆ’ ಎಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT