ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆ ಚರ್ಚೆಯ ಫಲ ತಿಳಿಸಿ: ಸಿದ್ದರಾಮಯ್ಯಗೆ ಎಚ್‌ಡಿಕೆ ಸವಾಲು

Last Updated 7 ಜನವರಿ 2022, 11:44 IST
ಅಕ್ಷರ ಗಾತ್ರ

ಬೆಂಗಳೂರು: ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಚರ್ಚೆಯ ಫಲವೇನು ಎಂಬುದನ್ನು ಬಹಿರಂಗಪಡಿಸಲಿ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಇದ ಅವರು, ಜಲ ಸಂಪನ್ಮೂಲ ಸಚಿವರ ಹೇಳಿಕೆಗೆ ಉತ್ತರ ನೀಡಿದ ಮಾಜಿ ಮುಖ್ಯಮಂತ್ರಿ, ಯೋಜನೆ ಕುರಿತು ಚರ್ಚಿಸಿದ್ದಾಗಿ ಹೇಳಿದ್ದಾರೆ. ಮುಂದೇನಾಯಿತು ಎಂಬುದನ್ನೂ ಹೇಳಬೇಕಲ್ಲವೆ ಎಂದು ಪ್ರಶ್ನಿಸಿದರು.

ನಾನು ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ಮೇಕೆದಾಟು ಯೋಜನೆಗೆ ವಿಸ್ತೃತ ಯೋಜನಾ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಯಿತು. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪ್ರಾಥಮಿಕ ವರದಿ ಮಾತ್ರ ನೀಡಲಾಗಿತ್ತು. ಐದು ವರ್ಷ ಏನು ಮಾಡಿದ್ದರು ಎಂಬುದು ಜನರಿಗೆ ಗೊತ್ತಾಗಬೇಕು ಎಂದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದು, ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಿದ್ದರೆ ಇವರೇಕೆ ಪಾದಯಾತ್ರೆ ಮಾಡಬೇಕು ಎಂದು ಕೇಳಿದರು.

ಕಲ್ಲು ಖಾಲಿಯಾಗಿರಬಹುದು: ಕುಮಾರಣ್ಣ ಹೊಡೆದರೂ ಹೊಡೆಸಿಕೊಳ್ಳುವೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಅಣ್ಣ, ತಮ್ಮ, ಅಪ್ಪ, ಅಮ್ಮ ಇವೆಲ್ಲ ಬೇಕಾಗಿಲ್ಲ. ಜನರ ಸಮಸ್ಯೆಗೆ ಪರಿಹಾರ ಒದಗಿಸುವುದು ಮುಖ್ಯ. ಕನಕಪುರದಲ್ಲಿ ಕಲ್ಲು ಖಾಲಿ ಆಗಿರಬಹುದು. ಅದಕ್ಕಾಗಿ ಈಗ ಅವರಿಗೆ ಮೇಕೆದಾಟು ನೀರಿನ ನೆನಪಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಸುಮ್ಮನೆ ರಾಜಕೀಯಕ್ಕೆ ಬಿಟ್‌ ಕಾಯಿನ್‌, ಶೇಕಡ 40ರಷ್ಟು ಲಂಚ ಎಂದು ಮಾತನಾಡುತ್ತಿದ್ದಾರೆ. ಯಾವ ಸಾಕ್ಷ್ಯವನ್ನೂ ನೀಡುತ್ತಿಲ್ಲ. ಭ್ರಷ್ಟಾಚಾರದ ಕುರಿತು ಮಾತನಾಡಲು ಸಿದ್ದರಾಮಯ್ಯ ಸೇರಿದಂತೆ ಯಾರಿಗೂ ನೈತಿಕತೆ ಇಲ್ಲ ಎಂದರು.

ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಹಿಂಬಾಲಕರು ಎಷ್ಟು ಕೆರೆ ನುಂಗಿದ್ದಾರೆ ಎಂಬುದು ಗೊತ್ತಿದೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗಪಡಿಸುವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT