ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಅಬ್ಬರಿಸಿದ ಮಳೆ: ಕೊಚ್ಚಿ ಹೋದ ಬೆಳೆ

Last Updated 30 ಆಗಸ್ಟ್ 2022, 19:15 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಬಹುತೇಕ ಕಡೆ ಸೋಮವಾರ ರಾತ್ರಿ ಮತ್ತು ಮಂಗಳವಾರ ಭಾರಿ ಮಳೆ ಸುರಿದಿದೆ. ಕೆರೆಕಟ್ಟೆಗಳು, ನದಿಗಳು ತುಂಬಿ ಹರಿಯುತ್ತಿವೆ. ಕೋಡಿಬಿದ್ದ ಕೆರೆ ನೀರು ಮತ್ತು ನದಿ ನೀರಿನಿಂದ ಹಲವು ಕಡೆ ಬೆಳೆಗಳು ಮತ್ತು ವಸತಿ ಪ್ರದೇಶಗಳು ಜಲಾವೃತಗೊಂಡಿವೆ. ಇದರಿಂದ ಜನ ಜೀವನವೂ ಅಸ್ತವ್ಯಸ್ತಗೊಂಡಿದೆ.

ಮೈಸೂರು ಭಾಗದಲ್ಲಿ ಚಾಮರಾಜನಗರ ಜಿಲ್ಲೆಯ ಮಾಂಬಳ್ಳಿ-ಅಗರ ಭಾಗದ ರಾಷ್ಟ್ರೀಯ ಹೆದ್ದಾರಿ-209 ಮುಳುಗಡೆ ಭೀತಿ ಎದುರಾಗಿದ್ದು, ಯಳಂದೂರು-ಕೊಳ್ಳೇಗಾಲ ಹೆದ್ದಾರಿಯಲ್ಲಿ ಹಾಗೂ ಬಿಳಿಗಿರಿರಂಗನ ಬೆಟ್ಟದ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು.

ಲೋಕಪಾವನಿ ನದಿ ಉಕ್ಕಿ ಹರಿದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಚಂದಗಿರಿಕೊಪ್ಪಲು ಗ್ರಾಮದ ಜಮೀನುಗಳು ಜಲಾವೃತವಾಗಿವೆ. ಕೆ.ಆರ್‌.ಪೇಟೆ ತಾಲ್ಲೂಕು ದೊಡ್ಡಸೋಮನಹಳ್ಳಿಯಲ್ಲಿ ಮನೆಗಳು ಕುಸಿದಿದ್ದು, ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ. ಶಿಂಷಾನದಿ ತುಂಬಿ ತಟದ, ಮದ್ದೂರು ತಾಲ್ಲೂಕಿನ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇವಾಲಯದ ತಡೆಗೋಡೆ ಕುಸಿದಿದೆ.

ಮೈಸೂರು ತಾಲ್ಲೂಕಿನ ಜಯಪುರ ಗ್ರಾಮದ ಹೊಸಕೆರೆ ಕೋಡಿ ಬಿದ್ದಿದೆ. ಹಾರೋಹಳ್ಳಿ ಕೆರೆ ತುಂಬಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ರಾಯನಕೆರೆ ಸಮೀಪದ ಎಣ್ಣೆಹೊಳೆ ಕೆರೆ ತುಂಬಿ ನೀರು ತೋಟಗಳಿಗೆ ನುಗ್ಗಿದೆ. ಡಿ.ಸಾಲುಂಡಿ ಹಾಗೂ ತಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ಮನೆ ಗೋಡೆ ಕುಸಿದಿದೆ. ಎಚ್‌.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿ ಕಾವಲ್‌ನಲ್ಲಿ ಅಂತರ್ಜಲ ಮಟ್ಟ ಹೆಚ್ಚಿ, ಕೊಳವೆ ಬಾವಿಗಳಲ್ಲಿ ನೀರು ಉಕ್ಕುತ್ತಿದೆ.

ಉತ್ತರ ಕರ್ನಾಟಕದಲ್ಲಿ ಕೊಪ್ಪಳ ಸೇರಿ ಜಿಲ್ಲೆಯ ಮುನಿರಾಬಾದ್‌, ಅಳವಂಡಿ, ಕುಷ್ಟಗಿ, ಕುಕನೂರು, ಹನುಮಸಾಗರ, ಗಂಗಾವತಿ, ಆನೆಗೊಂದಿ, ಕನಕಗಿರಿ, ಯಲಬುರ್ಗಾ, ಬೀದರ್ ಜಿಲ್ಲೆಯ ಬಸವಕಲ್ಯಾಣ ಮತ್ತು ಹುಲಸೂರ ತಾಲ್ಲೂಕಿನಲ್ಲಿ ಮಳೆಯಾಗಿದೆ. ಕುಷ್ಟಗಿ ತಾಲ್ಲೂಕಿನಲ್ಲಿ ಕಟಾವು ಮಾಡಿದ್ದ ಎಳ್ಳು, ಸಜ್ಜೆ ಹಾನಿಗೀಡಾಗಿವೆ.

ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಗ್ರಾಮ ಜಲಾವೃತವಾಗಿ, ಜನ ಪರದಾಡಿದರು. ರಾಮಗೊಂಡನಹಳ್ಳಿಯಲ್ಲಿ ಮನೆ–ತೋಟಗಳಿಗೆ ನೀರು ನುಗ್ಗಿದೆ. ನ್ಯಾಮತಿ, ಹೊನ್ನಾಳಿಯಲ್ಲೂ ಉತ್ತಮ ಮಳೆಯಾಗಿದೆ. ಚನ್ನಗಿರಿ ತಾಲ್ಲೂಕಿನ ವಿವಿಧೆಡೆ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಬಸವಾಪಟ್ಟಣ, ಸಂತೇಬೆನ್ನೂರು, ಜಗಳೂರಿನಲ್ಲಿ ಹಲವು ಮನೆಗಳು ಹಾನಿಗೀಡಾಗಿವೆ. ಸಾಸ್ವೆಹಳ್ಳಿ ಸುತ್ತಮುತ್ತ ಭತ್ತದ ಗದ್ದೆಗಳು ಜಲಾವೃತವಾಗಿವೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಕೋಣಂದೂರು, ಭದ್ರಾವತಿ, ರಿಪ್ಪನ್‌ಪೇಟೆ, ಶಿರಾಳಕೊಪ್ಪ ಭಾಗದಲ್ಲಿ ರಾತ್ರಿಯಿಡೀ ಮಳೆ ಸುರಿದಿದೆ. ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ ಕಟ್ಟೆ ಗ್ರಾಮ ಪಂಚಾಯಿತಿಯ ಕಳ್ಳಿಗದ್ದೆ ಗ್ರಾಮದಲ್ಲಿರುವ ಸಂಕ್ಲಾಪುರ ಸಂಪರ್ಕ ಸೇತುವೆ ತಡೆಗೋಡೆ ಕುಸಿದಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಭದ್ರಾವತಿ ತಾಲ್ಲೂಕಿನ ಹೊಸೂರು ಕೆರೆ ತುಂಬಿ ಹರಿದ ಪರಿಣಾಮ ಭಂಡಾರಹಳ್ಳಿಯ 20 ಎಕರೆ ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ.

ಹಿರಿಯೂರಿನ ವಾಣಿವಿಲಾಸ ಸಾಗರದ ಜಲಾಶಯ ಕೋಡಿ ಬೀಳಲು ಅರ್ಧ ಅಡಿ ಮಾತ್ರ ಬಾಕಿ ಉಳಿದಿದೆ. ಹೊಳಲ್ಕೆರೆ ತಾಲ್ಲೂಕಿನ ಬಿ. ದುರ್ಗದಲ್ಲಿ 128.2 ಮಿ.ಮೀ ಮಳೆ ದಾಖಲಾಗಿದೆ. ಬಹುತೇಕ ಭಾಗದಲ್ಲಿ 60 ಮಿ.ಮೀಗೂ ಅಧಿಕ ಮಳೆ ಸುರಿದಿದೆ.

ಚಿತ್ರದುರ್ಗ ತಾಲ್ಲೂಕಿನ ಸಿಂಗಾಪುರ ಗ್ರಾಮ ಜಲಾವೃತವಾಗಿದೆ. ಧರ್ಮಪುರ ಹೋಬಳಿಯ ಅರಳೀಕೆರೆ ಕೆರೆ ಕೋಡಿ ಬಿದ್ದ ಪರಿಣಾಮ ನೂರಾರು ಎಕರೆ ದಾಳಿಂಬೆ, ಹತ್ತಿ, ಅಡಿಕೆ ತೋಟ ಹಾಳಾಗಿದೆ.

ಹಂಪಿ ಸ್ಮಾರಕಗಳು ಬಹುತೇಕ ಜಲಾವೃತ
ಹುಬ್ಬಳ್ಳಿ: ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಳ್ಳಾರಿ–ವಿಜಯನಗರ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಧಾರವಾಡದಲ್ಲಿ ನಸುಕಿನಿಂದ ಎಂಟು ಗಂಟೆ ಸತತವಾಗಿ ಮಳೆ ಸುರಿದಿದೆ.

ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಸೇತುವೆ ಮೇಲಿನಿಂದ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಹಂಪಿಯ ಬಹುತೇಕ ಸ್ಮಾರಕಗಳ ಪರಿಸರದಲ್ಲಿ ನೀರು ಸಂಗ್ರಹಗೊಂಡಿದೆ.

ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸುತ್ತಿರುವುದರಿಂದ ಹಂಪಿ ಕರ್ಮ ಮಂಟಪ, ಪುರಂದರದಾಸರ ಮಂಟಪ, ಚಕ್ರತೀರ್ಥ, ಸ್ನಾನಘಟ್ಟ, ವಿಜಯನಗರ ಕಾಲದ ಕಾಲು ಸೇತುವೆ ಮತ್ತೆ ಮುಳುಗಿವೆ. ಹರಪನಹಳ್ಳಿ ತಾಲ್ಲೂಕಿನ ನಾಗತಿಕಟ್ಟೆ-ಗೌಳೇರಹಟ್ಟಿ, ಬೇವಿನಹಳ್ಳಿ-ಉಚ್ಚಂಗಿದುರ್ಗ, ಉಚ್ಚಂಗಿದುರ್ಗ-ಅರಸೀಕೆರೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ–ಗಂಗಾವತಿ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಬಂದ್‌ ಆಗಿದೆ. ಹರಪನಹಳ್ಳಿ ತಾಲ್ಲೂಕುವೊಂದರಲ್ಲೇ 825 ಹೆಕ್ಟೇರ್‌ ಭತ್ತ, ಮೆಕ್ಕೆ ಜೋಳ ಹಾಳಾಗಿದೆ. ಅವಳಿ ಜಿಲ್ಲೆಗಳ 15ಕ್ಕೂ ಹೆಚ್ಚು ಕೆರೆಗಳ ಕೋಡಿ ಬಿದ್ದಿದೆ. ಬಹುತೇಕ ಕೆರೆ, ಕಟ್ಟೆ, ಚೆಕ್‌ ಡ್ಯಾಂಗಳು ತುಂಬಿವೆ. ನಾಲ್ಕು ದಿನಗಳಿಂದ ಸತತ ಮಳೆ ಸುರಿಯುತ್ತಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಬೆಳಗಾವಿ ನಗರ ಹಾಗೂ ಜಿಲ್ಲೆಯ ಚಿಕ್ಕೋಡಿ, ರಾಮದುರ್ಗ, ಬೈಲಹೊಂಗಲ, ಯರಗಟ್ಟಿ ತಾಲ್ಲೂಕುಗಳ ಕೆಲವು ಕಡೆಗಳಲ್ಲಿ ಸಾಧಾರಣ ಮಳೆ ಸುರಿಯಿತು. ಸವದತ್ತಿ ಪಟ್ಟಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸಂಜೆಗೆ ಬಿರುಸು ಪಡೆದ ಮಳೆ, ಒಂದು ತಾಸಿನವರೆಗೂ ಸುರಿಯಿತು.

ಹಾವೇರಿ ಜಿಲ್ಲೆಯ ಗುತ್ತಲ ಮೂರು ದಿನಗಳಿಂದ ಸುರಿದ ಬಾರಿ ಮಳೆಗೆ ನೆಗಳೂರ ಬಳಿಯ ತುಂಗಾ ಮೇಲ್ದಂಡೆ ಕಾಲುವೆ ಕೊಚ್ಚಿಹೋಗಿದೆ.

ಕಾಲುವೆಯ ನೀರು ಜಮೀನಿಗೆ ನುಗ್ಗಿದ ಪರಿಣಾಮ ಬೆಳೆ ನಾಶವಾಗಲಿದೆ ಎಂದು ಗುತ್ತಲ, ನೆಗಳೂರ, ಹಾವನೂರ, ಹುರಳಿಹಾಳ, ಬೆಳವಗಿ, ಗಳಗನಾಥ ಗ್ರಾಮಗಳ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಜಮೀನುಗಳು ಜಲಾವೃತಗೊಂಡವು. ಕೊಯ್ಲಿಗೆ ಬಂದಿದ್ದ ಬೆಂಡೆ, ಹಾಗಲ, ಸವತೆ, ಕುಂಬಳ, ಬದನೆ, ಟೊಮೊಟೊ ಮೊದಲಾದ ತರಕಾರಿ ಬೆಳೆ ಸಂಪೂರ್ಣವಾಗಿ ಜಲಾವೃತಗೊಂಡಿತು. ಹಾವೇರಿ ಜಿಲ್ಲೆಯ ತುಮ್ಮಿನಕಟ್ಟಿಯ ಎಸ್ ಸಿ ಕಾಲೊನಿ ಹಾಗೂ ಶಿವಾಜಿ ನಗರದಲ್ಲಿ ತಲಾ ಒಂದೊಂದು ಮನೆಯ ಚಾವಣಿ ಕುಸಿದಿವೆ.

ರಾಮನಗರದಲ್ಲಿ ಅಪಾರ ಬೆಳೆ ಹಾನಿ
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಭಾಗದಲ್ಲಿ ಅತಿ ಹೆಚ್ಚು ಮಳೆ ಬಿದ್ದಿದ್ದು, ಹಾರೋಹಳ್ಳಿ ಕೆರೆ ಕೋಡಿ ಒಡೆದು ಜಲಾವೃತಗೊಂಡಿರುವ ಸಮುದಾಯ ಆರೋಗ್ಯ ಕೇಂದ್ರದಿಂದ ರೋಗಿಗಳನ್ನು ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಲಾಗಿದೆ. ಮಾವತ್ತೂರು ಕೆರೆ ಕೋಡಿ ಬಿದ್ದು ಬೂದುಗುಪ್ಪೆ ಬಳಿ ಕೆಳ ಹಂತದ ಸೇತುವೆ ಕೊಚ್ಚಿ ಹೋಗಿದೆ.

ರಾಮನಗರ ತಾಲ್ಲೂಕಿನ ಮೇಗಳದೊಡ್ಡಿ ಕೆರೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು, ಏರಿ ಒಡೆಯುವ ಆತಂಕ ಎದುರಾಗಿದೆ. ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರದಲ್ಲಿ ಕೆರೆ ಕೋಡಿಯಿಂದ ಮೂವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಡಿಕೆಶಿ, ಎಚ್‌ಡಿಕೆ ಭೇಟಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಗಳವಾರ ಚನ್ನಪಟ್ಟಣ ಹಾಗೂ ರಾಮನಗರ ತಾಲ್ಲೂಕುಗಳಿಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿದರು. ಸಂತ್ರಸ್ತರ ಜೊತೆ ಚರ್ಚಿಸಿದರು.

‘ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಪರಿಹಾರ ಘೋಷಿಸಿದಂತೆ, ರಾಮನಗರಕ್ಕೂ ಹೆಚ್ಚಿನ ಪರಿಹಾರ ಘೋಷಿಸಬೇಕು’ ಎಂದು ಅವರು ಇದೇ ಸಂದರ್ಭ ಆಗ್ರಹಿಸಿದರು.

ಚನ್ನಪಟ್ಟಣದಲ್ಲಿ ಶಾಸಕ ಎಚ್‌.ಡಿ. ಕುಮಾರಸ್ವಾಮಿ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ನದಿಯಂತಾದ ಬೆಳ್ಳಂದೂರು ರಸ್ತೆ
ಬೆಂಗಳೂರು:
ಹಾಲನಾಯಕನಹಳ್ಳಿ ಕೆರೆ ಕೋಡಿ ಹರಿದಿರುವುದರಿಂದ ರಾಜಧಾನಿಯಲ್ಲಿ ಮಹದೇವಪುರ ವಲಯದ ಹಲವಾರು ರಸ್ತೆ, ಬಡಾವಣೆಗಳು ಜಲಾವೃತವಾಗಿವೆ. 70 ಹೆಕ್ಟೇರ್‌ ವಿಸ್ತೀರ್ಣವಿರುವ ಈ ಕೆರೆ 40 ವರ್ಷಗಳಲ್ಲಿ ಮೊದಲ ಬಾರಿಗೆ ತುಂಬಿದೆ.

ಕೆರೆಯಿಂದ ನೀರು ಅತಿ ಹೆಚ್ಚಾಗಿ, ರಭಸವಾಗಿ ಹರಿಯುತ್ತಿರುವುದರಿಂದ ಮಹದೇವಪುರ, ಬೆ‌ಳ್ಳಂದೂರು, ಮಾರತ್‌ಹಳ್ಳಿ ಭಾಗದಲ್ಲಿ ಬಹುತೇಕ ಕಡೆ ಜಲಾವೃತವಾಗಿದೆ. ಹಾಲನಾಯಕಹಳ್ಳಿಯಿಂದ ಸವಳು ಕೆರೆ ಮಾರ್ಗವಾಗಿ ಬೆಳ್ಳಂದೂರಿಗೆ ನೀರು ಹರಿಯುತ್ತದೆ. ಆದರೆ ರಾಜಕಾಲುವೆಗಳು ಮುಚ್ಚಿಹೋಗಿರುವುದರಿಂದ ನೀರೆಲ್ಲ ರಸ್ತೆ ಹಾಗೂ ಬಡಾವಣೆಗಳಲ್ಲಿ ಹರಿಯುತ್ತಿದೆ.

ಮಹದೇವಪುರ ವಲಯದ ದೊಡ್ಡನೆಕ್ಕುಂದಿಯಲ್ಲಿ ಸೋಮವಾರ 109 ಎಂ.ಎಂ. ಮಳೆಯಾಗಿದೆ. ಸಮೀಪದ ಬ್ರೂಕ್‌ಫೀಲ್ಡ್‌ನಲ್ಲಿ ಕಾರ್ಮಿಕರ 80ಕ್ಕೂ ಗುಡಿಸಿಲುಗಳು ಸಂಪೂರ್ಣ ಜಲಾವೃತಗೊಂಡಿವೆ.

ಪ್ರಮುಖಾಂಶಗಳು
* ಗೌರಿಬಿದನೂರು ತಾಲ್ಲೂಕಿನ ಉತ್ತರ ಪಿನಾಕಿನಿ ತುಂಬಿ ಹರಿಯುತ್ತಿದ್ದು ಸಂಚಾರ ಬಂದ್

* ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನಲ್ಲಿ ಬೆಣ್ಣಿಹಳ್ಳ ಉಕ್ಕಿ ಹರಿದು ಬೆಳೆ ನಾಶ

* ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ವಾಣಿವಿಲಾಸ ಸಾಗರದ ಜಲಾಶಯಕ್ಕೆ ಒಳ ಹರಿವು ಹೆಚ್ಚಳ

* ವಿಜಯನಗರ, ಗದಗ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು

* ವಿಜಯನಗರ–ಬಳ್ಳಾರಿ ಜಿಲ್ಲೆಗಳಲ್ಲಿ 105 ಮನೆಗಳಿಗೆ ಹಾನಿ

* ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನಲ್ಲಿ 8 ಮನೆಗಳಿಗೆ ಹಾನಿ

* ಯಳಂದೂರು ತಾಲ್ಲೂಕಿನಲ್ಲಿ 107 ಮನೆಗಳಿಗೆ ಭಾಗಶಃ ಹಾನಿ

* ಸೂಳೆಕೆರೆ ಕೋಡಿಯಿಂದಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT