ಶನಿವಾರ, ಜನವರಿ 23, 2021
18 °C
ಸಂಪನ್ಮೂಲ ಸಂಗ್ರಹಕ್ಕೆ ‘ಗ್ರಹಣ’ l ‘ಶೂನ್ಯ ವರ್ಷ’ ಪರಿಗಣನೆಗೆ ಹಣಕಾಸು ಇಲಾಖೆ ಚಿಂತನೆ

ಮಂದ ಆರ್ಥಿಕ ಸ್ಥಿತಿ: ಬಜೆಟ್‌ ಗಾತ್ರ ಕಡಿತಕ್ಕೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಆರ್ಥಿಕ ಪುನಶ್ಚೇತನ ನಿರೀಕ್ಷಿತ ಮಟ್ಟದಲ್ಲಿ ಆಗದೇ ಸಂಪನ್ಮೂಲ ಸಂಗ್ರಹಕ್ಕೆ ‘ಗ್ರಹಣ’ ಹಿಡಿದಿರುವುದರಿಂದ ಈ ಸಾಲಿನ ರಾಜ್ಯ ಬಜೆಟ್‌ ಗಾತ್ರವನ್ನೇ ತಗ್ಗಿಸುವ ಸಾಧ್ಯತೆ ಇದೆ.

ಈ ಕುರಿತು ಹಣಕಾಸು ಇಲಾಖೆಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ. 2020–21ನೇ ಸಾಲಿನಲ್ಲಿ ಆದಾಯ ಸಂಗ್ರಹ ನಿರೀಕ್ಷಿತವಾಗಿ ಆಗದ ಕಾರಣ ಈ ಆರ್ಥಿಕ ವರ್ಷವನ್ನು ‘ಶೂನ್ಯ ವರ್ಷ’ ಎಂದು ಪರಿಗಣಿಸಲೂ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

2020–21 ಸಾಲಿನ ಆಯವ್ಯಯ ಅಂದಾಜು ₹2.37 ಲಕ್ಷ ಕೋಟಿ ಇತ್ತು. ಹೊಸ ಬಜೆಟ್‌ನ ಗಾತ್ರ ಎಷ್ಟು ಪ್ರಮಾಣದಲ್ಲಿ ತಗ್ಗಿಸಬೇಕು, ಶೇ 8 ರಿಂದ ಶೇ10 ಇಳಿಸಬೇಕೆ ಎಂಬುದರ ಚರ್ಚೆ ನಡೆದಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಆರ್ಥಿಕ ಚೇತರಿಕೆ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಐ.ಎಸ್‌.ಎನ್‌ ಪ್ರಸಾದ್, ‘ತೆರಿಗೆ ಸಂಗ್ರಹಕ್ಕೆ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡ ಕಾರಣ, ಕಳೆದ ಡಿಸೆಂಬರ್‌ನಲ್ಲಿ ಕೆಲವು ಕ್ಷೇತ್ರಗಳಲ್ಲಿ ತೆರಿಗೆ ಸಂಗ್ರಹ ಸ್ವಲ್ಪ ಏರಿಕೆ ಆಗಿತ್ತು. ಆದರೆ, ನಾವು ತೆರಿಗೆ ಸಂಗ್ರಹದಲ್ಲಿ ನಷ್ಟ ಹೊಂದಿರುವುದನ್ನು ತುಂಬಿಕೊಳ್ಳುವುದಕ್ಕಂತೂ ಸಾಧ್ಯವಿಲ್ಲ’ ಎಂದರು.

‘ಸಾಮಾನ್ಯ ವರ್ಷಗಳಲ್ಲಿ ತೆರಿಗೆ ಸಂಗ್ರಹ ಕಳೆದ ವರ್ಷಕ್ಕಿಂತ ಶೇ 10 ರಷ್ಟು ಹೆಚ್ಚು ಆಗಿರುತ್ತಿತ್ತು. 2020 ರ ಡಿಸೆಂಬರ್‌ ಆದ ತೆರಿಗೆ ಸಂಗ್ರಹ 2019 ರ ಡಿಸೆಂಬರ್‌ ಸಂಗ್ರಹದ ಪ್ರಮಾಣವನ್ನು ಸರಿಗಟ್ಟಿಲ್ಲ. ಹೀಗಾಗಿ ಆರ್ಥಿಕ ಪುನಶ್ಚೇತನ ತೀರಾ ಮಂದಗತಿಯಲ್ಲಿದೆ’ ಎಂದು ಅವರು ಹೇಳಿದರು.

ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ ಮತ್ತು ಆರ್ಥಿಕ ಹಿಂಜರಿತದ ಪರಿಣಾಮ ತೆರಿಗೆ ಸಂಗ್ರಹ ನೆಲಕಚ್ಚಿತ್ತು ಮತ್ತು ಕೇಂದ್ರದಿಂದ ಬರಬೇಕಾದ ಅನುದಾನವೂ ಬರಲಿಲ್ಲ. ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಹಲವು ಉತ್ತೇಜನ ಕ್ರಮಗಳನ್ನು ಕೈಗೊಂಡಿದ್ದರೂ, ರಾಜ್ಯದ ಆರ್ಥಿಕ ಬೆಳವಣಿಗೆ ಹಳಿ ಮೇಲೆ ತರಲು ಇನ್ನಷ್ಟು ಸಮಯ ಬೇಕಾಗುತ್ತದೆ ಎಂದು ಹೆಸರು ಹೇಳಲು ಬಯಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯಸ್ವದ ಸಂಗ್ರಹಣೆ ಕುಸಿತದಿಂದ ಆಗಿರುವ ನಷ್ಟವನ್ನು ತುಂಬಿ ಅಗತ್ಯ ಕೆಲಸಗಳಿಗೆ ಬೇಕಾಗಿರುವ ಸಂಪನ್ಮೂಲ ಒದಗಿಸಲು ಸಾಲ ಮಾಡುವುದು ಅನಿವಾರ್ಯ ಈ ಕಾರಣಕ್ಕಾಗಿ ಸುಮಾರು ₹33 ಸಾವಿರ ಕೋಟಿ ಹೆಚ್ಚುವರಿ ಸಾಲ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ಮಸೂದೆಗೂ ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಒಪ್ಪಿಗೆ ಪಡೆದಿದೆ.

ಎಲ್ಲ ಇಲಾಖೆಗಳು ತಮ್ಮ ಖರ್ಚು ವೆಚ್ಚಗಳಿಗೆ ಕಟ್ಟುನಿಟ್ಟಾಗಿ ಕಡಿವಾಣ ಹಾಕಬೇಕು. ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿ ಉಳಿದ ಅನಗತ್ಯ ವೆಚ್ಚಗಳನ್ನು ಮುಲಾಜಿಲ್ಲದೇ ಕಡಿತಗೊಳಿಸಬೇಕು. ವ್ಯರ್ಥ ಎನಿಸುವ ಯೋಜನೆಗಳಿಗೆ ಕಡಿವಾಣ ಹಾಕಬೇಕು. ಹಲವು ದಶಕಗಳಿಂದ ಬೀದಿಗೊಂದು, ಜಾತಿಗೊಂದು ಎಂಬಂತೆ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ನೀಡುತ್ತಿದ್ದ ಅನುದಾನ ಈ ಬಾರಿ ನಿಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಬೋಗಸ್‌ ಪಡಿತರ ಕಾರ್ಡ್‌ಗಳನ್ನು ಪತ್ತೆ ಮಾಡಿ ರದ್ದುಪಡಿಸುವ ಕಾರ್ಯವೂ ಭರದಿಂದ ಸಾಗಿದ್ದು, ಇದರಿಂದ ಬೊಕ್ಕಸಕ್ಕೆ ಸಾಕಷ್ಟು ಹಣ ಉಳಿಸಬಹುದು ಎಂಬುದು ಹಣಕಾಸು ಇಲಾಖೆಯ ಲೆಕ್ಕಾಚಾರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು