ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗೇನಕಲ್‌ ಯೋಜನೆಗೆ ವಿರೋಧ: ಗಡಿ ಗುರುತು, ಜಂಟಿ ಸರ್ವೆಗೆ ಒತ್ತಾಯ

ತಮಿಳುನಾಡಿನ ಯೋಜನೆಗೆ ಪರಿಸರವಾದಿಗಳು, ಹೋರಾಟಗಾರರ ವಿರೋಧ
Last Updated 24 ಜನವರಿ 2022, 19:48 IST
ಅಕ್ಷರ ಗಾತ್ರ

ಚಾಮರಾಜನಗರ: ಹೊಗೇನಕಲ್‌ ಕುಡಿಯುವ ನೀರಿನ ಎರಡನೇ ಹಂತದ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಘೋಷಿಸಿದ ಬೆನ್ನಲ್ಲೇ ಗಡಿ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದೆ. ಒಂದೂವರೆ ದಶಕದ ಹಿಂದೆ ಸ್ಥಗಿತಗೊಂಡಿದ್ದ, ಎರಡೂ ರಾಜ್ಯಗಳ ಗಡಿ ಗುರುತಿಸುವ ಜಂಟಿ ಸರ್ವೆ ನಡೆಸಬೇಕು ಎಂಬ ಕೂಗು ಮತ್ತೆ ಎದ್ದಿದೆ.

’ಹೊಗೇನಕಲ್‌ ಜಲಪಾತ ಪ್ರದೇಶ ದಲ್ಲಿರುವ 400 ಎಕರೆ ವ್ಯಾಪ್ತಿಯ ನಡುಗುಡ್ಡೆ ಕರ್ನಾಟಕಕ್ಕೆ ಸೇರಿದೆ. ಅಲ್ಲಿ ತಮಿಳುನಾಡು ಪ್ರವಾಸೋದ್ಯಮ ಚಟುವಟಿಕೆ ನಡೆಸುತ್ತಿದೆ. ಮೊದಲ ಹಂತದ ಹೊಗೇನಕಲ್‌ ಕುಡಿಯುವ ನೀರಿನ ಯೋಜನೆಯನ್ನೂ ಕೈಗೆತ್ತಿ ಕೊಂಡಿದೆ. ಜಂಟಿ ಸರ್ವೆ ನಡೆಸಿದರೆ ಆ ಜಾಗ ಕರ್ನಾಟಕ್ಕೆ ಸೇರುವುದು ಖಚಿತ.2005–2006ರಲ್ಲಿ ಸರ್ವೆ ಆರಂಭವಾಗಿತ್ತಾದರೂ ತಮಿಳುನಾಡಿನ ಅಸಹಕಾರ ಹಾಗೂ ರಾಜ್ಯ ಸರ್ಕಾರ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಥಗಿತ ಗೊಂಡಿತ್ತು. ಈಗ ಮತ್ತೆ ಜಂಟಿ ಸರ್ವೆ ಆರಂಭಿಸಬೇಕು‘ ಎಂದು ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು, ಹೋರಾಟಗಾರರು ಒತ್ತಾಯಿಸಿದ್ದಾರೆ.

ಜಲಪಾತದ ಬಳಿ 2005ರಲ್ಲಿ ತಮಿಳುನಾಡು ಸರ್ಕಾರ ವೀಕ್ಷಣಾ ಗೋಪುರ, ತೂಗು ಸೇತುವೆ ಅಭಿವೃದ್ಧಿ ಕಾರ್ಯ ಆರಂಭಿಸಿದಾಗ ಜಿಲ್ಲೆಯ ಪರಿಸರವಾದಿಗಳು, ಹೋರಾಟ ಸಮಿತಿ ಸೇರಿ ‘ಹೊಗೇನಕಲ್‌ ಜಲಪಾತ ಉಳಿಸಿ’ ಎಂಬ ಸಂಘಟನೆ ರೂಪಿಸಿ ಪ್ರತಿಭಟಿಸಿದ್ದರು.

ಅದರ ಫಲವಾಗಿ ಅದೇ ವರ್ಷ ಸೆ. 26ರಂದು ಜಂಟಿ ಸರ್ವೆ ಸಂಬಂಧ ಕಂದಾಯ ಇಲಾಖೆ ಎರಡು ತಂಡಗಳನ್ನು ರಚಿಸಿ ಆದೇಶ ಹೊರಡಿಸಿತ್ತು. ‘ಒಂದು ತಂಡವು ಗುಂಡ್ಲುಪೇಟೆ ತಾಲ್ಲೂಕಿನ ಬೇರಂಬಾಡಿ ಅರಣ್ಯ ಭಾಗದಿಂದ ಹಾಗೂ 2ನೇ ತಂಡವು ಹೊಗೇನಕಲ್‌ ಜಲಪಾತದಿಂದ ಅಳತೆ ಆರಂಭಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

’ಜಂಟಿ ಸರ್ವೆಗಾಗಿ ರಾಜ್ಯ ಸರ್ಕಾರ ₹1 ಕೋಟಿ ಹಣವನ್ನೂ ಬಿಡುಗಡೆ ಮಾಡಿತ್ತು. ಆದರೆ, ತಮಿಳುನಾಡು ಸಹಕಾರ ನೀಡಲಿಲ್ಲ. ಪ್ರಾಣಿಗಳ ಭಯ, ಉಪಕರಣಗಳ ಕೊರತೆಯ ನೆಪಗಳನ್ನು ಒಡ್ಡಿ ಸರ್ವೆ ನಡೆಯದಂತೆ ಮಾಡಿತು. ನಮ್ಮ ಸರ್ಕಾರ ಹಾಗೂ ಅಧಿಕಾರಿಗಳು ನೆರೆ ರಾಜ್ಯದ ತಾಳಕ್ಕೆ ಕುಣಿದರು. ಬಿಳಿಗುಂಡ್ಲು, ಹೊಗೇನಕಲ್‌ನಲ್ಲಿರುವ ನಡುಗುಡ್ಡೆ ನಮ್ಮ ಜಾಗ. ಅದನ್ನು ಪಡೆಯುವುದಕ್ಕೆ ಗಡಿ ಗುರುತಿಸುವಿಕೆ ಅನಿವಾರ್ಯ. ಅದಕ್ಕಾಗಿ ಮತ್ತೆ ಹೋರಾಟ ಆರಂಭಿಸುತ್ತೇವೆ’ ಎಂದು ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ’ಪ್ರಜಾವಾಣಿ‘ಗೆ ತಿಳಿಸಿದರು.

‘ಹೊಗೇನಕಲ್‌ನ ನಡುಗುಡ್ಡೆ 400ರಿಂದ 450 ಎಕರೆಗಳಷ್ಟಿದೆ. ಅದು ನಮ್ಮ ರಾಜ್ಯಕ್ಕೆ ಸೇರಿದ್ದು. ತಮಿಳುನಾಡು ಅಲ್ಲಿ ತೂಗುಸೇತುವೆ, ಸ್ನಾನಘಟ್ಟ ನಿರ್ಮಿಸಿ ಅಭಿವೃದ್ಧಿಪಡಿಸಿದೆ. ಈಗ 2ನೇ ಹಂತದ ಕುಡಿಯುವ ನೀರಿನ ಯೋಜನೆ ಆರಂಭಿಸುವುದಾಗಿ ಘೋಷಿಸಿದೆ. ರಾಜ್ಯ ಸರ್ಕಾರ ಅದಕ್ಕೆ ಅವಕಾಶ ನೀಡಬಾರದು‘ ಎಂದು ಜಲಪಾತ ಉಳಿಸಿ ಸಮಿತಿಯ ಸಂಚಾಲಕರಾಗಿದ್ದ ಡಿ.ಎಸ್‌.ದೊರೆಸ್ವಾಮಿ ಒತ್ತಾಯಿಸಿದರು.

ಈ ಬಗ್ಗೆ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ’ತಮಿಳುನಾಡು ಪ್ರಸ್ತಾಪಿಸಿರುವ ಹೊಸ ಯೋಜನೆಗೆ ಜಿಲ್ಲೆಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಜಂಟಿ ಸರ್ವೆಗೆ ಒತ್ತಾಯಿಸಿರುವ ವಿಷಯ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ವಿಚಾರಿಸುತ್ತೇನೆ‘ ಎಂದರು.

ಮೊದಲ ಹಂತದ ಯೋಜನೆಗೂ ವಿರೋಧ

ತಮಿಳುನಾಡಿನ ಧರ್ಮಗಿರಿ ಹಾಗೂ ಕೃಷ್ಣಗಿರಿ ಜಿಲ್ಲೆಯ ಗ್ರಾಮಗಳು, ನಗರ, ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವುದಕ್ಕಾಗಿ 2008ರಲ್ಲಿ ಅಂದಿನ ಮುಖ್ಯಮಂತ್ರಿ ಕರುಣಾನಿಧಿ ₹1,334 ಕೋಟಿ ವೆಚ್ಚದ ಮೊದಲ ಹಂತದ ಹೊಗೇನಕಲ್‌ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಆಗ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಪ್ರತಿಭಟನೆ, ಬಂದ್‌, ಹೋರಾಟಗಳು ನಡೆದಿದ್ದವು. ಆಗಲೂ ಜಂಟಿ ಸರ್ವೆಗೆ ಒತ್ತಾಯ ಕೇಳಿ ಬಂದಿತ್ತು. ವಿರೋಧದ ನಡುವೆಯೇ ತಮಿಳುನಾಡು ಯೋಜನೆಯನ್ನು ಕಾರ್ಯಗತಗೊಳಿಸಿತ್ತು. 2013ರ ಮೇ 29ರಂದು ಅಂದಿನ ಮುಖ್ಯಮಂತ್ರಿ ಜಯಲಲಿತಾ ಯೋಜನೆ ಉದ್ಘಾಟಿಸಿದ್ದರು.
***

ತಮಿಳುನಾಡಿನ ಹೊಸ ಯೋಜನೆ ಯನ್ನು ವಿರೋಧಿಸುತ್ತೇವೆ. ಬಿಳಿ ಗುಂಡ್ಲುವಿನಿಂದ ಹೊಗೇನಕಲ್‌ ಜಲಪಾತದವರೆಗೂ ಜಂಟಿ ಸರ್ವೆ ನಡೆಯಬೇಕು

- ಕೆ.ವೀರಭದ್ರಸ್ವಾಮಿ, ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ

***

ಹೊಗೇನಕಲ್‌ 2ನೇ ಹಂತದ ಯೋಜನೆಗೆ ಸರ್ಕಾರ ಅವಕಾಶ ನೀಡಬಾರದು. ಜಂಟಿ ಸರ್ವೆ ನಡೆಸಿ, ನಮ್ಮ ರಾಜ್ಯದ ಜಾಗವನ್ನು ವಶಕ್ಕೆ ಪಡೆಯಬೇಕು

- ಡಿ.ಎಸ್‌.ದೊರೆಸ್ವಾಮಿ, ಪರಿಸರವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT