ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 10ರಿಂದ 14 ದಿನ ಲಾಕ್‌ಡೌನ್‌: ಬೆಳಿಗ್ಗೆ 10ರ ಬಳಿಕ ರಸ್ತೆಗಿಳಿದರೆ ಕಠಿಣ ಕ್ರಮ

ಅಂತರ ಜಿಲ್ಲಾ ಪ್ರಯಾಣ ನಿರ್ಬಂಧ
Last Updated 7 ಮೇ 2021, 21:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪ್ರಕರಣಗಳು ನಿಯಂತ್ರಣಕ್ಕೆ ಸಿಗದಂತೆ ಏರುಗತಿ ಕಂಡಿರುವ ಬೆನ್ನಲ್ಲೇ, ಪರಿಸ್ಥಿತಿಯನ್ನು ಹದ್ದುಬಸ್ತಿಗೆ ತರಲು ಮುಂದಾಗಿರುವ ಸರ್ಕಾರ ಮೇ 10 ರಿಂದ ಮೇ 24 ರವರೆಗೆ ರಾಜ್ಯದಾದ್ಯಂತ ಲಾಕ್‌ಡೌನ್‌ ಘೋಷಿಸಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಂಪುಟ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ‘ಕರ್ಫ್ಯೂ ವಿಧಿಸಿರುವುದು ಹೆಚ್ಚಿನ ಪರಿಣಾಮ ಬೀರಿಲ್ಲ. ಸಾರ್ವಜನಿಕರು ನಿಯಮ ಉಲ್ಲಂಘಿಸಿ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಮೇ 10 ರ ಬೆಳಿಗ್ಗೆ 6 ಗಂಟೆಯಿಂದ ಮೇ 24 ರ ಬೆಳಿಗ್ಗೆ 6 ರವರೆಗೆ ಲಾಕ್‌ಡೌನ್‌ ಘೋಷಿಸಲಾಗಿದೆ’ ಎಂದರು. ‘ಹಾಲು, ಹಣ್ಣು, ತರಕಾರಿ, ಮಾಂಸ, ದಿನಸಿ ಪದಾರ್ಥಗಳನ್ನು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾರಾಟ ಮಾಡಲು ಅವಕಾಶವಿದೆ. ಬೆಳಿಗ್ಗೆ 10 ಗಂಟೆಯ ಬಳಿಕ ಓಡಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ತಳ್ಳುಗಾಡಿಗಳಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಆದ್ದರಿಂದ ತಮ್ಮ ಮನೆಗಳ ಮುಂದೆ
ಯೇ ಹಣ್ಣು–ತರಕಾರಿಗಳನ್ನು ಖರೀದಿಸಬಹುದು. ಆಸ್ಪತ್ರೆಗೆ ಮತ್ತು ಚಿಕಿತ್ಸೆಗೆ ಹೋಗುವವರನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳ ಸಂಚಾರಕ್ಕೂ ಅವಕಾಶ ನೀಡುವುದಿಲ್ಲ’ ಎಂದು ಯಡಿಯೂರಪ್ಪ ಹೇಳಿದರು.

‘ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಅದಕ್ಕಾಗಿ ನಿರ್ಬಂಧಿತ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಆದ ಕಾರಣ ಕಾರ್ಮಿಕರು ಯಾರೂ ಹಳ್ಳಿಗಳಿಗೆ ಹೋಗಬಾರದು’ ಎಂದು ಮನವಿ ಮಾಡಿದರು.

ಯಾವುದಕ್ಕೆಲ್ಲ ಅವಕಾಶ

* ಆಹಾರ, ಹಣ್ಣು–ತರಕಾರಿ, ದಿನಸಿ, ಮೀನು– ಮಾಂಸ, ಪ್ರಾಣಿಗಳ ಆಹಾರಗಳನ್ನು (ಬೆಳಿಗ್ಗೆ 6 ರಿಂದ 10 ವರೆಗೆ ಮಾತ್ರ ಮಾರಾಟ ಮಾಡುವುದು), ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶವಿದೆ. 24x7 ಎಲ್ಲ ಬಗೆಯ ಹೋಂ ಡೆಲಿವರಿಗೆ ಅವಕಾಶ

*ಬೆಳಿಗ್ಗೆ 6 ರಿಂದ 10 ರವರೆಗೆ ಮದ್ಯದಂಗಡಿಯಿಂದ ಪಾರ್ಸೆಲ್‌ ಒಯ್ಯಬಹುದು.

*ತಳ್ಳುವ ಗಾಡಿಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 6 ರವರೆಗೆ ಹಣ್ಣು ತರಕಾರಿ ಮಾರಬಹುದು

* ಹಾಲಿನ ಬೂತ್‌ಗಳು ಮತ್ತು ಹಾಪ್‌ಕಾಮ್ಸ್‌ಗಳು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ತೆರೆಯಬಹುದು.

*ಆಹಾರ ಸಂಸ್ಕರಣಾ ಘಟಕಗಳು, ಬ್ಯಾಂಕ್‌, ವಿಮಾ ಕಚೇರಿಗಳು, ಎಟಿಎಂಗಳು, ದೂರಸಂಪರ್ಕ, ಇಂಟರ್‌ನೆಟ್‌ ಸೇವೆ

*ಇ–ಕಾರ್ಮಸ್‌ನವರು ಮನೆಗಳಿಗೆ ವಸ್ತುಗಳನ್ನು ತಲುಪಿಸಲು ಅವಕಾಶ

* ಕೋಲ್ಡ್‌ ಸ್ಟೋರೇಜ್‌, ಗೋದಾಮು ಸೇವೆಗಳು

* ವಿಮಾನ ಸಂಚಾರ ಮತ್ತು ರೈಲಿನ ಕಾರ್ಯಾಚರಣೆ ಇದೆ. ಇದರ ಮೂಲಕ ಬಂದವರು ಟಿಕೆಟ್‌ ತೋರಿಸಿ, ತಮ್ಮ ಮನೆಗಳಿಗೆ ತಾವೇ ಮಾಡಿಕೊಂಡ ಖಾಸಗಿ ವಾಹನ, ಆಟೋ, ಕ್ಯಾಬ್‌ ಮೂಲಕ ಹೋಗಬಹುದು

* ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳು, ಸಾರ್ವಜನಿಕ ಮತ್ತು ಖಾಸಗಿ ರಂಗದ ಉದ್ಯಮಗಳು ಕೋವಿಡ್‌ ಮಾರ್ಗಸೂಚಿ ಅನುಸರಿಸಿ ಕಾರ್ಯನಿರ್ವಹಿಸಬಹುದು.

* ಕೋವಿಡ್ ನಿಯಮ ಪಾಲಿಸಿ ನಿರ್ಮಾಣ ಕಾಮಗಾರಿಗಳನ್ನು ನಡೆಸಬಹುದು. ಕಾರ್ಮಿಕರಿಗೆ ವಾಸ್ತವ್ಯಕ್ಕೆ ಸ್ಥಳದಲ್ಲಿಯೇ ವ್ಯವಸ್ಥೆ ಮಾಡಬಹುದು.

* ಮದುವೆಗಳಿಗೆ ಅವಕಾಶ ಇದ್ದು, 50 ಜನ ಮೀರುವಂತಿಲ್ಲ.

* ಅಂತ್ಯಕ್ರಿಯೆಗೆ 5 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ

* ಆಸ್ಪತ್ರೆಗಳು, ಆಯುಷ್ ಮತ್ತು ವೆಟರ್ನರಿ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಔಷಧದ ಅಂಗಡಿಗಳು, ಲ್ಯಾಬ್‌ಗಳು, ಜನೌಷಧಿ ಕೇಂದ್ರಗಳು, ರಕ್ತ ನಿಧಿಗಳು

* ಕೃಷಿ ಚಟುವಟಿಕೆಗಳು

* ಅಂಗವಿಕಲರು, ಬುದ್ಧಿಮಾಂದ್ಯರು, ಹಿರಿಯ ನಾಗರಿಕರ ಆರೈಕೆ ವ್ಯವಸ್ಥೆ

ಏನೆಲ್ಲ ಇರುವುದಿಲ್ಲ

* ಮೆಟ್ರೊ ಸೇವೆ

* ತುರ್ತು ಸಂದರ್ಭ ಹೊರತುಪಡಿಸಿ ಟ್ಯಾಕ್ಸಿ, ಕ್ಯಾಬ್‌, ಆಟೋಗಳಿಗೆ ಹಾಗೂ ನಾಗರಿಕರ ಓಡಾಟ

* ಶಾಲಾ–ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಸೆಂಟರ್‌ಗಳು ನಡೆಯುವಂತಿಲ್ಲ. ಆನ್‌ಲೈನ್ ತರಗತಿಗಳಿಗಷ್ಟೇ ಅವಕಾಶ

* ಹೊಟೇಲ್‌, ರೆಸ್ಟೋರೆಂಟ್‌ ಮತ್ತು ಆತಿಥ್ಯ ಸೇವೆಗಳು. (ಹೊಟೇಲ್‌ ಮತ್ತು ರೆಸ್ಟೋರೆಂಟ್‌ಗಳಿಂದ ಪಾರ್ಸೆಲ್‌ ಒಯ್ಯಬಹುದು)

* ಸಿನಿಮಾ ಹಾಲ್‌, ಶಾಪಿಂಗ್ ಮಾಲ್‌, ಜಿಮ್ನಾಷಿಯಂ, ಕ್ರೀಡಾ ಕಾಂಪ್ಲೆಕ್ಸ್‌, ಈಜುಕೊಳ

* ಸಾಮಾಜಿಕ, ರಾಜಕೀಯ, ಧಾರ್ಮಿಕ, ಮನರಂಜನೆಗಾಗಿ ಜನರನ್ನು ಸೇರಿಸುವುದು ನಿಷೇಧ.

ಕಾರ್ಯ ನಿರ್ವಹಿಸುವ ಸರ್ಕಾರಿ ಕಚೇರಿಗಳು:

* ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್‌, ಹೋಮ್‌ ಗಾರ್ಡ್‌, ಅಗ್ನಿಶಾಮಕ,ಕಂದಾಯ ವಿದ್ಯುತ್‌, ನೀರು, ನೈರ್ಮಲ್ಯ

* ಬಿಬಿಎಂಪಿ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳು.

ಕಟ್ಟುನಿಟ್ಟಿನ ಕ್ರಮಗಳೇನು?

* ಸಾರ್ವಜನಿಕರು ರಸ್ತೆಗೆ ಬರುವಂತಿಲ್ಲ

* ಖಾಸಗಿ ಮತ್ತು ಸರ್ಕಾರಿ ಬಸ್‌ಗಳು, ವಾಹನಗಳು ಸಂಚಾರ ಇಲ್ಲ.

*ಅಂತರ ಜಿಲ್ಲೆ ಮತ್ತು ಅಂತರ ರಾಜ್ಯಗಳ ವಾಹನ ಸಂಚಾರವಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಅವಕಾಶ ನೀಡಲಾಗುವುದು.

* ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಹೈಕೋರ್ಟ್‌ ನ್ಯಾಯಮೂರ್ತಿಗಳು, ಅಧಿಕಾರಿಗಳು ಸಿಬ್ಬಂದಿ ಗುರುತಿನ ಚೀಟಿ ಇಟ್ಟುಕೊಂಡರೆ ಮಾತ್ರ ಸಂಚಾರಕ್ಕೆ ಅವಕಾಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT