ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಿಷನ್ ಪಡೆಯಲು ಸರ್ಕಾರಿ ಹಣ ಹಾಕಿದ್ದೀರಾ: ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

Last Updated 12 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಮಿಷನ್ ಪಡೆಯಲು ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ನೀವು ಸರ್ಕಾರದ ಹಣ ಹಾಕಿದ್ದೀರಾ’ ಎಂದು ಬಿಜೆಪಿ ನಾಯಕರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸರ್ಕಾರ ಸೂಚನೆ ನೀಡಿದ್ದರೆ ವಿಮಾನ ನಿಲ್ದಾಣದವರೇ ಪ್ರತಿಮೆ ನಿರ್ಮಿಸುತ್ತಿದ್ದರು. ಅವರಿಗೆ (ಬಿಜೆಪಿಯವರಿಗೆ) ಕಮಿಷನ್ ಬೇಕಿತ್ತೋ ಅಥವಾ ಬೇರೆ ಕಾರಣಕ್ಕೋ ಅವರೇ ನಿರ್ಮಾಣ ಮಾಡಿದ್ದಾರೆ’ ಎಂದು ದೂರಿದರು.

‘ನಾವು (ಕಾಂಗ್ರೆಸ್‌) ಐದು ಎಕರೆ ಜಾಗವನ್ನು ಕೆಂಪೇಗೌಡ ಪ್ರಾಧಿಕಾರಕ್ಕೆ ನೀಡಿದ್ದೇವೆ. ಅಲ್ಲಿ ಒಂದು ಕಟ್ಟಡ ನಿರ್ಮಾಣ ಮಾಡಬಹುದಾಗಿತ್ತು. ಆದರೆ, ಬಿಜೆಪಿಯವರು ಅದ್ದೂರಿ ಕಾರ್ಯಕ್ರಮ ಮಾಡಲು, ಪ್ರಚಾರ ಪಡೆಯಲು ಈ ರೀತಿ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ದೇವೇಗೌಡ, ಎಸ್.ಎಂ. ಕೃಷ್ಣ, ಕುಮಾರಸ್ವಾಮಿ, ಶಿವಕುಮಾರ್ ಅವರೆಲ್ಲ ಈ ಸರ್ಕಾರಕ್ಕೆ ಬೇಡ. ಅವರಿಗೆ ಕೇವಲ ಚುನಾವಣೆ ಹಾಗೂ ಮತ ಬ್ಯಾಂಕ್ ಮಾತ್ರ ಮುಖ್ಯ. ಅದಕ್ಕೆ ಬೇಕಾದ ಎಲ್ಲ ಕೆಲಸ ಮಾಡುತ್ತಾರೆ.‌ ಮಾತೆತ್ತಿದರೆ ರಾಜಕಾರಣ ಹುಡುಕುತ್ತಾರೆ’ ಎಂದು ಟೀಕಿಸಿದರು.

‘ಬಿಜೆಪಿಯವರಿಗೆ ಸಂಸ್ಕಾರವೇ ಇಲ್ಲ. ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಗಳು, ಯಾರು ಕಾರ್ಯಕ್ರಮದಲ್ಲಿ ಇರಬೇಕು ಎಂಬುದೇ ಗೊತ್ತಿಲ್ಲ. ನಾವು ಪ್ರಧಾನಿಗೆ ಪತ್ರ ಬರೆದು, ಕೋವಿಡ್ ಕಾಲದ ಪರಿಹಾರದಿಂದ ಹಿಡಿದು ಅವರು ನೀಡಿದ್ದ ಭರವಸೆಗಳವರೆಗೆ ಹಲವು ಪ್ರಶ್ನೆಗಳನ್ನು ಕೇಳಿದ್ದೆವು. ಅವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸದೆ ಕೇವಲ ಪ್ರಮುಖ ನಾಯಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೋಗಿದ್ದಾರೆ. ಇದು ಡಬಲ್ ಎಂಜಿನ್ ಸರ್ಕಾರವಲ್ಲ, ಟ್ರಬಲ್ ಎಂಜಿನ್ ಸರ್ಕಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಣ್ಣಿನ ಮಕ್ಕಳಾಗಿ ನಾವು ಕಾರ್ಯಕ್ರಮ ಮಾಡಬೇಕಿತ್ತು, ಮಾಡಿದ್ದೇವೆ’ ಎಂಬ ಸಚಿವ ಆರ್‌. ಅಶೋಕ ಹೇಳಿಕೆಗೆ, ‘ಅಲ್ಲಿ ಅಶೋಕ ಅವರನ್ನು ಲೆಕ್ಕಕ್ಕೇ ಇಟ್ಟಿಲ್ಲ. ಕೇವಲ ಹೆಸರಿಗೆ ಮುಂದಿಟ್ಟುಕೊಂಡಿದ್ದಾರೆ. ಅಲ್ಲಿ ಆಂತರಿಕ ಯುದ್ಧ ನಡೆಯುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT