ಸೋಮವಾರ, ಜೂನ್ 27, 2022
28 °C

ಗುಜರಾತಿನಲ್ಲಿ ಕೊಡಗಿನ ಯುವಕ ಆತ್ಮಹತ್ಯೆ: ಕೊಲೆ ಶಂಕೆ ವ್ಯಕ್ತಪಡಿಸಿದ ತಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಂಟಿಕೊಪ್ಪ: ಪೈಲೆಟ್ ಆಗಬೇಕೆಂಬ ಕನಸು ಕಂಡಿದ್ದ ಸಮೀಪದ ಮಾದಾಪುರದ ಜಂಬೂರುಬಾಣೆಯ ಯುವಕ ಗುಜರಾತಿನ ಅಹಮದಾಬಾದ್‌ನಲ್ಲಿ ಶುಕ್ರವಾರ (ಜೂನ್ 4) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುಂಟಿಕೊಪ್ಪ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಬೋಪಯ್ಯ ಮತ್ತು ಮಾದಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಪೊನ್ನಮ್ಮ ಅವರ ಪುತ್ರ ಸಿ.ಬಿ. ಬೋಪಯ್ಯ (23) ಆತ್ಮಹತ್ಯೆ ಮಾಡಿಕೊಂಡ ಯುವಕ.

ಅಹಮದಾಬಾದ್‌ ಏರೋನಾಟಿಕ್ಸ್‌ ಸೆಂಟರ್‌ನ ತರಬೇತಿ ಕೇಂದ್ರದಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಸಿ.ಬಿ. ಬೋಪಯ್ಯ, ಇನ್ನು ಮೂರು ತಿಂಗಳಲ್ಲಿ ತರಬೇತಿ ಮುಗಿಸಿ ಪೈಲಟ್ ಆಗಬೇಕಿತ್ತು. ಆದರೆ, ತರಬೇತಿ ಕೇಂದ್ರ ಸಮೀಪದ ಕಾಡಿನಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಹಮದಾಬಾದ್ ಪೊಲೀಸರು ಶುಕ್ರವಾರ ರಾತ್ರಿ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ತಂದೆ ಬೋಪಯ್ಯ ಮತ್ತು ಕುಟುಂಬದ ಕೆಲ ಸದಸ್ಯರು ಗುಜರಾತಿಗೆ ತೆರಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮರಣೋತ್ತರ ಪರೀಕ್ಷೆಯ ನಂತರ ವಿಮಾನದ ಮೂಲಕ ಮೃತದೇಹವನ್ನು ಬೆಂಗಳೂರಿಗೆ ತಂದು, ಅಲ್ಲಿಂದ ಆಂಬುಲೆನ್ಸ್ ಮೂಲಕ ಭಾನುವಾರ ಬೆಳಿಗ್ಗೆ ಸ್ವಗ್ರಾಮಕ್ಕೆ ತಂದಿದ್ದಾರೆ.

ಜಂಬೂರು ಬಾಣೆಯ ತೋಟದಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ಗೌಡ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು.

‘ನೇಣು ಹಾಕಿದ ಸ್ಥಿತಿಯಲ್ಲಿದ್ದಾಗ ಮಗನ ಕಿವಿಯಲ್ಲಿ ಇಯರ್‌ಫೋನ್, ವಾಚ್, ಶೂ ಹಾಗೇ ಇದ್ದವು. ಇದರಿಂದ ಯಾರೋ ಕೊಲೆ ಮಾಡಿರುವ ಸಂಶಯ ಮೂಡುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ನಿಜಾಂಶ ತಿಳಿಯಲಿದೆ’ ಎಂದು ತಂದೆ ಬೋಪಯ್ಯ ಅನುಮಾನ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು