ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ರಂಜಿಸಿದ ಪುತ್ತರಿ ಕೋಲಾಟ

Last Updated 2 ಡಿಸೆಂಬರ್ 2020, 14:42 IST
ಅಕ್ಷರ ಗಾತ್ರ

ನಾಪೋಕ್ಲು: ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಪುತ್ತರಿ ಹಬ್ಬದ ಸಂಭ್ರಮದೊಂದಿಗೆ ಊರ ಮಂದ್ ಗಳಲ್ಲಿ ಕೋಲಾಟಗಳೂ ಗ್ರಾಮೀಣ ಜನರನ್ನು ರಂಜಿಸುತ್ತಿವೆ. ವಿವಿಧ ಮಂದ್‌ಗಳಲ್ಲಿ ಹಿರಿ ಕಿರಿಯರೆಲ್ಲರೂ ಒಗ್ಗೂಡಿ ಪುತ್ತರಿ ಕೋಲಾಟಕ್ಕೆ ಸಿದ್ಧತೆ ನಡೆಸಿದರು.

ಭಾಗಮಂಡಲದ ಸುತ್ತಮುತ್ತಲಿನ ಊರುಗಳಾದ ತಾವೂರು, ತಣ್ಣಿಮಾನಿ, ಚೇರಂಗಾಲ ಹಾಗೂ ಕೋರಂಗಾಲ ದೇವಾಲಯಗಳಲ್ಲಿ ಹುತ್ತರಿ ಆಚರಣೆ ನೆರವೇರಿದ ಬಳಿಕ ದೇವಾಲಯಗಳಲ್ಲಿ ಗ್ರಾಮದ ಮಂದಿ ಸಾಂಪ್ರದಾಯಿಕ ಕೋಲಾಟ ನಡೆಸಿ ಬಳಿಕ ಕೋಲುಮಂದಿಗೆ ತೆರಳಿದರು. ಗ್ರಾಮವಾರು ಕೋಲು ಹೊಡೆದು ಸಂಭ್ರಮಿಸಿದರು. ಬಳಿಕ ಎಲ್ಲಾ ಗ್ರಾಮಸ್ಥರು ಒಟ್ಟಾಗಿ ಕೋಲು ಮಂದ್‌ನಲ್ಲಿ ಹುತ್ತರಿ ಕೋಲಾಟ ನಡೆಸಿ ಸಂಭ್ರಮಿಸಿದರು.

ಹುತ್ತರಿ ಹಬ್ಬದ ಪ್ರಯುಕ್ತ ಹಳೆ ತಾಲೂಕಿನ ಸಮೀಪದ ನಾಪೋಕ್ಲು ಊರ್ ಮಂದ್‌ನಲ್ಲಿ ಹುತ್ತರಿ ಕೋಲಾಟ ಕಾರ್ಯಕ್ರಮವನ್ನು ನಡೆಸಲಾಯಿತು. ಸಂಪ್ರದಾಯದಂತೆ ಹುತ್ತರಿ ಹಬ್ಬದ ಮೊದಲು ಈಡ್ ಕಾರ್ಯಕ್ರಮದಲ್ಲಿ ಮೂರು ದಿವಸ ಮಂದ್‌ನಲ್ಲಿ ರಾತ್ರಿ ಕೋಲಾಟ ನಡೆಸಿ ಹುತ್ತರಿ ಕಳೆದ ಬಳಿಕ ಸಂಜೆ ಊರ್ ಮಂದ್‌ನಲ್ಲಿ ಕೋಲಾಟ ನಡೆಸುವುದು ಸಂಪ್ರದಾಯ. ಊರ್ ಮಂದ್ ನಲ್ಲಿ ಎರಡು ದಿನಗಳ ಕಾಲ ಕೋಲಾಟ ನಡೆಸಿ ಬಳಿಕ ನಾಡ್ ಮಂದ್‌ನಲ್ಲಿ ಎರಡು ದಿನ ಕೋಲಾಟ ನಡೆಸಿ ಹುತ್ತರಿ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ. ಊರಿನ ಹಿರಿಯರಾದ ಕುಲ್ಲೇಟಿರ ಮುತ್ತಪ್ಪ, ಅರೆಯಡ ಸೋಮಪ್ಪ, ಬೊಪ್ಪಂಡ ಕುಶಾಲಪ್ಪ, ಕುಲ್ಲೇಟಿರ ಗುರುವಪ್ಪ ಮತ್ತಿತರರು ಇದ್ದರು.

ಪೇರೂರು ಗ್ರಾಮದ ಮಂದ್‌ನಲ್ಲಿಯೂ ಗ್ರಾಮಸ್ಥರು ಹುತ್ತರಿ ಕೋಲಾಟ ನಡೆಸಿ ಸಂಭ್ರಮಿಸಿದರು. ಮೊದಲು ನಾಲ್ಕಾರು ದಿನಗಳು ಹುತ್ತರಿ ಕೋಲಾಟದ ಸಂಭ್ರಮವಿರುತ್ತಿತ್ತು. ಈಗ ಎರಡು ದಿನಗಳಿಗೆ ಕೋಲಾಟ ಸೀಮಿತಗೊಂಡಿದೆ ಎಂದು ಗ್ರಾಮದ ಅಪ್ಪಚ್ಚಿರ ಹ್ಯಾರಿ ಹೇಳಿದರು.

ನಾಪೋಕ್ಲುವಿನ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್ ನಲ್ಲಿ ಗುರುವಾರ ಜರುಗುವ ಪುತ್ತರಿ ಕೋಲಾಟ ಧಾನ್ಯ ಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಪುತ್ತರಿ ಹಬ್ಬದ ಸಂಭ್ರಮವನ್ನು ವಿಸ್ತರಿಸಲಿದೆ. ದೊಡ್ಡ ಕೋಲಾಟಕ್ಕಾಗಿ ಬುಧವಾರ ತಯಾರಿ ನಡೆಸಲಾಯಿತು.

ನಾಪೋಕ್ಲು ಬೇತು ಮತ್ತು ಕೋಕೇರಿ ಗ್ರಾಮಗಳನ್ನು ಒಳಗೊಂಡಂತೆ ನಡೆಯುವ ನೂರಂಬಾಡ ಕೋಲ್ ಮಂದ್ ನಲ್ಲಿ ಪುತ್ತರಿ ಕೋಲಾಟಕ್ಕೂ ಮುನ್ನ ಬೇತು ಮಕ್ಕಿ ಶಾಸ್ತಾವು ದೇವಾಲಯದಿಂದ ಸಂಪ್ರದಾಯದಂತೆ ತಕ್ಕ ಮುಖ್ಯಸ್ಥರು ದೇವರ ತಿರುವಾಭರಣದೊಂದಿಗೆ ಕಾಪಾಳ ನೃತ್ಯ ವೇಷಧಾರಿಗಳು ಮತ್ತು ಕೊಂಬು ಕೊಟ್ಟ್ ವಾಲಗದೊಂದಿಗೆ ಮೆರವಣಿಗೆಯ ಮೂಲಕ ನೂರಂಬಾಡ ಮಂದ್ ನತ್ತ ಹೆಜ್ಜೆ ಹಾಕಿ ಅಪರಾಹ್ನ ಕೋಲಾಟವಾಡಿ ಗ್ರಾಮಸ್ಥರನ್ನು ರಂಜಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT