ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿಗೆ ಕಳುಹಿಸಿದರೂ ಪಾದಯಾತ್ರೆ ನಡೆಸಿಯೇ ಸಿದ್ಧ: ಡಿ.ಕೆ.ಶಿವಕುಮಾರ್

ಕೋವಿಡ್ ನೆಪದಲ್ಲಿ ಪಾದಯಾತ್ರೆ ತಡೆಯಲು ಹುನ್ನಾರ: ಸಿದ್ದರಾಮಯ್ಯ
Last Updated 3 ಜನವರಿ 2022, 17:46 IST
ಅಕ್ಷರ ಗಾತ್ರ

ಮೈಸೂರು: ‘ಮೇಕೆದಾಟು ಪಾದಯಾತ್ರೆಯನ್ನುಕೋವಿಡ್ ನೆಪದಲ್ಲಿ ತಡೆಯಲು ಬಿಜೆಪಿ ಸರ್ಕಾರ ಹುನ್ನಾರ ನಡೆಸಿದೆ’. ಆದರೆ, ಪಾದಯಾತ್ರೆಯನ್ನು ತಡೆಯಲು ಆಗಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಇಲ್ಲಿ ಗುಡುಗಿದರು.

'ಲಾಕ್‌ಡೌನ್ ಜೊತೆಗೆ, ಬೇರೆ ಏನೇ ಮಾಡಲಿ.ಜೈಲಿಗೆ ಕಳುಹಿಸಿದರೂ ಪರವಾಗಿಲ್ಲ ಪಾದಯಾತ್ರೆ ನಡೆಸಿಯೇ ಸಿದ್ಧ. ಕೋವಿಡ್‌ ನಿಯಮ ಉಲ್ಲಂಘಿಸಿದ್ದೇನೆಂದು ಈಗಾಗಲೇ ನನ್ನ ಮೇಲೆ ಮೊಕದ್ದಮೆ ದಾಖಲಾಗಿದ್ದು, ಸಮನ್ಸ್‌ ಕೂಡ ಬಂದಿದೆ. ಕೋವಿಡ್‌ ಇದ್ದರೂ ಮದುವೆಯಲ್ಲಿ ಪಾಲ್ಗೊಂಡು ಮಾರ್ಗಸೂಚಿ ಉಲ್ಲಂಘಿಸಿರುವ ಮುಖ್ಯಮಂತ್ರಿ, ಮಂತ್ರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ' ಎಂದು ಶಿವಕುಮಾರ್‌ ಜಂಟಿ ಸುದ್ದಿಗೊಷ್ಠಿಯಲ್ಲಿ ಪ್ರಶ್ನಿಸಿದರು.

‘ಮುಂಜಾಗ್ರತೆ ಕ್ರಮಕೈಕೊಂಡು ಪಾದಯಾತ್ರೆ ನಡೆಸುತ್ತೇವೆ. ಒಂದು ಲಕ್ಷ ಮಾಸ್ಕ್ ತರಿಸಲಿದ್ದೇವೆ. 10 ವೈದ್ಯಕೀಯ ತಂಡ ಇರಲಿದ್ದು, 100 ವೈದ್ಯರು ಪಾಲ್ಗೊಳ್ಳುತ್ತಾರೆ. ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು' ಎಂದು ತಿಳಿಸಿದರು.

‘ಕುಮಾರಸ್ವಾಮಿ ಅವರ ಹಿತವಚನ ಜೀರ್ಣಿಸಿಕೊಳ್ಳುವ ಶಕ್ತಿ ನನಗಿದೆ. ನಮ್ಮದು ನೀರಿಗಾಗಿ ನಡೆಯುತ್ತಿರುವ ಹೋರಾಟ. ಯಾವುದೋ ಪ್ರಾಂತ್ಯದ ಮೇಲಿನ ಹಿಡಿತಕ್ಕಾಗಿ ಅಲ್ಲ. ನಾನು ಮೈಸೂರು ಭಾಗದವನು ನಿಜ. ಆದರೆ, ಹಾಸನದಿಂದ ಬಂದವರನ್ನು ರಾಮನಗರದ ಜನ ಮುಖ್ಯಮಂತ್ರಿ, ಪ್ರಧಾನಮಂತ್ರಿ ಮಾಡಿದರು. ಪಂಚೆ ತೊಟ್ಟ ಮಾತ್ರಕ್ಕೆ ರೈತರ ಮಗ ಎಂದು ಹೇಳಿಕೊಳ್ಳಲು ಆಗುವುದಿಲ್ಲ’ ಎಂದರು.

ಸಿದ್ದರಾಮಯ್ಯ ಮಾತನಾಡಿ, ‘ಕೋವಿಡ್ ನಿಯಮ ಮುರಿಯುವವರು ಬಿಜೆಪಿಯವರೇ. ಉತ್ತರ ಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ನಡೆಸುತ್ತಿರುವ ಸಭೆಗಳಲ್ಲಿ ಸೇರುವ ಜನ ಮಾಸ್ಕ್ ಹಾಕಿಕೊಂಡು ಬರುತ್ತಿದ್ದಾರೆಯೇ?’ ಎಂದು ಹರಿಹಾಯ್ದರು.

‘ಎರಡೂವರೆ ವರ್ಷಗಳಲ್ಲಿ ಬಿಜೆಪಿಯ 25 ಸಂಸದರಾಗಲಿ, ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ ಮೇಕೆದಾಟು ಯೋಜನೆ ಜಾರಿಗೆ ಅನುಮತಿ ಕೊಡಿ ಎಂದು ಕೇಂದ್ರ ಸರ್ಕಾರದ ಬಳಿ ಹೋಗಿ ಕೇಳಿದ್ದಾರೆಯೇ’ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿ ನಂತರ, ಮೇಕೆದಾಟು ಯೋಜನೆಗಾಗಿ ನಗರದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಜನಾಂದೋಲನ ಸಮಾವೇಶದ ಪಾದಯಾತ್ರೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.

‘ಸರ್ಕಾರ ಅಸ್ಥಿರಗೊಳಿಸಲ್ಲ’

‘2023ರ ಏಪ್ರಿಲ್‌ನಲ್ಲೇ ವಿಧಾನಸಭೆ ಚುನಾವಣೆ ನಡೆಯಲೆಂದು ನಾವು ಬಯಸುತ್ತೇವೆ. ಈಗ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಇವರ ಕಚ್ಚಾಟದಿಂದ ಸರ್ಕಾರ ಪತನವಾಗಿ ಚುನಾವಣೆ ಬಂದರೆ ಎದುರಿಸಲು ಸಿದ್ಧರಿದ್ದೇವೆ. ಆದರೆ, ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯಕ್ಕೆ ಕಾಂಗ್ರೆಸ್ ಮುಂದಾಗುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

‘ಇದೊಂದು ಎಮ್ಮೆ ಚರ್ಮದ ಸರ್ಕಾರ. ಇವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಬಿಜೆಪಿ ಆಡಳಿತ ನಡೆಸುತ್ತಿದ್ದರೂ ಜನ ಕಾಂಗ್ರೆಸ್‌ ಪಕ್ಷವನ್ನು ವಿವಿಧ ಚುನಾವಣೆಗಳಲ್ಲಿ ಗೆಲ್ಲಿಸುತ್ತಿದ್ದಾರೆ’ ಎಂದು ಶಿವಕುಮಾರ್‌ ತಿಳಿಸಿದರು.

***

ಮೇಕೆದಾಟು ಯೋಜನೆಯನ್ನು ಬಿಜೆಪಿ ಕಾರ್ಯಗತಗೊಳಿಸಲಿದೆ ಎಂದು ತಿಳಿದು ಕಾಂಗ್ರೆಸ್‌ ನಾಯಕರು ಪಾದಯಾತ್ರೆ ನಡೆಸಿ, ರಾಜಕೀಯ ಲಾಭಗಳಿಸಲು ಹೊರಟಿದ್ದಾರೆ.

– ಬಿ.ಸಿ.ಪಾಟೀಲ, ಕೃಷಿ ಸಚಿವ

ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡಿನ ವಿರುದ್ಧ ಹೋರಾಡಿ ಅನುಷ್ಠಾನಗೊಳಿಸಬೇಕಾಗಿದೆ. ರಾಜಕಾರಣ ಬಿಟ್ಟು ಸರ್ಕಾರಕ್ಕೆ‌ ಸಹಕಾರ ನೀಡಿ.

– ಜಗದೀಶ ಶೆಟ್ಟರ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT