ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಅಂಕ ತಿರುಚಿದ ಆರೋಪ, 90 ದಿನದಲ್ಲಿ ‘ವ್ಯಾಜ್ಯ’ ವಿಲೇಗೆ ನಿರ್ದೇಶನ

ಹೈಕೋರ್ಟ್‌ನಿಂದ ಕೆಎಟಿ‌ಗೆ ಪ್ರಕರಣ ವರ್ಗಾವಣೆ
Last Updated 7 ಜುಲೈ 2021, 6:22 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯ ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನದ ಅಂಕಗಳನ್ನು ತಿರುಚುವ ಮೂಲಕ 2015ನೇ ಸಾಲಿನ 428 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಆಯ್ಕೆಯಲ್ಲಿ ವ್ಯಾಪಕ ಅಕ್ರಮ ಎಸಗಲಾಗಿದೆ ಎಂಬ ಗಂಭೀರ ಆರೋಪದ ಪ್ರಕರಣವನ್ನು ರಾಜ್ಯ ಹೈಕೋರ್ಟ್‌ ಪೀಠ, ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ವರ್ಗಾಯಿಸಿದೆ. ಈ ವ್ಯಾಜ್ಯದ ವಿಚಾರಣೆಯನ್ನು ಜುಲೈ 6 ರಿಂದ ಆರಂಭಿಸಿ 90 ದಿನಗಳ ಒಳಗೆ ಮುಕ್ತಾಯಗೊಳಿಸಲೂ ನಿರ್ದೇಶಿಸಿದೆ.

ಮುಖ್ಯ ಪರೀಕ್ಷೆಯ ಅಂಕಗಳನ್ನು ತಿರುಚಲಾಗಿದೆ ಎಂದು ದೂರಿ ಹುದ್ದೆ ವಂಚಿತ ಅಭ್ಯರ್ಥಿ ಸುಧನ್ವ ಭಾಂಡೋಳ್ಕರ್‌ ಸೇರಿ 52 ಅಭ್ಯರ್ಥಿಗಳು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಮೇಲ್ಮನವಿ ವ್ಯಾಪ್ತಿ ಕೆಎಟಿ ಆಗಿರುವುದರಿಂದ, ಅಲ್ಲಿಗೇ ಪ್ರಕರಣವನ್ನು ವರ್ಗಾಯಿಸಿ, ಜುಲೈ 12ರಿಂದ ವಿಚಾರಣೆ ಆರಂಭಿಸುವಂತೆ ಕೋರ್ಟ್‌ ನಿರ್ದೇಶನ ನೀಡಿದೆ.

ಮುಖ್ಯ ಪರೀಕ್ಷೆಯ ಮೌಲ್ಯಮಾಪನ ನಡೆಸಿದ್ದ ಹೊರಗುತ್ತಿಗೆ ಸಂಸ್ಥೆ ಮುಂಬೈಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನಿಂದ (ಟಿಸಿಎಸ್) ಯಾವ ಮಾದರಿಯಲ್ಲಿ ದತ್ತಾಂಶಗಳನ್ನು ಪಡೆಯಲಾಗಿತ್ತು ಎಂಬ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಹೈಕೋರ್ಟ್‌ಗೆ ಸೋಮವಾರ (ಜುಲೈ 5ರಂದು) ಪ್ರಮಾಣಪತ್ರ ಸಲ್ಲಿಸಿದೆ.

ಮಾರ್ಚ್‌ 23 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಪರೀಕ್ಷೆಯ ಫಲಿತಾಂಶ ಸಿದ್ಧಪಡಿಸಲು ಟಿಸಿಎಸ್‌ನಿಂದ ದತ್ತಾಂಶಗಳನ್ನು ಹೇಗೆ ಪಡೆದಿತ್ತು ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಕೆಪಿಎಸ್‌ಸಿಗೆ ನಿರ್ದೇಶಿಸಿತ್ತು. ಆದರೆ, ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರಾಗಿದ್ದ ದಿವ್ಯಾ ಪ್ರಭು ಅವರು ಮಾರ್ಚ್‌ 24ರಿಂದ ಮೇ 1ರವರೆಗೆ ರಜೆಯ ಮೇಲೆ ತೆರಳಿದ್ದರು. ಈ ಮಧ್ಯೆ, ಅವರನ್ನು ಸರ್ಕಾರ (ಏ. 29ರಂದು) ವರ್ಗಾವಣೆ ಮಾಡಿತ್ತು, ಹೀಗಾಗಿ, ರೇಷ್ಮೆ ಕೈಗಾರಿಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ. ಕನಗವಲ್ಲಿ ಅವರಿಗೆ ಪರೀಕ್ಷಾ ನಿಯಂತ್ರಕರ ಹೆಚ್ಚುವರಿ ಹೊಣೆ ನೀಡಲಾಗಿತ್ತು. ಇದೀಗ ಕನಗವಲ್ಲಿ ಅವರನ್ನು ಈ ಹುದ್ದೆಗೇ ವರ್ಗಾವಣೆ ಮಾಡಲಾಗಿದೆ. 2015ರ ಮುಖ್ಯ ಪರೀಕ್ಷೆಯ ಸಂದರ್ಭದಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಕೃಷ್ಣ ಬಾಜಪೇಯಿ ಅವರಿಂದ ಮಾಹಿತಿ ಪಡೆದು ಕನಗವಲ್ಲಿ ಅವರು ಪ್ರಮಾಣಪತ್ರ ಸಲ್ಲಿಸಿದ್ದಾರೆ.

‘ಇಡೀ ಮೌಲ್ಯಮಾಪನ ನಡೆಸಿ, ವ್ಯಕ್ತಿತ್ವ ಪರೀಕ್ಷೆಯ (ಸಂದರ್ಶನ) ಅಂಕಗಳನ್ನು ಸೇರಿಸಿ ಟಿಸಿಎಸ್‌ ಫಲಿತಾಂಶ ನೀಡಬೇಕಿತ್ತು. ಆದರೆ, ಕೆಪಿಎಸ್‌ಸಿ ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ, ಮುಖ್ಯ ಪರೀಕ್ಷೆಯ ಮೌಲ್ಯಮಾಪನವನ್ನು ಮಾತ್ರ ಟಿಸಿಎಸ್‌ ನಡೆಸಿದೆ. ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಲಿಖಿತ ಪರೀಕ್ಷೆಯ ಅಂಕಗಳಿಗೆ ಸೇರಿಸಿ ಅಂತಿಮ ಫಲಿತಾಂಶವನ್ನು ಮಾನವ ಮಧ್ಯಪ್ರವೇಶ ಇಲ್ಲದೆ ಸ್ವಯಂಚಾಲಿತ ಫಲಿತಾಂಶ ಪದ್ಧತಿಯನ್ನು ಅನುಸರಿಸಬೇಕಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಉಲ್ಲೇಖ ಇಲ್ಲ’ ಎಂದು ಅರ್ಜಿದಾರರು ಹೇಳಿದ್ದಾರೆ.

ಸೋಮವಾರ ನಡೆದ ವಿಚಾರಣೆ ವೇಳೆ ಪ್ರಕರಣವನ್ನು ಕೆಎಟಿಗೆ ವರ್ಗಾಯಿಸಿರುವ ಹೈಕೋರ್ಟ್‌, ಈ ಪ್ರಕರಣದಲ್ಲಿ ಸದ್ಯ ಇರುವ ಪ್ರತಿವಾದಿಗಳು ಯಥಾಸ್ಥಿತಿ ಮುಂದುವರಿಯಲಿದ್ದಾರೆ. ಹೊಸತಾಗಿ ನೋಟಿಸ್‌ ನೀಡುವ ಅಗತ್ಯ ಇಲ್ಲ. ಅಲ್ಲದೆ, ಪ್ರಕರಣದಲ್ಲಿ ಈವರೆಗೆ ನೀಡಿರುವ ಎಲ್ಲ ಮಧ್ಯಂತರ ಆದೇಶಗಳೂ ಅನ್ವಯವಾಗಲಿದೆ. ಅರ್ಜಿದಾರರು ಕೇಳುವ ಯಾವುದೇ ಮಾಹಿತಿಯನ್ನು ನೀಡಲು ಕೆಪಿಎಸ್‌ಸಿ ಮತ್ತು ಟಿಸಿಎಸ್‌ ನಿರಾಕರಿಸುವಂತಿಲ್ಲ’ ಎಂದು ನಿರ್ದೇಶಿಸಿದೆ.

2015 ನೇ ಸಾಲಿನ 428 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕೆಪಿಎಸ್‌ಸಿ 2019ರ ಡಿ. 23 ರಂದು ಪ್ರಕಟಿಸಿತ್ತು. ಅದರ ಬೆನ್ನಲ್ಲೇ, ಮುಖ್ಯ ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನ ಪಾರದರ್ಶಕವಾಗಿ ನಡೆದಿಲ್ಲ ಎಂದು ಶಂಕೆ ವ್ಯಕ್ತಪಡಿಸಿ 262 ಅಭ್ಯರ್ಥಿಗಳು ಕೆಪಿಎಸ್‌ಸಿಗೆ ಆಕ್ಷೇಪಣೆ ಸಲ್ಲಿಸಿದ್ದರು.

ಪ್ರಮಾಣಪತ್ರದಲ್ಲಿ ಏನಿದೆ?
ಮುಖ್ಯ ಪರೀಕ್ಷೆಯ ಪ್ರಶ್ನೆ ಮತ್ತು ಉತ್ತರಗಳನ್ನು ಒಳಗೊಂಡ ಬುಕ್‌ಲೆಟ್‌ಗಳನ್ನು ಸ್ಕ್ಯಾನ್‌ ಮಾಡಿ ಟಿಸಿಎಸ್‌ ಮೌಲ್ಯಮಾಪನ ಪ್ರಕ್ರಿಯೆ ನಡೆಸಿದೆ. ಟಿಸಿಎಸ್‌ಗೆ ನೀಡುವ ಮೊದಲು ಬುಕ್‌ಲೆಟ್‌ನ ಬಲ ಭಾಗದಲ್ಲಿರುವ ಬಾರ್‌ಕೋಡ್‌ಗಳನ್ನು (ಪರೀಕ್ಷಾರ್ಥಿಗೆ ಸಂಬಂಧಿಸಿದ ಮಾಹಿತಿ) ಪ್ರತ್ಯೇಕಿಸಲಾಗಿತ್ತು. ಮೌಲ್ಯಮಾಪನದ ಬಳಿಕ ದತ್ತಾಂಶಗಳನ್ನು ಕ್ಯಾಬಿನೆಟ್‌ (ಸಂಪುಟವಾಗಿ) ವೆಬ್‌ ಮೂಲಕ ಟಿಸಿಎಸ್‌ ನೀಡಿದೆ. ಅದನ್ನು ತೆರೆಯಲು ಲಾಗಿನ್‌ ಮತ್ತು ಪಾಸ್‌ವರ್ಡ್‌ ಅನ್ನು ಪರೀಕ್ಷಾ ನಿಯಂತ್ರಕರಿಗೆ ಟಿಸಿಎಸ್‌ ನೀಡಿತ್ತು. ಟಿಸಿಎಸ್‌ನ ಬಾರ್‌ಕೋಡ್‌ಗಳನ್ನು ಹೊಂದಿದ್ದ ಎಲ್ಲ ಉತ್ತರ ಪತ್ರಿಕೆಗಳ ಅಂಕಗಳನ್ನು ಒಳಗೊಂಡ ಎಕ್ಸೆಲ್‌ ಫೈಲ್‌ ಡೌನ್‌ಲೋಡ್‌ ಮಾಡಿಕೊಂಡು, ಪರೀಕ್ಷೆಯ ಫಲಿತಾಂಶ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಒಡಂಬಡಿಕೆಯಂತೆ (ಎಂಓಯು) ಎಲ್ಲ ದತ್ತಾಂಶಗಳನ್ನು ಸುರಕ್ಷಿತವಾಗಿ ಟಿಸಿಎಸ್‌ ತನ್ನ ಬಳಿ ಇಟ್ಟುಕೊಂಡಿತ್ತು ಎಂದು ಪ್ರಮಾಣಪತ್ರದಲ್ಲಿ ಕೆಪಿಎಸ್‌ಸಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT