ಗುರುವಾರ , ಜೂನ್ 30, 2022
22 °C
ಬಸ್‌ ಸಂಚಾರ ಆರಂಭವಾದ ಕೆಲವೇ ಗಂಟೆಗಳಲ್ಲಿ ನಿಲುವು ಬದಲಾವಣೆ

ಸಾರಿಗೆ ನೌಕರರ ಪ್ರತಿಭಟನೆ: ಮಾತುಕತೆ ವಿಫಲ, ಮುಷ್ಕರ ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಾಲ್ಕು ದಿನಗಳಿಂದ ನಡೆಸುತ್ತಿರುವ ಮುಷ್ಕರವನ್ನು ಅಂತ್ಯಗೊಳಿಸಲು ಭಾನುವಾರ ಸಂಜೆ ಒಪ್ಪಿಕೊಂಡಿದ್ದ ಸಾರಿಗೆ ನಿಗಮಗಳ ನೌಕರರ ಕೂಟ ಕೆಲವೇ ಗಂಟೆಗಳಲ್ಲಿ ತನ್ನ ನಿಲುವು ಬದಲಿಸಿತು. ಹೀಗಾಗಿ ರಾಜ್ಯದ ವಿವಿಧೆಡೆ ಬಸ್‌ಗಳ ಸಂಚಾರ ಆರಂಭವಾದ ಬೆನ್ನಲ್ಲೇ ಮುಷ್ಕರವನ್ನು ಮುಂದುವರಿಸುವುದಾಗಿ ಸಂಘಟನೆ ಘೋಷಿಸಿತು. ಇದರಿಂದಾಗಿ ನೌಕರರ ಕೂಟ ಮತ್ತು ಸರ್ಕಾರದ ನಡುವಿನ ಸರಣಿ ಮಾತುಕತೆ ವಿಫಲವಾಯಿತು.

ಸಾರಿಗೆ ನಿಗಮಗಳ ನೌಕರರನ್ನೂ ‘ಸರ್ಕಾರಿ ನೌಕರರು’ ಎಂದು ಪರಿಗಣಿಸಬೇಕೆಂಬ ಬೇಡಿಕೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಆದರೆ ವೇತನ, ಭತ್ಯೆ, ಕಿರುಕುಳ ತಡೆ, ಸೇವಾ ನಿಯಮಗಳಲ್ಲಿ ಬದಲಾವಣೆ, ವರ್ಗಾವಣೆ ನೀತಿಗೆ ಸಂಬಂಧಿಸಿದ ಎಂಟು ತೀರ್ಮಾನಗಳನ್ನು ಸಂಧಾನ ಸಭೆಯಲ್ಲಿ ಕೈಗೊಳ್ಳಲಾಯಿತು. ಮುಷ್ಕರ ಕೊನೆಗೊಳಿಸಲು ಒಪ್ಪಿಕೊಂಡಿದ್ದ ಸರ್ಕಾರಿ ನೌಕರರ ಕೂಟ, ‘ಸರ್ಕಾರಿ ನೌಕರರು’ ಎಂದು ಪರಿಗಣಿಸಬೇಕೆಂಬ ಬೇಡಿಕೆಯನ್ನು ಈಡೇರಿಸುವಂತೆ ಮತ್ತೆ ಪಟ್ಟು ಹಿಡಿದಿದೆ.

ಸಾರಿಗೆ ನಿಗಮಗಳ ನೌಕರರ ಕೂಟದ ನೇತೃತ್ವದಲ್ಲಿ ಗುರುವಾರ ಮುಷ್ಕರ ಆರಂಭವಾಗಿತ್ತು. ಶುಕ್ರವಾರದಿಂದ ರಾಜ್ಯದೆಲ್ಲೆಡೆ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿತ್ತು. ಭಾನುವಾರದ ವೇಳೆಗೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳ ಕಾರ್ಯಾಚರಣೆ ಬಹುತೇಕ ಸ್ಥಗಿತಗೊಂಡಿತ್ತು.

ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್‌. ಅಶೋಕ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬೆಳಿಗ್ಗೆಯಿಂದಲೇ ಸಾರಿಗೆ ನೌಕರರ ಕಾರ್ಮಿಕ ಸಂಘಟನೆಗಳ ಮುಖಂಡರು, ಅಧಿಕಾರಿಗಳ ಜತೆ ಸರಣಿ ಸಭೆಗಳನ್ನು ನಡೆಸಿದರು.

ನೌಕರರ ಬೇಡಿಕೆಗಳನ್ನು  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೂ ಚರ್ಚಿಸಿ ಬಂದರು. ಸಂಜೆ 6 ಗಂಟೆಗೆ ಕೊನೆಯ ಸುತ್ತಿನ ಮಾತುಕತೆ ಬಳಿಕ ಮುಷ್ಕರ ವಾಪಸ್‌ ಪಡೆಯುವ ನಿರ್ಧಾರಕ್ಕೆ ಬರಲಾಯಿತು. ಮುಷ್ಕರ ಹಿಂಪಡೆಯುವ ನಿರ್ಧಾರ ಪ್ರಕಟಿಸಲು ನೌಕರರ ಕೂಟದ ಪದಾಧಿಕಾರಿಗಳು ಸಭೆಯಲ್ಲಿ ಒಪ್ಪಿಕೊಂಡಿದ್ದರು.

ಲಕ್ಷ್ಮಣ ಸವದಿ ಮತ್ತು ಸಾರಿಗೆ ನಿಗಮಗಳ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್‌ ವಿಕಾಸಸೌಧದಲ್ಲಿ  ಸಂಜೆ ಸಂಧಾನ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ  ಮುಷ್ಕರ ಸ್ಥಳಕ್ಕೆ ತೆರಳಿ ಮುಂದಿನ ತೀರ್ಮಾನಗಳನ್ನು ಪ್ರಕಟಿಸುವುದಾಗಿ ತಿಳಿಸಿದ್ದರು.

ಸ್ವಾತಂತ್ರ್ಯ ಉದ್ಯಾನಕ್ಕೆ ಬಂದ ಸಂಘಟನೆಯ ಪದಾಧಿಕಾರಿಗಳು, ಮುಷ್ಕರದ ನೇತೃತ್ವ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಸೇರಿದಂತೆ ಪ್ರಮುಖರ ಜತೆ ಸಭೆ ನಡೆಸಿದರು. ಮುಷ್ಕರ ನಿರತರಿಗೆ ಸಂಧಾನ ಸಭೆಯ ವಿವರಗಳನ್ನು ನೀಡಿದ ಚಂದ್ರಶೇಖರ್‌, ‘ನಮ್ಮ ಪ್ರಮುಖ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿಲ್ಲ. ಒಂದು ಸುತ್ತಿನ ಸಭೆಯಷ್ಟೇ ನಡೆದಿದೆ. ಮತ್ತೊಂದು ಸುತ್ತಿನ ಚರ್ಚೆ ನಡೆಸಬೇಕು. ಮುಷ್ಕರ ಮುಂದುವರಿಯಲಿದೆ’ ಎಂದು ಘೋಷಿಸಿದರು.

ಸಂಧಾನ ಸಭೆಯ ತೀರ್ಮಾನಗಳು
ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ, ಸಾರಿಗೆ ನಿಗಮಗಳ ನೌಕರರಿಗೂ ಆರೋಗ್ಯ ಸಂಜೀವಿನಿ ಸೌಲಭ್ಯ ವಿಸ್ತರಣೆ, ಕೋವಿಡ್‌ ಸೋಂಕಿನಿಂದ ಮೃತರಾದ ಸಾರಿಗೆ ನಿಗಮಗಳ ನೌಕರರ ಕುಟುಂಬಗಳಿಗೆ ತಲಾ ₹ 30 ಲಕ್ಷ ಪರಿಹಾರ ವಿತರಣೆ, ಅಂತರ ನಿಗಮಗಳ ವರ್ಗಾವಣೆ ನೀತಿ ರೂಪಿಸಲು ಸಮಿತಿ ರಚನೆ, ಪರೀಕ್ಷಾರ್ಥ ಅವಧಿಯನ್ನು ಎರಡು ವರ್ಷಗಳಿಂದ ಒಂದು ವರ್ಷಕ್ಕೆ ಇಳಿಸುವುದು, ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್‌ಆರ್‌ಎಂಎಸ್‌) ತಂತ್ರಾಂಶ ಅಳವಡಿಕೆ, ಭತ್ಯೆ ಮತ್ತು ಹೆಚ್ಚುವರಿ ಕೆಲಸದವೇತನ ಪಾವತಿ ಪುನರಾರಂಭ, ನೌಕರರಿಗೆ ಮೇಲಧಿಕಾರಿಗಳಿಂದ ಆಗುವ ಕಿರುಕುಳ ತಡೆಗೆ ಸಮಿತಿ ರಚನೆ ಮತ್ತು ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿ
ಸುವ ವ್ಯವಸ್ಥೆ ಜಾರಿಗೆ ತರುವ ಬೇಡಿಕೆಗಳನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.

*
ಮುಷ್ಕರದಿಂದ ಸಾರ್ವಜನಿಕರು ಮತ್ತು ಸಾರಿಗೆ ನಿಗಮಗಳ ನೌಕರರಿಗೆ ತೊಂದರೆ ಅಗುತ್ತಿದ್ದು, ನಿಗಮಗಳಿಗೆ ನಷ್ಟವೂ ಆಗುತ್ತಿದೆ. ನೌಕರರು ತಕ್ಷಣ ಮುಷ್ಕರ ಕೈಬಿಡಬೇಕು.
–ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

*
ರಾಜ್ಯದಲ್ಲಿ 149 ನಿಗಮಗಳಿವೆ. ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
–ಲಕ್ಷ್ಮಣ ಸವದಿ, ಸಾರಿಗೆ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು