ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಲಕ್ಷ್ಮಣ ಸವದಿ ಭರವಸೆಗೆ ಅಸಮ್ಮತಿ: ನಾಳೆಯಿಂದ ಸಾರಿಗೆ ಮುಷ್ಕರ, ನಿರ್ಧಾರ ಅಚಲ

Last Updated 5 ಏಪ್ರಿಲ್ 2021, 22:18 IST
ಅಕ್ಷರ ಗಾತ್ರ

ಬೆಂಗಳೂರು: ಮೇ 4ರ ಬಳಿಕ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ನೀಡಿರುವ ಭರವಸೆಗೆ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಅಸಮ್ಮತಿ ಸೂಚಿಸಿದ್ದು, ಮುಷ್ಕರದ ನಿರ್ಧಾರ ಅಚಲ ಎಂದು ಹೇಳಿದೆ.

‘ಚುನಾವಣಾ ನೀತಿ ಸಂಹಿತೆಗೂ, ನಮ್ಮ ಬೇಡಿಕೆ ಈಡೇರಿಕೆಗೂ ಯಾವುದೇ ಸಂಬಂಧ ಇಲ್ಲ. ಕಳೆದ ಬಾರಿಯ ಮುಷ್ಕರದ ಸಮಯದಲ್ಲೇ ನಮಗೆ ಭರವಸೆ ನೀಡಲಾಗಿದೆ. ಅದನ್ನು ಈಡೇರಿಸಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಪಲಾಯನವಾದ ಮಾಡುತ್ತಿರುವ ಸರ್ಕಾರದ ಈ ರೀತಿಯ ಭರವಸೆಗಳಿಗೆ ನಾವು ಜಗ್ಗುವುದಿಲ್ಲ’ ಎಂದು ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.

‘6ನೇ ವೇತನ ಆಯೋಗದ ಶಿಫಾರಸುಗಳನ್ನು ಸಾರಿಗೆ ನೌಕರರಿಗೂ ಅನ್ವಯಿಸುವ ಬೇಡಿಕೆ ಹೊರತುಪಡಿಸಿ ಬೇರಾವ ಕೊಡುಗೆಗೂ ನಾವು ಒಪ್ಪುವುದಿಲ್ಲ. ಬೇಡಿಕೆ ಈಡೇರಿದರೆ ಮಾತ್ರ ಮುಷ್ಕರ ನಿರ್ಧಾರ ಹಿಂಪಡೆಯಲಾಗುವುದು. ಇಲ್ಲದಿದ್ದರೆ, ಅನಿರ್ದಿಷ್ಟಾವಧಿ ಮುಷ್ಕರ ಅನಿವಾರ್ಯ. ಸಾರ್ವಜನಿಕರು ಮತ್ತು ಖಾಸಗಿ ಬಸ್‌ಗಳ ಮಾಲಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಏ.1ರಿಂದ ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಅದರಂತೆ ಡಿಪೋಗಳ ಎದುರು ಸೋಮವಾರ ಧರಣಿ ನಡೆಯಬೇಕಿತ್ತು. ಆದರೆ, ಸತ್ಯಾಗ್ರಹಕ್ಕೆ ಅನುಮತಿ ದೊರಕದ ಕಾರಣ ಯಾವುದೇ ಚಟುವಟಿಕೆ ನಡೆಯಲಿಲ್ಲ. ಮಂಗಳವಾರವೂ ನೌಕರರು ಭಿತ್ತಿಪತ್ರ ಚಳವಳಿ ನಡೆಸಲಿದ್ದಾರೆ ಎಂದು ಚಂದ್ರಶೇಖರ್ ಹೇಳಿದರು.

ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ‘ವೇತನ ಹೆಚ್ಚಳದ ಬೇಡಿಕೆಯನ್ನು ನಾವು ಇಟ್ಟಿಲ್ಲ. ಈ ರೀತಿಯ ಹೇಳಿಕೆ ನೀಡುವುದನ್ನು ಬಿಟ್ಟು ಸರ್ಕಾರ ನುಡಿದಂತೆ ನಡೆಯಬೇಕು. ಖಾಸಗಿ ಬಸ್‌ಗಳನ್ನು ರಸ್ತೆಗೆ ಇಳಿಸುವ ಸಾಹಸಕ್ಕೆ ಕೈ ಹಾಕಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT